Navjot Singh Sidhu: ಚಂಡಿಗಢ್​​ನಲ್ಲಿ ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್​ ಸಿಧು ಬಂಧನ

Lakhimpur Kheri Violence: ಲಖಿಂಪುರ ಖೇರಿ ಹಿಂಸಾಚಾರ ಸಂಬಂಧಪಟ್ಟಂತೆ ಕೇಂದ್ರ ಸಚಿವ ಅಜಯ್​ ಮಿಶ್ರಾ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. 

Navjot Singh Sidhu: ಚಂಡಿಗಢ್​​ನಲ್ಲಿ ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್​ ಸಿಧು ಬಂಧನ
ನವಜೋತ್ ಸಿಂಗ್ ಸಿಧು
Updated By: Lakshmi Hegde

Updated on: Oct 04, 2021 | 2:19 PM

ಉತ್ತರಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರ (Lakhimpur Kheri Violence) ವಿರೋಧಿಸಿ ಚಂಡಿಗಢ್​​ನ ರಾಜ್ಯಪಾಲರ ಭವನದ ಎದುರು ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್ ಸಿಧು (Navjot Singh Sidhu )ಮತ್ತು ಅವರ ಬೆಂಬಲಿಗರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಲಖಿಂಪುರದಲ್ಲಿ ಹಿಂಸಾಚಾರ ನಡೆದು ನಾಲ್ವರು ರೈತರು ಸೇರಿ ಒಟ್ಟು 8 ಮಂದಿ ಮೃತಪಟ್ಟ ಘಟನೆಯನ್ನು ವಿರೋಧಿಸಿ ನವಜೋತ್​ ಸಿಂಗ್ ಸಿಧು ಪ್ರತಿಭಟನೆ ನಡೆಸುತ್ತಿದ್ದರು. ಇವರೊಂದಿಗೆ ಕಾಂಗ್ರೆಸ್​ ಶಾಸಕರು, ಪಿವೈಸಿ ಅಧ್ಯಕ್ಷ ಬರಿಂದರ್ ದಿಲ್ಲೋನ್​ ಇತರರು ಇದ್ದರು. ಇವರೆಲ್ಲರೂ ಕೇಂದ್ರ ಸಚಿವ ಅಜಯ್​ ಮಿಶ್ರಾ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಹಾಗೇ, ಹರಿಯಾಣ ಸಿಎಂ ಮನೋಹರ್​ ಲಾಲ್ ಖಟ್ಟರ್​ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆಯೂ ಸಿಧು ಆಗ್ರಹಿಸಿದ್ದಾರೆ. 

ನಿನ್ನೆ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಅಜಯ್​ ಮಿಶ್ರಾ ಮತ್ತು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ  ಕೇಶವ ಪ್ರಸಾದ್​ ಮೌರ್ಯ ಭೇಟಿ ವಿರೋಧಿಸಿ ರೈತರು ಲಖಿಂಪುರದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಎರಡು ಕಾರುಗಳು ಅವರ ಮೇಲೆ ಹರಿದು, ಇಬ್ಬರು ರೈತರು ಮೃತಪಟ್ಟಿದ್ದಾರೆ. ಒಂದು ಕಾರಿನಲ್ಲಿ ಅಜಯ್​ ಮಿಶ್ರಾ ಪುತ್ರ ಆಶೀಶ್​ ಮಿಶ್ರಾ ಇದ್ದರು ಎಂಬ ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ಕೊಲೆ ಕೇಸ್​ ಕೂಡ ದಾಖಲಾಗಿದೆ. ಇಬ್ಬರು ರೈತರು ಸಾವನ್ನಪ್ಪುತ್ತಿದ್ದಂತೆ ಲಖಿಂಪುರ ಖೇರಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಹಾಗೇ, ಕಾಂಗ್ರೆಸ್​ನ ಪ್ರಿಯಾಂಕಾ ಗಾಂಧಿ, ಪಂಜಾಬ್​ ಮುಖ್ಯಮಂತ್ರಿ ಚರಣಜಿತ್​ ಸಿಂಗ್ ಛನ್ನಿ, ಅಖಿಲೇಶ್​ ಯಾದವ್​, ಛತ್ತೀಸ್​ಗಢ್​ ಮುಖ್ಯಮಂತ್ರಿ ಭೂಪೇಶ್​ ಬಾಘೇಲ್​ ಸೇರಿ ಹಲವು ನಾಯಕರು ಲಖಿಂಪುರ ಖೇರಿ ಘಟನೆಯನ್ನು ಖಂಡಿಸಿದ್ದಾರೆ. ಲಖಿಂಪುರಕ್ಕೆ ತೆರಳಲು ಮುಂದಾಗಿರುವ ಪಂಜಾಬ್​ ಸಿಎಂ ಉತ್ತರ ಪ್ರದೇಶ ಸರ್ಕಾರದ ಅನುಮತಿ ಕೋರಿದ್ದಾರೆ. ಆದರೆ ಹಿಂಸಾಚಾರ ನಡೆಯುತ್ತಿರುವ ಸ್ಥಳದಲ್ಲೀಗ ಸೆಕ್ಷನ್​ 144 ಜಾರಿಯಾಗಿದ್ದೂ, ಯಾರನ್ನೂ ಅಲ್ಲಿಗೆ ಬಿಡಲಾಗುತ್ತಿಲ್ಲ.

ಮಧ್ರಪ್ರವೇಶ ಮಾಡಿದ ಕೇಂದ್ರ ಗೃಹ ಸಚಿವಾಲಯ
ಹಿಂಸಾಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹಸಚಿವಾಲಯ ಮಧ್ಯಪ್ರವೇಶ ಮಾಡಿದ್ದು, ಲಖಿಂಪುರ ಖೇರಿಯಲ್ಲಿ ಆರ್​ಎಎಫ್​ (ಕ್ಷಿಪ್ರ ಕ್ರಿಯಾ ಪಡೆ) ಮತ್ತು ಸಶಸ್ತ್ರ ಸೀಮಾ ಬಲ ಪಡೆಯ ತಲಾ ಎರಡು ತಂಡಗಳನ್ನು ನಿಯೋಜಿಸಿದ್ದು, ಅಕ್ಟೋಬರ್ 6ರವರೆಗೂ ಈ ಭದ್ರತೆ ಮುಂದುವರಿಯಲಿದೆ. ಇನ್ನು ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಮೃತದೇಹಗಳನ್ನು ಪೋಸ್ಟ್​ಮಾರ್ಟಮ್​ಗೆ ಕಳಿಸಲಾಗಿದೆ.

ಸಿಬಿಐ ತನಿಖೆಯಾಗಲಿ
ಕೇಂದ್ರ ಸಚಿವ ಅಜಯ್​ ಮಿಶ್ರಾಗೆ ಈ ಪ್ರಕರಣ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಾರಣ ರೈತರ ಮೇಲೆ ಕಾರು ಹರಿಸಿರುವ ಆರೋಪ ಅವರ ಪುತ್ರ ಆಶೀಶ್​ ಮಿಶ್ರಾ ಮೇಲೆ ಬಂದಿದ್ದು, ಕೊಲೆ ಕೇಸ್​ ಕೂಡ ದಾಖಲಾಗಿದೆ. ಆದರೆ ಈ ಆರೋಪವನ್ನು ಅಜಯ್ ಮಿಶ್ರಾ ಮತ್ತು ಆಶೀಶ್​ ಮಿಶ್ರಾ ಇಬ್ಬರೂ ತಳ್ಳಿ ಹಾಕಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ತಾನು ಲಖಿಂಪುರದಲ್ಲಿ ಇರಲೇ ಇಲ್ಲ. ಅಂದು ಬೆಳಗ್ಗೆ 9ಗಂಟೆಯಿಂದಲೂ ಬನ್ಬೀರ್​ಪುರದಲ್ಲಿ ಇದ್ದೆ ಎಂದಿದ್ದಾರೆ. ಅಜಯ್​ ಮಿಶ್ರಾ ಕೂಡ ಇದನ್ನೇ ಪ್ರತಿಪಾದಿಸಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ರೈತರ ಮೇಲೆ ಕಾರು ಹರಿಸಿದ ಘಟನೆಯ ತನಿಖೆಯನ್ನು ಸಿಬಿಐ ಅಥವಾ  ಕಾರ್ಯನಿರತ ನ್ಯಾಯಾಧೀಶರ ತಂಡ ನಡೆಸಬೇಕು. ಅದಾಗದೆ ಇದ್ದರೆ ಎಸ್​ಐಟಿ ರಚನೆ ಮಾಡಬೇಕು ಎಂದಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಕೈಯಲ್ಲಿ ಪೊರಕೆ! ರೂಮನ್ನು ಕ್ಲೀನ್ ಮಾಡಿದ ಪರಿ ಹೇಗಿತ್ತು ನೀವೇ ನೋಡಿ

Health Tips: ಪ್ರತಿನಿತ್ಯ ನೀವು ಮಾಡುವ ಈ ಕೆಲವು ತಪ್ಪುಗಳು ನಿಮ್ಮ ಆರೋಗ್ಯವನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ!

 

Published On - 1:59 pm, Mon, 4 October 21