ದೆಹಲಿ: ನೇಪಾಳದ ಪ್ರಧಾನಿ ಕುರ್ಚಿಗೆ ಕಂಟಕ ಎದುರಾಗಿದೆ. ಪ್ರಧಾನಿ ಹುದ್ದೆಯಿಂದ ಕೆಳಗಿಳಿಯದ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಬಚಾವ್ ಆಗಲು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ. ನೇಪಾಳದಲ್ಲಿ ತುರ್ತು ಪರಿಸ್ಥಿತಿ ಹೇರುವ ಹಂತಕ್ಕೆ ಹೋಗಿದ್ದಾರೆ.
ಅಧಿಕಾರ ಉಳಿಸಿಕೊಳ್ಳಲು ಅಡ್ಡ ದಾರಿಯಲ್ಲಿ ಹೆಜ್ಜೆ..!
ಯೆಸ್.. ನೇಪಾಳ ಈಗ ಮೊದಲಿನಂತಿಲ್ಲ. ಭಾರತದೊಂದಿಗೆ ಗಡಿ ಕ್ಯಾತೆ ತೆಗೆದಿರೋ ಹಿಮಾಲಯದ ತಪ್ಪಲು ರಾಷ್ಟ್ರ ನೇಪಾಳದಲ್ಲಿ ರಾಜಕೀಯ ಅಸ್ಥಿರತೆ ಮುಗಿಯುವಂತೆಯೇ ಕಾಣುತ್ತಿಲ್ಲ. ಪ್ರಧಾನಿ ಕೆ.ಪಿ ಶರ್ಮಾರನ್ನ ಕೆಳಗಿಳಿಸಿ ಹೊಸ ಪ್ರಧಾನಿಯನ್ನ ನೇಮಕ ಮಾಡಲು ನೇಪಾಳ ಕಮ್ಯುನಿಷ್ಟ್ ಪಾರ್ಟಿ ಸತತ ಪ್ರಯತ್ನ ಮಾಡುತ್ತಿದೆ. ಆದ್ರೆ ಪ್ರಧಾನಿ ಒಂದಲ್ಲ ಒಂದು ಕಾರಣ ನೀಡಿ ಸಭೆಯನ್ನ ಮುಂದೂಡುತ್ತಲೇ ಇದ್ದಾರೆ. ಈ ಮಧ್ಯೆ ಸಿಕ್ಕಿರೋ ಗ್ಯಾಪ್‌ನಲ್ಲಿ ಹೇಗಾದ್ರೂ ಮಾಡಿ ಅಧಿಕಾರ ಉಳಿಸಿಕೊಳ್ಳಲೇಬೇಕು ಅನ್ನೋ ಹಠ ಹಿಡಿದಿದ್ದಾರೆ. ಅಧಿಕಾರ ಉಳಿಸಿಕೊಳ್ಳಲು ಪ್ರಧಾನಿ ಕೆ.ಪಿ. ಶರ್ಮಾ ಓಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲು ಮುಂದಾಗಿದ್ದಾರೆ.
ಹೌದು.. ವಿಶ್ವವನ್ನ ಕಾಡುತ್ತಿರೋ ಕೊರೊನಾ ಸಂಕಷ್ಟವನ್ನ ಮುಂದಿಟ್ಟುಕೊಂಡು ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲು ರಾಷ್ಟ್ರಪತಿ ವಿದ್ಯಾದೇವಿ ಭಂಡಾರಿ ಜೊತೆಗೆ ಚರ್ಚೆ ನಡೆಸಿದ್ದಾರೆ. ಆದ್ರೆ ರಾಷ್ಟ್ರಪತಿ ಇದಕ್ಕೆ ಸೊಪ್ಪು ಹಾಕಿದಂತೆ ಕಾಣುವುದಿಲ್ಲ. ಜೊತೆಗೆ ನೇಪಾಳದ ಸೇನೆ ಕೂಡ ಓಲಿ ಮಾತಿನಂತೆ ದೇಶಾದ್ಯಂತ ಸೈಕಿನಕರ ನಿಯೋಜನೆಗೆ ಮುಂದಾಗುವುದಿಲ್ಲ ಎಂದಿದೆ.
ಪ್ರಧಾನಿ ಕೆ.ಪಿ ಶರ್ಮಾ ಸ್ವಪಕ್ಷೀಯರಿಂದ್ಲೇ ತೀವ್ರ ವಿರೋಧ ಎದುರಿಸುತ್ತಿದ್ದಾರೆ. ನೇಪಾಳ ಕಮ್ಯುನಿಸ್ಟ್ ಪಕ್ಷದ ಸ್ಥಾಯಿ ಸಮಿತಿ ಓಲಿಯನ್ನ ಕೆಳಗಿಳಲು ನಿರ್ಧಾರ ಕೈಗೊಂಡು ಕೇಂದ್ರೀಯ ಸಮಿತಿಗೆ ಕಳುಹಿಸಿದ್ರೆ, ಅಲ್ಲಿಯೂ ಪ್ರಧಾನಿಗೆ ಬಹುಮತವಿಲ್ಲ. ಆದ್ರೆ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಓಲಿ ಪಟ್ಟು ಹಿಡಿದಿದ್ದಾರೆ. ಇತ್ತ ಪ್ರಧಾನಿಗೆ ಚೀನಾದ ಬೆಂಬಲವಿದೆ.
ಓಲಿಯನ್ನ ಅಧಿಕಾರದಲ್ಲಿ ಮುಂದುವರಿಸಲು ಚೀನಾ ರಾಯಭಾರಿ ಯಾಂಕಿ ಹೌ ಕೂಡ ತಂತ್ರ ರೂಪಿಸಿದ್ದಾರೆ. ಚೀನಾ ಮಧ್ಯಪ್ರವೇಶಕ್ಕೆ ನೇಪಾಳ ಜನರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಅಧಿಕಾರದಲ್ಲಿ ಉಳಿಸೋಕೆ ಕೊರೊನಾ ನೆಪವೊಡ್ಡಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿ ಕಸರತ್ತು ಆರಂಭಿಸಿದ್ದಾರೆ. ಆದ್ರೆ ಅವ್ರ ತಂತ್ರ ಎಷ್ಟರಮಟ್ಟಿದೆ ಫಲ ಕೊಡುತ್ತೆ ಅನ್ನೋದು ಕಾದುನೋಡ್ಬೇಕಿದೆ.
Published On - 7:17 am, Fri, 10 July 20