ನವದೆಹಲಿ: 2 ದಿನಗಳ ಹಿಂದೆ ದೆಹಲಿಯ (Delhi) ರೋಹಿಣಿ ಸೆಕ್ಟರ್ -31ರಲ್ಲಿ ತಂದೆ ಮತ್ತು ಮಗ ತೆರೆದ ಚರಂಡಿಯಲ್ಲಿ ಬಿದ್ದಿದ್ದರು. ಈ ಬಗ್ಗೆ ಬಂದ ಮಾಧ್ಯಮದ ವರದಿಯನ್ನು ಆಧರಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ದೆಹಲಿಯ ಮುಖ್ಯ ಕಾರ್ಯದರ್ಶಿ, ದೆಹಲಿ ಪೊಲೀಸ್ ಕಮಿಷನರ್ಗೆ (Delhi Police Commissioner) ನೋಟಿಸ್ ಜಾರಿ ಮಾಡಿದೆ. ಚರಂಡಿಯಲ್ಲಿ ಬಿದ್ದ ತಂದೆಯನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ 8 ವರ್ಷದ ಮಗನ ದೇಹ ಇನ್ನೂ ಸಿಕ್ಕಿಲ್ಲ.
ಚರಂಡಿಗೆ ಚಪ್ಪಡಿ ಮುಚ್ಚದೆ ಹಾಗೇ ತೆರೆದಿಟ್ಟಿದ್ದರಿಂದ ಈ ಘಟನೆ ನಡೆದಿತ್ತು. ಮಾನವ ಹಕ್ಕುಗಳ ಆಯೋಗ ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ದೆಹಲಿಯ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿದ್ದು, ಈ ಪ್ರಕರಣದ ಬಗ್ಗೆ ವಿವರವಾದ ವರದಿಯನ್ನು ಕೇಳಿದೆ. ರಕ್ಷಣಾ ಕಾರ್ಯಾಚರಣೆಯ ಪ್ರಸ್ತುತ ಸ್ಥಿತಿ, ಪೊಲೀಸರ ತನಿಖೆಯ ಸ್ಥಿತಿ, ರಕ್ಷಿಸಲ್ಪಟ್ಟ ತಂದೆಯ ವೈದ್ಯಕೀಯ ಚಿಕಿತ್ಸೆ ಮತ್ತು ಹಾನಿಗೊಳಗಾದ ಕುಟುಂಬಕ್ಕೆ ನೀಡಲಾದ ಪರಿಹಾರದ ಬಗ್ಗೆ ಮಾಹಿತಿ ಕೇಳಲಾಗಿದೆ.
ಈ ದುರಂತ ಘಟನೆಗೆ ಕಾರಣರಾದ ಕರ್ತವ್ಯಲೋಪ ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮದ ಬಗ್ಗೆಯೂ ಮಾಹಿತಿ ನೀಡುವಂತೆ ಮಾನವ ಹಕ್ಕುಗಳ ಆಯೋಗ ಒತ್ತಾಯಿಸಿದೆ. ಈ ಪ್ರದೇಶದಲ್ಲಿ ಮ್ಯಾನ್‌ಹೋಲ್ ಮುಚ್ಚಳಗಳು ಮತ್ತು ಗ್ರಿಲ್‌ಗಳನ್ನು ಕದಿಯದಂತೆ ಮಾಡಲು ತೆಗೆದುಕೊಂಡ ಅಥವಾ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳು ಮಾಹಿತಿಯನ್ನು ನೀಡಬೇಕೆಂದು ಮಾನವ ಹಕ್ಕುಗಳ ಆಯೋಗ ಸೂಚಿಸಿದೆ.