ಒಳನುಸುಳುಕೋರರನ್ನು ದೇಶದಿಂದಲೇ ನಿರ್ಮೂಲನೆ ಮಾಡುತ್ತೇವೆ; ಬಿಹಾರದಲ್ಲಿ ಅಮಿತ್ ಶಾ ಸವಾಲು

ಬಿಹಾರದ ದರ್ಭಂಗಾದಲ್ಲಿ ಚುನಾವಣಾ ಪ್ರಚಾರ ಮಾಡುವಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಆರ್​ಜೆಡಿ ನಾಯಕರಾದ ಲಾಲು ಪ್ರಸಾದ್ ಯಾದವ್, ಕಾಂಗ್ರೆಸ್ ಮತ್ತು ಮಹಾಘಟಬಂಧನ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎನ್​ಡಿಎ ಬಿಹಾರಕ್ಕೆ ಜಂಗಲ್ ರಾಜ್ ಮರಳಲು ಬಿಡುವುದಿಲ್ಲ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ. ಹಾಗೇ, ಒಳನುಸುಳುಕೋರರ ಪರವಾಗಿ ರಾಹುಲ್ ಗಾಂಧಿ ಯಾತ್ರೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅಮಿತ್ ಶಾ ಆ ಒಳನುಸುಳುಕೋರರನ್ನು ದೇಶದಿಂದಲೇ ಓಡಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.

ಒಳನುಸುಳುಕೋರರನ್ನು ದೇಶದಿಂದಲೇ ನಿರ್ಮೂಲನೆ ಮಾಡುತ್ತೇವೆ; ಬಿಹಾರದಲ್ಲಿ ಅಮಿತ್ ಶಾ ಸವಾಲು
Amit Shah

Updated on: Nov 04, 2025 | 3:30 PM

ಪಾಟ್ನಾ, ನವೆಂಬರ್ 4: ಬಿಹಾರದ ದರ್ಭಾಂಗಾದಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಇಂದು ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಮಹಾಘಟಬಂಧನ್, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ವಿರುದ್ಧ ತೀಕ್ಷ್ಣವಾದ ವಾಗ್ದಾಳಿ ನಡೆಸಿದರು. “ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎರಡೂವರೆ ತಿಂಗಳ ಹಿಂದೆ ಬಿಹಾರಕ್ಕೆ ಭೇಟಿ ನೀಡಿದ್ದರು. ಆಗ ಅವರು ಒಳನುಸುಳುಕೋರರನ್ನು ರಕ್ಷಿಸುವ ಯಾತ್ರೆ ನಡೆಸಿದ್ದಾರೆ. ಲಾಲು ಯಾದವ್ ಮತ್ತು ರಾಹುಲ್ ಗಾಂಧಿ ಒಳನುಸುಳುಕೋರರನ್ನು ರಕ್ಷಿಸಲು ಬಯಸುತ್ತಾರೆ. ಆದರೆ, ಬಿಜೆಪಿ ದೇಶದಿಂದ ಒಳನುಸುಳುಕೋರರನ್ನು ಒಬ್ಬೊಬ್ಬರಾಗಿ ಗುರುತಿಸಿ ತೆಗೆದುಹಾಕುತ್ತದೆ” ಎಂದು ಅಮಿತ್ ಶಾ ಒತ್ತಿ ಹೇಳಿದ್ದಾರೆ.

“ಬಿಹಾರವು ಈಗಾಗಲೇ ಲಾಲು ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ನೇತೃತ್ವದಲ್ಲಿ 15 ವರ್ಷಗಳ ಕಾಲ ಜಂಗಲ್ ರಾಜ್ ಅನ್ನು ಕಂಡಿದೆ. ಅದೇ ಮಾದರಿಯನ್ನು ಈಗ ಮತ್ತೆ ತರಲು ಪ್ರಯತ್ನಿಸಲಾಗುತ್ತಿದೆ. ಜಂಗಲ್ ರಾಜ್ ಮರಳದಂತೆ ತಡೆಯುವುದು ಮತ್ತು ದರ್ಭಂಗಾವನ್ನು ಅಭಿವೃದ್ಧಿ ಹೊಂದಿದ ಜಿಲ್ಲೆಯನ್ನಾಗಿ ಮಾಡುವತ್ತ ಕೆಲಸ ಮಾಡುವುದು ಎನ್‌ಡಿಎಯ ಆದ್ಯತೆಯಾಗಿದೆ” ಎಂದು ಅಮಿತ್ ಶಾ ಹೇಳಿದ್ದಾರೆ.

ಇದನ್ನೂ ಓದಿ:  ಬಿಹಾರದಲ್ಲಿ ಶಹಾಬುದ್ದೀನ್ ಸಿದ್ಧಾಂತವನ್ನು ಸೋಲಿಸೋಣ; ಅಮಿತ್ ಶಾ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಆಯುಷ್ಮಾನ್ ಭಾರತ್ ಯೋಜನೆಯಡಿ ಬಿಹಾರದಲ್ಲಿ 3.60 ಕೋಟಿ ಜನರಿಗೆ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆಯನ್ನು ನೀಡುವುದಾಗಿ ಖಚಿತಪಡಿಸಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಪ್ರಧಾನಿ ಮೋದಿ ಇತ್ತೀಚೆಗೆ ದರ್ಭಂಗಾದಲ್ಲಿ ಬಿಹಾರದ ಎರಡನೇ ಐಟಿ ಪಾರ್ಕ್ ಅನ್ನು ಉದ್ಘಾಟಿಸಿದರು. ಇದು ಮಿಥಿಲಾದಲ್ಲಿ ಯುವಕರಿಗೆ ಹೊಸ ಉದ್ಯೋಗಗಳು ಮತ್ತು ಉದ್ಯೋಗಾವಕಾಶಗಳನ್ನು ತರುತ್ತದೆ ಎಂದು ಅವರು ಹೇಳಿದ್ದಾರೆ.


ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ 1.41 ಕೋಟಿ ಜೀವಿಕಾ ದೀದಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 10,000 ರೂ.ಗಳನ್ನು ಜಮಾ ಮಾಡಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ. ಲಾಲು ಯಾದವ್ ಅವರ ಪಕ್ಷವು ಈ ಹಣವನ್ನು ಹಿಂದಕ್ಕೆ ಪಡೆಯಬೇಕೆಂದು ಬಯಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಎನ್‌ಡಿಎ ಮತ್ತೆ ಸರ್ಕಾರ ರಚಿಸಿದರೆ, ಮುಂದಿನ 5 ವರ್ಷಗಳಲ್ಲಿ ಜೀವಿಕಾ ಖಾತೆಗಳಿಗೆ 2 ಲಕ್ಷ ರೂ.ಗಳನ್ನು ಜಮಾ ಮಾಡಲಾಗುವುದು ಎಂದು ಅಮಿತ್ ಶಾ ಹೇಳಿದ್ದಾರೆ.

ಇದನ್ನೂ ಓದಿ: ಬಿಹಾರ ಚುನಾವಣೆಗೆ ಶಹಾಬುದ್ದೀನ್ ಮಗನನ್ನು ಕಣಕ್ಕಿಳಿಸಿದ್ದಕ್ಕೆ ಆರ್​ಜೆಡಿ ವಿರುದ್ಧ ಅಮಿತ್ ಶಾ ವಾಗ್ದಾಳಿ

ಇದೇ ವೇಳೆ ಹಿಂದಿನ ಸರ್ಕಾರಗಳ ಅಡಿಯಲ್ಲಿ ನಡೆದಿರುವ ಹಲವಾರು ಹಗರಣಗಳು ಮತ್ತು ಭ್ರಷ್ಟಾಚಾರಗಳನ್ನು ಅಮಿತ್ ಶಾ ಪಟ್ಟಿ ಮಾಡಿದ್ದಾರೆ. ಲಾಲು ಯಾದವ್ ಮೇವು ಹಗರಣ, ಉದ್ಯೋಗಕ್ಕಾಗಿ ಭೂಮಿ ಹಗರಣ, ಹೋಟೆಲ್ ಮಾರಾಟ ಹಗರಣ, ಬಿಟುಮೆನ್ ಹಗರಣ, ಪ್ರವಾಹ ಪರಿಹಾರ ಹಗರಣ, ನೇಮಕಾತಿ ಹಗರಣ ಮತ್ತು ಎಬಿ ರಫ್ತು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರವೂ 12 ಲಕ್ಷ ಕೋಟಿ ರೂ.ಗಳ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಮೋದಿ ಪ್ರಧಾನಿಯಾಗಿ 11 ವರ್ಷ ಮತ್ತು ನಿತೀಶ್ ಕುಮಾರ್ ಸಿಎಂ ಆಗಿ 20 ವರ್ಷ ಆಡಳಿತ ನಡೆಸಿದ್ದರೂ, ಅವರ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪಗಳು ಸಾಬೀತಾಗಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

243 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 6 ಮತ್ತು ನವೆಂಬರ್ 11ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ