ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಗೆ ಕಾರಣ ಹೇಳಿದ ಪ್ರಧಾನಿ ಮೋದಿ

|

Updated on: Feb 20, 2024 | 2:20 PM

ಈಗ ರದ್ದುಗೊಳಿಸಲಾಗಿರುವ 370 ನೇ ವಿಧಿಯು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಮುಖ್ಯ ಅಡಚಣೆಯಾಗಿತ್ತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ 370 ಸ್ಥಾನಗಳನ್ನು ಮತ್ತು ಎನ್‌ಡಿಎ 400 ಸ್ಥಾನಗಳನ್ನು ಗೆಲ್ಲಲು ಸಹಾಯ ಮಾಡುವಂತೆ ನಾನು ಜನರನ್ನು ಕೇಳಿದ್ದೇನೆ ಎಂದು ಮೋದಿ ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಗೆ ಕಾರಣ ಹೇಳಿದ ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us on

ಪ್ರಧಾನಿ ನರೇಂದ್ರ ಮೋದಿ(Narendra Modi) ಜಮ್ಮು ಮತ್ತು ಕಾಶ್ಮೀರ(Jammu And Kashmir)ಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ(Article 370)ಯನ್ನು ತೆಗೆದು ಹಾಕಲು ಇದ್ದ ಕಾರಣವನ್ನು ತಿಳಿಸಿದ್ದಾರೆ. ಇಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ, 370ನೇ ವಿಧಿಯು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಅಡ್ಡಗೋಡೆಯಂತಿತ್ತು ಎಂದು ಹೇಳಿದರು. ಈ ಗೋಡೆಯನ್ನು ಸರ್ಕಾರ ಕೆಡವಿದೆ, ಅದನ್ನು ತೆಗೆದುಹಾಕಿದ ನಂತರ ರಾಜ್ಯದ ಜನರಿಗೆ ಪರಿಹಾರವೂ ಸಿಕ್ಕಿದೆ. ಮಹಿಳೆಯರು ಈ ಮೊದಲು ಪಡೆದಿರದ ಹಕ್ಕುಗಳನ್ನು ಪಡೆದರು ಎಂದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಲೆಗಳಿಗೆ ಬೆಂಕಿ ಹಚ್ಚಿದ ದಿನಗಳು ಇದ್ದವು, ಇಂದು ಶಾಲೆಗಳನ್ನು ಅಲಂಕರಿಸುವ ದಿನಗಳು ಬಂದಿವೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ಹಿಂದೆ ತೀವ್ರ ಅನಾರೋಗ್ಯದ ಚಿಕಿತ್ಸೆಗಾಗಿ ದೆಹಲಿಗೆ ಹೋಗಬೇಕಿತ್ತು. ಆದರೆ ಈಗ ಜಮ್ಮುವಿನಲ್ಲೇ ಏಮ್ಸ್ ಸಿದ್ಧವಾಗಿದೆ.

ಮೊದಲು ಅಪಹರಣ, ಪ್ರತ್ಯೇಕತೆಗೆ ಸಂಬಂಧಿಸಿದ ಸುದ್ದಿಯೇ ಇರುತ್ತಿತ್ತು
ಕೆಲವೊಮ್ಮೆ ಬಾಂಬ್‌ಗಳು, ಬಂದೂಕುಗಳು, ಅಪಹರಣ ಮತ್ತು ಪ್ರತ್ಯೇಕತೆಗೆ ಸಂಬಂಧಿಸಿದ ಸುದ್ದಿಗಳು ಜಮ್ಮು ಮತ್ತು ಕಾಶ್ಮೀರದಿಂದ ಬರುತ್ತಿತ್ತು ಎಂದು ಪ್ರಧಾನಿ ಮೋದಿ ಹೇಳಿದರು. ಆದರೆ ಈಗ ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಯ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ. ಈಗ ನಾವು ಅಭಿವೃದ್ಧಿ ಹೊಂದಿದ ಜಮ್ಮು ಮತ್ತು ಕಾಶ್ಮೀರಕ್ಕಾಗಿ ಪ್ರತಿಜ್ಞೆ ಮಾಡಿದ್ದೇವೆ. ಜಮ್ಮು ಮತ್ತು ಕಾಶ್ಮೀರವನ್ನು ಅಭಿವೃದ್ಧಿ ಪಡಿಸುತ್ತೇವೆ ಎಂಬ ನಂಬಿಕೆ ನಿಮ್ಮ ಮೇಲಿದೆ. ಕಳೆದ 70 ವರ್ಷಗಳಿಂದ ನನಸಾಗದ ನಿಮ್ಮ ಕನಸುಗಳನ್ನು ಮುಂಬರುವ ಕೆಲವೇ ವರ್ಷಗಳಲ್ಲಿ ಮೋದಿ ಈಡೇರಿಸಲಿದ್ದಾರೆ ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರ ಸ್ವಜನಪಕ್ಷಪಾತದ ಕಪಿಮುಷ್ಠಿಯಿಂದ ಮುಕ್ತವಾಗಿದೆ
ಜಮ್ಮು ಮತ್ತು ಕಾಶ್ಮೀರ ಸ್ವಜನಪಕ್ಷಪಾತದ ಬಲಿಪಶುವಾಗಿದೆ, ಇದೀಗ ಆ ಕಪಿಮುಷ್ಠಿಯಿಂದ ರಾಜ್ಯ ಹೊರಬರುತ್ತಿದೆ. ಜಮ್ಮು ಮತ್ತು ಕಾಶ್ಮೀರವು ದಶಕಗಳ ಕಾಲ ರಾಜವಂಶದ ರಾಜಕೀಯದ ಹೊಡೆತವನ್ನು ಅನುಭವಿಸಬೇಕಾಯಿತು . ಅವರು ತಮ್ಮ ಕುಟುಂಬದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಿದ್ದರು. ಜನರ ಹಿತಾಸಕ್ತಿಗಳಿಗಾಗಿ ಅಲ್ಲ, ಜನರ ಕುಟುಂಬಗಳಿಗಾಗಿ ಅಲ್ಲ,  ಈ ರಾಜವಂಶದ ರಾಜಕೀಯದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಸ್ವಾತಂತ್ರ್ಯ ಸಿಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದರು.

ಮತ್ತಷ್ಟು ಓದಿ: ಜಮ್ಮುವಿನಲ್ಲಿ 32,000 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ

ರೈಲಿನಲ್ಲಿ ಕಾಶ್ಮೀರ ತಲುಪಬಹುದು
ಕಾಶ್ಮೀರದಲ್ಲಿ ಹೆಚ್ಚಾಗಿ ಬಂದ್, ಮುಷ್ಕರಗಳು ನಡೆಯುತ್ತಿದ್ದವು, ಇಂದು ಶ್ರೀನಗರದಿಂದ ಸಂಗಲ್ದಾನ್‌ಗೆ ಮತ್ತು ಸಂಗಲ್ದಾನ್‌ನಿಂದ ಬಾರಾಮುಲ್ಲಾಗೆ ರೈಲು ಹೊರಟಿದೆ. ದೇಶವಾಸಿಗಳು ರೈಲಿನಲ್ಲಿ ಕಾಶ್ಮೀರ ತಲುಪುವ ದಿನ ದೂರವಿಲ್ಲ. ಇಂದು ಕಾಶ್ಮೀರಕ್ಕೆ ಮೊದಲ ವಿದ್ಯುತ್ ರೈಲು ಸಿಕ್ಕಿದೆ. ಈಗ ಜಮ್ಮು ಮತ್ತು ಕಾಶ್ಮೀರಕ್ಕೆ ಎರಡು ವಂದೇ ಭಾರತ್ ರೈಲುಗಳ ಸೌಲಭ್ಯವನ್ನು ಒದಗಿಸಲಾಗಿದೆ.

2013ರ ದಿನಗಳನ್ನು ನೆನಪಿಸಿಕೊಂಡ ಮೋದಿ
2013ರ ಡಿಸೆಂಬರ್​ನಲ್ಲಿ ಬಜೆಪಿಯ ಚಾಲೆಂಜಿಂಗ್ ರ್ಯಾಲಿಯಲ್ಲಿ ಭಾಗವಹಿಸಿದ್ದಾಗ, ಐಐಟಿ, ಐಐಎಂನಂತಹ ಶಿಕ್ಷಣ ಸಂಸ್ಥೆಗಳನ್ನು ಏಕೆ ಕಟ್ಟಬಾರದು ಎಂಬ ಪ್ರಶ್ನೆ ಎತ್ತಿದ್ದೆ, ಆ ಭರವಸೆಗಳನ್ನು ನಾವು ಈಡೇರಿಸಿದ್ದೇವೆ. ಇಂದು ಜಮ್ಮುನಲ್ಲಿ ಐಐಟಿ ಮತ್ತು ಐಐಎಂ ಇದೆ, ಆದ್ದರಿಂದಲೇ ಜನರು ಮೋದಿಯ ಗ್ಯಾರಂಟಿಯನ್ನು ಈಡೇರಿಸುವ ಗ್ಯಾರಂಟಿ ಎಂದು ಪರಿಗಣಿಸುತ್ತಾರೆ ಎಂದು ಮೋದಿ ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ