Chauri Chaura Incident ‘ಚೌರಿ ಚೌರಾ’ ಶತಮಾನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
chauri chaura incident ಚೌರಿಚೌರಾ ಸ್ವಾತಂತ್ರ್ಯ ಹೋರಾಟದಲ್ಲಿ ಬಹಳ ಮಹತ್ವದ ಸ್ಥಾನವನ್ನು ಹೊಂದಿದೆ. ಇದು ಪೊಲೀಸ್ ಠಾಣೆಯಲ್ಲಿ ಉರಿದ ಬೆಂಕಿಗಿಂತ ಹೆಚ್ಚಾಗಿತ್ತು, ಇದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಹೃದಯದಲ್ಲಿ ಉರಿಯುತ್ತಿರುವ ಬೆಂಕಿಯ ಸಂಕೇತ ಎಂದು ಮೋದಿ ಹೇಳಿದ್ದಾರೆ. Chauri Chaura Centenary Celebrations
ಲಕ್ನೋ : ದೇಶದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಹೋರಾಟಗಳಲ್ಲೊಂದಾದ ‘ಚೌರಿ ಚೌರಾ’ ಘಟನೆಯ 100ನೇ ವರ್ಷಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.
Chauri Chaura Centenary Celebrations ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನರೇಂದ್ರ ಮೋದಿ, ಚೌರಿಚೌರಾ ಘಟನೆಯು ಸ್ವಾತಂತ್ರ್ಯ ಹೋರಾಟದಲ್ಲಿ ಬಹಳ ಮಹತ್ವದ ಸ್ಥಾನವನ್ನು ಹೊಂದಿದೆ. ಇದು ಪೊಲೀಸ್ ಠಾಣೆಯಲ್ಲಿ ಉರಿದ ಬೆಂಕಿಗಿಂತ ಹೆಚ್ಚಾಗಿತ್ತು, ಇದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಹೃದಯದಲ್ಲಿ ಉರಿಯುತ್ತಿರುವ ಬೆಂಕಿಯ ಸಂಕೇತವಾಗಿದೆ ಎಂದು ಹೇಳಿದ್ದಾರೆ.
ಚೌರಿಚೌರಾ ಸ್ಮರಣೆಗಾಗಿ ಹೊರತಂದಿರುವ ಅಂಚೆ ಚೀಟಿಗಳನ್ನು ಪ್ರಧಾನಿ ಬಿಡುಗಡೆ ಮಾಡಿದ್ದಾರೆ.
Centenary celebrations of Chauri Chaura incident. https://t.co/X9yixxmrIX
— Narendra Modi (@narendramodi) February 4, 2021
ಮೋದಿ ಭಾಷಣದ ಮುಖ್ಯಾಂಶಗಳು
ಚೌರಿಚೌರಾ ಪವಿತ್ರ ಭೂಮಿಯಲ್ಲಿ ಪ್ರಾಣ ನೀಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ನಾನು ನಮನಗಳನ್ನು ಸಲ್ಲಿಸುತ್ತೇವೆ. ಭಾರತಮಾತೆಗಾಗಿ ಪ್ರಾಣ ಕೊಟ್ಟ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಪುಸ್ತಕ ಬರೆಯಲು ಯುವ ಬರಹಗಾರರು ಮುಂದೆ ಬರಬೇಕು ಎಂದು ನಾನು ವಿನಂತಿಸುತ್ತೇವೆ. ಇದು ಅವರ ಕಾರ್ಯಗಳನ್ನು ಗೌರವಿಸುವ ಒಂದು ಮಾರ್ಗವಾಗಿದೆ.
ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕೋವಿಡ್- 19 ವಿರುದ್ಧದ ಹೋರಾಟದಲ್ಲಿ ಭಾರತದ ಬದ್ಧತೆಯನ್ನು ಮತ್ತು ನಾವು ವಿಶ್ವದ ಇತರ ದೇಶಗಳಿಗೆ ಲಸಿಕೆಗಳನ್ನು ಹೇಗೆ ರಫ್ತು ಮಾಡುತ್ತಿದ್ದೇವೆ ಎಂದು ನೋಡಿದ್ದರೆ ಅವರು ಖಂಡಿತವಾಗಿಯೂ ಹೆಮ್ಮೆಯಿಂದ ಬೀಗುತ್ತಿದ್ದರು ಎಂದು ಮೋದಿ ಹೇಳಿದ್ದಾರೆ.
ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಒಗ್ಗಟ್ಟಾಗಿ ತೋರಿಸಿದ ಧೈರ್ಯವೇ ಆತ್ಮನಿರ್ಭರ್ ಭಾರತದ ತಳಹದಿಯಾಗಿದೆ.
ಗೋರಖ್ಪುರ್ನಲ್ಲಿ ಏಮ್ಸ್ ನಿರ್ಮಾಣವಾಗಲಿದೆ. ಇಲ್ಲಿನ ಆಸ್ಪತ್ರೆ ಸೌಕರ್ಯಗಳನ್ನು ಹೆಚ್ಚಿಸಲಾಗುವುದು. ಇದು ಆತ್ಮನಿರ್ಭರ್ ಭಾರತದ ನಿರ್ಮಾಣಕ್ಕೆ ಪೂರಕವಾಗಲಿದೆ.
ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ನಾವೆಂದೂ ಮರೆಯಬಾರದು. ಅವರಿಂದಾಗಿಯೇ ನಾವು ಈ ಪವಿತ್ರ ಭೂಮಿಯಲ್ಲಿದ್ದೇವೆ.
ನಮ್ಮ ರೈತರ ಮತ್ತು ಗ್ರಾಮೀಣ ಜನರ ಹಕ್ಕುಗಳನ್ನು ನಾವು ಬಲಪಡಿಸಿದ್ದೇವೆ. ಯಾರೊಬ್ಬರೂ ನಮ್ಮ ರೈತರ ಭೂಮಿ ಕಬಳಿಸುವಂತಿಲ್ಲ
ಏನಿದು ಚೌರಿಚೌರಾ ಘಟನೆ?
ಫೆಬ್ರುವರಿ 4, 1922ರಂದು ವಸಾಹತುಶಾಹಿ ಆಡಳಿತದ ವಿರುದ್ಧ ಮಹಾತ್ಮ ಗಾಂಧಿಯವರ ಅಸಹಕಾರ ಚಳವಳಿಯು ಉತ್ತುಂಗದಲ್ಲಿದ್ದಾಗ, ಗೋರಖ್‌ಪುರ ಜಿಲ್ಲೆ (ಈಗ ಉತ್ತರ ಪ್ರದೇಶ) ಚೌರಿ ಚೌರಾ ಗ್ರಾಮದಲ್ಲಿ ನಡೆದ ಘಟನೆಯೊಂದು ಭಾರತೀಯರ ಸ್ವಾತಂತ್ರ್ಯ ಹೋರಾಟದ ಹಾದಿಯನ್ನೇ ಬದಲಿಸಿತ್ತು.
ವಿದೇಶಿ ಬಟ್ಟೆ, ಮಾಂಸ ಮತ್ತು ಮದ್ಯವನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಪ್ರತಿಭಟನಾಕಾರರ ಗುಂಪನ್ನು ಪೊಲೀಸರು ಥಳಿಸಿದ್ದರು. ಇದನ್ನು ಪ್ರತಿಭಟಿಸಿ ಜನರ ಗುಂಪು ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿತ್ತು. ಆಗ ಪೊಲೀಸರು ಜನರ ಮೇಲೆ ಗುಂಡು ಹಾರಿಸಿದ್ದು ಇದರಲ್ಲಿ ಮೂರು ಜನರು ಬಲಿಯಾದರು. ಈ ಘಟನೆಗೆ ಪ್ರತೀಕಾರವಾಗಿ ಪ್ರತಿಭಟನಾಕಾರರ ಗುಂಪು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದು, 23 ಪೊಲೀಸರು ಸಾವಿಗೀಡಾಗಿದ್ದರು. ಚೌರಿ ಚೌರಾದಲ್ಲಿನ ಹಿಂಸಾಚಾರವನ್ನು ಖಂಡಿಸಿದ ಗಾಂಧೀಜಿ ಅಸಹಕಾರ ಚಳವಳಿಯನ್ನು ಕೈಬಿಟ್ಟಿದ್ದರು.
19 ಮಂದಿಗೆ ಮರಣದಂಡನೆ ಶಿಕ್ಷೆ
ಚೌರಿ ಚೌರಾ ಘಟನೆಗೆ ಸಂಬಂಧಿಸಿದಂತೆ 200 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬ್ರಿಟಿಷ್ ಆಡಳಿತವು ವಿಚಾರಣೆಗೆ ಒಳಪಡಿಸಿತು. ಅವರಲ್ಲಿ ಆರು ಮಂದಿ ಪೊಲೀಸ್ ಕಸ್ಟಡಿಯಲ್ಲಿ ಸಾವಿಗೀಡಾದರು. ಎಂಟು ತಿಂಗಳ ಸುದೀರ್ಘ ವಿಚಾರಣೆಯ ನಂತರ, 172 ಜನರಿಗೆ ಮರಣದಂಡನೆ ವಿಧಿಸಲಾಯಿತು. ತನ್ನ ತೀರ್ಪನ್ನು ಪರಿಷ್ಕರಿಸಿದ ಅಲಹಾಬಾದ್ ಹೈಕೋರ್ಟ್ 19 ಮಂದಿಗೆ ಮರಣದಂಡನೆ, 110 ಜೀವಾವಧಿ ಶಿಕ್ಷೆ ಮತ್ತು ಉಳಿದವರಿಗೆ ದೀರ್ಘ ಜೈಲು ಶಿಕ್ಷೆ ವಿಧಿಸಿತು
ಗಾಂಧೀಜಿ ನಿರ್ಧಾರ ಎಲ್ಲರಿಗೂ ಹಿಡಿಸಲಿಲ್ಲ ಚೌರಿ ಚೌರಾ ಘಟನೆಯ ನಂತರ ಅಸಹಕಾರ ಚಳವಳಿಯನ್ನು ಕೈಬಿಟ್ಟ ಗಾಂಧೀಜಿಯವರ ನಿರ್ಧಾರ ಎಲ್ಲರಿಗೂ ಹಿಡಿಸಲಿಲ್ಲ. ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್ ಮತ್ತು ರಾಜೇಂದ್ರ ಪ್ರಸಾದ್ ಮೊದಲಾದ ನಾಯಕರು ಗಾಂಧೀಜಿಯವರ ಈ ನಿರ್ಧಾರವನ್ನು ಒಪ್ಪಿಕೊಂಡರು. ಆದರೆ ಲಾಲಾ ಲಜಪತ್ ರಾಯ್ ಅವರು ಗಾಂಧೀಜಿಯವರ ನಿರ್ಧಾರದ ಬಗ್ಗೆ ನಮ್ಮ ಸೋಲು ನಮ್ಮ ನಾಯಕನ ಶ್ರೇಷ್ಠತೆಗೆ ಅನುಗುಣವಾಗಿರುತ್ತದೆ ಎಂದು ಪ್ರತಿಕ್ರಿಯಿಸಿದ್ದರು.
Budget 2021 | ಬಜೆಟ್ ರೂಪಿಸಿದ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ
Published On - 11:58 am, Thu, 4 February 21