ನವದೆಹಲಿ, ಸೆಪ್ಟೆಂಬರ್ 25: ಚುನಾವಣೆಯ ಹೊಸ್ತಿಲಿನಲ್ಲಿರುವ ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಸೋಮವಾರ ಪ್ರವಾಸ ನಡೆಸಲಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ಅವರು ಪರಿವರ್ತನ್ ಸಂಕಲ್ಪ್ ಮಹಾಸಭಾದ (Parivarta Sankalp Mahasabha) ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇನ್ನು ಮಧ್ಯಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರ ಮಹಾಕುಂಭ್ (BJP Workers Mahakumbh) ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ.
ಪ್ರಧಾನಿಗಳು ಮಧ್ಯಾಹ್ನ 1 ಗಂಟೆಗೆ ರಾಜಸ್ಥಾನದ ಜೈಪುರಕ್ಕೆ ತೆರಳಲಿದ್ದಾರೆ. ಅಲ್ಲಿಂದ ಅವರು ಧಾಂಕ್ಯ ಗ್ರಾಮಕ್ಕೆ ತೆರಳಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ್ ಅವರಿಗೆ ಗೌರವಾರ್ಪಣೆ ಮಾಡಲಿದ್ದಾರೆ. ಬಳಿಕ ದಾಡಿಯಾ ಗ್ರಾಮದಲ್ಲಿ ಅಯೋಜಿಸಲಅದ ಪರಿವರ್ತನ್ ಸಂಕಪ್ಲ್ ಮಹಾಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಜಸ್ಥಾನದಲ್ಲಿ ಚುನಾವಣೆಗೆ ತಯಾರಿಯಾಗಿ, ಬಿಜೆಪಿ ರಾಜ್ಯದ ನಾಲ್ಕೂ ದಿಕ್ಕಿನಲ್ಲಿ ಪರಿವರ್ತನ್ ಯಾತ್ರೆಗಳನ್ನು ಕೈಗೊಂಡಿದೆ. ಎಲ್ಲಾ 200 ವಿಧಾನಸಭಾ ಸ್ಥಾನಗಳಲ್ಲಿ ಒಟ್ಟು 9,000 ಕಿಮೀಗಳಷ್ಟು ದೂರ ಈ ಯಾತ್ರೆ ಸಾಗಿದೆ. ಪರಿವರ್ತನ್ ಸಂಕಲ್ಪ್ ಮಹಾಸಭಾ ಸ್ಥಳದಲ್ಲಿ ಈ ನಾಲ್ಕು ಯಾತ್ರೆಗಳು ಸಮಾರೋಪಗೊಳ್ಳಲಿವೆ.
ಇನ್ನು, ರಾಜಸ್ಥಾನದಂತೆ ಮಧ್ಯಪ್ರದೇಶದಲ್ಲೂ ಬಿಜೆಪಿಯಿಂದ ಐದು ಜನ್ ಆಶೀರ್ವಾದ್ ಯಾತ್ರೆಗಳು ನಡೆದಿವೆ. 10,000ಕ್ಕೂ ಹೆಚ್ಚು ಕಿಮೀ ಸಾಗಿರುವ ಈ ಐದು ಯಾತ್ರೆಗಳು ಇಂದು ಸಮಾರೋಪಗೊಳ್ಳುತ್ತವೆ. ಮಧ್ಯಪ್ರದೇಶ ರಾಜಧಾನಿ ಭೋಪಾಲ್ನ ಜಂಬೋರೀ ಮೈದಾನದಲ್ಲಿ ಬಿಜೆಪಿ ಕಾರ್ಯಕರ್ತರ ಮಹಾಕುಂಭ್ ಎಂಬ ಸಾರ್ವಜನಿಕ ಸಮಾವೇಶವನ್ನು ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಇದನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, 10 ಲಕ್ಷಕ್ಕೂ ಹೆಚ್ಚು ಮಂದಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಇದೇ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ದೇಶದ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಛತ್ತೀಸ್ಗಡ, ಮಧ್ಯಪ್ರದೇಶ, ಮಿಝೋರಾಮ್, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿವೆ.
ಇದನ್ನೂ ಓದಿ: ಭಾರತ ಯಶಸ್ವಿಯಾದರೆ ಬೇರೆಯವರಿಗೂ ಯಶಸ್ಸು; ಭಾರತದ ಬಗ್ಗೆ ಜಾಗತಿಕ ದಕ್ಷಿಣ ದೇಶಗಳಿಂದ ಗುಣಗಾನ
ಈ ಪೈಕಿ ಛತ್ತೀಸ್ಗಡ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಇದೆ. ಮಿಝೋರಾಮ್ನಲ್ಲಿ ಎನ್ಡಿಎ ಮೈತ್ರಿಕೂಟದ ಪಕ್ಷದ ಅಧಿಕಾರದಲ್ಲಿದೆ. ಹೀಗಾಗಿ, ಇಂಡಿಯಾ ಮತ್ತು ಎನ್ಡಿಎ ಎರಡಕ್ಕೂ ಈ ಚುನಾವಣೆ ಪ್ರತಿಷ್ಠೆಯ ಪಣ ಎನಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ