ಹೊಸ ಭಾರತ ಪರಮಾಣು ಬೆದರಿಕೆಗಳಿಗೆ ಹೆದರುವುದಿಲ್ಲ, ಉಗ್ರರ ಮನೆಗೆ ನುಗ್ಗಿ ಹೊಡೆಯುತ್ತದೆ; ಧಾರ್‌ನಲ್ಲಿ ಪ್ರಧಾನಿ ಮೋದಿ

ಧಾರ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಹೊಂದಿದ ಭಾರತದತ್ತ ಪ್ರಯಾಣವು ಮಹಿಳೆಯರು, ಯುವಕರು, ಬಡವರು ಮತ್ತು ರೈತರು ಈ 4 ಮೂಲಭೂತ ಸ್ತಂಭಗಳ ಮೇಲೆ ನಿರ್ಮಿಸಲಾಗಿದೆ ಎಂದು ಒತ್ತಿ ಹೇಳಿದರು. ಈ ಸ್ತಂಭಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಸಮಗ್ರ ಬೆಳವಣಿಗೆಯನ್ನು ಬೆಳೆಸಲು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ ಎಂದಿದ್ದಾರೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಆದ ಹಾನಿಯ ಬಗ್ಗೆ ಜೈಶ್‌ನ ಉನ್ನತ ಕಮಾಂಡರ್ ತಪ್ಪೊಪ್ಪಿಗೆ ನೀಡಿರುವುದು ನವ ಭಾರತ ಭಯೋತ್ಪಾದನೆಯನ್ನು ಸಹಿಸುವುದಿಲ್ಲ, ಯಾರ ಪರಮಾಣು ಬೆದರಿಕೆಗಳಿಗೂ ಹೆದರುವುದಿಲ್ಲ ಎಂಬುದಕ್ಕೆ ಪುರಾವೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಹೊಸ ಭಾರತ ಪರಮಾಣು ಬೆದರಿಕೆಗಳಿಗೆ ಹೆದರುವುದಿಲ್ಲ, ಉಗ್ರರ ಮನೆಗೆ ನುಗ್ಗಿ ಹೊಡೆಯುತ್ತದೆ; ಧಾರ್‌ನಲ್ಲಿ ಪ್ರಧಾನಿ ಮೋದಿ
Pm Narendra Modi In Dhar

Updated on: Sep 17, 2025 | 4:41 PM

ಧಾರ್, ಸೆಪ್ಟೆಂಬರ್ 17: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಧ್ಯಪ್ರದೇಶದ ಧಾರ್‌ನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದು, “ನಿನ್ನೆಯಷ್ಟೇ, ಪಾಕಿಸ್ತಾನಿ ಭಯೋತ್ಪಾದಕನೊಬ್ಬ ಭಾರತದ ಆಪರೇಷನ್ ಸಿಂಧೂರ್​​ನಿಂದ ಹೇಗೆ ಜೈಶ್ ಸಂಘಟನೆಯ ಮುಖ್ಯಸ್ಥನ ಕುಟುಂಬ ಛಿದ್ರವಾಯಿತು ಎಂಬುದನ್ನು ವಿವರಿಸಿದ್ದಾನೆ. ಈ ಮೂಲಕ ಪಾಕಿಸ್ತಾನದಲ್ಲಿ ಭಾರತ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ್ದಕ್ಕೆ ಸಾಕ್ಷಿ ನುಡಿದಿದ್ದಾನೆ. ಇದು ಹೊಸ ಭಾರತ. ಈ ಭಾರತ ಯಾವುದೇ ಪರಮಾಣು ಬೆದರಿಕೆಗಳಿಗೆ ಹೆದರದ ದೇಶ. ಇದು ಶತ್ರುಗಳ ಮನೆ ಬಾಗಿಲಿಗೆ ಹೋಗಿ ಉಗ್ರರನ್ನು ಸದೆಬಡಿಯುವ ದೇಶ ಎಂದು ಮೋದಿ ಹೇಳಿದ್ದಾರೆ.

“ಭಾರತ ಮಾತೆಯ ಭದ್ರತೆಗೆ ರಾಷ್ಟ್ರವು ಅತ್ಯಂತ ಆದ್ಯತೆ ನೀಡುತ್ತದೆ. ಪಾಕಿಸ್ತಾನಿ ಭಯೋತ್ಪಾದಕರು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದರು. ನಾವು ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿ, ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದ್ದೇವೆ. ನಮ್ಮ ಕೆಚ್ಚೆದೆಯ ಸಶಸ್ತ್ರ ಪಡೆಗಳು ಕಣ್ಣು ಮಿಟುಕಿಸುವುದರೊಳಗೆ ಪಾಕಿಸ್ತಾನವನ್ನು ಮಂಡಿಯೂರಿ ನಿಲ್ಲಿಸಿದವು. ಇದು ನವ ಭಾರತ. ಇದು ಯಾರ ಪರಮಾಣು ಬೆದರಿಕೆಗಳಿಗೂ ಹೆದರುವುದಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.


ಇದನ್ನೂ ಓದಿ: ಮೋದಿಯ 75ನೇ ಹುಟ್ಟುಹಬ್ಬ ಪ್ರಯುಕ್ತ ಕೊಲಂಬೊದ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ!

“ಸೆಪ್ಟೆಂಬರ್ 22ರ ನವರಾತ್ರಿಯ ಮೊದಲ ದಿನದಿಂದ ಹೊಸ ಜಿಎಸ್‌ಟಿ ಸುಧಾರಣೆಗಳನ್ನು ಜಾರಿಗೆ ತರಲಾಗುವುದು. ಭಾರತೀಯ ಉತ್ಪನ್ನಗಳನ್ನು ಖರೀದಿಸುವ ಮೂಲಕ ನಾವು ಅವುಗಳ ಲಾಭವನ್ನು ಪಡೆದುಕೊಳ್ಳಬೇಕು. ಪ್ರತಿ ಅಂಗಡಿಯಲ್ಲಿ ‘ಇದು ಸ್ವದೇಶಿ ವಸ್ತು ಎಂದು ಹೆಮ್ಮೆಯಿಂದ ಹೇಳಿ’ ಎಂದು ಬರೆದಿರುವ ಫಲಕ ಇರಬೇಕು. ರಾಜ್ಯ ಸರ್ಕಾರಗಳು ಇದಕ್ಕಾಗಿ ಅಭಿಯಾನವನ್ನು ನಡೆಸಬೇಕು” ಎಂದು ಮೋದಿ ಕರೆನೀಡಿದ್ದಾರೆ.


ಜೈಶ್‌ನ ಉನ್ನತ ಕಮಾಂಡರ್ ಮಸೂದ್ ಇಲಿಯಾಸ್ ಕಾಶ್ಮೀರಿ, ಮೇ 7ರಂದು ಬಹಾವಲ್ಪುರ್ ಪ್ರಧಾನ ಕಚೇರಿ – ಜಾಮಿಯಾ ಮಸೀದಿ ಸುಭಾನ್ ಅಲ್ಲಾ ಮೇಲೆ ನಡೆದ ಭಾರತದ ದಾಳಿಯಲ್ಲಿ ಜೈಶ್ ಮುಖ್ಯಸ್ಥ ಮಸೂದ್ ಅಜರ್ ಅವರ ಕುಟುಂಬ ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಒಪ್ಪಿಕೊಂಡಿರುವ ವಿಡಿಯೋ ವೈರಲ್ ಆಗಿತ್ತು. ಏಪ್ರಿಲ್ 22ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು, ಇದರಲ್ಲಿ 25 ಪ್ರವಾಸಿಗರು ಸಾವನ್ನಪ್ಪಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ