ಬಿರ್ಭೂಮ್ ಹಿಂಸಾಚಾರ ದೇಶವನ್ನೇ ನಲುಗಿಸಿದೆ. ಬರೋಸಾಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷನ ಹತ್ಯೆಯಿಂದ ರೊಚ್ಚಿಗೆದ್ದ ಅವರ ಬೆಂಬಲಿಗರು ರಾಂಪುರಹತ್ನಲ್ಲಿ ಹಿಂಸಾಚಾರ ಸೃಷ್ಟಿಸಿದ್ದಷ್ಟೇ ಅಲ್ಲದೆ, ಭಗ್ಟುಯಿ ಮತ್ತು ನನೂರ್ ಗ್ರಾಮಗಳಲ್ಲಿ ಹಲವು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಲ್ಲಿ ಇಬ್ಬರು ಮಕ್ಕಳೂ ಸೇರಿ 8 ಮಂದಿ ಸಜೀವದಹನಗೊಂಡಿದ್ದಾರೆ. ಹೊಸದಾಗಿ ಮದುವೆಯಾದ ಜೋಡಿಯೊಂದು ಈ ದುರಂತಕ್ಕೆ ಬಲಿಯಾಗಿದ್ದು ಅವರ ಕುಟುಂಬದವರು, ಸಂಬಂಧಿಕರ ಶೋಕವೀಗ ಮುಗಿಲುಮುಟ್ಟಿದೆ. ಲಿಲಿ ಖಾಟೂನ್ ಮತ್ತು ಖಾಜಿ ಸಜಿದೂರ್ ಮೃತರಾಗಿದ್ದು, ಇವರು ಜನವರಲ್ಲಿ ವಿವಾಹವಾಗಿದ್ದರು. ಭಗ್ಟುಯಿ ಗ್ರಾಮದಲ್ಲಿರುವ ಲಿಲಿ ಖಾಟೂನ್ರ ತಾಯಿಯ ಮನೆಗೆ ಭೇಟಿ ಕೊಟ್ಟಿದ್ದರು.
ಆದರೆ ಮಧ್ಯರಾತ್ರಿ ಹೊತ್ತಿಗೆ ಗಲಾಟೆ ಶುರುವಾಗಿ ಇವರಿದ್ದ ಮನೆಯನ್ನೂ ಯಾರೋ ಲಾಕ್ ಮಾಡಿದರು. ಕೂಡಲೇ ಸಜಿದುರ್ ತನ್ನ ಸ್ನೇಹಿತ ಮಜಿಮ್ ಎಂಬುವನಿಗೆ ಕರೆ ಮಾಡಿ, ಯಾರೋ ನಮ್ಮ ಮನೆಯನ್ನು ಲಾಕ್ ಮಾಡಿದ್ದಾರೆ. ಈಗಾಗಲೇ ಬೆಂಕಿಯನ್ನೂ ಹಚ್ಚಿದ್ದಾರೆ. ಕೂಡಲೇ ಪೊಲೀಸರಿಗೆ ಕರೆ ಮಾಡು ಎಂದು ಹೇಳಿದ್ದಾರೆ. ಮಜೀಮ್ ಕೂಡಲೇ ಸಜಿದುರ್ ತಂದೆಗೆ ಕರೆಮಾಡಿ ವಿಷಯ ತಿಳಿಸಿದ್ದಾನೆ. ಅವರು ಮತ್ತೆ ವಾಪಸ್ ಸಜಿದುರ್ಗೆ ಫೋನ್ ಮಾಡಿದರೆ ಕನೆಕ್ಟ್ ಆಗಲಿಲ್ಲ. ಆದರೆ ಬಳಿಕ ಮುಂಜಾನೆಯೇ ಆ ಸ್ಥಳಕ್ಕೆ ಬಂದರೆ ಸಜಿದುರ್ ಮತ್ತು ಅವರ ಪತ್ನಿಯ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಅಂಗಡಿಯೊಂದರಲ್ಲಿ ನಿಂತಿದ್ದ ಉಪಾಧ್ಯಕ್ಷ ಭಡು ಶೇಖ್ ಅವರನ್ನು, ಬೈಕ್ನಲ್ಲಿ ಬಂದ ನಾಲ್ವರು ಮುಸುಕುಧಾರಿಗಳು ಕಚ್ಚಾ ಬಾಂಬ್ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಆದರೆ ಭಡು ಶೇಖ್ ಬೆಂಬಲಿಗರು ಮಾತ್ರ ತಾಳ್ಮೆ ಕಳೆದುಕೊಂಡು 12 ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಇಟ್ಟಿದ್ದಾರೆ. ಇಲ್ಲಿಯವರೆಗೆ ಘಟನೆಗೆ ಸಂಬಂಧಪಟ್ಟಂತೆ ಸುಮಾರು 20 ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಪ್ರಕರಣವನ್ನು ಕೋಲ್ಕತ್ತ ಹೈಕೋರ್ಟ್ ಸುಮೊಟೊ (ಸ್ವಯಂಪ್ರೇರಿತ) ವಿಚಾರಣೆ ನಡೆಸಿತು. ಸೂಕ್ತ ವಿಚಾರಣೆ ನಡೆದು, ತೀರ್ಪು ಹೊರಬರಬೇಕು ಎಂದರೆ ಸಾಕ್ಷಿಗಳನ್ನು ಸಂರಕ್ಷಿಸಬೇಕು. ಹೀಗಾಗಿ ಕ್ರೈಂ-ಹಿಂಸಾಚಾರ ನಡೆದ ಸ್ಥಳಗಳನ್ನು ಎಲ್ಲ ಆಯಾಮಗಳಿಂದಲೂ ತೋರಿಸುವ ರೀತಿಯಲ್ಲಿ ಆ ಜಾಗದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಸಾಕ್ಷಿ ನಾಶಕ್ಕೆ ಅವಕಾಶ ಕೊಡಬಾರದು ಮತ್ತು ಈ ಕೆಲಸವನ್ನು ಜಿಲ್ಲಾ ನ್ಯಾಯಾಧೀಶರಾದ ಪುರ್ಬಾ ಭುರ್ದಾವನ್ ಸಮ್ಮುಖದಲ್ಲಿಯೇ ನಡೆಸಬೇಕು ಎಂದು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಇದನ್ನೂ ಓದಿ: ‘ಜೇಮ್ಸ್’ ಚಿತ್ರ ತೆಗೆಯದಂತೆ ಫಿಲ್ಮ್ ಚೇಂಬರ್ಗೆ ಸಿಎಂ ಕಚೇರಿಯಿಂದ ಫೋನ್ ಕರೆ; ಮಹತ್ವದ ಸಭೆಗೆ ಸಿದ್ಧತೆ
Published On - 8:22 am, Thu, 24 March 22