NIA Raid: ಬಿಹಾರದಲ್ಲಿ ಪಿಎಫ್​​ಐ ಚಟುವಟಿಕೆ; ದಕ್ಷಿಣ ಕನ್ನಡ, ಕಾಸರಗೋಡಿನಲ್ಲಿ ಐವರು ಪಿಎಫ್​ಐ ಕಾರ್ಯಕರ್ತರ ಬಂಧಿಸಿದ ಎನ್​ಐಎ

|

Updated on: Mar 07, 2023 | 9:01 PM

ಬಿಹಾರದಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಸಕ್ರಿಯವಾಗಿರುವ ಪ್ರಕರಣಕ್ಕೆ ಸಂಬಂದಿಸಿದಂತೆ ಐವರನ್ನು ಕೇರಳದ ಕಾಸರಗೋಡು ಕರ್ನಾಟಕದ ದಕ್ಷಿಣ ಕನ್ನಡದಿಂದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

NIA Raid: ಬಿಹಾರದಲ್ಲಿ ಪಿಎಫ್​​ಐ ಚಟುವಟಿಕೆ; ದಕ್ಷಿಣ ಕನ್ನಡ, ಕಾಸರಗೋಡಿನಲ್ಲಿ ಐವರು ಪಿಎಫ್​ಐ ಕಾರ್ಯಕರ್ತರ ಬಂಧಿಸಿದ ಎನ್​ಐಎ
ಎನ್​ಐಎ
Follow us on

ನವದೆಹಲಿ: ಬಿಹಾರದಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Popular Front of India) ಸಂಘಟನೆ ಸಕ್ರಿಯವಾಗಿರುವ ಪ್ರಕರಣಕ್ಕೆ ಸಂಬಂದಿಸಿದಂತೆ ಐವರನ್ನು ಕೇರಳದ ಕಾಸರಗೋಡು (Kasargod) ಕರ್ನಾಟಕದ ದಕ್ಷಿಣ ಕನ್ನಡದಿಂದ (Dakshina Kannada) ರಾಷ್ಟ್ರೀಯ ತನಿಖಾ ದಳದ (National Investigation Agency) ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ. ಬಿಹಾರದ ಪುಲ್ವಾರಿಶರೀಫ್​ನಲ್ಲಿನ ಪಿಎಫ್​ಐ ಪ್ರಕರಣವೊಂದಕ್ಕೆ ಸಂಬಂಧಿಸಿ ಎನ್​ಐಎ ಈ ಕಾರ್ಯಾಚರಣೆ ನಡೆಸಿದೆ. ಬಿಹಾರದ ಪುಲ್ವಾರಿಶರೀಫ್ ಮತ್ತು ಮೋತಿಹರಿಯಲ್ಲಿ ಪಿಎಫ್​ಐ ಚಟುವಟಿಕೆ ಸಕ್ರಿಯವಾಗಿರುವುದನ್ನು ಗಮನಿಸಲಾಗಿತ್ತು. ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ನಿರ್ದಿಷ್ಟ ಸಮುದಾಯದ ಯುವಕರ ಹತ್ಯೆಗೆ ಇತ್ತೀಚೆಗೆ ಬಂದೂಕು ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಲಾಗಿತ್ತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಎನ್​ಐಎ ತಿಳಿಸಿದೆ.

ಕಾಸರಗೋಡು, ದಕ್ಷಿಣ ಕನ್ನಡದಿಂದ ಬಂಧಿತರಾದವರು ಪಿಎಫ್​ಐ ಸಂಚಿನಲ್ಲಿ ಶಾಮೀಲಾದ ಆರೋಪ ಎದುರಿಸುತ್ತಿದ್ದಾರೆ. ವಿದೇಶಗಳಿಂದ ನಿಧಿ ಪಡೆದು ಸಂಘಟನೆಯ ನಾಯಕರಿಗೆ ಹಂಚಿದ ಆರೋಪ ಅವರ ಮೇಲಿದೆ ಎಂದು ಎನ್​ಐಎ ಪ್ರಕಟಣೆ ತಿಳಿಸಿದೆ.

ಭಾನುವಾರ ರಾತ್ರಿಯಿಂದಲೇ ಶೋಧ

ಎನ್​ಐಎ ತಂಡಗಳು ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಎಂಟು ಕಡೆಗಳಲ್ಲಿ ಭಾನುವಾರ ರಾತ್ರಿಯಿಂದಲೇ ಶೋಧ ಕಾರ್ಯ ಆರಂಭಿಸಿದ್ದವು. ಅನೇಕ ಡಿಜಿಟಲ್ ಸಾಧನಗಳು, ಕೋಟ್ಯಂತರ ರೂಪಾಯಿ ಹಣಕಾಸು ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನು ಕಲೆಹಾಕಿದ್ದವು. ನಿಷೇಧ ಹೇರಿರುವ ಹೊರತಾಗಿಯೂ ಹಲವು ಕಡೆಗಳಲ್ಲಿ ಪಿಎಫ್​ಐ ಚಟುವಟಿಕೆಗಳು ಸಕ್ರಿಯವಾಗಿದ್ದು, ಹಿಂಸಾತ್ಮಕ ತೀವ್ರವಾದದಲ್ಲಿ ತೊಡಗಿದೆ. ಅಪರಾಧ ಚಟುವಟಿಕೆಗಳಿಗಾಗಿ ಶಸ್ತ್ರಾಸ್ತ್ರ ಮತ್ತು ಆಯುಧ ಸಂಗ್ರಹ ನಡೆಯುತ್ತಿದೆ ಎಂದು ಎನ್​ಐಎ ಪ್ರಕಟಣೆ ತಿಳಿಸಿದೆ. ಪಿಎಫ್‌ಐ ಪ್ರಕರಣದ ಆರೋಪಿಗಳ ಬ್ಯಾಂಕ್ ಖಾತೆಗಳಿಗೆ ಹಣ ಠೇವಣಿ ಇಡುತ್ತಿದ್ದ ಆರೋಪಿಗಳಾದ ಮೊಹಮ್ಮದ್ ಸರ್ಫರಾಜ್ ನವಾಜ್ ಮತ್ತು ಎಂಡಿ ಮಹಮ್ಮದ್ ಸಿನಾನ್ ಅವರ ಖಾತೆಗಳನ್ನು ಎನ್​ಐಎ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ದುಬೈ, ಅಬುಧಾಬಿಯಿಂದ ಹಣ ಸಂಪಾದಿಸಿ ಮಹಮ್ಮದ್ ಸಿನಾನ್, ಸರ್ಫರಾಜ್ ನವಾಜ್, ಅಬ್ದುಲ್ ರಫೀಕ್ ಎಂ ಮತ್ತು ಅಬಿದ್ ಕೆಎಂ ಎಂಬವರ ಖಾತೆಗಳಿಗೆ ವರ್ಗಾಯಿಸಿದ ಇಕ್ಬಾಲ್ ಮತ್ತು ಇತರ ಸಹಚರರನ್ನು ತನಿಖೆಗೆ ಒಳಪಡಿಸಿದಾಗ ಹಣದ ಮೂಲದ ಬಗ್ಗೆ ಮಾಹಿತಿ ದೊರೆತಿದೆ. ಈ ಸಂಚಿನ ಅಂತರರಾಷ್ಟ್ರೀಯ ಪಿತೂರಿ ಬೆಳಕಿಗೆ ಬಂದಿದೆ ಎಂದು ಎನ್‌ಐಎ ಹೇಳಿದೆ.

ಇದನ್ನೂ ಓದಿ: Amit Shah: ನಿಮ್ಮ ಮತ ಪಿಎಫ್​ಐ ನಿಷೇಧಿಸಿದ ಬಿಜೆಪಿಗೋ, ಭಯೋತ್ಪಾದನೆ ಬೆಂಬಲಿಸುವ ಕಾಂಗ್ರೆಸ್​ಗೋ; ಅಮಿತ್ ಶಾ

ಮಹಮ್ಮದ್ ಸಿನಾನ್, ಸರ್ಫರಾಜ್ ನವಾಜ್, ಅಬ್ದುಲ್ ರಫೀಕ್ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಠೇವಣಿ ಇಟ್ಟಿದ್ದೂ ತನಿಖೆಯಿಂದ ತಿಳಿದುಬಂದಿದೆ. ಐವರು ಬಂಧಿತರನ್ನು ಪಟ್ನಾದ ವಿಶೇಷ ಎನ್​ಐಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಎನ್​ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ತನಿಖೆ ಪ್ರಗತಿಯಲ್ಲಿದೆ. ಪಿಎಫ್​ಐಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತು ದೇಶದಲ್ಲಿ ಹಣಕಾಸು ನೆರವು ನೀಡುತ್ತಿರುವವರನ್ನು ಬಯಲಿಗೆಳೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎನ್​ಐಎ ಹೇಳಿದೆ.

ಬಿಹಾರದ ಪುಲ್ವಾರಿಶರೀಫ್​ನಲ್ಲಿ ಕಳೆದ ವರ್ಷ ಪಿಎಫ್​ಐ ತಾಣಗಳ ಮೇಲೆ ಎನ್​ಐಎ ದಾಳಿ ನಡೆಸಿತ್ತು. ಆ ಸಂದರ್ಭ ಅನೇಕ ಶಸ್ತ್ರಾಸ್ತ್ರ, ಆಯುಧಗಳು ಹಾಗೂ ‘ವಿಶನ್ 2047 ಇಂಡಿಯಾ’ ಎಂಬ ಕೆಲವು ದಾಖಲೆಗಳು ಪತ್ತೆಯಾಗಿದ್ದವು. ಅದರಲ್ಲಿ ಪಿಎಫ್​ಐ ಸಂಚುಗಳ ಕುರಿತಾದ ಮಾಹಿತಿ ದೊರೆತಿದ್ದವು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ