ಭಾರತ ಯಶಸ್ವಿಯಾದರೆ ಬೇರೆಯವರಿಗೂ ಯಶಸ್ಸು; ಭಾರತದ ಬಗ್ಗೆ ಜಾಗತಿಕ ದಕ್ಷಿಣ ದೇಶಗಳಿಂದ ಗುಣಗಾನ
India-UN For Global South: ಜಾಗತಿಕ ದಕ್ಷಿಣಕ್ಕಾಗಿ ಭಾರತ ಮತ್ತು ವಿಶ್ವಸಂಸ್ಥೆ ಎಂಬ ಕಾರ್ಯಕ್ರಮದಲ್ಲಿ ತೃತೀಯ ವಿಶ್ವ ದೇಶಗಳ ನಾಯಕರು ಮಾತನಾಡಿ, ಭಾರತದ ಜಾಗತಿಕ ನಾಯಕತ್ವಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗಲು ಭಾರತ ಅರ್ಹತೆ ಹೊಂದಿದೆ ಎನ್ನುವ ಈ ದೇಶಗಳು, ಭಾರತ ಯಶಸ್ವಿಯಾದರೆ ಇತರ ದೇಶಗಳ ಯಶಸ್ಸಿಗೂ ಸಾಧನ ಒದಗಿಸುತ್ತದೆ ಎಂದು ಭಾರತದ ಮಾನವೀಯತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿವೆ.
ನ್ಯೂಯಾರ್ಕ್, ಸೆಪ್ಟೆಂಬರ್ 25: ಈ ಬಾರಿಯ ಜಿ20 ಸಭೆಯನ್ನು ತನ್ನ ನಾಯಕತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ ಭಾರತ ಜಾಗತಿಕ ನಾಯಕನಾಗಿ (global leader) ಗುರುತಾಗಿದೆ. ಜಿ20 ಗುಂಪಿಗೆ 50ಕ್ಕೂ ಹೆಚ್ಚು ದೇಶಗಳ ಒಕ್ಕೂಟವಾದ ಆಫ್ರಿಕನ್ ಯೂನಿಯನ್ ಅನ್ನು ಸೇರಿಸಿಕೊಳ್ಳುವ ಮೂಲಕ ಹೆಚ್ಚು ದೇಶಗಳನ್ನು ಮುನ್ನೆಲೆಗೆ ತಂದಿದೆ. ಜಾಗತಿಕ ದಕ್ಷಿಣ ದೇಶಗಳ ಮಹತ್ವವೇನೆಂಬುದನ್ನು ಮುಂದುವರಿದ ದೇಶಗಳಿಗೆ ತೋರಿಸಿದೆ. ಇದೀಗ ದಕ್ಷಿಣ ದೇಶಗಳು ಭಾರತದ ನಾಯಕತ್ವದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುತ್ತಿವೆ. ಮೊನ್ನೆ ನಡೆದ ‘ಜಾಗತಿಕ ದಕ್ಷಿಣಕ್ಕಾಗಿ ಭಾರತ ಮತ್ತು ವಿಶ್ವಸಂಸ್ಥೆ’ (India-UN for Global South: Delivering for development) ಕಾರ್ಯಕ್ರಮದಲ್ಲಿ ದಕ್ಷಿಣ ದೇಶಗಳು ಭಾರತದ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿವೆ. ಜಿ20ಯಲ್ಲಿ ಭಾರತದ ಅಧ್ಯಕ್ಷತೆ ಸಮರ್ಪಕವಾಗಿತ್ತು ಎಂದು ಈ ದೇಶಗಳ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಈ ಸಭೆಯಲ್ಲಿ ದಕ್ಷಿಣ ದೇಶಗಳ ವಿದೇಶಾಂಗ ಸಚಿವರು ಸೇರಿದಂತೆ ವಿವಿಧ ನಾಯಕರು ಮಾತನಾಡಿರುವ ವಿಡಿಯೋ ತುಣುಕನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
The Global South speaks on India.
Listen to them pic.twitter.com/Fft4zaq82Z
— Dr. S. Jaishankar (@DrSJaishankar) September 24, 2023
ಈ ವಿಡಿಯೋದಲ್ಲಿ ಗಯಾನ, ಡಾಮಿನಿಕಾ, ಸಮೋವಾ, ಸೇಂಟ್ ಲೂಷಿಯಾ, ಮಾರಿಷಸ್, ಮಾಲ್ಡೀವ್ಸ್ ಇತ್ಯಾದಿ ಕೆಲ ದೇಶಗಳ ನಾಯಕರು ಮಾತನಾಡಿದ್ದಾರೆ. ಗಯಾನದ ವಿದೇಶಾಂಗ ಸಚಿವ ಹೂಜ್ ಹಿಲ್ಟನ್ ಟಾಡ್ ಮಾತನಾಡಿ, ಜಾಗತಿಕ ದಕ್ಷಿಣವೆಂಬ ಪರಿಕಲ್ಪನೆ ಬರುವ ಮುನ್ನವೇ ಭಾರತ ತನ್ನ ಅಭಿವೃದ್ಧಿಯ ಪ್ರತಿಯೊಂದು ಹಂತದಲ್ಲೂ ಜಾಗತಿಕ ದಕ್ಷಿಣವನ್ನೂ ಜೊತೆಗೆ ಕೊಂಡೊಯ್ಯುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ಹತ್ಯೆಗೆ ಕರೆ; ಗುರುದ್ವಾರದ ಪೋಸ್ಟರ್ ತೆಗೆಯಲು ಆದೇಶ
‘ಭಾರತ ಯಶಸ್ವಿಯಾದರೆ ಬೇರೆಯವರೂ ಯಶಸ್ಸು ಸಾಧಿಸಲು ಸಾಧನಗಳನ್ನು ನೀಡುತ್ತದೆ. ನಾವು ನಿಮಗೆ ವಸ್ತುಗಳನ್ನು ಮಾರುತ್ತೇವೆ ಎಂದು ಭಾರತ ಹೇಳುವುದಿಲ್ಲ. ಅವರಿಗೆ ಸಮಾಜ ಏನೆಂಬುದು ಗೊತ್ತು. ನಿಮಗೆ ತರಬೇತಿ ಕೊಡುತ್ತಾರೆ, ನಿಮ್ಮನ್ನು ಸಜ್ಜುಗೊಳಿಸುತ್ತಾರೆ’ ಎಂದು ಗಯಾನದ ವಿದೇಶಾಂಗ ಸಚಿವರು ಭಾರತವನ್ನು ಮನದುಂಬಿ ಶ್ಲಾಘಿಸಿದ್ದಅರೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಖಾಯಂ ಸದಸ್ಯನಾಗಬೇಕು ಎನ್ನುವ ಡಾಮಿನಿಕಾ ರಿಪಬ್ಲಿಕ್
ಡಾಮಿನಿಕಾ ರಿಪಬ್ಲಿಕ್ನ ವಿದೇಶಾಂಗ ಸಚಿವ ವಿನ್ಸ್ ಹೆಂಡರ್ಸನ್ ಮಾತನಾಡಿ, ಭಾರತ ಈಗ ಬಹಳ ಮುಖ್ಯವಾದ ಜಾಗತಿಕ ಪಾತ್ರಧಾರಿಯಾಗಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಖಾಯಂ ಸದಸ್ಯನಾಗಲು ಪೂರ್ಣ ಅರ್ಹತೆ ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕರೀಮಾ ಬಲೂಚ್ ಹತ್ಯೆಯಾದಾಗ ಕೆನಡಾ ಯಾಕೆ ಮೌನವಹಿಸಿತ್ತು? ಮಾನವ ಹಕ್ಕು ಸಂಸ್ಥೆ ಪ್ರಶ್ನೆ; ಯಾರಿದು ಕರೀಮಾ?
ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕ, ಕೆರಿಬಿಯನ್ ಹಾಗು ಇತರ ಸಣ್ಣ ದ್ವೀಪ ರಾಷ್ಟ್ರಗಳ ನಾಯಕರು ಈ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದ ನಾಯಕತ್ವವನ್ನು ಮೆಚ್ಚಿಕೊಂಡಿದ್ದಾರೆ. ಎಸ್ ಜೈಶಂಕರ್ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಗಯಾನ, ಡಾಮಿನಿಕಾದ ಸಚಿವರು ಮಾತ್ರವಲ್ಲದೇ ಸೇಂಟ್ ಲೂಷಿಯ, ಟ್ರಿನಿಡಾಡ್ ಅಂಡ್ ಟೊಬಾಗೊ, ಭೂತಾನ್, ಮಾರಿಷಸ್, ಮಾಲ್ಡೀವ್ಸ್ ದೇಶಗಳ ವಿದೇಶಾಂಗ ಸಚಿವರು ಮಾತನಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ