AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nepal Flood: ‘ಭಾರತ ನಿಮ್ಮೊಂದಿಗಿದೆ’; ಪ್ರವಾಹಕ್ಕೆ ತತ್ತರಿಸಿರುವ ನೇಪಾಳದ ಪ್ರಧಾನಿ ಬಾಲೆನ್ ಶಾಗೆ ಪಿಎಂ ಮೋದಿ ಭರವಸೆ

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಉಂಟಾದ ಅಪಾರ ಜೀವಹಾನಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಸಂಜೆ ನೇಪಾಳದ ಪ್ರಧಾನಿ ಬಾಲೆನ್ ಶಾ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ತೀವ್ರ ಸಂತಾಪ ಸೂಚಿಸಿದ್ದಾರೆ. ಈ ಬಿಕ್ಕಟ್ಟಿನ ಸಮಯದಲ್ಲಿ ನೇಪಾಳಕ್ಕೆ ಭಾರತದ ಕಡೆಯಿಂದ ಎಲ್ಲಾ ರೀತಿಯ ಮಾನವೀಯ ಮತ್ತು ಪರಿಹಾರ ನೆರವು ನೀಡಲಾಗುವುದು ಎಂದು ಮೋದಿ ಭರವಸೆ ನೀಡಿದ್ದಾರೆ. ಟಿಬೆಟ್ ಗಡಿಗೆ ಹೊಂದಿಕೊಂಡಿರುವ ನೇಪಾಳದ 2 ಜಿಲ್ಲೆಗಳಲ್ಲಿ ಉಂಟಾದ ದಿಢೀರ್ ಭಾರಿ ಪ್ರವಾಹಕ್ಕೆ 22 ಜನರು ಸಾವನ್ನಪ್ಪಿದ್ದಾರೆ ಮತ್ತು 400 ಜನರು ನಾಪತ್ತೆಯಾಗಿದ್ದಾರೆ.

Nepal Flood: 'ಭಾರತ ನಿಮ್ಮೊಂದಿಗಿದೆ'; ಪ್ರವಾಹಕ್ಕೆ ತತ್ತರಿಸಿರುವ ನೇಪಾಳದ ಪ್ರಧಾನಿ ಬಾಲೆನ್ ಶಾಗೆ ಪಿಎಂ ಮೋದಿ ಭರವಸೆ
Balen Shah And Pm ModiImage Credit source: TV9
ಸುಷ್ಮಾ ಚಕ್ರೆ
|

Updated on:Aug 26, 2026 | 6:04 PM

Share

ನವದೆಹಲಿ, ಆಗಸ್ಟ್ 26: ನೇಪಾಳದಲ್ಲಿ ಉಂಟಾದ ಭೀಕರ ಪ್ರವಾಹದಿಂದಾಗಿ (Nepal Flood) 22 ಜನರು ಮೃತಪಟ್ಟಿದ್ದಾರೆ. 400ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, ಸಾವಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆಯಿದೆ. ಈ ನಾಪತ್ತೆಯಾದವರಲ್ಲಿ 105 ಜನರು ಭಾರತೀಯರೇ ಇದ್ದಾರೆ. ಚೀನಾ-ನೇಪಾಳದ ಗಡಿಯಲ್ಲಿ ಪ್ರವಾಹ ಉಂಟಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ನೇಪಾಳದ ಪ್ರಧಾನಿ ಬಾಲೇಂದ್ರ ಶಾ (ಬಾಲೆನ್ ಶಾ) ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಪ್ರವಾಹದ ಸಂಕಷ್ಟಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ಈ ಕಷ್ಟದ ಸಮಯದಲ್ಲಿ ಭಾರತವು ನೇಪಾಳದ ಜೊತೆ ಗಟ್ಟಿಯಾಗಿ ನಿಲ್ಲಲಿದ್ದು, ಸಾಧ್ಯವಿರುವ ಎಲ್ಲಾ ಮಾನವೀಯ ನೆರವು ನೀಡಲು ಸಿದ್ಧವಾಗಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.

ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಭಾರತೀಯ ಪಡೆಗಳು ನೇಪಾಳದ ಜೊತೆ ನಿಕಟ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. “ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರೊಂದಿಗೆ ಮಾತನಾಡಿ ಪ್ರವಾಹದಿಂದಾಗಿ ಸಂಭವಿಸಿದ ಜೀವಹಾನಿಗೆ ಸಂತಾಪ ಸೂಚಿಸಿದ್ದೇನೆ. ಈ ಕಷ್ಟದ ಸಮಯದಲ್ಲಿ ಭಾರತದ ಜನತೆ ನೇಪಾಳದ ತಮ್ಮ ಸಹೋದರ ಸಹೋದರಿಯರ ಪರವಾಗಿ ಗಟ್ಟಿಯಾಗಿ ನಿಲ್ಲುತ್ತಾರೆ. ನೇಪಾಳಕ್ಕೆ ಸಾಧ್ಯವಿರುವ ಎಲ್ಲಾ ಮಾನವೀಯ ನೆರವು ನೀಡಲು ಭಾರತ ಸಿದ್ಧವಾಗಿದೆ. ನಮ್ಮ ತಂಡಗಳು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ನಿಕಟವಾಗಿ ಸಮನ್ವಯ ಸಾಧಿಸುತ್ತಿವೆ.” ಎಂದಿದ್ದಾರೆ.

ಇಂದು ನೇಪಾಳದ ರಸುವಾ ಜಿಲ್ಲೆಯಲ್ಲಿ ಭೋಟೆ ಕೋಶಿ ನದಿಯಲ್ಲಿ ದಿಢೀರನೆ ಉಂಟಾದ ಭೀಕರ ಪ್ರವಾಹಕ್ಕೆ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ ಹಾಗೂ 400ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಾಪತ್ತೆಯಾಗಿರುವ 291 ವಿದೇಶಿ ಪ್ರಜೆಗಳಲ್ಲಿ 105 ಭಾರತೀಯ ಪ್ರವಾಸಿಗರು ಸೇರಿದ್ದಾರೆ. ಭಾರತದ 105, ಮಲೇಷ್ಯಾದ 17, ಯುಕೆ (UK)ಯ 12, ದಕ್ಷಿಣ ಆಫ್ರಿಕಾದ 4, ಅಮೆರಿಕದ 3, ಆಸ್ಟ್ರೇಲಿಯಾದ 1, ನೆದರ್ಲೆಂಡ್​​ನ 1 ನಾಪತ್ತೆಯಾಗಿದ್ದಾರೆ. ಉಳಿದ 103 ಪ್ರವಾಸಿಗರ ಪೌರತ್ವ ಮತ್ತು ವಿವರಗಳನ್ನು ಇನ್ನೂ ದೃಢೀಕರಿಸಬೇಕಾಗಿದೆ.

ಇದನ್ನೂ ಓದಿ: Nepal Flood: ನೇಪಾಳದಲ್ಲಿ ಭೀಕರ ಪ್ರವಾಹ; 105 ಭಾರತೀಯರು ಸೇರಿ 400 ಜನ ನಾಪತ್ತೆ

ಭಾರತೀಯ ರಾಯಭಾರ ಕಚೇರಿಯಿಂದ ತುರ್ತು ಸಹಾಯವಾಣಿ ಬಿಡುಗಡೆ:

ನೇಪಾಳದಲ್ಲಿ ಪ್ರವಾಹಕ್ಕೆ ಸಿಲುಕಿರುವ ಅಥವಾ ಸಂಕಷ್ಟದಲ್ಲಿರುವ ಭಾರತೀಯ ಪ್ರಜೆಗಳಿಗೆ ನೆರವಾಗಲು ಮತ್ತು ಅವರ ಕುಟುಂಬಗಳಿಗೆ ಮಾಹಿತಿ ಒದಗಿಸಲು ಭಾರತೀಯ ರಾಯಭಾರ ಕಚೇರಿಯು ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಪ್ರಾರಂಭಿಸಿದೆ: ಸಹಾಯವಾಣಿ ಸಂಖ್ಯೆಗಳು: +977 985 131 6807 ಮತ್ತು +977 970 910 7500(ಈ ಎರಡೂ ಸಂಖ್ಯೆಗಳು ವಾಟ್ಸಾಪ್ ಮೂಲಕವೂ ಸಂಪರ್ಕಕ್ಕೆ ಲಭ್ಯವಿರುತ್ತವೆ).

ಇದನ್ನೂ ಓದಿ: ನೇಪಾಳದಲ್ಲಿ ಭೋಟೆ ಕೋಶಿ ನದಿಯ ರುದ್ರನರ್ತನ: ಭೀಕರ ಪ್ರವಾಹಕ್ಕೆ 7 ಸಾವು, 41 ಭದ್ರತಾ ಸಿಬ್ಬಂದಿ ನಾಪತ್ತೆ

ಪ್ರವಾಹಕ್ಕೆ ಸಿಲುಕಿರುವ ಭಾರತೀಯರನ್ನು ತಕ್ಷಣವೇ ರಕ್ಷಿಸಲು ಮತ್ತು ಪರಿಹಾರ ಒದಗಿಸಲು ನೇಪಾಳದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿಕಟ ಸಮನ್ವಯದಿಂದ ಕೆಲಸ ಮಾಡುತ್ತಿರುವುದಾಗಿ ರಾಯಭಾರ ಕಚೇರಿ ಪೋಸ್ಟ್ ಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:02 pm, Wed, 26 August 26

Follow Us