
ನವದೆಹಲಿ, ಜುಲೈ 17: ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆ ಎದುರಿಸುತ್ತಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಪ್ರಕರಣದಲ್ಲಿ ( Nimisha Priya Case) ಮಧ್ಯಪ್ರವೇಶಿಸಬೇಕೆಂಬ ಒತ್ತಾಯ ಹೆಚ್ಚುತ್ತಿರುವ ನಡುವೆ ಭಾರತದ ವಿದೇಶಾಂಗ ಸಚಿವಾಲಯ (MEA) ಇಂದು ಪ್ರತಿಕ್ರಿಯಿಸಿದ್ದು, “ಕೇಂದ್ರ ಸರ್ಕಾರ ರಾಜತಾಂತ್ರಿಕ ಮಾರ್ಗಗಳನ್ನು ಸಕ್ರಿಯವಾಗಿ ಅನುಸರಿಸುತ್ತಿದೆ. ಈ ವಿಷಯವನ್ನು ಪರಿಹರಿಸಲು ಕೆಲವು ಸ್ನೇಹಪರ ಸರ್ಕಾರಗಳೊಂದಿಗೆ ಹಾಗೂ ಯೆಮೆನ್ನಲ್ಲಿರುವ ಸಂಘ-ಸಂಸ್ಥೆಗಳ ಜೊತೆ ಸಂಪರ್ಕದಲ್ಲಿದೆ” ಎಂದು ಹೇಳಿದೆ.
“ಇದು ಸೂಕ್ಷ್ಮ ವಿಷಯ. ಭಾರತ ಸರ್ಕಾರವು ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡುತ್ತಿದೆ. ನಾವು ಕಾನೂನು ನೆರವು ನೀಡಿದ್ದೇವೆ. ಆಕೆಯ ಕುಟುಂಬಕ್ಕೆ ಸಹಾಯ ಮಾಡಲು ವಕೀಲರನ್ನು ಸಹ ನೇಮಿಸಿದ್ದೇವೆ. ಸಮಸ್ಯೆಯನ್ನು ಪರಿಹರಿಸಲು ನಾವು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಜುಲೈ 16ರಂದು ನಿಗದಿಯಾಗಿದ್ದ ಅವರ ಮರಣದಂಡನೆಯನ್ನು ಯೆಮೆನ್ ಸರ್ಕಾರ ಮುಂದೂಡಿದೆ. ಸಮಸ್ಯೆಯನ್ನು ಪರಿಹರಿಸಲು ಸ್ಥಳೀಯ ಅಧಿಕಾರಿಗಳು ಮತ್ತು ಕುಟುಂಬ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಈ ವಿಷಯದಲ್ಲಿ ಶೇಖ್ ಅಬುಬಕರ್ ಅಹ್ಮದ್ ಪಾತ್ರದ ಬಗ್ಗೆ ಹಂಚಿಕೊಳ್ಳಲು ನನಗೆ ಯಾವುದೇ ಮಾಹಿತಿ ಇಲ್ಲ” ಎಂದು ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಕೇರಳದ ನರ್ಸ್ ನಿಮಿಷಾ ಪ್ರಿಯಾಳ ಗಲ್ಲು ಶಿಕ್ಷೆ ಮುಂದೂಡಿದ ಯೆಮೆನ್
“ನಾವು ಈ ವಿಷಯವನ್ನು ಬಹಳ ಸೂಕ್ಷ್ಮವಾಗಿ ಅನುಸರಿಸುತ್ತಿದ್ದೇವೆ. ಸರ್ಕಾರದಿಂದ ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡುತ್ತಿದ್ದೇವೆ. ನಾವು ಕೆಲವು ಸ್ನೇಹಪರ ಸರ್ಕಾರಗಳೊಂದಿಗೆ ಸಂಪರ್ಕದಲ್ಲಿದ್ದೇವೆ” ಎಂದು MEA ಹೇಳಿದೆ.
ನಿಮಿಷಾ ಪ್ರಿಯಾ ಯಾರು?:
ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ನಿಮಿಷಾ ಪ್ರಿಯಾ, 2011ರಲ್ಲಿ ತನ್ನ ನರ್ಸಿಂಗ್ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಯೆಮೆನ್‌ಗೆ ತೆರಳಿದರು. ಅವರು ತಮ್ಮ ದೈನಂದಿನ ಕೂಲಿ ಕಾರ್ಮಿಕರಾದ ಪೋಷಕರಿಗೆ ಆರ್ಥಿಕ ಸಹಾಯ ನೀಡಲು ಯೆಮೆನ್‌ಗೆ ತೆರಳಿದ್ದರು. ಯೆಮೆನ್‌ನಲ್ಲಿ ತನ್ನ ಕ್ಲಿನಿಕ್ ಅನ್ನು ಪ್ರಾರಂಭಿಸಲು ಸಹಾಯ ಮಾಡುವುದಾಗಿ ತಲಾಲ್ 2014ರಲ್ಲಿ ಭರವಸೆ ನೀಡಿದಾಗ ಆಕೆ ತಲಾಲ್ ಅಬ್ದೋ ಮಹ್ದಿ ಅವರ ಜೊತೆ ಒಡನಾಟ ಬೆಳೆಸಿಕೊಂಡರು.
ಯೆಮೆನ್ ವ್ಯವಹಾರ ಕಾನೂನಿನ ಪ್ರಕಾರ ಅಲ್ಲಿ ಬ್ಯುಸಿನೆಸ್ ಪ್ರಾರಂಭಿಸಲು ವಿದೇಶಿಯೊಬ್ಬ ಸ್ಥಳೀಯರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ, ನಿಮಿಷಾ ತಲಾಲ್ ಜೊತೆ 2015ರಲ್ಲಿ ಸನಾದಲ್ಲಿ ತನ್ನ ಕ್ಲಿನಿಕ್ ಪ್ರಾರಂಭಿಸಿದರು. ಸ್ವಲ್ಪ ದಿನದಲ್ಲೇ ಅವರ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು. ಆಕೆ ಯೆಮೆನ್ ಬಿಟ್ಟು ಹೋಗದಂತೆ ನೋಡಿಕೊಳ್ಳಲು ತಲಾಲ್ ನಿಮಿಷಾರ ಪಾಸ್‌ಪೋರ್ಟ್ ಅನ್ನು ಸಹ ತೆಗೆದುಕೊಂಡಿದ್ದ ಎನ್ನಲಾಗಿದೆ. ಆತನಿಂದ ನಿಮಿಷಾ ತನ್ನ ಪಾಸ್‌ಪೋರ್ಟ್ ಮರಳಿ ಪಡೆದು ಭಾರತಕ್ಕೆ ಹಿಂತಿರುಗಲು ಅವನಿಗೆ ಅಮಲಿನ ಡ್ರಗ್ ಚುಚ್ಚಿದಳು. ಆದರೆ, ಅದು ಓವರ್ ಡೋಸ್ ಆಗಿ ಆತ ಸಾವನ್ನಪ್ಪಿದನು. ಇದರಿಂದ ಆಕೆಯನ್ನು ಬಂಧಿಸಿ, ಗಲ್ಲು ಶಿಕ್ಷೆಗೆ ಗುರಿಪಡಿಸಲಾಯಿತು.
ಇದನ್ನೂ ಓದಿ: ಬ್ಲಡ್ ಮನಿ ನಿರಾಕರಿಸಿದ ಮೃತನ ಸೋದರ; ಯೆಮೆನ್‌ನಲ್ಲಿ ಕೇರಳದ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಬಹುತೇಕ ಖಚಿತ
ಬ್ಲಡ್ ಮನಿಗೆ ನಿರಾಕರಣೆ:
ನಿಮಿಷಾಳ ಮರಣದಂಡನೆಯನ್ನು ಮುಂದೂಡಿರುವುದನ್ನು ಮೃತ ವ್ಯಕ್ತಿ ತಲಾಲ್ ಮಹ್ದಿ ಅವರ ಸಹೋದರ ಅಬ್ದೆಲ್‌ಫತ್ತಾ ಮಹ್ದಿ ಟೀಕಿಸಿದ್ದಾರೆ. ಮೃತರ ಕುಟುಂಬದಿಂದ ನಿಮಿಷಾಗೆ ಕ್ಷಮೆ ಪಡೆಯುವ ಪ್ರಯತ್ನಗಳನ್ನು ಮತ್ತು ಭಾರತ ಸರ್ಕಾರ ಸೇರಿದಂತೆ ವಿವಿಧ ಪಕ್ಷಗಳಿಂದ ಮಧ್ಯಸ್ಥಿಕೆಯ ಮಾತುಕತೆಗಳನ್ನು ಅವರು ಬಲವಾಗಿ ತಿರಸ್ಕರಿಸಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಅಬ್ದುಲ್ ಫತ್ತಾಹ್, ಇಸ್ಲಾಮಿಕ್ ಶರಿಯಾ ಕಾನೂನಿನ ಪ್ರಕಾರ ಕ್ವಿಸಾಸ್ (ಪ್ರತೀಕಾರ)ಗಾಗಿ ನಮ್ಮ ಬೇಡಿಕೆ ದೃಢವಾಗಿದೆ. ಮರಣದಂಡನೆ ಜಾರಿಯಾಗುವವರೆಗೆ ಕಾನೂನು ಕ್ರಮಗಳನ್ನು ಮುಂದುವರಿಸುತ್ತೇವೆ. ಮರಣದಂಡನೆಯನ್ನು ಮುಂದೂಡಿದ ಮಾತ್ರಕ್ಕೆ ಆಕೆ ಗಲ್ಲಿಗೇರುವುದು ತಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ