ನನ್ನ ನಿರ್ಧಾರ ದೇಶದ ಹಿತಕ್ಕಾಗಿ ಮಾತ್ರ, ಯಾರೂ ಭಯಪಡಬೇಕಿಲ್ಲ: ರಾಷ್ಟ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂದೇಶ

|

Updated on: Apr 15, 2024 | 6:17 PM

PM Narendra Modi Interview At ANI: ನಾನು ದೊಡ್ಡ ಪ್ಲಾನ್ ಹಾಕಿದ್ದೇನೆ ಎಂದರೆ ಯಾರೂ ಕೂಡ ಹೆದರುವ ಅವಶ್ಯಕತೆ ಇಲ್ಲ. ನನ್ನ ನಿರ್ಧಾರ ಏನೇ ಇದ್ದರೂ ಅದು ರಾಷ್ಟ್ರದ ಹಿತದ ದೃಷ್ಟಿಯಿಂದ ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎಎನ್​ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು 2047ರ ವಿಕಸಿತ ಭಾರತ ಯೋಜನೆ ಬಗ್ಗೆ ಮಾತನಾಡಿದ್ದಾರೆ. ಮುಂದಿನ ಐದು ವರ್ಷಕ್ಕೆ ಏನು ಮಾಡಬೇಕು, ಮುಂದಿನ 25 ವರ್ಷ ಏನು ಮಾಡಬೇಕು ಎಂದು ಲಕ್ಷಾಂತರ ಜನರ ಅಭಿಪ್ರಾಯ, ಸಲಹೆಗಳನ್ನು ಪಡೆದು ಯೋಜನೆ ರೂಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನನ್ನ ನಿರ್ಧಾರ ದೇಶದ ಹಿತಕ್ಕಾಗಿ ಮಾತ್ರ, ಯಾರೂ ಭಯಪಡಬೇಕಿಲ್ಲ: ರಾಷ್ಟ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂದೇಶ
ನರೇಂದ್ರ ಮೋದಿ
Follow us on

ನವದೆಹಲಿ, ಏಪ್ರಿಲ್ 15: ನಾವು ದೊಡ್ಡ ಯೋಜನೆ ಹಮ್ಮಿಕೊಂಡಿದ್ದೇವೆ ಎಂದರೆ ಸಂವಿಧಾನ ಬದಲಿಸುತ್ತೇವೆ ಎಂದು ಯಾರೂ ಭಯಪಡುವ ಅವಶ್ಯಕತೆ ಇಲ್ಲ. ದೇಶದ ಹಿತಕ್ಕಾಗಿ ತಮ್ಮ ನಿರ್ಧಾರ ಇರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಎಎನ್​ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ (ANI interview) ಮಾತನಾಡುತ್ತಿದ್ದ ಪ್ರಧಾನಿಗಳು, ವಿಪಕ್ಷಗಳ ಭಯ ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ. ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತಾರೆ ಎಂದು ವಿಪಕ್ಷಗಳು ಮಾಡುತ್ತಿರುವ ಆರೋಪಗಳನ್ನು ನರೇಂದ್ರ ಮೋದಿ ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ.

‘ನನಗೆ ದೊಡ್ಡ ಪ್ಲಾನ್​ಗಳಿವೆ ಎಂದು ನಾನು ಹೇಳಿದರೆ ಯಾರೂ ಕೂಡ ಹೆದರುವ ಅಗತ್ಯ ಇಲ್ಲ. ಯಾರನ್ನೂ ಭಯಪಡಿಸಲು ಅಥವಾ ಹಿಮ್ಮೆಟ್ಟಿಸಲು ನಾನು ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಈ ದೇಶದ ಪರಿಪೂರ್ಣ ಅಭಿವೃದ್ಧಿಗಾಗಿ ನಾನು ಹೆಜ್ಜೆ ಇಡುತ್ತೇನೆ,’ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

‘ನಾವೇ ಎಲ್ಲಾ ಮಾಡಿದ್ದು ಎಂದು ಸರ್ಕಾರಗಳು ಹೇಳಿಕೊಳ್ಳುತ್ತೇವೆ. ನಾನು ಎಲ್ಲವನ್ನೂ ಮಾಡಿದ್ದೇನೆ ಎಂದು ಹೇಳುವುದಿಲ್ಲ. ಸರಿಯಾದ ರೀತಿಯಲ್ಲಿ ಎಲ್ಲವನ್ನೂ ಮಾಡಲು ನಾನು ಯತ್ನಿಸಿದ್ದೇನೆ. ಆದರೆ, ನನ್ನ ದೇಶಕ್ಕೆ ಅದೆಷ್ಟೋ ಅಗತ್ಯತೆಗಳಿರುವುದರಿಂದ ನಾನು ಮಾಡಬೇಕಿರುವುದು ಬಹಳಷ್ಟಿದೆ. ಪ್ರತಿಯೊಂದು ಕುಟುಂಬದ ಕನಸನ್ನು ಹೇಗೆ ನನಸು ಮಾಡಲಿ? ಅದಕ್ಕಾಗಿ ಇದು ಟ್ರೈಲರ್ ಮಾತ್ರ ಎಂದು ನಾನು ಹೇಳಿದ್ದು,’ ಎಂದಿದ್ದಾರೆ ಮೋದಿ.

ಇದನ್ನೂ ಓದಿ: ಎಎನ್​ಐ ಜೊತೆ ನರೇಂದ್ರ ಮೋದಿ ಸಂದರ್ಶನ

2047ರ ವಿಕಸಿತ ಭಾರತದ ಗುರಿ

ಎಎನ್​ಐ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಹತ್ವಾಕಾಂಕ್ಷಿ 2047ರ ವಿಕಸಿತ ಭಾರತ ಗುರಿ ಬಗ್ಗೆ ಮಾತನಾಡಿದ್ದಾರೆ.

ನರೇಂದ್ರ ಮೋದಿ ಎಎನ್​ಐ ಸಂದರ್ಶನದ ವಿಡಿಯೋ

‘ಕಳೆದ ಎರಡು ವರ್ಷಗಳಿಂದ 2047ರ ಪ್ಲಾನ್ ಬಗ್ಗೆ ಕೆಲಸ ಮಾಡುತ್ತಿದ್ದೇನೆ. ದೇಶಾದ್ಯಂತ ಬಹಳಷ್ಟು ಜನರ ಅಭಿಪ್ರಾಯ, ಸಲಹೆ ಕೇಳೀದ್ದೇನೆ. ಮುಂದಿನ 25 ವರ್ಷದಲ್ಲಿ ಭಾರತವನ್ನು ಹೇಗೆ ನೋಡಬಯಸುತ್ತೀರಿ ಎಂದು 15 ಲಕ್ಷಕ್ಕೂ ಹೆಚ್ಚು ಜನರ ಅನಿಸಿಕೆ ಪಡೆದಿದ್ದೇನೆ. ಯೂನಿವರ್ಸಿಟಿಗಳು, ವಿವಿಧ ಎನ್​ಜಿಒಗಳು ಅಭಿಪ್ರಾಯ ನೀಡಿವೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಸಹಾಯ ಪಡೆದು ವಿಷಯವಾಗಿ ಈ ಅಭಿಪ್ರಾಯಗಳನ್ನು ವಿಂಗಡನೆ ಮಾಡಿಸಿದ್ದೇನೆ. ಪ್ರತಿಯೊಂದು ಇಲಾಖೆಯಲ್ಲೂ ನಿರ್ದಿಷ್ಟ ಅಧಿಕಾರಿಗಳ ತಂಡ ಇದರಲ್ಲಿ ತೊಡಗಿಸಿಕೊಂಡಿದೆ. ಮುಂದಿನ ಅವಧಿಯಲ್ಲಿ ಏನು ಮಾಡಬೇಕು, 25 ವರ್ಷ ಏನು ಮಾಡಬೇಕು ಎಂದು ಯೋಜನೆ ಹಾಕಿದ್ದೇವೆ,’ ಎಂದು ಪ್ರಧಾನಿಗಳು ತಿಳಿಸಿದ್ದಾರೆ.

ವಿಫಲ ಕಾಂಗ್ರೆಸ್ ಮಾದರಿ ಮತ್ತು ಬಿಜೆಪಿ ಮಾದರಿ ಮಧ್ಯೆ ಚುನಾವಣೆ

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾರರ ಮುಂದೆ ಇರುವ ಆಯ್ಕೆಗಳೆಂದರೆ ವಿಫಲ ಕಾಂಗ್ರೆಸ್ ಮಾದರಿ ಮತ್ತು ಸಾಧನೆ ತೋರಿರುವ ಬಿಜೆಪಿ ಮಾದರಿ ಎಂದು ಮೋದಿ ಬಣ್ಣಿಸಿದ್ದಾರೆ.

‘ಅವರು (ಕಾಂಗ್ರೆಸ್) ಐದಾರು ದಶಕ ಕಾಲ ಕೆಲಸ ಮಾಡಿದ್ದಾರೆ. ನಾನು ಕೇವಲ 10 ವರ್ಷ ಮಾಡಿದ್ದೇನೆ. ಯಾವುದೇ ಕ್ಷೇತ್ರದಲ್ಲೂ ಸಾಧನೆಯನ್ನು ತುಲನೆ ಮಾಡಿ ನೋಡಿ. ಸಾಧನೆಯಲ್ಲಿ ಲೋಪ ಕಂಡುಬಂದರೂ ನಮ್ಮ ಪ್ರಯತ್ನದಲ್ಲಿ ಯಾವ ಕೊರತೆಯೂ ನಿಮಗೆ ಕಾಣದು,’ ಎಂದವರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿ ಕಾಂಗ್ರೆಸ್​ ವಿರುದ್ಧ ಮೋದಿ ವಾಗ್ದಾಳಿ

100 ದಿನಗಳ ಹೋಮ್ ವರ್ಕ್ ಬಗ್ಗೆ…

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕ್ಯಾಬಿನೆಟ್ ಸಹೋದ್ಯೋಗಿಗಳಿಗೆ ಮುಂದಿನ 100 ದಿನಗಳಿಗೆ ತಮ್ಮ ತಮ್ಮ ವಿಭಾಗಗಳಲ್ಲಿ ಕಾರ್ಯಸೂಚಿ ಸಿದ್ಧಗೊಳಿಸಬೇಕು ಎಂಬ ಜವಾಬ್ದಾರಿ ನೀಡಿದ್ದಾರೆ. ಕೂಸು ಹುಟ್ಟುವ ಮುನ್ನ ಕುಲಾವಿ ತೊಡಿಸಿದಂತೆ, ಎಲೆಕ್ಷನ್ ಗೆಲ್ಲುವ ಮುನ್ನವೇ ಅತಿಯಾದ ಆತ್ಮವಿಶ್ವಾಸದಲ್ಲಿ ಪ್ರಧಾನಿಗಳಿದ್ದಾರೆ ಎಂದು ವಿಪಕ್ಷಗಳು ಲೇವಡಿ ಮಾಡಿರುವುದುಂಟು. ಈ ಬಗ್ಗೆ ಸಂದರ್ಶನದಲ್ಲಿ ಉತ್ತರ ಕೊಟ್ಟಿರುವ ಮೋದಿ, 2019ರ ಚುನಾವಣೆಯ ಸಂದರ್ಭವನ್ನು ನಿದರ್ಶನವಾಗಿ ನೀಡಿದರು.

‘2019ರಲ್ಲೂ ನಾನು 100 ದಿನಗಳಿಗೆ ಕೆಲಸ ಕೊಟ್ಟು ಚುನಾವಣೆಗೆ ಹೋಗಿದ್ದೆ. ಗೆದ್ದು ಅಧಿಕಾರಕ್ಕೆ ಮರಳಿ ಬಂದ ಬಳಿಕ ಆರ್ಟಿಕಲ್ 370 ಅನ್ನು ತೆಗೆದುಹಾಕಿದೆ. ತ್ರಿವಳಿ ತಲಾಖ್ ಪದ್ಧತಿ ನಿವಾರಿಸಿದೆ. ಇವನ್ನು ಮೊದಲ 100 ದಿನದಲ್ಲೇ ಮಾಡಿದೆ. ಈ ರೀತಿ ನಾನು ಪೂರ್ವದಲ್ಲೇ ಯೋಜನೆ ಹಾಕಿ ಅದರಂತೆ ಕ್ರಮ ತೆಗೆದುಕೊಳ್ಳುತ್ತೇನೆ,’ ಎಂದು ಮೋದಿ ಅವರು ವಿವರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ