ನ್ಯೂಸ್ಲಾಂಡ್ರಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಟಿವಿ ಟುಡೇ: 2 ಕೋಟಿ ನಷ್ಟ ಪರಿಹಾರಕ್ಕೆ ಒತ್ತಾಯ
ನ್ಯೂಸ್ ಆ್ಯಂಕರ್ಗಳು, ಸಿಬ್ಬಂದಿ ಹಾಗೂ ಮ್ಯಾನೇಜ್ಮೆಂಟ್ ಹಂತದಲ್ಲಿರುವವರಿಗೆ ನ್ಯೂಸ್ಲಾಂಡ್ರಿಯಿಂದ ಮಾನಹಾನಿ ಆಗಿದೆ ಎಂದು ಟಿವಿ ಟುಡೇ ದೂರಿದೆ
ದೆಹಲಿ: ಸುದ್ದಿ ವಾಹಿನಿಗಳನ್ನು ವಿಶ್ಲೇಷಿಸುವ ನ್ಯೂಸ್ಲಾಂಡ್ರಿ ಮಾಧ್ಯಮ ಸಂಸ್ಥೆಯ ವಿರುದ್ಧ ಇಂಡಿಯಾ ಟುಡೆ ಮತ್ತು ಆಜ್ತಕ್ ನ್ಯೂಸ್ ಚಾನೆಲ್ಗಳ ಮಾಲೀಕತ್ವ ಹೊಂದಿರುವ ಟಿವಿ ಟುಡೆ ನೆಟ್ವರ್ಕ್ ₹ 2 ಕೋಟಿ ಮೊತ್ತದ ಮಾನಹಾನಿ ಪ್ರಕರಣವನ್ನು ದೆಹಲಿ ಹೈಕೋರ್ಟ್ನಲ್ಲಿ ದಾಖಲಿಸಿದೆ. ತನ್ನ ವಾಣಿಜ್ಯ ಉತ್ಪನ್ನಗಳ ಅವಹೇಳನ ಮತ್ತು ನ್ಯೂಸ್ ಆ್ಯಂಕರ್ಗಳು, ಸಿಬ್ಬಂದಿ ಹಾಗೂ ಮ್ಯಾನೇಜ್ಮೆಂಟ್ ಹಂತದಲ್ಲಿರುವವರಿಗೆ ಮಾನಹಾನಿ ಮಾಡಿದ ಆರೋಪ ಹೊರಿಸಲಾಗಿದೆ.
ನ್ಯೂಸ್ಲಾಂಡ್ರಿ ತನ್ನ ವೆಬ್ಸೈಟ್ ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಪ್ಲೋಡ್ ಮಾಡಿದ್ದ ವಿಡಿಯೊಗಳಲ್ಲಿ ಟಿವಿ ಟುಡೇ ನೆಟ್ವರ್ಕ್ನ ಕಾಪಿರೈಟ್ ಉಲ್ಲಂಘಿಸಿದೆ. ಸುದ್ದಿ, ವರದಿಗಾರಿಕೆ ಮತ್ತು ನ್ಯೂಸ್ ಆ್ಯಂಕರ್ಗಳ ಬಗ್ಗೆ ಸುಳ್ಳು, ದುರುದ್ದೇಶಪೂರ್ವಕ ಮತ್ತು ಮಾನಹಾನಿಕರ ಮಾತುಗಳು ಈ ವಿಡಿಯೊಗಳಲ್ಲಿವೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಟಿವಿ ಟುಡೇ ಹೇಳಿದೆ.
ಟಿವಿ ಟುಡೇ ನೆಟ್ವರ್ಕ್ನಲ್ಲಿ ಪ್ರಸಾರವಾಗಿದ್ದ ಹಲವು ಕಾರ್ಯಕ್ರಮಗಳನ್ನು ನ್ಯೂಸ್ಲಾಂಡ್ರಿ ತನ್ನ ಕಾರ್ಯಕ್ರಮಗಳಲ್ಲಿ ಬಳಸಿಕೊಂಡಿದೆ. ಅದೇ ಕಂಟೆಂಟ್ ಬಳಸಿ ಟಿವಿ ಟುಡೇ ನೆಟ್ವರ್ಕ್ನ ಸಿಬ್ಬಂದಿಯ ಬಗ್ಗೆ ಅಸಭ್ಯ ಭಾಷೆ ಬಳಸಿ ಮಾನಹಾನಿ ಮಾಡಿದೆ. ಈ ಎಲ್ಲ ಅಂಶಗಳು 1957ರ ಕಾಪಿರೈಟ್ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಟಿವಿ ಟುಡೇ ಹೇಳಿದೆ.
ನ್ಯೂಸ್ಲಾಂಡ್ರಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಜೊತೆಗೆ ಅದರ ಸಹಸ್ಥಾಪಕರಾದ ಅಭಿನಂದನ್ ಸೇಖ್ರಿ, ನಿರ್ದೇಶಕರಾದ ಪ್ರಶಾಂತ್ ಸರೀನ್ ಮತ್ತು ರೂಪಕ್ ಕಪೂರ್, ಕಾರ್ಯಕಾರಿ ಸಂಪಾದಕಿ ಮನಿಶಾ ಪಾಂಡೆ, ಪ್ರತಿನಿಧಿ ಆಯುಷ್ ತಿವಾರಿ, ಅಂಕಣಕಾರ ಹೃದಯೇಶ್ ಜೋಶಿ ಮತ್ತು ಕಾರ್ಯಕಾರಿ ಸಂಪಾದಕ ಅತುಲ್ ಚೌರಾಸಿಯಾ ಮತ್ತು ರಮಣ್ ಕೃಪಾಲ್ ಅವರನ್ನು ಈ ಪ್ರಕರಣದಲ್ಲಿ ಕಕ್ಷಿದಾರರನ್ನಾಗಿಸಲಾಗಿದೆ. ಪಾಂಡೆ ಮತ್ತು ಚೌರಾಸಿಯಾ ನ್ಯೂಸ್ಲಾಂಡ್ರಿ ಜಾಲತಾಣದ ಜನಪ್ರಿಯ ಕಾರ್ಯಕ್ರಮಗಳಾದ ಟಿವಿ ನ್ಯೂಸೆನ್ಸ್ ಮತ್ತು ಟಿಪ್ಪಣಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಈ ಕಾರ್ಯಕ್ರಮಗಳಲ್ಲಿ ಅವರು ಭಾರತದ ಮುಖ್ಯಧಾರೆ ಸುದ್ದಿವಾಹಿನಿಗಳನ್ನು ವಿಮರ್ಶಿಸುತ್ತಿದ್ದರು.
ಸುದ್ದಿ ಮಾಡಲು ಇಂಡಿಯಾ ಟುಡೇ ಗ್ರೂಪ್ ಕಾರ್ಪೊರೇಟ್ ಕಂಪನಿಗಳಿಂದ ಜಾಹಿರಾತು ಕೇಳುತ್ತದೆ. ಜಾಹಿರಾತು ನೀಡುವ ಕಂಪನಿಗಳ ಸೂಚನೆಯಂತೆ ಸುದ್ದಿಯ ಆಶಯ ಬದಲಿಸಿಕೊಳ್ಳುತ್ತದೆ ಎಂದೆಲ್ಲಾ ನ್ಯೂಸ್ಲಾಂಡ್ರಿ ತನ್ನ ಕಾರ್ಯಕ್ರಮಗಳಲ್ಲಿ ಹೇಳಿತ್ತು. ಆದರೆ ಈ ಮಾತುಗಳಲ್ಲಿ ವಾಸ್ತವಾಂಶ ಇಲ್ಲ. ನಾವು ಸ್ವತಂತ್ರ ಮಾಧ್ಯಮ ಸಂಸ್ಥೆಯಾಗಿದ್ದು, ಯಾವುದೇ ರಾಜಕೀಯ ಪಕ್ಷ ಅಥವಾ ಕಾರ್ಪೊರೇಟ್ ಕಂಪನಿಗೆ ಅಧೀನವಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದೆ.
ನ್ಯೂಸ್ಲಾಂಡ್ರಿ ಸಂಸ್ಥೆಯ ಯುಟ್ಯೂಬ್ ಚಾನೆಲ್ಗೆ ಟಿವಿ ಟುಡೇ ಕಾಪಿರೈಟ್ ತಕರಾರು ಸಲ್ಲಿಸಿದ ನಂತರ ಯುಟ್ಯುಬ್ನಲ್ಲಿ ನ್ಯೂಸ್ಲಾಂಡ್ರಿ ಚಾನೆಲ್ಗೆ ನಿರ್ಬಂಧ ವಿಧಿಸಲಾಗಿತ್ತು. ಈ ಬಗ್ಗೆ ಯುಟ್ಯೂಬ್ನೊಂದಿಗೆ ವಿವಾದ ಇನ್ನೂ ಇತ್ಯರ್ಥವಾಗಿಲ್ಲ. ಆದರೆ ಈ ನಡುವೆ ತನ್ನ ವಿರುದ್ಧ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ನ್ಯೂಸ್ಲಾಂಡ್ರಿ ವಿಡಿಯೊಗಳನ್ನು ಅಪ್ಲೋಡ್ ಮಾಡುತ್ತಿದೆ ಎಂದು ಟಿವಿ ಟುಡೆ ನೆಟ್ವರ್ಕ್ ದೂರಿದೆ.
ತಮ್ಮ ಸಂಸ್ಥೆಯ ವಿರುದ್ಧ ಟಿವಿ ಟುಡೇ ಮಾಡಿರುವ ಆರೋಪಗಳನ್ನು ನಿರಾಕರಿಸಿರುವ ನ್ಯೂಸ್ಲಾಂಡ್ರಿ ಸಹ ಸ್ಥಾಪಕ ಸೆಖ್ರಿ, ‘ಯಾವುದೇ ವಿಚಾರದ ಬಗ್ಗೆ ಯಥಾರ್ಥವಾಗಿ ವರದಿ ಮಾಡುವುದು ಮಾನಹಾನಿ ಆಗುವುದಿಲ್ಲ. ಇಂಡಿಯಾ ಟುಡೇದಂಥ ಮಾಧ್ಯಮ ಸಮೂಹಕ್ಕೆ ಉತ್ತರದಾಯಿತ್ವದ ಹೊಣೆಗಾರಿಕೆ ಎದುರಿಸಿ ಅನುಭವವಿಲ್ಲ. ಅವರು ಈವರೆಗೆ ಇತರರನ್ನು ಮಾತ್ರವೇ ಉತ್ತರದಾಯಿತ್ವಕ್ಕೆ ಹೊಣೆ ಮಾಡುತ್ತಿದ್ದರು’ ಎಂದು ಹೇಳಿದ್ದಾರೆ.
‘ದೇಶದಲ್ಲಿ ಮುಕ್ತ ಪತ್ರಿಕೋದ್ಯಮ ಬೇಕು ಎಂದು ಪ್ರತಿಪಾದಿಸಬೇಕಿದ್ದ ಟಿವಿ ಟುಡೇ ನೆಟ್ವರ್ಕ್ ಪತ್ರಿಕಾ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅರ್ಥೈಸಿಕೊಂಡಿರುವ ಕ್ರಮ ಇದು. ಮಾಧ್ಯಮಗಳು ಮತ್ತು ಪತ್ರಕರ್ತರ ಮನಸ್ಥಿತಿಯನ್ನೂ ಈ ಬೆಳವಣಿಗೆ ತೋರಿಸುತ್ತದೆ. ಸುದ್ದಿ ವಾಹಿನಿಗಳ ಬಗ್ಗೆ ವರದಿ ಮಾಡಿದ್ದಕ್ಕೆ ಈ ಹಿಂದೆಯೂ ನಮ್ಮ ವಿರುದ್ಧ ಮಾನಹಾನಿ ಪ್ರಕರಣಗಳನ್ನು ದಾಖಲಿಸಲಾಗಿತ್ತು. ರಾಜಕಾರಿಣಿಗಳಿಂದ ಅಧಿಕಾರಿಗಳವರೆಗೆ, ಕೈಗಾರಿಕೋದ್ಯಮಿಗಳಿಂದ ನಟರವರೆಗೆ ಮತ್ತು ಅವರ ಮಕ್ಕಳ ಬಗ್ಗೆ ವರದಿ ಮಾಡುವ ಮಾಧ್ಯಮಗಳು ತನ್ನನ್ನು ಯಾರೂ ಪ್ರಶ್ನಿಸಬಾರದು ಎಂದು ನಿರೀಕ್ಷಿಸುತ್ತವೆ. ಯಾರಾದರೂ ಪ್ರಶ್ನಿಸಿದಾಗ ಈ ರೀತಿ ಪ್ರತಿಕ್ರಿಯಿಸುತ್ತವೆ’ ಎಂದು ಅವರು ಇಂಡಿಯನ್ ಎಕ್ಸ್ಪ್ರೆಸ್ ಜಾಲತಾಣಕ್ಕೆ ನೀಡಿರುವ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಯೂಟ್ಯೂಬರ್ಗಳ ಮೇಲೆ ಮಾನಹಾನಿ ಕೇಸ್ ಹಾಕಿದ್ದ ಸಮಂತಾಗೆ ಮುಖಭಂಗ; ಕೋರ್ಟ್ ಹೇಳಿದ್ದೇನು? ಇದನ್ನೂ ಓದಿ: ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ವಿವಿ ಸಿಂಡಿಕೇಟ್ ಸದಸ್ಯರ ಕಿಡಿ; ಮಾನಹಾನಿ ಪ್ರಕರಣ ದಾಖಲಿಸುವ ಎಚ್ಚರಿಕೆ
Published On - 5:09 pm, Tue, 26 October 21