ಬಟ್ಟೆ ಅಂಗಡಿಗೆ ನುಗ್ಗಿ ಅಪ್ರಾಪ್ತೆಯ ಕುತ್ತಿಗೆಗೆ ಚಾಕು ಹಿಡಿದು ಹಣಕ್ಕೆ ಬೇಡಿಕೆ ಇಟ್ಟ ಮುಸುಕುಧಾರಿ

ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಬಟ್ಟೆ ಅಂಗಡಿಗೆ ನುಗ್ಗಿದ ಮುಸುಕುಧಾರಿ, ಅಪ್ರಾಪ್ತ ಬಾಲಕಿಯನ್ನು ಚಾಕು ಹಿಡಿದು ಒತ್ತೆಯಾಳಾಗಿರಿಸಿದ್ದ. ಹಣಕ್ಕೆ ಬೇಡಿಕೆ ಇಟ್ಟಿದ್ದ ಆತ, ಕೊಲೆ ಬೆದರಿಕೆ ಹಾಕಿದ. ಪೊಲೀಸರು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಧಾವಿಸಿ, ಸಾಹಸಮಯ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹಿಡಿದು ಬಾಲಕಿಯನ್ನು ಸುರಕ್ಷಿತವಾಗಿ ರಕ್ಷಿಸಿದರು. ಈ ಘಟನೆ ಬಿಜ್ನೋರ್‌ನಲ್ಲಿ ಆತಂಕ ಸೃಷ್ಟಿಸಿದೆ.

ಬಟ್ಟೆ ಅಂಗಡಿಗೆ ನುಗ್ಗಿ ಅಪ್ರಾಪ್ತೆಯ ಕುತ್ತಿಗೆಗೆ ಚಾಕು ಹಿಡಿದು ಹಣಕ್ಕೆ ಬೇಡಿಕೆ ಇಟ್ಟ ಮುಸುಕುಧಾರಿ
ಬಟ್ಟೆ ಅಂಗಡಿ -ಸಾಂದರ್ಭಿಕ ಚಿತ್ರ
Image Credit source: Shutterstock

Updated on: Jan 01, 2026 | 10:31 AM

ಬಿಜ್ನೋರ್, ಜನವರಿ 01: ಮುಸುಕುಧಾರಿಯೊಬ್ಬ ಬಟ್ಟೆ ಅಂಗಡಿಗೆ ನುಗ್ಗಿ ಅಪ್ರಾಪ್ತೆ ಕುತ್ತಿಗೆಗೆ ಚಾಕು ಹಿಡಿದು ಹಣಕ್ಕೆ ಬೇಡಿಕೆ ಇಟ್ಟ ಘಟನೆ ಉತ್ತರ ಪ್ರದೇಶದ ಬಿಜ್ನೋರ್​ನಲ್ಲಿ ಬುಧವಾರ ನಡೆದಿದೆ. ಮಾರುಕಟ್ಟೆಯಲ್ಲಿರುವ ಬಟ್ಟೆ ಅಂಗಡಿಗೆ ವ್ಯಕ್ತಿ ನುಗ್ಗಿದ್ದ, ಅಪ್ರಾಪ್ತ ಬಾಲಕಿ(Girl)ಯನ್ನು ಎಳೆದುಕೊಂಡು ಆಕೆಯ ಕುತ್ತಿಗೆಗೆ ಚಾಕು ಹಿಡಿದಿದ್ದ.ಇದು ಸಾರ್ವಜನಿಕರು ಮತ್ತು ಅಂಗಡಿಯವರಲ್ಲಿ ಭೀತಿಯನ್ನು ಉಂಟುಮಾಡಿತ್ತು.

ಪೊಲೀಸರ ಪ್ರಕಾರ, ಇಬ್ಬರು ಅಪ್ರಾಪ್ತ ಬಾಲಕಿಯರು ಅಂಗಡಿಯಿಂದ ಬಟ್ಟೆ ಖರೀದಿಸಲು ಮಾರುಕಟ್ಟೆಗೆ ಬಂದಿದ್ದರು. ಸಂಜೆ 7 ಗಂಟೆ ಸುಮಾರಿಗೆ ಆರೋಪಿ ಇದ್ದಕ್ಕಿದ್ದಂತೆ ಅಂಗಡಿಗೆ ಪ್ರವೇಶಿಸಿದ್ದಾನೆ. ಬಾಲಕಿಯರಲ್ಲಿ ಒಬ್ಬಳ ಕುತ್ತಿಗೆಗೆ ಚಾಕು ಇಟ್ಟು, ಆಕೆಯನ್ನು ಹಲವಾರು ನಿಮಿಷಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಮತ್ತು ಹಣಕ್ಕಾಗಿ ಬೇಡಿಕೆ ಇಡುತ್ತಾ ಕೊಲೆ ಬೆದರಿಕೆ ಹಾಕಿದ್ದ ಎಂದು ತಿಳಿಸಿದ್ದಾರೆ.

ಈ ಘಟನೆಯಿಂದ ಅಂಗಡಿಯೊಳಗೆ ಗೊಂದಲ ಉಂಟಾಗಿದ್ದು, ಅಂಗಡಿ ಮಾಲೀಕರು ಎಚ್ಚರಿಕೆ ನೀಡಿದ್ದಾರೆ. ಗದ್ದಲ ಕೇಳಿ ಅಂಗಡಿಯ ಹೊರಗೆ ಜನಸಮೂಹ ಜಮಾಯಿಸಿ ಆತನಿಂದ ಬಾಲಕಿಯನ್ನು ಬಿಡಿಸಲು ಪ್ರಯತ್ನಿಸಿತು. ಆದರೆ, ಆರೋಪಿ ತನ್ನ ಹಿಡಿತವನ್ನು ಬಿಗಿಗೊಳಿಸಿ ಹುಡುಗಿಯ ಕತ್ತು ಸೀಳುವುದಾಗಿ ಬೆದರಿಕೆ ಹಾಕಿದ್ದ, ಇದರಿಂದಾಗಿ ಜನರು ಹಿಂದೆ ಸರಿಯಬೇಕಾಯಿತು.

ಮತ್ತಷ್ಟು ಓದಿ: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ

ಹೊಸ ವರ್ಷದ ಭದ್ರತಾ ವ್ಯವಸ್ಥೆಗಾಗಿ ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಸಿಬ್ಬಂದಿ ಮಾಹಿತಿ ಪಡೆದ ನಂತರ ಸ್ಥಳಕ್ಕೆ ಧಾವಿಸಿದರು. ಆರಂಭದಲ್ಲಿ ಪೊಲೀಸರು ಆರೋಪಿಯನ್ನು ಬಾಲಕಿಯನ್ನು ಬಿಡುಗಡೆ ಮಾಡುವಂತೆ ಮನವೊಲಿಸಲು ಪ್ರಯತ್ನಿಸಿದರು. ಅವನು ನಿರಾಕರಿಸಿದಾಗ, ಪೊಲೀಸರು ಆತನನ್ನು ಸೋಲಿಸಿ, ಚಾಕು ಕಸಿದುಕೊಂಡು, ಅಪ್ರಾಪ್ತ ಬಾಲಕಿಯನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವಲ್ಲಿ ಯಶಸ್ವಿಯಾದರು.

ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಘಟನೆಯಲ್ಲಿ ಬಳಸಿದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ನಜಿಬಾಬಾದ್ ವೃತ್ತ ಅಧಿಕಾರಿ ನಿತೇಶ್ ಪ್ರತಾಪ್ ಸಿಂಗ್ ಮಾತನಾಡಿ, ಆರೋಪಿಯು ಬಾರಾಬಂಕಿ ಜಿಲ್ಲೆಯ ನಿವಾಸಿ ಅಜಿತ್ ಎಂದು ಹೇಳಿಕೊಂಡಿದ್ದಾನೆ. ಆತನ ಪ್ರಾಥಮಿಕ ವಿಚಾರಣೆಯ ಸಮಯದಲ್ಲಿ ಜೈಲಿಗೆ ಹೋಗಲು ಬಯಸಿದ್ದರಿಂದ ಈ ಕೃತ್ಯ ಎಸಗಿದ್ದಾಗಿ ಹೇಳಿದ್ದಾನೆ, ಯಾರಿಂದಲೋ ತನಗೆ ತೊಂದರೆಯಾಗಿದೆ ಎಂದು ಆತ ಹೇಳಿಕೊಂಡಿರುವುದಾಗಿ ಅಧಿಕಾರಿ ಹೇಳಿದ್ದಾರೆ.

ಆರೋಪಿಯು ಬಾಲಕಿಯ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ, ಕೃತ್ಯದ ಉದ್ದೇಶ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಹಿನ್ನೆಲೆ, ಮಾನಸಿಕ ಸ್ಥಿತಿ ಮತ್ತು ನಜೀಬಾಬಾದ್‌ನಲ್ಲಿ ಅವನು ಇರುವುದಕ್ಕೆ ಕಾರಣವನ್ನು ಕಂಡುಹಿಡಿಯಲು ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ