ಬಿಹಾರದ ಮುಖ್ಯಮಂತ್ರಿಯಾಗಿ ಇಂದು ನಿತೀಶ್ ಕುಮಾರ್​​ ಪ್ರಮಾಣವಚನ ಸ್ವೀಕಾರ; ತೇಜಸ್ವಿ ಯಾದವ್​ಗೆ ಡಿಸಿಎಂ ಪಟ್ಟ

| Updated By: ಸುಷ್ಮಾ ಚಕ್ರೆ

Updated on: Aug 10, 2022 | 8:41 AM

Bihar Politics: ಇಂದು ಮಧ್ಯಾಹ್ನ 2 ಗಂಟೆಗೆ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆರ್​​ಜೆಡಿ ನಾಯಕ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಬಿಹಾರದ ಮುಖ್ಯಮಂತ್ರಿಯಾಗಿ ಇಂದು ನಿತೀಶ್ ಕುಮಾರ್​​ ಪ್ರಮಾಣವಚನ ಸ್ವೀಕಾರ; ತೇಜಸ್ವಿ ಯಾದವ್​ಗೆ ಡಿಸಿಎಂ ಪಟ್ಟ
ನಿತೀಶ್ ಕುಮಾರ್- ತೇಜಸ್ವಿ ಯಾದವ್
Follow us on

ಪಾಟ್ನಾ: ಬಿಜೆಪಿ ಜೊತೆಗಿನ ಮೈತ್ರಿಯನ್ನು ಮುರಿದುಕೊಂಡು ಬಿಹಾರದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿತೀಶ್ ಕುಮಾರ್ (Nitish Kumar) ವಿಪಕ್ಷಗಳ ಜೊತೆ ಮಹಾಮೈತ್ರಿಯನ್ನು ಘೋಷಿಸಿದ್ದರು. ಇಂದು ಮತ್ತೆ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆರ್​​ಜೆಡಿ ನಾಯಕ ತೇಜಸ್ವಿ ಯಾದವ್ (Tejaswi Yadav) ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

  1. ಇಂದು ನಿತೀಶ್ ಕುಮಾರ್ 8ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದು ಬೇರೆ ಯಾವುದೇ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಎಂದು ತಿಳಿದುಬಂದಿದೆ.
  2. 7 ಪಕ್ಷಗಳ ಮಹಾಘಟಬಂಧನ್ (ಮಹಾಮೈತ್ರಿಕೂಟ) ಹಾಗೂ ಒಬ್ಬ ಪಕ್ಷೇತರರು ನಮಗೆ ಬೆಂಬಲ ನೀಡಲಿದ್ದಾರೆ ಎಂದು ನಿತೀಶ್ ಕುಮಾರ್ ನಿನ್ನೆ ರಾಜ್ಯಪಾಲರೊಂದಿಗಿನ ಎರಡನೇ ಸಭೆಯ ನಂತರ ಹೇಳಿದ್ದರು. ಮೊದಲನೆಯ ಸಭೆಯಲ್ಲಿ ಅವರು ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಮೂಲಕ ಜೆಡಿಯು ಮತ್ತು ಬಿಜೆಪಿ ಮೈತ್ರಿಗೆ ತಿಲಾಂಜಲಿ ಇಟ್ಟಿದ್ದರು. ಅದಾದ ಒಂದು ಗಂಟೆಯ ನಂತರ ಅವರು ತೇಜಸ್ವಿ ಯಾದವ್ ಮತ್ತು ಇತರ ವಿರೋಧ ಪಕ್ಷದ ನಾಯಕರೊಂದಿಗೆ ರಾಜ್ಯಪಾಲರ ಬಳಿಗೆ ತೆರಳಿ, ತಮ್ಮ ಒಟ್ಟು ಬಲದ ಆಧಾರದ ಮೇಲೆ ಮುಂದಿನ ಸರ್ಕಾರವನ್ನು ರಚಿಸಲು ಅವಕಾಶ ನೀಡಬೇಕು ಎಂದು ಕೇಳಿದ್ದರು.
  3. “ನಾನು ರಾಜೀನಾಮೆ ನೀಡಿದ್ದೇನೆ, ಈ ವಿಷಯವನ್ನು ನನ್ನ ಎಲ್ಲಾ ಶಾಸಕರಿಗೆ ತಿಳಿಸಿದ್ದೇನೆ” ಎಂದು ನಿತೀಶ್ ಕುಮಾರ್ ರಾಜ್ಯಪಾಲರೊಂದಿಗಿನ ಮೊದಲ ಸಭೆಯ ನಂತರ ಹೇಳಿದ್ದರು. 9 ವರ್ಷಗಳಲ್ಲಿ ಎರಡನೇ ಬಾರಿಗೆ ಬಿಜೆಪಿಯಿಂದ ಬೇರ್ಪಡುವ ನಿರ್ಧಾರವನ್ನು ಮಾಡಿದ್ದೇನೆ. ಶಾಸಕರೊಂದಿಗಿನ ಸಭೆಯ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಹೇಳಿದ್ದರು.
  4. 32 ವರ್ಷದ ತೇಜಸ್ವಿ ಯಾದವ್ ಕೂಡ ತಮ್ಮ ಶಾಸಕರೊಂದಿಗೆ ಸಭೆ ನಡೆಸಿದರು. ಅಲ್ಲಿ ಅವರು ಹೊಸ ಸರ್ಕಾರದಲ್ಲಿ ನಿತೀಶ್ ಕುಮಾರ್ ಅವರನ್ನು ಬೆಂಬಲಿಸಲು ಒಮ್ಮತ ವ್ಯಕ್ತವಾಯಿತು. ತೇಜಸ್ವಿ ಯಾದವ್ ಅವರು ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲಿದ್ದಾರೆ. ನಿತೀಶ್ ಕುಮಾರ್ ಅವರೊಂದಿಗೆ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಿಜೆಪಿ ತನ್ನ ಎಲ್ಲಾ ಮಿತ್ರಪಕ್ಷಗಳಿಗೆ ದ್ರೋಹ ಮಾಡುತ್ತದೆ ಎಂದು ನಿತೀಶ್ ಕುಮಾರ್ ಅವರೊಂದಿಗಿನ ಸುದ್ದಿಗೋಷ್ಠಿಯಲ್ಲಿ ತೇಜಸ್ವಿ ಯಾದವ್ ಹೇಳಿದ್ದರು.
  5. ಇದನ್ನೂ ಓದಿ
    ವಿಮಾನದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ; ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಬ್ಬರು ಶಂಕಿತರು ವಶಕ್ಕೆ
    Breaking News: ಶ್ರೀಕಾಂತ್ ತ್ಯಾಗಿಯನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸರು
    Maharashtra Cabinet: ಮಹಾರಾಷ್ಟ್ರದ ನೂತನ ಸಚಿವರಾಗಿ ಬಿಜೆಪಿ, ಶಿವಸೇನೆಯ 18 ಶಾಸಕರಿಂದ ಪ್ರಮಾಣವಚನ ಸ್ವೀಕಾರ
    Nitish Kumar: ಶಮನವಾಗದ ಭಿನ್ನಮತ; ಬಿಹಾರ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ, ಇಂದು ನಿತೀಶ್​ಕುಮಾರ್ ಮಹತ್ವದ ಸಭೆ
  6. ಸರ್ಕಾರ ರಚಿಸಿದ ಬಳಿಕ ಮಧ್ಯದಲ್ಲೇ ಪಾಲುದಾರರನ್ನು ಬದಲಾಯಿಸುವ ಮೂಲಕ ನಿತೀಶ್ ಕುಮಾರ್ ಜನರ ಆದೇಶಕ್ಕೆ ದ್ರೋಹ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
  7. 2013ರವರೆಗೆ ನಿತೀಶ್ ಕುಮಾರ್ ಅವರು ಬಿಜೆಪಿಯ ಜೊತೆ ಮೈತ್ರಿಯಲ್ಲಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಪ್ರಮುಖ ನಾಯಕರಾಗಿ ಹೊರಹೊಮ್ಮುತ್ತಾರೆ ಎಂಬುದು ಸ್ಪಷ್ಟವಾಯಿತು. ಇದಾದ ಬಳಿಕ ಅವರು 2015ರಲ್ಲಿ ಲಾಲು ಪ್ರಸಾದ್ ಯಾದವ್ ಮತ್ತು ಕಾಂಗ್ರೆಸ್‌ನೊಂದಿಗೆ ಸರ್ಕಾರ ರಚಿಸಿದರು. ಬಿಹಾರದ ಹಿರಿಯ ರಾಜಕಾರಣಿ ಲಾಲು ಪ್ರಸಾದ್ ಯಾದವ್ ತೇಜಸ್ವಿ ಯಾದವ್ ಅವರ ತಂದೆ. 2017ರಲ್ಲಿ ನಿತೀಶ್ ಕುಮಾರ್ ಅವರು ತೇಜಸ್ವಿ ಯಾದವ್ ಸಚಿವರಾಗಿ ಮಾಡಿದ ಭ್ರಷ್ಟಾಚಾರವನ್ನು ಸಹಿಸಲಾಗಲಿಲ್ಲ ಎಂದು ಹೇಳಿಕೊಂಡು 3 ಪಕ್ಷಗಳ ಮೈತ್ರಿಯಿಂದ ಹೊರಬಂದಿದ್ದರು.
  8. ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ಮತ್ತೆ ಮೈತ್ರಿ ಮಾಡಿಕೊಂಡ ನಂತರ ಮತ್ತೆ ಟಈಕೆಗಳು ವ್ಯಕ್ತವಾದವು. ಜೂನ್‌ನಲ್ಲಿ ನಿತೀಶ್ ಕುಮಾರ್ ಅವರು ಕೇಂದ್ರ ಸರ್ಕಾರವು ಜಾತಿ ಗಣತಿಯನ್ನು ನಡೆಸಲು ನಿರಾಕರಿಸಿದರೆ ಬಿಹಾರದಲ್ಲಿ ಜಾತಿಗಳ ಎಣಿಕೆ ನಡೆದೇ ನಡೆಯುತ್ತದೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡಿದ್ದರು. ತೇಜಸ್ವಿ ಯಾದವ್ ನಿತೀಶ್ ಕುಮಾರ್ ಅವರ ಈ ನಡೆಯನ್ನು ಸಂಪೂರ್ಣವಾಗಿ ಬೆಂಬಲಿಸಿದ್ದರು.
  9. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜೆಡಿಯು ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪವನ್ನು ನಿತೀಶ್ ಕುಮಾರ್ ಮಾಡಿದ್ದರು. ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿರುವ ತಮ್ಮ ಪಕ್ಷದ ಹಿರಿಯ ನಾಯಕ ಆರ್‌ಸಿಪಿ ಸಿಂಗ್ ಅವರನ್ನು ಜೆಡಿಯು ತನ್ನ ವಿರುದ್ಧ ತಿರುಗಿಸಲು ಬಳಸಿಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಆರೋಪಿಸಿದ್ದರು. ಆದ್ದರಿಂದ ಅವರು ರಾಜ್ಯಸಭೆಯಲ್ಲಿ ಆರ್‌ಸಿಪಿ ಸಿಂಗ್ ಅವರ ಅವಧಿಯನ್ನು ವಿಸ್ತರಿಸಲು ನಿರಾಕರಿಸಿದರು. ನಿತೀಶ್ ಕುಮಾರ್ ಅವರ ಸಹಾಯಕರು ಸಾರ್ವಜನಿಕವಾಗಿ ಆರ್​ಸಿಪಿ ಸಿಂಗ್ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರು.
  10. ಅಮಿತ್ ಶಾ ಬಿಹಾರದಲ್ಲಿ ಮಹಾರಾಷ್ಟ್ರ ಮಾದರಿಯ ಪುನರಾವರ್ತನೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ನಿತೀಶ್ ಕುಮಾರ್ ಆರೋಪಿಸಿದ್ದರು. ಅದಾದ ಬಳಿಕ ಅವರು ಬಿಜೆಪಿ ಜೊತೆಗಿನ ಮೈತ್ರಿಯನ್ನು ಮುರಿದುಕೊಂಡರು.
  11. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ತಮ್ಮ ಪಕ್ಷವಾದ ಶಿವಸೇನೆಯ ಹಿರಿಯ ನಾಯಕರಾದ ಏಕನಾಥ್ ಶಿಂಧೆ ಅವರು ಬಿಜೆಪಿಯ ಬೆಂಬಲದಿಂದ ಬಂಡಾಯವೆದ್ದ ಬಳಿಕ ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಬೇಕಾಯಿತು. ನಂತರ ಏಕನಾಥ್ ಶಿಂಧೆ ಅವರಿಗೆ ಬಿಜೆಪಿ ಮಹಾರಾಷ್ಟ್ರ ಮುಖ್ಯಮಂತ್ರಿ ಹುದ್ದೆಯನ್ನು ನೀಡಿತ್ತು. ಅದೇ ರೀತಿಯಲ್ಲಿ ಬಿಹಾರದಲ್ಲೂ ಬಿಜೆಪಿ ಗೇಮ್ ಪ್ಲಾನ್ ಮಾಡಲು ಯೋಚಿಸುತ್ತಿದೆ ಎಂಬ ಅನುಮಾನ ನಿತೀಶ್​ ಕುಮಾರ್​​ಗೆ ಉಂಟಾಗಿತ್ತು.

Published On - 8:38 am, Wed, 10 August 22