ಆಮ್ಲಜನಕ ಉತ್ಪಾದನೆಗೆ ಸಂಬಂಧಿಸಿದಂತೆ ಅಂಬಾನಿ ಸೇರಿದಂತೆ ಪ್ರಮುಖರ ಜತೆ ಮೋದಿ ಚರ್ಚೆ
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಜೆಎಸ್ಡಬ್ಲ್ಯೂ ಕಂಪನಿಯ ಸಜ್ಜನ್ ಜಿಂದಾಲ್, ಜೆಎಸ್ಪಿಎಲ್ ಕಂಪನಿಯ ನವೀನ್ ಜಿಂದಾಲ್ ಸೇರಿದಂತೆ ಹಲವು ಪ್ರಮುಖರು ಪ್ರಧಾನ ಮಂತ್ರಿಯವರೊಂದಿಗಿನ ಸಭೆಯಲ್ಲಿ ಭಾಗಿಯಾಗಿದ್ದು, ಆಕ್ಸಿಜನ್ ಉತ್ಪಾದನೆ ಹೆಚ್ಚಿಸುವ ಕುರಿತು ಚರ್ಚಿಸಿದ್ದಾರೆ.
ದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಬಹುಬೇಗನೇ ವ್ಯಾಪಿಸುತ್ತಿದ್ದು ದೇಶದ ಆರೋಗ್ಯ ವ್ಯವಸ್ಥೆಯನ್ನು ಅಲುಗಾಡಿಸುತ್ತಿದೆ. ಹಲವು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ನಿರೀಕ್ಷೆಗೂ ಮೀರಿ ಏರುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗದೆ ಪರದಾಡುವಂತಾಗಿದೆ. ಈ ಸಂದರ್ಭದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳಾದ ಆಕ್ಸಿಜನ್, ರೆಮ್ಡೆಸಿವಿಡರ್, ವೆಂಟಿಲೇಟರ್ ಸೇರಿದಂತೆ ಕೊರೊನಾ ಲಸಿಕೆ ಪೂರೈಕೆಯಲ್ಲೂ ಅಭಾವ ಕಾಣಿಸಿಕೊಂಡಿರುವುದು ತಳಮಳ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಪ್ರಧಾನ ಮಂತ್ರಿ ಮೋದಿ ದೇಶದ ಪ್ರಮುಖ ಮೆಡಿಕಲ್ ಆಕ್ಸಿಜನ್ ತಯಾರಕರ ಜತೆ ಚರ್ಚಿಸಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಜೆಎಸ್ಡಬ್ಲ್ಯೂ ಕಂಪನಿಯ ಸಜ್ಜನ್ ಜಿಂದಾಲ್, ಜೆಎಸ್ಪಿಎಲ್ ಕಂಪನಿಯ ನವೀನ್ ಜಿಂದಾಲ್ ಸೇರಿದಂತೆ ಹಲವು ಪ್ರಮುಖರು ಪ್ರಧಾನ ಮಂತ್ರಿಯವರೊಂದಿಗಿನ ಸಭೆಯಲ್ಲಿ ಭಾಗಿಯಾಗಿದ್ದು, ಆಕ್ಸಿಜನ್ ಉತ್ಪಾದನೆ ಹೆಚ್ಚಿಸುವ ಕುರಿತು ಚರ್ಚಿಸಿದ್ದಾರೆ. ಸದ್ಯದ ಮಟ್ಟಿಗೆ ಆಸ್ಪತ್ರೆಗಳಲ್ಲಿ ಗಂಭೀರ ಪರಿಸ್ಥಿತಿಗೆ ತಲುಪುತ್ತಿರುವ ಸೋಂಕಿತರನ್ನು ಉಳಿಸಿಕೊಳ್ಳುವುದು ಸವಾಲಾಗಿರುವ ಕಾರಣ ತುರ್ತು ಚಿಕಿತ್ಸೆಗೆ ಬೇಕಾದ ಅಗತ್ಯ ಸೌಲಭ್ಯವನ್ನು ಸಮರ್ಪಕವಾಗಿ ಒದಗಿಸುವಂತೆ ವೈದ್ಯ ಸಮೂಹ ಮನವಿ ಮಾಡಿದೆ.
ಹತ್ತು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮೋದಿ ಸಭೆ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ 10 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೊವಿಡ್ ಪರಿಸ್ಥಿತಿ ಕುರಿತು ಸಮಾಲೋಚನೆ ನಡೆಸಿದ್ದಾರೆ. ಮಹಾರಾಷ್ಟ್ರ, ಉತ್ತರ ಪ್ರದೇಶ ,ಕೇರಳ, ಛತ್ತೀಸಗಡ, ಮಧ್ಯಪ್ರದೇಶ ಮತ್ತೆ ದೆಹಲಿಯ ಮುಖ್ಯಮಂತ್ರಿ ಈ ಸಭೆಯಲ್ಲಿ ಭಾಗಿಯಾಗಿದ್ದಾರೆ . ಕೊವಿಡ್ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿಯವರ ಜತೆ ಮಾತನಾಡಿದ ಅರವಿಂದ ಕೇಜ್ರಿವಾಲ್ ರಾಜ್ಯ ಸರ್ಕಾರಗಳಿಗೂ ಕೇಂದ್ರ ಸರ್ಕಾರಕ್ಕೆ ಲಭ್ಯವಾಗುವ ದರದಲ್ಲಿಯೇ ಕೊವಿಡ್ ಲಸಿಕೆ ಲಭ್ಯವಾಗುವಂತಿರಬೇಕು ಎಂದು ಹೇಳಿದ್ದಾರೆ.
ಅನೇಕ ರಾಜ್ಯಗಳಲ್ಲಿ ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆಯ ಮಧ್ಯೆ, ಉತ್ಪಾದನೆಯನ್ನು ಹೆಚ್ಚಿಸಲು, ವಿತರಣೆಯನ್ನು ವೇಗಗೊಳಿಸಲು ಮತ್ತು ಆರೋಗ್ಯ ಸೌಲಭ್ಯಗಳಿಗೆ ಆಮ್ಲಜನಕದ ಬೆಂಬಲವನ್ನು ಒದಗಿಸಲು ಹೊಸ ವಿಧಾನಗಳನ್ನು ಬಳಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಿ ಗುರುವಾರ ಅಧಿಕಾರಿಗಳಿಗೆ ಹೇಳಿದ್ದರು. ಉತ್ಪಾದನೆ ಮತ್ತು ಪೂರೈಕೆಯನ್ನು ಸರಿದೂಗಿಸಿದ ನಂತರ ರಾಜ್ಯಗಳಿಗೆ ಆಮ್ಲಜನಕದ ಪೂರೈಕೆ ಸುಗಮವಾಗಿ, ಅಡೆತಡೆಯಿಲ್ಲದೆ ನಡೆಯುವಂತೆ ನೋಡಿಕೊಳ್ಳುವಂತೆ ಪ್ರಧಾನಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Long Covid: ಕೊರೊನಾ ನೆಗೆಟಿವ್ ವರದಿಯಾದರೂ ನಿರ್ಲಕ್ಷಿಸದಿರಿ; ದೀರ್ಘಕಾಲದವರೆಗೆ ಲಕ್ಷಣಗಳಿರಬಹುದು