ರಷ್ಯಾ-ಉಕ್ರೇನ್ ಯುದ್ಧ ವಿಚಾರದಲ್ಲಿ ತಟಸ್ಥ ನಿಲುವು ಮುಂದುವರಿಸಿದ ಭಾರತ; ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾದ ನಿರ್ಣಯಕ್ಕೆ ಕೇವಲ 2 ಮತ !
ನಿರ್ಣಯಕ್ಕೆ ಒಟ್ಟು 15 ರಾಷ್ಟ್ರಗಳ ಸಮ್ಮತಿ ಕೋರಿತ್ತು. ನಿರ್ಣಯ ಅಂಗೀಕಾರವಾಗಲು ರಷ್ಯಾಕ್ಕೆ 9 ಮತಗಳಾದರೂ ಬೇಕಿತ್ತು. ಆದರೆ 13 ರಾಷ್ಟ್ರಗಳು ದೂರವೇ ಉಳಿದವು. ಎರಡು ಮತಗಳು ಬಿದ್ದವು.
ರಷ್ಯಾ ಮತ್ತು ಉಕ್ರೇನ್ ಮಧ್ಯದ ಯುದ್ಧದ (Russia-Ukraine War)ವಿಚಾರದಲ್ಲಿ ಭಾರತ ತನ್ನ ತಟಸ್ಥ ನಿಲುವನ್ನು ಮುಂದುವರಿಸಿದೆ. ಉಕ್ರೇನ್ನಲ್ಲಿ ಮಾನವೀಯ ಬಿಕ್ಕಟ್ಟು ಪರಿಸ್ಥಿತಿಗೆ ಸಂಬಂಧಪಟ್ಟಂತೆ ರಷ್ಯಾ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಮಂಡಿಸಿದ್ದ ನಿರ್ಣಯಕ್ಕೆ ಮತದಾನ ಮಾಡುವುದರಿಂದ ಭಾರತ ದೂರ ಉಳಿದಿದೆ. ಈ ನಿರ್ಣಯದ ಪರ ಕೇವಲ 2 ಮತಗಳು ಬಿದ್ದಿದ್ದು, ಭಾರತ ಸೇರಿ ಒಟ್ಟು 13 ರಾಷ್ಟ್ರಗಳು ಮತ ಹಾಕಲಿಲ್ಲ. ಆ ಎರಡು ಮತಗಳಲ್ಲಿ ಒಂದು ರಷ್ಯಾದ್ದು ಮತ್ತೊಂದು ಚೀನಾದ್ದು. ಹೀಗಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾದ ನಿರ್ಣಯ ತಿರಸ್ಕೃತಗೊಂಡಿದೆ.
ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಶಾಶ್ವತ ಮತ್ತು ವಿಟೋ ವೆಲ್ಡಿಂಗ್ ಕೌನ್ಸಿಲ್ ಸದಸ್ಯತ್ವ ಹೊಂದಿರುವ ರಷ್ಯಾ, ಉಕ್ರೇನ್ನಲ್ಲಿರುವ ಮಾನವೀಯ ಬಿಕ್ಕಟ್ಟಿನ ಕುರಿತು ಕರಡು ನಿರ್ಣಯ ಮಂಡಿಸಿತ್ತು. ಉಕ್ರೇನ್ನಲ್ಲಿ ಮಹಿಳೆಯರು ಮತ್ತು ಮಕ್ಕಳು, ದುರ್ಬಲರು ಸೇರಿ ನಾಗರಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅವರ ರಕ್ಷಣೆ ಮಾಡಲಾಗಿದೆ. ಅಲ್ಲಿನ ನಾಗರಿಕರ ಕ್ಷಿಪ್ರ, ಸುರಕ್ಷಿತ ಸ್ಥಳಾಂತರ ಮಾಡಲು ಸ್ವಯಂಪ್ರೇರಿತವಾಗಿಯೇ ಕದನ ವಿರಾಮ ಘೋಷಿಸಲಾಗುತ್ತಿದೆ. ಈ ಮೂಲಕ ಮಾನವೀಯ ಕಾರಿಡಾರ್ ರಚನೆಗಾಗಿ ರಷ್ಯಾ ಕ್ರಮಕೈಗೊಂಡಿದ್ದನ್ನು ಒಪ್ಪಿಕೊಳ್ಳಬೇಕು ಎಂದು ನಿರ್ಣಯದಲ್ಲಿ ಉಲ್ಲೇಖಿಸಿ, ಅದಕ್ಕೆ ಒಟ್ಟು 15 ರಾಷ್ಟ್ರಗಳ ಸಮ್ಮತಿ ಕೋರಿತ್ತು. ನಿರ್ಣಯ ಅಂಗೀಕಾರವಾಗಲು ರಷ್ಯಾಕ್ಕೆ 9 ಮತಗಳಾದರೂ ಬೇಕಿತ್ತು. ಆದರೆ 13 ರಾಷ್ಟ್ರಗಳು ದೂರವೇ ಉಳಿದವು. ಎರಡು ಮತಗಳು ಬಿದ್ದವು.
ರಷ್ಯಾ-ಉಕ್ರೇನ್ ಯುದ್ಧ ಶುರುವಾದಾಗಿನಿಂದಲೂ ಭಾರತ ಯಾವ ರಾಷ್ಟ್ರದ ಪರ-ವಿರೋಧವಾಗಿ ನಿಲ್ಲುತ್ತಿಲ್ಲ. ಬದಲಿಗೆ ಶಾಂತಿ ಜಪ ಪಠಿಸುತ್ತಿದೆ. ಈ ಹಿಂದೆ ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣ ಖಂಡಿಸಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ತುರ್ತು ವಿಶೇಷ ಅಧಿವೇಶನ ನಡೆಸಲು ವಿಶ್ವ ಸಂಸ್ಥೆ ಭದ್ರತಾ ಮಂಡಳಿ ನಿರ್ಣಯ ಕೈಗೊಂಡಿತ್ತು. ಆಗಲೂ ಸಹ ಭಾರತ ಮತದಾನದಿಂದ ದೂರವೇ ಇತ್ತು.
ಇದನ್ನೂ ಓದಿ: ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಶಾಕ್; ಏಪ್ರಿಲ್ನಿಂದ ದುಬಾರಿಯಾಗಲಿವೆಯೇ ಹಲವು ಸೇವೆಗಳು? ಇಲ್ಲಿದೆ ಪೂರ್ಣ ವಿವರ
Published On - 8:33 am, Thu, 24 March 22