National Civil Services Day 2023: ರಾಷ್ಟ್ರೀಯ ನಾಗರಿಕ ಸೇವೆಗಳ ದಿನ ಇತಿಹಾಸ, ಮಹತ್ವ ತಿಳಿಯಿರಿ
ದೇಶದ ವಿವಿಧ ಸಾರ್ವಜನಿಕ ಸೇವಾ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಕಾರ್ಯವನ್ನು ಗುರುತಿಸಲು ಪ್ರತಿ ವರ್ಷ ಏಪ್ರಿಲ್ 21 ರಂದು ರಾಷ್ಟ್ರೀಯ ನಾಗರಿಕ ಸೇವೆಗಳ ದಿನ ಆಚರಿಸಲಾಗುತ್ತದೆ.
ರಾಷ್ಟ್ರೀಯ ನಾಗರಿಕ ಸೇವೆಗಳ ದಿನ 2023: ದೇಶದ ಆಡಳಿತ ಯಂತ್ರವನ್ನು ಅಚ್ಚುಕಟ್ಟಾಗಿ ಕೊಂಡೊಯ್ಯುತ್ತಿರುವವರು ನಾಗರಿಕ ಸೇವಾ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು. ಹೀಗೆ ದೇಶದ ವಿವಿಧ ನಾಗರಿಕ ಸೇವಾ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಕಾರ್ಯವನ್ನು ಗುರುತಿಸಲು ಪ್ರತಿ ವರ್ಷ ಏಪ್ರಿಲ್ 21 ರಂದು ರಾಷ್ಟ್ರೀಯ ನಾಗರಿಕ ಸೇವೆಗಳ ದಿನ (National Civil Services Day) ಆಚರಿಸಲಾಗುತ್ತದೆ. ಈ ದಿನದಂದು, ಸಾರ್ವಜನಿಕ ಆಡಳಿತ ಕ್ಷೇತ್ರದಲ್ಲಿ ಅಸಾಧಾರಣ ಸೇವೆಗೈದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳಿಗೆ ಪ್ರಧಾನ ಮಂತ್ರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ರಾಷ್ಟ್ರೀಯ ನಾಗರಿಕ ಸೇವೆಗಳ ದಿನವನ್ನು ಮೊದಲ ಬಾರಿಗೆ 2006ರಲ್ಲಿ ನವದೆಹಲಿಯ (New Delhi) ವಿಜ್ಞಾನ ಭವನದಲ್ಲಿ ಆಚರಿಸಲಾಯಿತು.
ರಾಷ್ಟ್ರೀಯ ನಾಗರಿಕ ಸೇವೆಗಳ ದಿನವನ್ನು ಏಪ್ರಿಲ್ 21ರಂದೇ ಏಕೆ ಆಚರಿಸಲಾಗುತ್ತದೆ?
ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಏಪ್ರಿಲ್ 21 1947 ರಂದು ಅಖಿಲ ಭಾರತ ಸೇವೆಗಳನ್ನು ಉದ್ಘಾಟಿಸಿದರು. ನಂತರ ಹೊಸದಾಗಿ ರಚನೆಯಾದ ಮತ್ತು ಹೊಸದಾಗಿ ನೇಮಕಗೊಂಡ ಆಡಳಿತ ಸೇವಾ ಅಧಿಕಾರಿಗಳನ್ನು ಉದ್ದೇಶಿ ಮಾತನಾಡಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಈ ಅಧಿಕಾರಿಗಳನ್ನು ಉದ್ದೇಶಿಸಿ ನವದೆಹಲಿಯ ಮೆಟ್ಕಾಲ್ಫ್ ಹೌಸ್ನಲ್ಲಿ “ಭಾರತದ ಉಕ್ಕಿನ ಚೌಕಟ್ಟು” ಎಂದು ಉಲ್ಲೇಖಿಸಿದರು. ಭಾರತ ಸರ್ಕಾರವು ಏಪ್ರಿಲ್ 21 ಅನ್ನು ರಾಷ್ಟ್ರೀಯ ನಾಗರಿಕ ಸೇವೆಗಳ ದಿನವನ್ನಾಗಿ ಆಚರಿಸಲು ಗೊತ್ತುಪಡಿಸಿತು.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಈ ಶೈಕ್ಷಣಿಕ ವರ್ಷದ ಶಾಲಾ ದಿನಗಳಲ್ಲಿ ಭಾರೀ ಕಡಿತ
ರಾಷ್ಟ್ರೀಯ ನಾಗರಿಕ ಸೇವೆಗಳ ದಿನ: ಮಹತ್ವ
ರಾಷ್ಟ್ರೀಯ ನಾಗರಿಕ ಸೇವಾ ದಿನವು ರಾಷ್ಟ್ರದ ಸೇವೆಗಾಗಿ ನಾಗರಿಕ ಸೇವಾ ವರ್ಗದ ಅಧಿಕಾರಿಗಳ ಸಮರ್ಪಣೆ ಮತ್ತು ಬದ್ಧತೆಯನ್ನು ಗುರುತಿಸುವ ವಿಶೇಷ ದಿನವಾಗಿದೆ. ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಅವರ ದಣಿವರಿಯದ ಪ್ರಯತ್ನಗಳನ್ನು ಸ್ಮರಿಸುವ ದಿನಾವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ, ಸಾಮಾಜಿಕ ನ್ಯಾಯವನ್ನು ಉತ್ತೇಜಿಸುವಲ್ಲಿ ಮತ್ತು ಉತ್ತಮ ಆಡಳಿತವನ್ನು ನೀಡುವಲ್ಲಿ ಅವರ ಅವಿರತ ಪರಿಶ್ರಮವನ್ನು ಪ್ರಶಂಸಿಸಲು ಇದು ಒಂದು ಅವಕಾಶವಾಗಿದೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೆಲವು ಸಂದೇಶಗಳು
ಭಾರತದ ಉಕ್ಕಿನ ಮನುಷ್ಯ’ ಎಂದು ಪ್ರೀತಿಯಿಂದ ಕರೆಯಲ್ಪಡುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಭಾರತದ ನಾಗರಿಕ ಸೇವಾ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಅವರ ಕೆಲವು ಸ್ಪೂರ್ತಿದಾಯಕ ಸಂದೇಗಳು ಇಲ್ಲಿವೆ
1. ಭಾರತವು ಉತ್ತಮ ಉತ್ಪಾದಕನಾಗಬೇಕು ಮತ್ತು ಯಾರೂ ಹಸಿವಿನಿಂದ ಬಳಲಬಾರದು, ದೇಶದಲ್ಲಿ ಆಹಾರಕ್ಕಾಗಿ ಕಣ್ಣೀರು ಸುರಿಸಬಾರದು ಎಂಬುದು ನನ್ನ ಏಕೈಕ ಆಸೆ.
2. ಈ ಮಣ್ಣಿನಲ್ಲಿ ವಿಶಿಷ್ಟವಾದ ಶಕ್ತಿ ಇದೆ, ಇದು ಅನೇಕ ಅಡೆತಡೆಗಳ ಹೊರತಾಗಿಯೂ ಚೇತನಗಳ ನೆಲೆಯಾಗಿದೆ.
3. ಸಂತೋಷ ಮತ್ತು ದುಃಖವು ಕಾಗದದ ಚೆಂಡುಗಳು. ಸಾವಿಗೆ ಹೆದರಬೇಡ. ರಾಷ್ಟ್ರವಾದಿ ಶಕ್ತಿಗಳೊಂದಿಗೆ ಸೇರಿ, ಒಗ್ಗೂಡಿ. ಹಸಿದವರಿಗೆ ಕೆಲಸ ಕೊಡಿ, ಅಂಗವಿಕಲರಿಗೆ ಅನ್ನ ಕೊಡಿ, ಜಗಳ ಮರೆತುಬಿಡಿ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ