ಅವರು ನೂರು ಸಲ ಸುಳ್ಳು ಹೇಳುವಾಗ ನಾವು ನಾಲ್ಕು ಸಲ ಸತ್ಯ ಹೇಳಬೇಡವೇ: ಆರ್ಎಸ್ಎಸ್ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ
ಹಿಂದೂ ಮಹಾಸಭಾ, ಬಜರಂಗದಳ ಎಲ್ಲವೂ ಬೇರೆ ಮುಖವಿಟ್ಟುಕೊಂಡ ಒಂದೇ ಗಿರಾಕಿಗಳು. ರಾಜಕೀಯ, ಆರ್ಥಿಕ, ಸಾಮಾಜಿಕ ಅಸಮಾನತೆಗೆ ಇವರೇ ಕಾರಣ: ಸಿದ್ದರಾಮಯ್ಯ
ಬೆಂಗಳೂರು: ಭಾರತೀಯ ಜನತಾ ಪಕ್ಷದವರು ಬ್ರಿಟಿಷರಿಗೆ ಗುಲಾಮರಾಗಿದ್ದವರು. 1925ರಲ್ಲಿ ಅಂದರೆ ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಸ್ಥಾಪನೆಯಾಗಿತ್ತು. ಆರ್ಎಸ್ಎಸ್ನ ರಾಜಕೀಯ ಮುಖವಾಗಿ ಜನಸಂಘ ಹುಟ್ಟಿಕೊಂಡಿತು. ಈಗ ಬಿಜೆಪಿಯವರು ‘ಘರ್ ಘರ್ ತಿರಂಗ’ ಎಂದು ಮಾಡ್ತಿದ್ದಾರೆ. ಆದರೆ ಅದೇ ಸಂಘಟನೆಯ ಮುಖ್ಯಸ್ಥರಾಗಿದ್ದ ಗೋಲ್ವಾಲ್ಕರ್, ಹಿಂದುತ್ವವಾದಿ ನಾಯಕ ಸಾವರ್ಕರ್ ತ್ರಿವರ್ಣ ಧ್ವಜವನ್ನು ವಿರೋಧಿಸಿದ್ದರು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಕ್ವಿಟ್ ಇಂಡಿಯಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ ಕಚೇರಿಯಲ್ಲಿ 50 ವರ್ಷಗಳಿಂದ ತ್ರಿವರ್ಣ ಧ್ವಜ ಹಾರಿಸಿರಲಿಲ್ಲ. ಮೊದಲಿನಿಂದಲೂ ನಾವು ಎಬಿವಿಪಿ ವಿರೋಧಿಸಿಕೊಂಡೇ ಬಂದಿದ್ದೇವೆ. ಆರ್ಎಸ್ಎಸ್ ಎನ್ನುವುದು ಮೇಲ್ಜಾತಿಯವರ ಅಸೋಸಿಯೇಷನ್ ಅಷ್ಟೇ. ಚಾತುರ್ವರ್ಣ, ಶ್ರೇಣೀಕೃತ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡವರ ಸಂಘಟನೆ ಅದು. ಶ್ರೇಣೀಕೃತ ವ್ಯವಸ್ಥೆಯಿಂದ ಅಸಮಾನತೆ ಮುಂದುವರಿಯುತ್ತದೆ. ಅಸಮಾನತೆ ಗುಲಾಮಗಿರಿಗೆ ಕಾರಣವಾಗುತ್ತದೆ. ಹಿಂದೂ ಮಹಾಸಭಾ, ಬಜರಂಗದಳ ಎಲ್ಲವೂ ಬೇರೆ ಮುಖವಿಟ್ಟುಕೊಂಡ ಒಂದೇ ಗಿರಾಕಿಗಳು. ರಾಜಕೀಯ, ಆರ್ಥಿಕ, ಸಾಮಾಜಿಕ ಅಸಮಾನತೆಗೆ ಇವರೇ ಕಾರಣ ಎಂದು ದೂರಿದರು.
ರಾಷ್ಟ್ರಧ್ವಜ, ಸಂವಿಧಾನ, ರಾಷ್ಟ್ರಗೀತೆಯನ್ನೇ ವಿರೋಧಿಸುವವರಿಗೆ ದೇಶಭಕ್ತಿ ಹೇಗೆ ಬರಲು ಸಾಧ್ಯ? ಈಗ ನಾಟಕ ಆಡೋಕೆ ಶುರು ಮಾಡಿದ್ದಾರೆ. ‘ಹರ್ ಘರ್ ತಿರಂಗಾ’ ಎನ್ನುವುದು ಒಂದು ನಾಟಕ. ಕಾಂಗ್ರೆಸ್ ಇದನ್ನು ಎಕ್ಸಪೋಸ್ ಮಾಡಬೇಕು ಎಂದು ಸಲಹೆ ಮಾಡಿದರು. ಸ್ವಾತಂತ್ರ್ಯ ಬಂದು 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಪಾದಯಾತ್ರೆ ಹಮ್ಮಿಕೊಂಡಿದೆ. ರಾಜ್ಯದಲ್ಲಿ 15ರಂದು ಪಾದಯಾತ್ರೆ ಆಯೋಜಿಸಲಾಗಿದೆ. ಇದರಲ್ಲಿ ಕನಿಷ್ಟ 1 ಲಕ್ಷ ಜನ ಭಾಗವಹಿಸಬೇಕು ಎಂದು ಅಗತ್ಯ ಸಿದ್ಧತೆ ಮಾಡಲಾಗುತ್ತಿದೆ. ಇದೊಂದು ಐತಿಹಾಸಿಕ ನಡಿಗೆಯಾಗಬೇಕು. ರೈಲು ನಿಲ್ದಾಣದ ಬಳಿಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ನ್ಯಾಷನಲ್ ಕಾಲೇಜ್ ಮೈದಾನದ ವರೆಗೆ ಪಾದಯಾತ್ರೆ ಮಾಡಲಾಗುತ್ತದೆ. ನಾನು ಈಗಾಗಲೇ ಚಾಮುಂಡೇಶ್ವರಿ, ಚಿಂತಾಮಣಿ, ಕೋಲಾರ, ಮಾಲೂರಲ್ಲಿ ಪಾದಯಾತ್ರೆ ನಡೆಸಿದ್ದೇನೆ. ನಾಳೆ ಬಾಗಲಕೋಟೆಗೆ ಹೋಗುತ್ತೇನೆ. ಕೆಲವು ಕಡೆ ಮಳೆ ಹೆಚ್ಚಿರುವುದರಿಂದ ಈ ತಿಂಗಳ 31 ರ ವರೆಗೆ ಪಾದಯಾತ್ರೆ ವಿಸ್ತರಣೆ ಮಾಡಲಾಗಿದೆ ಎಂದರು.
ಕ್ವಿಟ್ ಇಂಡಿಯಾ ದಿನಾಚರಣೆ, ಕೆಪಿಸಿಸಿ ಕಚೇರಿ. https://t.co/XRCHfk8Lxx
— Karnataka Congress (@INCKarnataka) August 9, 2022
ಸ್ವಾತಂತ್ರ್ಯದ ಗಾಳಿಯನ್ನು ಇಂದು ದೇಶದಲ್ಲಿ ಜನರು ಉಸಿರಾಡುತ್ತಿದ್ದರೆ ಅದಕ್ಕೆ ಕಾಂಗ್ರೆಸ್ ಪಕ್ಷ ನಡೆಸಿದ ಹೋರಾಟವೇ ಕಾರಣ. ಬ್ರಿಟಿಷರಿಗೆ ಮುಚ್ಚಳಕ್ಕೆ ಬರೆದುಕೊಟ್ಟಿದ್ದ ಸಾವರ್ಕರ್ ಅವರನ್ನು ಬಿಜೆಪಿಯವರು ‘ವೀರ ಸಾವರ್ಕರ್’ ಎನ್ನುತ್ತಿದ್ದಾರೆ. ನಾನು ಸ್ವಾತಂತ್ರ್ಯ ಬರಲು 12 ದಿನ ಮೊದಲೇ ಹುಟ್ಟಿದ್ದೆ. ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ ನರೇಂದ್ರ ಮೋದಿ ನಮಗೆ ಸ್ವಾತಂತ್ರ್ಯದ ಪಾಠ ಹೇಳಿಕೊಡುತ್ತಿದ್ದಾರೆ. ತೋಳ-ಕುರಿಮರಿಯ ಕಥೆಯಾಗಿದೆ ಇವರದು ಎಂದು ವ್ಯಂಗ್ಯವಾಡಿದರು.
ಬಿಜೆಪಿಯವರದ್ದು ನಾಟಕವಷ್ಟೇ. ನರೇಂದ್ರ ಮೋದಿ ದೊಡ್ಡ ನಾಟಕಕಾರ. ನಾವು ಇಂದು ನಕಲಿ ದೇಶಭಕ್ತರ ಬಾಯಿಮುಚ್ಚಿಸಬೇಕಿದೆ. ಸಂವಿಧಾನದ ಬಗ್ಗೆ ಗೌರವ ಇಲ್ಲದವರ ಕೈಗೆ ದೇಶ ಕೊಟ್ಟು ಕೂತಿದ್ದೇವೆ. ಈಗ ನಾವೆಲ್ಲರೂ ಚಳಿ ಬಿಟ್ಟು ಎಲ್ಲ ಎದ್ದು ನಿಲ್ಲಬೇಕು. ಜನರಿಗೆ ಸತ್ಯ ತಿಳಿಸಬೇಕು. ಅವರು ಸುಳ್ಳು ನೂರು ಸಲ ಹೇಳುವಾಗ ನಾವು ಸತ್ಯವನ್ನು ನಾಲ್ಕೈದು ಸಲವಾದರೂ ಹೇಳಬೇಕು ಎಂದರು. ನೆಹರೂ 11 ವರ್ಷ ಜೈಲಿನಲ್ಲಿದ್ದರು. ಗೋಲ್ವಾಲ್ಕರ್ ಎಂದಾದರೂ ಜೈಲಿಗೆ ಹೋಗಿದ್ರಾ? ಆದ್ದರಿಂದಲೇ ನಾವು ಭಕ್ತಿ-ಶ್ರದ್ಧೆಯಿಂದ ಕ್ವಿಟ್ ಇಂಡಿಯಾ ಚಳವಳಿ ಹೋರಾಟಗಾರರನ್ನು ನೆನಸಿಕೊಳ್ಳುತ್ತಿದ್ದೇವೆ ಎಂದರು.
ಡಿಕೆಶಿ ಡ್ಯಾಮೇಜ್ ಕಂಟ್ರೋಲ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಆಡಳಿತ ಅವಧಿಯಲ್ಲಿ ದೇಶಕ್ಕೆ ಹಲವು ಉತ್ತಮ ಕಾರ್ಯಕ್ರಮಗಳನ್ನು ನೀಡಲಾಗಿದೆ. ನಮ್ಮ ಸರ್ಕಾರ ಬಡವರಿಗೆ ಮತ್ತು ಕೈಗಾರಿಕೆಗಳಿಗೆ ಭೂಮಿ ಕೊಟ್ಟಿದೆ. ಬ್ಯಾಂಕ್ಗಳನ್ನು ಸದೃಢಗೊಳಿಸಿದೆ. ಪರೋಕ್ಷವಾಗಿ ರಮೇಶ್ ಕುಮಾರ್ ಹೇಳಿಕೆ ಪ್ರಸ್ತಾಪಿಸಿದ ಅವರು, . ಇವೆಲ್ಲಾ ದೇಶದ ಆಸ್ತಿ ಅಲ್ಲವೇ? ಇದನ್ನು ಹೇಳಿದ್ದಕ್ಕೆ ಬೇಕಾದ ರೀತಿಯಲ್ಲಿ ವ್ಯಾಖ್ಯಾನ ಮಾಡಲಾಯಿತು ಎಂದರು. ಕಾಂಗ್ರೆಸ್ ಪಕ್ಷದಿಂದ ಎರಡು ಮೂರು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿದ್ದೇವೆ ಎಂದಿದ್ದ ರಮೇಶ್ ಕುಮಾರ್ ಹೇಳಿಕೆಯಿಂದ ಪಕ್ಷದ ಇಮೇಜ್ಗೆ ಧಕ್ಕೆಯಾಗಿತ್ತು. ಅದನ್ನು ಸರಿಪಡಿಸಲು ಡಿ.ಕೆ.ಶಿವಕುಮಾರ್ ಯತ್ನಿಸಿದರು.
ನೆರೆ ಹಾವಳಿ ಪ್ರದೇಶಗಳಿಗೆ ಭೇಟಿ ಕೊಡುವ ಬಗ್ಗೆ ನಮ್ಮ ಕಾರ್ಯಕರ್ತರಿಗೆ ಸೂಚಿಸಿದ್ದೇವೆ. ಅಧಿಕಾರಿಗಳಿಗೆ ಚುರುಕು ಮುಟ್ಟಿಸಲು ಸ್ಥಳೀಯ ನಾಯಕರಿಗೆ ಸೂಚನೆ ನೀಡಿದ್ದೇನೆ. ವಿವಿಧ ಜಿಲ್ಲೆಗಳಲ್ಲಿ 10ನೇ ತಾರೀಖಿನ ನಂತರ ನಡೆಯಬೇಕಿದ್ದ ಪಾದಯಾತ್ರೆ ಮೊಟಕುಗೊಳಿಸಿ ನೆರೆಪೀಡಿತ ಪ್ರದೇಶಗಳಿಗೆ ಹೋಗಲು ಸೂಚಿಸಿದ್ದೇನೆ ಎಂದರು. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಜೀವಂತವಾಗಿಲ್ಲ. ಈ ಸರ್ಕಾರ ಬದಲಾಗಿ ಬೇರೆ ಸರ್ಕಾರ ಬರಲೆಂದು ಬಿಜೆಪಿಯವರೇ ಮಾತನಾಡುತ್ತಿದ್ದಾರೆ. ಬಿಜೆಪಿಯವರೇ ಈ ಸರ್ಕಾರ ಬೇಡ ಅಂದ್ರೆ ಏನು ಅರ್ಥ? ಈ ಸರ್ಕಾರ ಜೀವಂತವಾಗಿಲ್ಲ ಎಂದು ಅರ್ಥ ಅಲ್ಲವೇ ಎಂದು ಪ್ರಶ್ನಿಸಿದರು.
ಟೋಪಿ ಹಾಕಿಸಿಕೊಂಡ ನಾಯಕರು
ಕ್ವಿಟ್ ಇಂಡಿಯಾ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವ ನಡಿಗೆ ವೇಳೆ ಟೋಪಿ ಮತ್ತು ಟೀ ಶರ್ಟ್ ಹಾಗೂ ಕರಪತ್ರಗಳನ್ನು ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಿದರು. ಈ ವೇಳೆ ಸಿದ್ದರಾಮಯ್ಯ ಕೈಯಿಂದ ಕೆ.ಜೆ.ಜಾರ್ಜ್ಗೆ, ಬಿ.ಕೆ.ಹರಿಪ್ರಸಾದ್ರಿಂದ ಉಗ್ರಪ್ಪಗೆ ಡಿ.ಕೆ.ಶಿವಕುಮಾರ್ ಟೋಪಿ ಹಾಕಿಸಿದರು. ಬಳಿಕ ತಾವೇ ಸ್ವತಃ ನಗುನಗುತ್ತಾ ಸಿದ್ದರಾಮಯ್ಯಗೆ ಟೋಪಿ ಹಾಕಿದರು. ಬಳಿಕ ಡಿ.ಕೆ.ಶಿವಕುಮಾರ್ಗೆ ಟೋಪಿ ಹಾಕಿದ ಸಿದ್ದರಾಮಯ್ಯ ನಗೆ ಬೀರಿದರು.
ಕಾಂಗ್ರೆಸ್ ಕಾರ್ಯಕರ್ತರ ಪಾದಯಾತ್ರೆ
ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಏರ್ಪೋರ್ಟ್ ಟೋಲ್ ಪ್ಲಾಜಾದಿಂದ ಬ್ಯಾಟರಾಯನಪುರಕ್ಕೆ ಪಾದಯಾತ್ರೆ ನಡೆಸಿದರು. ಪಾದಯಾತ್ರೆಯಿಂದಾಗಿ ಏರ್ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಯಿತು. ಸಾವಿರಾರು ಸಂಖ್ಯೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಡಿಜೆ, ಡೊಳ್ಳು ಕುಣಿತ ಮತ್ತು ತಮಟೆಗಳೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಇದರಿಂದ 3 ಕಿಮೀಗೂ ಅಧಿಕ ದೂರ ಟ್ರಾಫಿಕ್ ಜಾಮ್ ಆಯಿತು. ಪಾದಯಾತ್ರೆಯಲ್ಲಿ ಶಾಸಕ ಕೃಷ್ಣ ಬೈರೆಗೌಡ, ಎಂಎಎಲ್ಸಿ ರವಿ ಸೇರಿದಂತೆ ಹಲವು ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.
Published On - 3:01 pm, Tue, 9 August 22