ಒಡಿಶಾದಲ್ಲಿ ಬಿಜೆಡಿ ಸೋಲು; ನವೀನ್ ಪಾಟ್ನಾಯಕ್ ಆಪ್ತ ವಿ.ಕೆ. ಪಾಂಡಿಯನ್ ರಾಜಕೀಯ ತೊರೆಯಲು ನಿರ್ಧಾರ

|

Updated on: Jun 09, 2024 | 4:04 PM

VK Pandian quits active politics in Odisha: ಒಡಿಶಾ ಚುನಾವಣೆಯಲ್ಲಿ ಬಿಜೆಡಿ ಪಕ್ಷ ಸೋತ ಬೆನ್ನಲ್ಲೇ ಇದೀಗ ನವೀನ್ ಪಾಟ್ನಾಯಕ್ ಆಪ್ತ ವಿ.ಕೆ. ಪಾಂಡ್ಯನ್ ಅವರು ಸಕ್ರಿಯ ರಾಜಕಾರಣ ತೊರೆಯುವುದಾಗಿ ಹೇಳಿದ್ದಾರೆ. ಚುನಾವಣೆ ಸೋಲಿಗೆ ಪರೋಕ್ಷವಾಗಿ ಹೊಣೆ ಹೊತ್ತು ಅವರು ರಾಜೀನಾಮೆ ನೀಡಿದ್ದು, ಪಕ್ಷದ ಕಾರ್ಯಕರ್ತರು ಮತ್ತು ನಾಯಕರಿಗೆ ವಿಡಿಯೋ ಸಂದೇಶದಲ್ಲಿ ಕ್ಷಮೆ ಯಾಚಿಸಿದ್ದಾರೆ. ತಮಿಳುನಾಡು ಮೂಲಕದ ವಿ.ಕೆ. ಪಾಂಡ್ಯನ್ ಅವರು ಮಾಜಿ ಸರ್ಕಾರಿ ಅಧಿಕಾರಿಯೂ ಹೌದು.

ಒಡಿಶಾದಲ್ಲಿ ಬಿಜೆಡಿ ಸೋಲು; ನವೀನ್ ಪಾಟ್ನಾಯಕ್ ಆಪ್ತ ವಿ.ಕೆ. ಪಾಂಡಿಯನ್ ರಾಜಕೀಯ ತೊರೆಯಲು ನಿರ್ಧಾರ
ಒಡಿಶಾದ ಮಾಜಿ ಸಿಎಂ ನವೀನ್ ಪಾಟ್ನಾಯಕ್, ವಿ.ಕೆ. ಪಾಂಡ್ಯನ್.
Follow us on

ಭುವನೇಶ್ವರ್, ಜೂನ್ 9: ಒಡಿಶಾ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ (Odisa elections) ಬಿಜು ಜನತಾ ದಳ ಸೋಲುಂಡ ಹಿನ್ನೆಲೆಯಲ್ಲಿ ಮಾಜಿ ಸಿಎಂ ನವೀನ್ ಪಾಟ್ನಾಯಕ್ ಅವರ ಆಪ್ತ ವಿ.ಕೆ. ಪಾಂಡಿಯನ್ (VK Pandian) ಸಕ್ರಿಯ ರಾಜಕಾರಣ ತೊರೆಯಲು ನಿರ್ಧರಿಸಿದ್ದಾರೆ. ಬಿಜೆಡಿ ಸೋಲಿಗೆ ತಾನು ಕಾರಣವೆನಿಸಿದರೆ ದಯವಿಟ್ಟು ಕ್ಷಮಿಸಿ ಎಂದು ತಮಿಳುನಾಡು ಮೂಲದ ಮಾಜಿ ಸರ್ಕಾರಿ ಅಧಿಕಾರಿಯೂ ಆದ ಪಾಂಡ್ಯನ್ ವಿಡಿಯೋ ಸಂದೇಶದಲ್ಲಿ ಕೋರಿಕೊಂಡಿದ್ದಾರೆ.

ತಾನು ಚುನಾವಣಾ ಪ್ರಚಾರ ನಡೆಸಿದ್ದರಿಂದ ಪಕ್ಷ ಸೋಲಪ್ಪಿತು ಎಂದನಿಸಿದರೆ ಬಿಜೆಡಿ ಕಾರ್ಯಕರ್ತರು ಮತ್ತು ನಾಯಕರು ತಮ್ಮನ್ನು ಕ್ಷಮಿಸಬೇಕು. ತಾನು ರಾಜಕಾರಣಕ್ಕೆ ಬಂದು ಆಸ್ತಿ ಹೆಚ್ಚಿಸಿಕೊಂಡಿಲ್ಲ. ಸರ್ಕಾರಿ ಸೇವೆಯಲ್ಲಿ ಗಳಿಸಿದ ಆಸ್ತಿಯೇ ಈಗಲೂ ಉಳಿದಿರುವುದು ಎಂದು ಹೇಳಿರುವ ಅವರು, ತಮ್ಮ ಹೃದಯ ಸದಾ ಕಾಲ ಒಡಿಶಾ ಜನರಿಗಾಗಿ ಮತ್ತು ಜಗನ್ನಾಥ ದೇವರಿಗಾಗಿ ಮಿಡಿಯುತ್ತಿರುತ್ತದೆ ಎಂದೂ ವಿಡಿಯೋ ಸಂದೇಶದಲ್ಲಿ ಭಾವನಾತ್ಮಕವಾಗಿ ಹೇಳಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶ ಸಂಸದರ ಹತ್ಯೆ ಪ್ರಕರಣ: ಬಂಗಾಳದ ಕಾಲುವೆಯಲ್ಲಿ ಮಾನವ ಮೂಳೆಗಳು ಪತ್ತೆ

ವಿ.ಕೆ. ಪಾಂಡ್ಯನ್ ಅವರು ಒಡಿಶಾದ ಮಾಜಿ ಸಿಎಂ ನವೀನ್ ಪಾಟ್ನಾಯಕ್ ಅವರಿಗೆ ಬಲಗೈ ಬಂಟರಂತಿದ್ದವರು. ಸಾರ್ವಜನಿಕವಾಗಿ ಪಾಟ್ನಾಯಕ್ ಜೊತೆಯೇ ಅವರು ಸದಾ ಇರುತ್ತಿದ್ದರು. ಇತ್ತೀಚೆಗೆ ನವೀನ್ ಪಾಟ್ನಾಯಕ್ ಭಾಷಣ ಮಾಡುತ್ತಿರುವಾಗ ಅವರ ಕೈ ನಡುಗುತ್ತಿದ್ದುದು, ಅದನ್ನು ಸಾರ್ವಜನಿಕರಿಂದ ಮರೆ ಮಾಚಲು ಪಾಂಡ್ಯನ್ ಯತ್ನಿಸುತ್ತಿದ್ದುದು ಈ ದೃಶ್ಯ ಇರುವ ವಿಡಿಯೋವೊಂದು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹೋಗಿತ್ತು. ನವೀನ್ ಪಾಟ್ನಾಯಕ್ ಅವರನ್ನು ಪಾಂಡ್ಯನ್ ನಿಯಂತ್ರಿಸುತ್ತಿದ್ದಾರೆ. ಅವರೇ ಮುಂದಿನ ಬಾರಿ ಸಿಎಂ ಆಗುತ್ತಾರೆ ಎನ್ನುವಂತಹ ಮೆಸೇಜ್ ಎಲ್ಲೆಡೆ ಶೇರ್ ಆಗಿತ್ತು.

ಪ್ರಧಾನಿ ನರೇಂದ್ರ ಮೋದಿ ಕೂಡ ಈ ವಿಡಿಯೋವನ್ನು ಪ್ರಸ್ತಾಪಿಸಿ, ನವೀನ್ ಪಾಟ್ನಾಯಕ್ ಆರೋಗ್ಯದ ಬಗ್ಗೆ ತನಿಖೆ ಮಾಡುವುದಾಗಿ ತಮ್ಮ ಭಾಷಣಗಳಲ್ಲಿ ಹೇಳಿದ್ದುಂಟು. ಅಷ್ಟೇ ಅಲ್ಲ, ಬಿಜೆಪಿ ಗೆದ್ದರೆ ಒಡಿಶಾದಲ್ಲೇ ಹುಟ್ಟಿದವರು, ಒಡಿಯಾ ಮಾತನಾಡುವವರು ಸಿಎಂ ಆಗುತ್ತಾರೆ ಎಂದು ಮೋದಿ ಹೇಳಿದ್ದರು. ಇದು ಪರೋಕ್ಷವಾಗಿ ವಿ.ಕೆ. ಪಾಂಡ್ಯನ್ ಅವರನ್ನು ಗುರಿ ಮಾಡಿ ನೀಡಿದ್ದ ಹೇಳಿಕೆ ಆಗಿತ್ತು.

ಇದನ್ನೂ ಓದಿ: ಬಾಂಗ್ಲಾದೇಶ ಸಂಸದರ ಹತ್ಯೆ ಪ್ರಕರಣ: ಬಂಗಾಳದ ಕಾಲುವೆಯಲ್ಲಿ ಮಾನವ ಮೂಳೆಗಳು ಪತ್ತೆ

ನವೀನ್ ಪಾಟ್ನಾಯಕ್ ಅವರು 2000ರ ಇಸವಿಯಿಂದ ಸತತವಾಗಿ 24 ವರ್ಷ ಕಾಲ ಒಡಿಶಾ ಮುಖ್ಯಮಂತ್ರಿಯಾಗಿ ದಾಖಲೆ ಬರೆದಿದ್ದರು. ಆದರೆ, ಈಗ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ 147 ಸ್ಥಾನಗಳ ಪೈಕಿ ಬಿಜು ಜನತಾ ದಳ ಕೇವಲ 51 ಸ್ಥಾನ ಪಡೆದಿದೆ. ಬಿಜೆಪಿ ಬಹುಮತ ಪಡೆದು ಮೊದಲ ಬಾರಿಗೆ ಒಡಿಶಾದಲ್ಲಿ ಗದ್ದುಗೆ ಹಿಡಿಯಲು ಯಶಸ್ವಿಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ