ಬಿಹಾರ ಭೇಟಿ ವೇಳೆ ಮೋದಿ ಹತ್ಯೆಗೆ ಪಿಎಫ್ಐ ಸಂಚು ಪ್ರಕರಣ: ನಾಲ್ವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ ಎನ್ಐಎ
ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸ್ಕೆಚ್ ಸಿದ್ಧಪಡಿಸಿದ್ದ ಉಗ್ರರ ಜಾಲವೊಂದು ಬಿಹಾರದಲ್ಲಿ ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಆರೋಪಿಗಳ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಪಾಟ್ನಾ ಭೇಟಿಗೆ ಅಡ್ಡಿಪಡಿಸಲು ಮತ್ತು ಇತರ ಕಾನೂನುಬಾಹಿರ ಮತ್ತು ದೇಶ ವಿರೋಧಿ ಚಟುವಟಿಕೆಗಳಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ರೂಪಿಸಿದ್ದ ಸಂಚು ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಶನಿವಾರ ನಾಲ್ವರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ (Chargesheet) ಸಲ್ಲಿಸಿದೆ. ಪಾಟ್ನಾದ ಮುಸ್ಲಿಂ ರಘೋಪುರ್ ಗ್ರಾಮದ ಅಥರ್ ಪರ್ವೇಜ್, ಪಾಟ್ನಾದ ಫುಲ್ವಾರಿಶರೀಫ್ನ ಮೊಹಮ್ಮದ್ ಜಲಾಲುದ್ದೀನ್ ಖಾನ್, ದರ್ಭಾಂಗಾದ ಲಾಲ್ ಬಾಗ್ನ ನೂರುದ್ದೀನ್ ಜಂಗಿ ಮತ್ತು ಫುಲ್ವಾರಿಶರೀಫ್ನ ಅರ್ಮಾನ್ ಮಲ್ಲಿಕ್ ಅಲಿಯಾಸ್ ಮೊಹಮ್ಮದ್ ಇಮ್ತೇಯಾಜ್ ಅನ್ವರ್ ಬಂಧಿತ ಆರೋಪಿಗಳಾಗಿದ್ದಾರೆ. ಇವರೆಲ್ಲರೂ ಪಿಎಫ್ಐನೊಂದಿಗೆ ಸಂಬಂಧ ಹೊಂದಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಪಿತೂರಿ ರೂಪಿಸಿದ್ದ ಜಾಲವೊಂದು ಬಿಹಾರದಲ್ಲಿ ಬೆಳಕಿಗೆ ಬಂದಿತ್ತು. ಬಿಹಾರ ಪೊಲೀಸರು ನಡೆಸಿದ ರಹಸ್ಯ ತನಿಖೆಯಲ್ಲಿ ಪ್ರಧಾನಿ ಹತ್ಯೆಗೆ ನಡೆದ ಸಂಚಿನ ಬಗ್ಗೆ ತಿಳಿದುಬಂದಿದೆ. ಜುಲೈ 12ರಂದು ತಡರಾತ್ರಿ ಫುಲ್ವಾರಿ ಷರೀಫ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಉಗ್ರ ಸಂಘಟನೆಗಳ ಜತೆಗೆ ನಂಟು ಹೊಂದಿರುವ ನಿವೃತ್ತ ಅಧಿಕಾರಿ ಮೊಹಮ್ಮದ್ ಜಲಾವುದ್ದೀನ್, ಅಥೇರ್ ಪರ್ವೇಜ್‌ನನ್ನು ಬಂಧಿಸಿದ್ದರು. ಜಲಾವುದ್ದೀನ್‌ಗೆ ಸಿಮಿ ಉಗ್ರ ಸಂಘಟನೆ ಜೊತೆಗೆ ನಿಕಟ ಸಂಪರ್ಕ ಇತ್ತು ಎಂದು ತನಿಖಾಧಿಕಾರಿ ಮನೀಶ್ ಕುಮಾರ್ ಹೇಳಿದ್ದರು.
ಇದನ್ನೂ ಓದಿ: 8ನೇ ಕ್ಲಾಸ್ ವಿದ್ಯಾರ್ಥಿನಿಗೆ ಪ್ರೇಮ ಪತ್ರ, ಮಗಳ ವಯಸ್ಸಿನ ಬಾಲಕಿಯನ್ನು ಮದ್ವೆಯಾಗುವ ಆಸೆ ವ್ಯಕ್ತಪಡಿಸಿದ ಶಿಕ್ಷಕ
ಪ್ರಧಾನಿ ನರೇಂದ್ರ ಮೋದಿ ಸೇರಿ ಗಣ್ಯ ವ್ಯಕ್ತಿಗಳ ಹತ್ಯೆಗೆ ಸಂಚು, ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಪಿತೂರಿ, ಉಗ್ರ ಸಂಘಟನೆಗಳ ಜೊತೆ ನಿಕಟ ಸಂಪರ್ಕ ಹೊಂದಿದ ಆರೋಪದಡಿ ಕೆಲ ತಿಂಗಳ ಹಿಂದೆ ದೇಶಾದ್ಯಂತ ಏಕಕಾಲಕ್ಕೆ ಎನ್ಐಎ ಅಧಿಕಾರಿಗಳು ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆ ಮೇಲೆ ದಾಳಿ ಹಾಗೂ ಹಲವಾರು ಮಂದಿ ಮುಖಂಡರು, ಕಾರ್ಯಕರ್ತರ ಬಂಧಿಸಿದ್ದರು. ಇದಾದ ನಂತರ ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆಯನ್ನು 5 ವರ್ಷಗಳ ಕಾಲ ನಿಷೇಧಿಸಿ ಮಹತ್ವದ ಆದೇಶ ಹೊರಡಿಸಿತ್ತು.
ಕಾನೂಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ (UAPA) ಅಡಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಪಿಎಫ್ಐ ಮತ್ತು ಅದರ ಅಂಗ ಸಂಸ್ಥೆಗಳು ಕಾನೂನುಬಾಹಿರ ಸಂಘ ಎಂದು ಘೋಷಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿತ್ತು. ಪಿಎಫ್ಐ ಅಂಗಸಂಸ್ಥೆಗಳಾದ ರಿಹಬ್ ಇಂಡಿಯಾ ಫೌಂಡೇಶನ್ (RIF), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (AIIC), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (NCHRO), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್ ಕೇರಳವನ್ನು ನಿಷೇಧಿಸಿದೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:32 am, Sun, 8 January 23