NEET 2022: ಕೈಯಲ್ಲೇ ಬ್ರಾ ಹಿಡ್ಕೊಂಡು ಹೋಗಿ ಅಂದ್ರು; ನೀಟ್ ಪರೀಕ್ಷೆಯ ಕರಾಳ ಅನುಭವ ಬಿಚ್ಚಿಟ್ಟ ಯುವತಿ
Kerala News: ಒಳ ಉಡುಪಿಲ್ಲದೆ ಹುಡುಗರ ಮಧ್ಯೆ ಕುಳಿತು ಪರೀಕ್ಷೆ ಬರೆದಿದ್ದು ನಿಜಕ್ಕೂ ಕೆಟ್ಟ ಅನುಭವವಾಗಿತ್ತು. ಪರೀಕ್ಷೆ ಬರೆದು ವಾಪಾಸ್ ಬಂದ ನಂತರವೂ ನಮಗೆ ನಮ್ಮ ಒಳ ಉಡುಪನ್ನು ಹಾಕಿಕೊಳ್ಳಲು ಅಲ್ಲಿ ಯಾವ ವ್ಯವಸ್ಥೆಯೂ ಇರಲಿಲ್ಲ ಎಂದು ಯುವತಿ ಹೇಳಿದ್ದಾರೆ.
ಕೊಲ್ಲಂ: ಕೇರಳದ ಕೊಲ್ಲಂನಲ್ಲಿ ನೀಟ್ ಪರೀಕ್ಷೆ (NEE Exam) ವೇಳೆ ಯುವತಿಯರಿಗೆ ಒಳಉಡುಪು ಬಿಚ್ಚಿಟ್ಟು ಪರೀಕ್ಷೆ ಬರೆಯಲು ಸೂಚಿಸಲಾಗಿತ್ತು. ಈ ಪ್ರಕರಣ ಈಗಾಗಲೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕೇಸ್ ಕೂಡ ದಾಖಲಿಸಲಾಗಿದೆ. ನೀಟ್ ಪರೀಕ್ಷೆಯ ಡ್ರೆಸ್ಕೋಡ್ (NEET Dresscode) ಪಾಲಿಸುವ ಭರದಲ್ಲಿ ಯುವತಿಯರಿಗೆ ಬ್ರಾ ತೆಗೆದಿಡಲು ಹೇಳಿ ಪರೀಕ್ಷೆ ಬರೆಸಲಾಗಿತ್ತು. ಇದರಿಂದ ತೀವ್ರ ಅವಮಾನಿತರಾಗಿದ್ದ ಯುವತಿಯರು ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದಾರೆ. ಇಂತಹ ಘಟನೆ ಅವರ ಪರೀಕ್ಷೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಆ ಯುವತಿಯರ ಪೋಷಕರು ಆಕ್ರೋಶ ಹೊರಹಾಕಿದ್ದರು. ಇದರ ನಡುವೆ ಕೊಲ್ಲಂನಲ್ಲಿ ಪರೀಕ್ಷಾ ಕೇಂದ್ರದ ಸಿಬ್ಬಂದಿಯಿಂದ ಈ ರೀತಿ ಅವಮಾನಿತರಾದ ಯುವತಿಯರೊಬ್ಬರು ತನಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ನೀಟ್ ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿನಿಗೆ ಒಳ ಉಡುಪು ತೆಗೆಯಲು ಸೂಚಿಸಲಾಗಿತ್ತು. ಇದರಿಂದ ತನ್ನ ಕೂದಲನ್ನು ಎದೆಯ ಮೇಲೆ ಹಾಕಿಕೊಂಡು, ಮುಜುಗರದಿಂದಲೇ ಪರೀಕ್ಷೆ ಬರೆದಿದ್ದಾಗಿ ಯುವತಿಯೊಬ್ಬರು ಹೇಳಿಕೊಂಡಿದ್ದಾರೆ. ‘ಇದು ನನ್ನ ಜೀವನದ ಅತ್ಯಂತ ಕೆಟ್ಟ ಅನುಭವ’ ಎಂದು 17 ವರ್ಷದ ಯುವತಿ ಹೇಳಿದ್ದಾರೆ.
ವೈದ್ಯಕೀಯ ಪ್ರವೇಶಕ್ಕಾಗಿ ರಾಷ್ಟ್ರವ್ಯಾಪಿ ನಡೆದ NEET (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ಪರೀಕ್ಷಾ ಕೇಂದ್ರದಲ್ಲಿ ನಡೆದ ಅವಮಾನಕಾರಿ ಘಟನೆಯನ್ನು ಅವರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: NEET 2022: ನೀಟ್ ಪರೀಕ್ಷೆ ಬರೆಯುವ ಯುವತಿಯರಿಗೆ ಒಳಉಡುಪು ತೆಗೆಯಲು ಒತ್ತಾಯ; ಕೇರಳದಲ್ಲಿ ಕೇಸ್ ದಾಖಲು
‘ಪರೀಕ್ಷೆ ಬರೆಯಲು ಎಕ್ಸಾಂ ಹಾಲ್ ಹೊರಗೆ ನಿಂತಿದ್ದ ನನ್ನನ್ನು ಅವರು ಕರೆದರು. ಸ್ಕ್ಯಾನಿಂಗ್ ಇದೆ ಎಂದು ಹೇಳಿ ನನ್ನನ್ನು ಒಳಗೆ ಕರೆದುಕೊಂಡು ಹೋದರು. ಅವರು ಸ್ಕ್ಯಾನ್ ಮಾಡಿದ ನಂತರ ನಮ್ಮನ್ನು ಬಿಡುತ್ತಾರೆ ಎಂದು ನಾವು ಭಾವಿಸಿದ್ದೆವು. ಆದರೆ ಅವರು ನಮ್ಮನ್ನು ಎರಡು ಸಾಲಿನಲ್ಲಿ ನಿಲ್ಲುವಂತೆ ಮಾಡಿದರು. ಒಂದು ಲೋಹದ ಹುಕ್ಗಳಿಲ್ಲದ ಬ್ರಾಗಳನ್ನು ಧರಿಸಿರುವ ಹುಡುಗಿಯರಿಗೆ ಒಂದು ಸಾಲು. ಮೆಟಲ್ ಹುಕ್ ಇದ್ದ ಬ್ರಾ ಧರಿಸಿದ್ದ ಹುಡುಗಿಯರಿಗೆ ಇನ್ನೊಂದು ಸಾಲು ಮಾಡಿದರು. ನಿಮ್ಮ ಬ್ರಾನಲ್ಲಿ ಮೆಟಲ್ ಹುಕ್ ಇದೆಯಾ? ಎಂದು ಅವರು ನನ್ನನ್ನು ಕೇಳಿದರು. ನಾನು ಹೌದು ಎಂದು ಹೇಳಿದೆ. ಆದ್ದರಿಂದ 2ನೇ ಸಾಲಿಗೆ ಸೇರಲು ನನ್ನನ್ನು ಕಳುಹಿಸಲಾಯಿತು.’ ಎಂದು ಆ ಯುವತಿ ಹೇಳಿದ್ದಾರೆ.
‘ಪರೀಕ್ಷೆಯ ಟೆನ್ಷನ್ನಲ್ಲಿದ್ದ ನನಗೆ ಅಲ್ಲಿ ಏನಾಗುತ್ತಿದೆ ಮತ್ತು ಏಕೆ ಆಗುತ್ತಿದೆ ಎಂದು ಅರ್ಥವಾಗಲಿಲ್ಲ. ಆಗ ನಮ್ಮ ಬ್ರಾ ತೆಗೆದು ಮೇಜಿನ ಮೇಲೆ ಇಡಲು ಹೇಳಿದರು. ಅವರು ಎಲ್ಲಾ ಬ್ರಾಗಳನ್ನೂ ಒಟ್ಟಿಗೆ ಜೋಡಿಸಿಟ್ಟರು. ಇದರಿಂದ ನಾವೆಲ್ಲರೂ ಬಹಳ ಮುಜುಗರ ಪಟ್ಟೆವು. ಎಕ್ಸಾಂ ಬರೆದು ವಾಪಾಸ್ ಬರುವಾಗ ನಮಗೆ ಯಾರ ಬ್ರಾ ಸಿಗುತ್ತೋ, ನಮ್ಮ ಬ್ರಾ ಯಾರ ಬಳಿ ಹೋಗುತ್ತೋ ಗೊತ್ತಾಗದಂತೆ ಎಲ್ಲವನ್ನೂ ಒಟ್ಟಿಗೇ ಗುಡ್ಡೆ ಹಾಕಿದ್ದರು. ನಾವು ವಾಪಾಸ್ ಬರುವಾಗ ಅಲ್ಲಿ ಯುವತಿಯರು ಕಿಕ್ಕಿರಿದು ಸೇರಿದ್ದರು. ಆ ರಾಶಿಯಲ್ಲಿ ನಮ್ಮ ಒಳ ಉಡುಪನ್ನು ನಾವು ಆರಿಸಿಕೊಳ್ಳಬೇಕಿತ್ತು’ ಎಂದು ಅವರು ಹೇಳಿದ್ದಾರೆ.
ಪರೀಕ್ಷೆಯ ಹಾಲ್ನಲ್ಲಿ ಕೂಡ ನಾನು ತೀವ್ರ ಮುಜುಗರಕ್ಕೊಳಗಾಗಿದ್ದೆ. ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮೇಲೆ ಗಮನಹರಿಸಲು ಸಾಧ್ಯವಾಗಲೇ ಇಲ್ಲ. ನಾನು ನನ್ನ ಕೂದಲನ್ನು ಬಿಚ್ಚಿ, ಅದನ್ನು ಎದೆಯ ಮೇಲೆ ಹಾಕಿಕೊಂಡು ಎಕ್ಸಾಂ ಬರೆದೆ. ನನ್ನ ಜೊತೆ ಎಕ್ಸಾಂ ಬರೆಯಲು ಬಂದಿದ್ದ ಕೆಲವು ಯುವತಿಯರು ಬ್ರಾ ಕಳಚಲು ಹೇಳಿದಾಗ ಜೋರಾಗಿ ಅಳುತ್ತಿದ್ದರು ಎಂದು ಆ ಯುವತಿ ಹೇಳಿಕೊಂಡಿದ್ದಾರೆ.
ಪರೀಕ್ಷೆ ಬರೆದು ವಾಪಾಸ್ ಬಂದ ನಂತರವೂ ನಮಗೆ ನಮ್ಮ ಒಳ ಉಡುಪನ್ನು ಹಾಕಿಕೊಳ್ಳಲು ಅಲ್ಲಿ ಯಾವ ವ್ಯವಸ್ಥೆಯೂ ಇರಲಿಲ್ಲ. ನಿಮ್ಮ ಬ್ರಾವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಿ. ಅದನ್ನು ಧರಿಸುವ ಅಗತ್ಯವಿಲ್ಲ ಎಂದು ಹೇಳಿದರು. ಬ್ರಾ ಕೈಯಲ್ಲಿ ಹಿಡಿದುಕೊಂಡು ಹೊರಗೆ ಹೋಗಲು ನಮಗೆ ತುಂಬಾ ಮುಜುಗರವಾಯಿತು. ಅದೊಂದು ಭಯಾನಕ ಅನುಭವವಾಗಿತ್ತು. ಒಳ ಉಡುಪಿಲ್ಲದೆ ಹುಡುಗರ ಮಧ್ಯೆ ಕುಳಿತು ಪರೀಕ್ಷೆ ಬರೆದಿದ್ದು ನಿಜಕ್ಕೂ ಕೆಟ್ಟ ಅನುಭವವಾಗಿತ್ತು ಎಂದು ಆ ಯುವತಿ ಹೇಳಿದ್ದಾರೆ.
ಇದನ್ನೂ ಓದಿ: NEET 2022: ಒಳಉಡುಪು ತೆಗೆದಿಟ್ಟು ಪರೀಕ್ಷೆ ಬರೆಯಲು ಸೂಚನೆ; ವಿದ್ಯಾರ್ಥಿನಿಯ ತಂದೆಯಿಂದ ಪೊಲೀಸ್ರಿಗೆ ದೂರು
ಏನಿದು ಘಟನೆ?:
ಕೊಲ್ಲಂ ಜಿಲ್ಲೆಯ ಆಯುರ್‌ನಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ನಡೆದ ನೀಟ್ ಪರೀಕ್ಷೆಗೆ ಹಾಜರಾಗುವ ವೇಳೆ ಪರೀಕ್ಷಾ ಕೇಂದ್ರದ ಹೊರಗೆ ಯುವತಿಯರಿಗೆ ಒಳಉಡುಪು ಕಳಚಲು ಒತ್ತಾಯಿಸಿ ಅವಮಾನ ಮಾಡಲಾಗಿತ್ತು. ಕೊನೆಗೆ ಯುವತಿಯರು ಒಳಉಡುಪು ಕಳಚಿಟ್ಟು ಪರೀಕ್ಷೆ ಬರೆದಿದ್ದರು. ಇದರಿಂದ ತೀವ್ರ ಮುಜುಗರಗೊಂಡಿದ್ದ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಮಹಿಳಾ ಪೊಲೀಸ್ ಅಧಿಕಾರಿಗಳ ತಂಡವು ಆ ಯುವತಿಯ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಕೇಸ್ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮೊಟ್ಟಮೊದಲ ಬಾರಿಗೆ ನೀಟ್ ಪರೀಕ್ಷೆಗೆ ಕುಳಿತಿದ್ದ ನನ್ನ ಮಗಳು ತನಗಾದ ಆಘಾತಕಾರಿ ಅನುಭವದಿಂದ ಇನ್ನೂ ಹೊರಬಂದಿಲ್ಲ ಎಂದು 17 ವರ್ಷದ ಯುವತಿಯ ತಂದೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಆ ವೇಳೆ ಈ ಘಟನೆ ಬೆಳಕಿಗೆ ಬಂದಿತ್ತು. ಬ್ರಾ ಇಲ್ಲದೆಯೇ 3 ಗಂಟೆಗೂ ಹೆಚ್ಚು ಕಾಲ ಎಕ್ಸಾಂ ಹಾಲ್ನಲ್ಲಿ ಕುಳಿತು ಪರೀಕ್ಷೆ ಬರೆಯಬೇಕಾದ ಪರಿಸ್ಥಿತಿ ಬಂದೊದಗಿದ್ದು, ಆಕೆಯನ್ನು ಮಾನಸಿಕವಾಗಿ ಬಹಳ ಕುಗ್ಗಿಸಿದೆ. ಈ ಘಟನೆಯಿಂದ ಆಕೆ ತೀವ್ರ ಅವಮಾನಕ್ಕೊಳಗಾಗಿದ್ದಾಳೆ ಎಂದು ಅವರು ಆರೋಪಿಸಿದ್ದರು. ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವೂ ಘಟನೆಯ ಕುರಿತು ತನಿಖೆಗೆ ಆದೇಶಿಸಿದೆ. 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಕೊಲ್ಲಂ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿಗೆ ಆಯೋಗ ಸೂಚಿಸಿದೆ. ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ನೀಡಲಾಗಿತ್ತು. ವ್ಯಾಲೆಟ್‌ಗಳು, ಕೈಚೀಲಗಳು, ಬೆಲ್ಟ್‌ಗಳು, ಕ್ಯಾಪ್‌ಗಳು, ಆಭರಣಗಳು, ಶೂಗಳು ಮತ್ತು ಹೀಲ್ಸ್ ಅನ್ನು ನಿಷೇಧಿಸಲಾಗಿತ್ತು.
Published On - 11:50 am, Wed, 20 July 22