ಕೊರೋನಾವೈರಸ್​ನ ಹೊಸ ಡೆಲ್ಟಾ ಪ್ಲಸ್ ರೂಪಾಂತರಿ ಮೂರನೇ ಅಲೆಗೆ ನಾಂದಿ ಹಾಡಬಹುದು ಎನ್ನುತ್ತಾರೆ ತಜ್ಞರು

ಮಹಾರಾಷ್ಟ್ರದಲ್ಲಿನ ತಜ್ಞರು ಹೊಸ ರೂಪಾಂತರಿಯು ಮೂರನೇ ಅಲೆಯನ್ನು ಹುಟ್ಟುಹಾಕಬಹುದು ಮತ್ತು ನಿರೀಕ್ಷೆಗಿಂತ ಮುಂಚೆಯೇ ಭಾರತದಲ್ಲಿ ಹಬ್ಬಬಹುದೆಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಡೆಲ್ಟಾ ಪ್ಲಸ್​ ರೂಪಾಂತರಿಯ ಮೊದಲ ಪ್ರಕರಣವನ್ನು ಕಂಡ ಮಹಾರಾಷ್ಟ್ರ ಈಗಾಗಲೇ ಮೂರನೇ ಅಲೆಯನ್ನು ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

  • Updated On - 10:22 pm, Tue, 22 June 21
ಕೊರೋನಾವೈರಸ್​ನ ಹೊಸ ಡೆಲ್ಟಾ ಪ್ಲಸ್ ರೂಪಾಂತರಿ ಮೂರನೇ ಅಲೆಗೆ ನಾಂದಿ ಹಾಡಬಹುದು ಎನ್ನುತ್ತಾರೆ ತಜ್ಞರು
ಡೆಲ್ಟಾ ಪ್ಲಸ್ ರೂಪಾಂತರಿ

ನವದೆಹಲಿ: ಕೊರೋನಾವೈರಸ್ ಡೆಲ್ಟಾ ಪ್ರಬೇಧದ ಹೊಸ ರೂಪಾಂತರಿಯಾಗಿರುವ ಡೆಲ್ಟಾ ಪ್ಲಸ್​ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕೇರಳ-ಈ ಮೂರು ರಾಜ್ಯಗಳ 22 ಸೋಂಕಿತರಲ್ಲಿ ಕಂಡಿಬಂದಿದ್ದು ಇಂದು ಕಳವಳಕಾರಿ ರೂಪಾಂತರಿಯಾಗಿದೆ ಎಂದು ಕೇಂದ್ರವು ಈ ರಾಜ್ಯಗಳನ್ನು ಮಂಗಳವಾರ ಎಚ್ಚರಿಸಿದೆ. ದೇಶದಲ್ಲಿ ಎರಡನೇ ಅಲೆಯ ತೀವ್ರತೆ ಗಣನೀಯವಾಗಿ ಇಳಿಮುಖಗೊಂಡಿರುವ ಬೆನ್ನಲ್ಲೇ ಡೆಲ್ಟಾ ಪ್ಲಸ್ ಸೋಂಕಿನ ಪ್ರಕರಣಗಳು ಮಹಾರಾಷ್ಟ್ರದ ರತ್ನಾಗಿರಿ ಮತ್ತು ಜಲಗಾಂವ್, ಕೇರಳದ ಪಲಕ್ಕಾಡ್ ಮತ್ತು ಪಥನಂತಿಟ್ಟಾ ಹಾಗೂ ಮಧ್ಯಪ್ರದೇಶದ ಭೋಪಾಲ್ ಹಾಗೂ ಶಿವಪುರಿಯಲ್ಲಿ ಪತ್ತೆಯಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಐಎನ್​ಎಸ್​ಎಸಿಒಜಿ (ಇಂಡಿಯನ್ ಸಾರ್ಸ್-ಕೋವ್-2 ಜಿನೋಮಿಕ್ ಕನ್ಸಾರ್ಟಿಯ) ಸೂಚಿಸಿರುವ ಹಾಗೆ, ಜನ ಗುಂಪು ಸೇರದಂತೆ, ವ್ಯಾಪಕ ಟೆಸ್ಟಿಂಗ್, ಸೋಂಕಿತರನ್ನು ಪತ್ತೆ ಮಾಡುವುದು ಮತ್ತು ಆದ್ಯತೆಯ ಮೇರೆಗೆ ಲಸಿಕೆಗಳನ್ನು ನೀಡುವುದು ಮೊದಲಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೂಡಲೇ, ಈ ಜಿಲ್ಲೆಗಳಲ್ಲಿ ಕಂಟೇನ್ಮೆಂಟ್​ ವಲಯಗಳನ್ನು ಸ್ಥಾಪಿಸುವಂತೆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ, ಎಂದು ಕೇಂದ್ರ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸುತ್ತದೆ.

‘ಈ ರಾಜ್ಯಗಳಿಗೆ ಅವರ ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆಯ ಬಗ್ಗೆ ಕೇಂದ್ರವು ಸಲಹೆಯನ್ನು ಕಳುಹಿಸಿದೆ. ಈ ಕ್ರಮಗಳು ಈ ಹಿಂದೆ ಜಾರಿಗೆ ತಂದ ಕ್ರಮಗಳಿಗಿಂತ ಭಿನ್ನವಾಗೇನೂ ಇಲ್ಲ, ನಾವೆಲ್ಲ ಗಮನ ಕೇಂದ್ರಕರಿಸಬೇಕಿದೆ ಮತ್ತು ಪರಿಣಾಮಕಾರಿಯಗಿ ಕೆಲಸ ಮಾಡಬೇಕಿದೆ. ಈ ಸಣ್ಣ ಸಂಖ್ಯೆ ಬೃಹದಾಕಾರದಲ್ಲಿ ಬೆಳೆಯುವ ಆಸ್ಪದವನ್ನು ನಾವು ನೀಡಬಾರದು,’ ಎಂದು ಲಸಿಕೆ ಆಡಳಿತಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತಜ್ಞರ ಗುಂಪಿನ ಮುಖ್ಯಸ್ಥ ವಿ.ಕೆ. ಪಾಲ್ ಸುದ್ದಿಗಾರರಿಗೆ ತಿಳಿಸಿದರು.

ಮಹಾರಾಷ್ಟ್ರದಲ್ಲಿನ ತಜ್ಞರು ಹೊಸ ರೂಪಾಂತರಿಯು ಮೂರನೇ ಅಲೆಯನ್ನು ಹುಟ್ಟುಹಾಕಬಹುದು ಮತ್ತು ನಿರೀಕ್ಷೆಗಿಂತ ಮುಂಚೆಯೇ ಭಾರತದಲ್ಲಿ ಹಬ್ಬಬಹುದೆಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಡೆಲ್ಟಾ ಪ್ಲಸ್​ ರೂಪಾಂತರಿಯ ಮೊದಲ ಪ್ರಕರಣವನ್ನು ಕಂಡ ಮಹಾರಾಷ್ಟ್ರ ಈಗಾಗಲೇ ಮೂರನೇ ಅಲೆಯನ್ನು ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಕಂಡುಬಂದ ಸೋಂಕಿತರ ಟ್ರಾವೆಲ್ ಹಿಸ್ಟರಿ, ಲಸಿಕೆ ಹಾಕಿಸಿಕೊಂಡಿದ್ದಾರೆಯೇ ಇಲ್ಲವೇ ಮೊದಲಾದ ವಿವರಗಳನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.
ಈ ರೂಪಾಂತರಿ ಕುರಿತು ಹೆಚ್ಚು ಮಾಹಿತಿ ಇಲ್ಲದಿರುವುದು ಆತಂಕವನ್ನು ಇಮ್ಮಡಿಗೊಳಿಸುತ್ತಿದೆ. ಭಾರತವಲ್ಲದೆ, ಅಮೆರಿಕ, ಯುಕೆ, ಪೋರ್ಚುಗಲ್, ಸ್ವಿಜರ್​ಲೆಂಡ್​, ಜಪಾನ್, ಪೋಲಂಡ್, ರಷ್ಯಾ ಮತ್ತು ಚೀನಾ ದೇಶಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಕಾಣಿಸಿಕೊಂಡಿದೆ.

‘ಈ ರೂಪಾಂತರಿ ಬಗ್ಗೆ ಹೆಚ್ಚಿ ಮಾಹಿತಿ ಇಲ್ಲದಿರುವುದರಿಂದ ಮುಂದಿನ ದಿನಗಳಲ್ಲಿ ಅದರ ವರ್ತನೆ ಹೇಗಿರಲಿದೆ ಎನ್ನುವ ಆತಂಕ ಮೂಡಿದೆ. ನಾವು ಈಗಾಗಲೇ ನೋಡಿರುವ ರೂಪಾಂತರಗಳಲ್ಲಿ ನಾವು ಬೇರೆ ಬೇರೆ ಸನ್ನಿವೇಶಗಳನ್ನು ನೋಡಿದ್ದೇವೆ,’ ಎಂದು, ಮಹಾರಾಷ್ಟ್ರ ಟಾಸ್ಕ್​ಪೋರ್ಸ್​ನ ಸದಸ್ಯರಾಗಿರುವ ಓಮ್ ಶ್ರೀವಾಸ್ತವ ಹೇಳಿದ್ದಾರೆ.

‘ದೇಶದ ಇತರ ಭಾಗಗಳಲ್ಲಿ ಡೆಲ್ಟಾ ಸೋಂಕನ್ನು ಬಹಳ ತೀವ್ರ ಗತಿಯಲ್ಲಿ ಹರಡುತ್ತದೆ ಮತ್ತು ಅಲ್ಪಾವಧಿಯಲ್ಲೇ ಹಲವಾರು ಜನರನ್ನು ಸೋಂಕಿಗೆ ತುತ್ತು ಮಾಡಬಲ್ಲದು ಎನ್ನುವುದು ನಮಗೆ ಗೊತ್ತಿದೆ,’ ಎಂದು ಶ್ರೀವಾಸ್ತವ ಹೇಳಿದ್ದಾರೆ.

ಮಹಾರಾಷ್ಟ್ರವು ಪ್ರತಿ ಜಿಲ್ಲೆಯಿಂದ 100 ಮಾದರಿಗಳ ಜೀನೋಮ್ ಜೋಡಣೆಯನ್ನು ನಡೆಸಿದೆ, “ಮೇ 15 ರಿಂದ, 7,500 ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ, ಇದರಲ್ಲಿ ಸುಮಾರು 21 ಡೆಲ್ಟಾ ಪ್ಲಸ್ ಪ್ರಕರಣಗಳು ಕಂಡುಬಂದಿವೆ” ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಹೇಳಿದ್ದಾರೆ.

ಈಗಾಗಲೇ 80 ದೇಶಗಳಲ್ಲಿ ಹಬ್ಬಿರುವ ಡೆಲ್ಟಾ ಸ್ಟ್ರೇನ್​ನಂತೆಯೇ ಡೆಲ್ಟಾ ಪ್ಲಸ್​ ಸಹ ಭಾರೀ ಸೋಂಕುಕಾರಕ ಮತ್ತು ತೀವ್ರ ಸ್ವರೂದಲ್ಲಿ ಹರಡುತ್ತದೆ.

ಐನ್​ಎಸ್​ಎಸಿಒಜಿ ಮಾಹಿತಿಯ ಪ್ರಕಾರ, ಡೆಲ್ಟಾ ಪ್ಲಸ್ ಶ್ವಾಸಕೋಶದ ಕೋಶಗಳ ಸೆಲ್​ಗಳಿಗೆ ಬಲವಾದ ಬಂಧವನ್ನು ಪ್ರಕಟಿಸುತ್ತದೆ ಮತ್ತು ಮೊನೊಕ್ಲೋನಲ್ ಪ್ರತಿಕಾಯದ ಪ್ರತಿಕ್ರಿಯೆಯನ್ನು ಕಡಿಮೆ ಮಾಡುತ್ತದೆ.
ಹಾಗೆಯೇ, ಅದು ಕೊವಿಡ್-19 ಸೋಂಕಿಗೆ ಈಗ ಒದಗಿಸುತ್ತರುವ ಚಿಕಿತ್ಸಾ ವಿಧಾನಕ್ಕೆ ಪ್ರತಿರೋಧವನ್ನು ತೋರಬಹುದು. ಈಗ ಬಳಸಲಾಗುತ್ತಿರುವ ಲಸಿಕೆಗಳಿಗೆ ಡೆಲ್ಟಾ ಪ್ಲಸ್ ರೂಪಾಂತರಿಯ ವಿರುದ್ಧ ಪರಿಣಾಮಕಾರಿಯಾಗಲಿವೆಯೇ ಇಲ್ಲವೇ ಎನ್ನುವ ಆತಂಕವೂ ದಟ್ಟವಾಗಿದೆ.

ಭಾರತದಲ್ಲಿ ಈಗ ಉಪಯೋಗಿಸಲಾಗುತ್ತಿರುವ ಕೋವಿಷೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳೆರಡೂ ಡೆಲ್ಟಾ ರೂಪಾಂತರಿ ವಿರುದ್ಧ ಪರಿಣಾಮಕಾರಿಯಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಡೆಲ್ಟಾ ಪ್ಲಸ್ ರೂಪಾಂತರಿ ವಿರುದ್ಧ ಅದರ ಪರಿಣಾಮಕತ್ವ ಶಕ್ತಿಯ ಬಗ್ಗೆ ಮಾಹಿತಿಯನ್ನು ನಂತರ ತಿಳಿಸಲಾಗುವುದು ಅಂತಲೂ ಸರ್ಕಾರ ಹೇಳಿದೆ.

’ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಶೀಘ್ರದಲ್ಲೇ ನೀಡುತ್ತೇವೆ,’ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

ಆದರೆ ತಜ್ಞರು ಹೇಳುವ ಪ್ರಕಾರ ಪ್ರಸ್ತುತವಾಗಿ ಡೆಲ್ಟಾ ಪ್ಲಸ್ ರೂಪಾಂತರಿ ಹರಡುವಿಕೆ ಹೆಚ್ಚೇನೂ ಇಲ್ಲ.

ಇದನ್ನೂ ಓದಿ: ಭಾರತದ ಮೂರು ರಾಜ್ಯಗಳಲ್ಲಿ ಕೊರೋನಾವೈರಸ್​ನ ಡೆಲ್ಟಾ ಪ್ಲಸ್ ರೂಪಾಂತರಿ ಪತ್ತೆಯಾಗಿದೆ; ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಪ್ರಕರಣಗಳು