Nitish Kumar: ನಿತೀಶ್ ಕುಮಾರ್ಗೆ ಪ್ರಧಾನಿ ಗಾದಿಯ ಕನಸು; ‘ಪಲ್ಟಿ ರಾಮ’ನ ನಂಬಲು ಪ್ರತಿಪಕ್ಷಗಳಿಗೆ ಭಯ
Paltu Ram: ನಿತೀಶ್ ಕುಮಾರ್ ಅವರನ್ನು ಮೊದಲ ಬಾರಿಗೆ ‘ಪಲ್ಟಿ ರಾಮ’ ಎಂದು ಕರೆದವರು ಆರ್ಜೆಡಿ ನಾಯಕ ತೇಜಸ್ವಿ ಯಾದವ್.
ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಬಿಜೆಪಿಯೊಂದಿಗೆ (BJP) ಮೈತ್ರಿ ಕಡಿದುಕೊಂಡು ಮತ್ತೆ ರಾಷ್ಟ್ರೀಯ ಜನತಾ ದಳದೊಂದಿಗೆ (Rashtriya Janata Dal – RJD) ಕೈಜೋಡಿಸಿದ್ದಾರೆ. ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಈ ಚಾಣಾಕ್ಷ ರಾಜಕಾರಿಣಿ ಭಾವುಕರಾಗಿ ಅಥವಾ ಇದ್ದಕ್ಕಿದ್ದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳುವವರಲ್ಲ. ಭವಿಷ್ಯದ ರಾಜಕೀಯ ವಿದ್ಯಮಾನಗಳನ್ನು ಕರಾರುವಕ್ಕಾಗಿ ಲೆಕ್ಕಹಾಕಿ, ಮುಂದಿನ ನಡೆ ನಿರ್ಧರಿಸುವ ಅಪರೂಪದ ಚಾಣಕ್ಯ ಎಂದೇ ನಿತೀಶ್ ಅವರ ಬಗ್ಗೆ ರಾಜಕೀಯ ವಲಯಗಳಲ್ಲಿ ಮಾತಿದೆ. ಬಿಜೆಪಿಯೊಂದಿಗೆ ಮೈತ್ರಿಮಾಡಿಕೊಂಡು ಅಧಿಕಾರ ಅನುಭವಿಸಿದ್ದ ನಿತೀಶ್ ಅವರಿಗೆ ಪ್ರಧಾನಿ ಹುದ್ದೆಯ ಕನಸು ಸದಾ ಕಾಡುತ್ತಿತ್ತು. ಮುಂದಿನ ಅವಧಿಗೆ ಅಂದರೆ 2024ರ ಲೋಕಸಭಾ ಚುನಾವಣೆಯನ್ನು ನರೇಂದ್ರ ಮೋದಿ ನಾಯಕತ್ವದಲ್ಲಿಯೇ ಎದುರಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ನಂತರ ಬಿಜೆಪಿಯೊಂದಿಗೆ ಸಂಬಂಧ ಕಡಿದುಕೊಳ್ಳುವ ನಿರ್ಧಾರವನ್ನು ನಿತೀಶ್ ಗಟ್ಟಿ ಮಾಡಿಕೊಂಡರು. ಅದಕ್ಕೆ ಪೂರಕವಾಗಿ ಹತ್ತಾರು ನೆಪಗಳೂ ಒದಗಿಬಂದವು.
ನಿನ್ನೆಯಷ್ಟೇ ಬಿಜೆಪಿಯೊಂದಿಗೆ ಮೈತ್ರಿ ಕಡಿದುಕೊಂಡ ನಿತೀಶ್ ಅವರ ಹೆಸರನ್ನು ಈಗಾಗಲೇ ಪ್ರಧಾನಿ ಹುದ್ದೆಗೆ ತೇಲಿಬಿಡಲಾಗಿದೆ. ಆದರೆ ವಿರೋಧ ಪಕ್ಷಗಳು ನಿತೀಶ್ ಅವರ ನಿಲುವಿನ ಮೇಲೆ ವಿಶ್ವಾಸ ಇರಿಸಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ರಾಜಕಾರಣದಲ್ಲಿ ‘ಪಲ್ಟಿರಾಮ’ ಎಂದೇ ಹೆಸರಾಗಿರುವ ಅವರು, ಯಾವಾಗ ಹೇಗೆ ತಿರುಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ತಮ್ಮ ಹಿತಾಸಕ್ತಿ ಮತ್ತು ಅಧಿಕಾರ ರಕ್ಷಣೆಗೆ ಮಿಗಿಲಾದದ್ದು ನಿತೀಶ್ ಅವರಿಗೆ ಯಾವುದೂ ಇಲ್ಲ. ಹೀಗಾಗಿ ಪ್ರಧಾನಿಯಾಗಬೇಕು ಎನ್ನುವ ಅವರ ಕನಸಿಗೆ ಪ್ರತಿಪಕ್ಷಗಳು ಒಗ್ಗೂಡಿ ನೀರೆರೆಯಬಹುದು ಎಂದು ಹೇಳಲು ಆಗುವುದಿಲ್ಲ. ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಹಲವು ನಾಯಕರು ಈಗಾಗಲೇ ಪ್ರತಿಪಕ್ಷಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಈ ಪೈಕಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತೆಲಂಗಾಣ ಮುಖ್ಯಮಂತ್ರಿ ಮತ್ತು ಟಿಆರ್ಎಸ್ ನಾಯಕ ಕೆ.ಚಂದ್ರಶೇಖರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ಹೆಸರುಗಳು ಮುಖ್ಯವಾಗಿ ಪ್ರಸ್ತಾಪವಾಗುತ್ತಿವೆ.
‘ದೇಶದಲ್ಲಿರುವ ಇಂದಿನ ರಾಜಕಾರಿಣಿಗಳ ವ್ಯಕ್ತಿತ್ವ ಗಮನಿಸಿದರೆ ನಿತೀಶ್ ಕುಮಾರ್ ಅವರಿಗೆ ಖಂಡಿತವಾಗಿಯೂ ಪ್ರಧಾನಿಯಾಗುವ ಅರ್ಹತೆ ಇದೆ. ನಾವು ಇಂದು ಯಾವುದೇ ಹಕ್ಕು ಮಂಡಿಸುತ್ತಿಲ್ಲ. ಆದರೆ ಅವರಿಗೆ ಪ್ರಧಾನಿ ಹುದ್ದೆ ಅಲಂಕರಿಸಲು ಬೇಕಿರುವ ಎಲ್ಲ ಗುಣಗಳು ಇವೆ ಎಂದಷ್ಟೇ ಹೇಳುತ್ತಿದ್ದೇವೆ’ ಎಂದು ಸಂಯುಕ್ತ ಜನತಾ ದಳದ (Janata Dal U – JDU) ಸಂಸದೀಯ ಪಕ್ಷದ ನಾಯಕ ಉಪೇಂದ್ರ ಕುಶ್ವಾಹ ಹೇಳಿದ್ದರು. ಮೈತ್ರಿಯ ಸಾಧ್ಯತೆ ಅಂತಿಮಗೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ (Rashtriya Janata Dal – RJD) ನಾಯಕ ಶರದ್ ಯಾದವ್, ‘ನಿತೀಶ್ ಕುಮಾರ್ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಬಹುದು’ ಎಂದು ಹೇಳಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ಪಾಟ್ನಾದ ರಾಜಭವನದಲ್ಲಿ ಮಾಧ್ಯಮ ಪ್ರತಿನಿಧಿಗಳು ಪ್ರಧಾನಿ ಸ್ಥಾನದ ಆಕಾಂಕ್ಷೆಯ ಬಗ್ಗೆ ಕೇಳಿದ ಪ್ರಶ್ನೆಗೆ ನಿತೀಶ್ ಕುಮಾರ್ ಉತ್ತರಿಸಲಿಲ್ಲ. ಆದರೆ ಆ ಆಸೆ ತಮಗಿರುವುದನ್ನು ಅವರು ನಿರಾಕರಿಸಲೂ ಇಲ್ಲ.
ಬಿಹಾರದ ‘ಪಲ್ಟಿ ರಾಮ’
ನಿತೀಶ್ ಕುಮಾರ್ ಅವರು 2005ರಲ್ಲಿ ಮೊದಲ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆಗ ಬಿಜೆಪಿ ನಿತೀಶ್ ಕುಮಾರ್ ಮಿತ್ರಪಕ್ಷವಾಗಿತ್ತು. ಬಿಹಾರದಲ್ಲಿ ಆರ್ಜೆಡಿ ಪ್ರಬಲವಾಗಿತ್ತು. ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬದ ಆಡಳಿತದಿಂದ ಬಿಹಾರದಲ್ಲಿ ‘ಜಂಗಲ್ ರಾಜ್’ ಸ್ಥಾಪನೆಯಾಗಿದೆ ಎಂದು ನಿತೀಶ್ ಚುನಾವಣೆ ಪ್ರಚಾರದಲ್ಲಿ ಜನರ ಗಮನ ಸೆಳೆದಿದ್ದರು. ಆದರೆ 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಬಿಜೆಪಿ ನರೇಂದ್ರ ಮೋದಿ ಅವರ ಹೆಸರು ಘೋಷಿಸಿದ ನಂತರ ನಿತೀಶ್ ಬಿಜೆಪಿಯಿಂದ ದೂರವಾದರು. 2015ರಲ್ಲಿ ಆರ್ಜೆಡಿ ಮತ್ತು ಕಾಂಗ್ರೆಸ್ನೊಂದಿಗೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರು. ಆರ್ಜೆಡಿ ಮೇಲೆ ಆಡಳಿತದಲ್ಲಿ ಹಸ್ತಕ್ಷೇಪ ಮತ್ತು ಭ್ರಷ್ಟಾಚಾರದ ಆರೋಪ ಮಾಡಿ 2017ರಲ್ಲಿ ಮೈತ್ರಿ ಕಡಿದುಕೊಂಡರು.
ನಿತೀಶ್ ಕುಮಾರ್ ಅವರನ್ನು ಮೊದಲ ಬಾರಿಗೆ ‘ಪಲ್ಟಿ ರಾಮ’ ಎಂದು ಕರೆದವರು ಆರ್ಜೆಡಿ ನಾಯಕ ತೇಜಸ್ವಿ ಯಾದವ್. ಆರ್ಜೆಡಿ ಮತ್ತು ಕಾಂಗ್ರೆಸ್ನೊಂದಿಗೆ ‘ಮಹಾಮೈತ್ರಿ’ ಮಾಡಿಕೊಂಡು ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಎದುರಿಸಿದ್ದ ಜೆಡಿಯು ನಾಯಕ ನಿತೀಶ್ ಕುಮಾರ್ 2017ರಲ್ಲಿ ಮಹಾಮೈತ್ರಿಯಿಂದ ಹೊರಬಂದು, ಬಿಜೆಪಿಯೊಂದಿಗೆ ಕೈಜೋಡಿಸಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ತೇಜಸ್ವಿ ಯಾದವ್, ‘ಪಲ್ಟಿ ರಾಮ ಯಾವಾಗ ಏನು ಮಾಡುತ್ತಾರೆ ಎಂದು ಹೇಳಲು ಅಗುವುದಿಲ್ಲ’ ಎಂದು ವ್ಯಂಗ್ಯವಾಡಿದ್ದರು.
ಅಕ್ಟೋಬರ್ 2019ರಲ್ಲಿ ನಿತೀಶ್ ಕುಮಾರ್ ಅವರನ್ನು ತೇಜಸ್ವಿ ಯಾದವ್ ‘ಸಮಯಕ್ಕೆ ತಕ್ಕಂತೆ ಬಣ್ಣ ಬದಲಿಸುವ ಗೂಸುಂಬೆ’ ಎಂದು ಮೂದಲಿಸಿದ್ದರು. ಭವಿಷ್ಯದಲ್ಲಿ ಎಂದಿಗೂ ನಿತೀಶ್ ಜೊತೆಗೆ ಮೈತ್ರಿ ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಘೋಷಿಸಿದ್ದರು. ಆದರೆ ಈಗ ಮತ್ತೆ ನಿತೀಶ್ ಅವರ ಜೊತೆಗೆ ಕೈಜೋಡಿಸಿದ್ದಾರೆ.
ನಿತೀಶ್ ನಿರ್ಧಾರಕ್ಕೆ ಪ್ರತಿಪಕ್ಷಗಳ ಸ್ವಾಗತ
ಸಂಸತ್ತಿಗೆ 40 ಸಂಸದರನ್ನು ಆಯ್ಕೆ ಮಾಡುವ ಬಿಹಾರ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ. ಇತ್ತೀಚಿನ ದಿನಗಳಲ್ಲಿ ಹಿಂದಿ ಭಾಷಿಕ ಪ್ರದೇಶಗಳಲ್ಲಿ ಬಿಜೆಪಿಯ ಪ್ರಭಾವ ವ್ಯಾಪಕ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಕಡಿದುಕೊಳ್ಳುವ ನಿತೀಶ್ ಕುಮಾರ್ ಅವರ ನಿರ್ಧಾರದ ಸಂಭಾವ್ಯ ಪರಿಣಾಮಗಳ ಬಗ್ಗೆ ಚರ್ಚೆ ಆರಂಭವಾಗಿದೆ. ಎಡಪಕ್ಷಗಳು ಮತ್ತು ಬಹುತೇಕ ಎಲ್ಲ ಪ್ರತಿಪಕ್ಷಗಳು ನಿತೀಶ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಅದರೆ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ನಿತೀಶ್ ಅವರನ್ನು ಒಪ್ಪಿಕೊಂಡು ಈವರೆಗೆ ಯಾವುದೇ ನಾಯಕ ಹೇಳಿಕೆ ನೀಡಿಲ್ಲ.
ಮತ್ತಷ್ಟು ರಾಜಕೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:00 am, Wed, 10 August 22