ನವದೆಹಲಿ/ಬೆಳಗಾವಿ, (ಫೆಬ್ರವರಿ 07): ಕೇಂದ್ರ ಸರ್ಕಾರದಿಂದ ನಿರಂತರ ದ್ರೋಹ, ವಂಚನೆಯಾಗುತ್ತಿದೆ ಎಂದು ಆರೋಪಿಸಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ರಾಜ್ಯ ಸರ್ಕಾರ ದೆಹಲಿಯ ಜಂತರ್ ಮಂತರ್‌ನಲ್ಲಿಂದು ಪ್ರತಿಭಟನೆ ಮಾಡಿದೆ. ಇದೀಗ ಇದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಪ್ರತಿಕ್ರಿಯಿಸಿ, ಕರ್ನಾಟಕದ ಜಿಎಸ್ಟಿಯ ಒಂದು ಪೈಸೆಯೂ ಬಾಕಿ ಉಳಿಸಿಕೊಂಡಿಲ್ಲ. ಬರಪರಿಹಾರವೂ ಸೇರಿದಂತೆ ಪ್ರಕೃತಿ ವಿಕೋಪ ನಿಧಿಯಡಿ ಮುಂಗಡವಾಗಿ 6196 ಕೋಟಿ ರೂ, ಹಣ ನೀಡಲಾಗಿದೆ. ಆದರೆ ಕಾಂಗ್ರೆಸ್ ಮಾತ್ರ ಒಂದು ರುಪಾಯಿ ನೀಡಲ್ಲ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಇಲ್ಲಿಯವರೆಗೆ ಒಟ್ಟು 12,476 ಕೋಟಿ ರೂ.ಗಳಲ್ಲಿ 6196 ಕೋಟಿ ರೂ. ನೀಡಲಾಗಿದೆ ಎಂದು ಅಂಕಿ-ಸಂಖ್ಯೆ ಮೂಲಕ ಸ್ಪಷ್ಟಿಕರಣ ನೀಡಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆ ಬಳಿಕ ದೆಹಲಿಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ” ತೆರಿಗೆ ಕಟ್ಟುತ್ತಿರುವುದಕ್ಕೆ ಕನ್ನಡಿಗರು ಹೆಮ್ಮೆ ಪಡುತ್ತಿದ್ದಾರೆ. ಆದ್ರೆ, ರಾಜಕೀಯ ಪಕ್ಷದ ನೇತೃತ್ವದ ಸರಕಾರ ಈ ಪ್ರಶ್ನೆ ಎತ್ತಿದೆ. ಕರ್ನಾಟಕ ಸರಕಾರ ಮಾತಾಡುತ್ತಿರುವ ಭಾಷೆ ಜನವಿರೋಧಿಯಾಗಿದೆ. ಕರ್ನಾಟಕಕ್ಕೆ ಕೇಂದ್ರ ತಾರತಮ್ಯ ಮಾಡಿದೆ ಎಂಬುದು ತಪ್ಪು ಮಾಹಿತಿ ನೀಡುತ್ತಿದೆ. ಕುಟುಂಬವಾದದಲ್ಲೇ ಮುಳುಗಿರುವ ಕಾಂಗ್ರೆಸ್ ಭಾಷೆ ದೇಶವನ್ನು ದಾರಿ ತಪ್ಪಿಸುತ್ತಿದೆ “ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Chalo Delhi: ಬಜೆಟ್ ಬಳಿಕ ಶ್ವೇತಪತ್ರ ಹೊರಡಿಸುತ್ತೇವೆ: ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ
“ಕಾಂಗ್ರೆಸ್ ನಾಯಕರ ಹೇಳಿಕರ ಕುಚೇಷ್ಟೆಯಿಂದ ಕೂಡಿದೆ. ವಾಸ್ತವಿಕ ಅಂಶಗಳನ್ನು ಹೇಳದೆ ವಿತ್ತೀಯ ಹಕ್ಕುಗಳ ಬಗ್ಗೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ. 15 ನೇ ಹಣಕಾಸು ಆಯೋಗದ ಅವಧಿಯಲ್ಲಿ ರಾಜ್ಯಕ್ಕೆ ಆದ ಲಾಭಗಳನ್ನು ಉಲ್ಲೇಖಿಸಿಲ್ಲ. ಕೆಲವು ಕಾಲ್ಪನಿಕ ನಷ್ಟಗಳನ್ನು ಮಾತ್ರ ಹೇಳುತ್ತಿದ್ದಾರೆ. ಕೇಂದ್ರ ಹಂಚುವ ಪ್ರತಿ ರಾಜ್ಯದ ಪಾಲು ಆಯೋಗದಿಂದ ಆಯೋಗಕ್ಕೆ ವ್ಯತ್ಯಾಸವಾಗುತ್ತದೆ. ರಾಜ್ಯಗಳ ಮೇಲೆ ಬೀರುವ ಎಲ್ಲಾ ಅಂಶಗಳನ್ನು ಪರಿಗಣಿಸಿ ಆಯೋಗ ಶಿಫಾರಸ್ಸುಗಳನ್ನು ಮಾಡುತ್ತದೆ” ಎಂದು ಸ್ಪಷ್ಟಪಡಿಸಿದರು.
1″4ನೇ ಆಯೋಗದ ಐದು ವರ್ಷಗಳ ನಿಗದಿತ ಅವಧಿಯಲ್ಲಿ ಕರ್ನಾಟಕವು 1,51,309 ಕೋಟಿ ರೂ. ತೆರಿಗೆ ಹಂಚಿಕೆ ಪಡೆದಿದೆ ಪ್ರಸ್ತುತ 15 ನೇ ಹಣಕಾಸು ಅವಧಿಯ ಮೊದಲ ನಾಲ್ಕು ವರ್ಷಗಳಲ್ಲಿ, ಅಂದರೆ ಮಾರ್ಚ್, 2024 ರ ವೇಳೆಗೆ ಕರ್ನಾಟಕವು ಈಗಾಗಲೇ 1,29,854 ಕೋಟಿ ರೂ.ಗಳನ್ನು ಸ್ವೀಕರಿಸಿದೆ. ಭಾರತ ಸರ್ಕಾರವು ಮಧ್ಯಂತರ ಬಜೆಟ್‌ನಲ್ಲಿ 44,485 ಕೋಟಿ ರೂ.ಗಳನ್ನು ಮತ್ತಷ್ಟು ಬಿಡುಗಡೆ ಮಾಡಲು ಯೋಜಿಸಿದೆ. ಹಣಕಾಸು ವರ್ಷ 2024-25 ಸೇರಿ ಐದು ವರ್ಷಗಳಲ್ಲಿ ಒಟ್ಟು 1,74,339 ಕೋಟಿ ರೂಪಾಯಿ ಕರ್ನಾಟಕ ಪಡೆದಂತಾಗಲಿದೆ “ಎಂದು ಸ್ಪಷ್ಟಪಡಿಸಿದರು.
“ಕರ್ನಾಟಕವು 14ನೇ ಆಯೋಗದ ಅವಧಿಗಿಂತ 15ನೇ ಅವಧಿಯ ಮೊದಲ ಐದು ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚು ಮೊತ್ತವನ್ನು ಪಡೆದಿದೆ. ತನ್ನ ನಷ್ಟದ ಸುಳ್ಳು ಹೇಳಿಕೆಯನ್ನು ಬಲಗೊಳಿಸಲು ಕಾಂಗ್ರೆಸ್ ಸರಕಾರ ಯತ್ನಿಸುತ್ತಿದೆ.. ಕರ್ನಾಟಕ ಸರ್ಕಾರ ಮುಂದಿನ 2 ಹಣಕಾಸು ವರ್ಷಗಳ ಅಂದರೆ 2024-25 ಮತ್ತು 2025-26ರ ಕೊರತೆಗಳನ್ನು ಸಹ ಸೇರಿಸಿದೆ. 15ನೇ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ಮತ್ತೊಂದು ದಕ್ಷಿಣ ರಾಜ್ಯ ಕೇರಳವು ಕೂಡ ಆದಾಯ ಕೊರತೆ ಅನುದಾನವನ್ನು ಪಡೆದಿದೆ” ಎಂದು ಹೇಳಿದರು.
“ಇನ್ನೊಂದೆಡೆ, ಬಿಜೆಪಿ ಆಡಳಿತದ ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ಮತ್ತು ಬಿಹಾರ ಯಾವುದೇ ಆದಾಯ ಕೊರತೆ ಅನುದಾನವನ್ನು ಪಡೆದಿಲ್ಲ. ಯಾವುದೇ ಪ್ರದೇಶ ಅಥವಾ ಅಧಿಕಾರದಲ್ಲಿರುವ ಪಕ್ಷದ ವಿರುದ್ಧ ಕೇಂದ್ರ ಸರ್ಕಾರ ತಾರತಮ್ಯ ಮಾಡಿಲ್ಲ. 50 ವರ್ಷಗಳ ಬಡ್ಡಿ ರಹಿತ ಸಾಲವನ್ನು ಕಲ್ಪಿಸುವ ಯೋಜನೆಯನ್ನು ಕೇಂದ್ರ ತಂದಿದೆ. ಕರ್ನಾಟಕಕ್ಕೆ ಭಾರತ ಸರ್ಕಾರವು 6,280 ಕೋಟಿ ರೂ ಬಡ್ಡಿ ರಹಿತ ಸಾಲ ನೀಡಿದೆ. ಕರ್ನಾಟಕವು 15ನೇ ಹಣಕಾಸು ಅವಧಿಯಲ್ಲಿ ಇದುವರೆಗಿನ ವಿಪತ್ತು ನಿರ್ವಹಣೆಗೆ 6,196 ಕೋಟಿ ರೂಪಾಯಿ ಕೇಂದ್ರದಿಂದ ಪಡೆದುಕೊಂಡಿದೆ” ಎಂದು ವಿವರಿಸಿದರು. ಈ ಮೂಲಕ ಕರ್ನಾಟಕೆ ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಸಿದರು.
ತೆರಿಗೆ ನೀಡಿಲ್ಲ ಎಂದು ಜಾಹೀರಾತು ನೀಡಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದೆ. “ಜಾಹೀರಾತಿನಲ್ಲಿ ಸುಳ್ಳು ಮಾಹಿತಿಯನ್ನು ನೀಡಲಾಗಿದೆ. ಅನುದಾನವೇ ನೀಡಿಲ್ಲ ಎಂದು ಸುಳ್ಳು ಹೇಳಾಗುತ್ತಿದೆ. ವಿಶೇಷ ಅನುದಾನವನ್ನು ನೀಡಲು ಹಣಕಾಸು ಆಯೋಗ ಶಿಫಾರಸು ಮಾಡಿಲ್ಲ. ಅದಾಗ್ಯೂ ಅದನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
Published On - 6:10 pm, Wed, 7 February 24