ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರ ಪತನ; ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ
Bihar Political Crisis: ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.
ಪಾಟ್ನಾ: ಬಿಹಾರದಲ್ಲಿ ಬಿಜೆಪಿ- ಜೆಡಿಯು ಮೈತ್ರಿ ಅಂತ್ಯಗೊಂಡಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ (Nitish Kumar) ರಾಜೀನಾಮೆ ನೀಡಿದ್ದಾರೆ. ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿರುವ ನಿತೀಶ್ ಕುಮಾರ್ ರಾಜೀನಾಮೆ ಪತ್ರವನ್ನು ನೀಡಿದ್ದಾರೆ. ನಿತೀಶ್ ಕುಮಾರ್ ಇಂದು ಸಂಜೆ 4 ಗಂಟೆಗೆ ರಾಜ್ಯಪಾಲ ಫಾಗು ಚೌಹಾಣ್ ಅವರನ್ನು ಭೇಟಿಯಾಗಿ ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ಪಕ್ಷದ ಎಲ್ಲಾ ಸಂಸದರು ಮತ್ತು ಶಾಸಕರು ಎನ್‌ಡಿಎ ತೊರೆಯುವ ನಿರ್ಧಾರಕ್ಕೆ ಒಮ್ಮತ ವ್ಯಕ್ತಪಡಿಸಿದ್ದಾರೆ ಎಂದು ನಿತೀಶ್ ಕುಮಾರ್ ರಾಜೀನಾಮೆ ಸಲ್ಲಿಸಿದ ನಂತರ ಹೇಳಿದ್ದಾರೆ.
ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಂಡಿರುವ ಜೆಡಿಯು ಅಧ್ಯಕ್ಷ ಹಾಗೂ ಸಿಎಂ ನಿತೀಶ್ ಕುಮಾರ್ ತೇಜಸ್ವಿ ಯಾದವ್ ಅವರೊಂದಿಗೆ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ರಾಜ್ಯಪಾಲರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿರುವ ನಿತೀಶ್ ಕುಮಾರ್ ಅವರ ನಿರ್ಧಾರದಿಂದಾಗಿ ಬಿಜೆಪಿ- ಜೆಡಿಯು ಮೈತ್ರಿ ಸರ್ಕಾರ ಪತನವಾಗಿದೆ. ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟದ ಸಭೆಯು ರಾಬ್ರಿ ದೇವಿ ಅವರ ನಿವಾಸದಲ್ಲಿ ನಡೆಯಿತು. ಇದರಲ್ಲಿ ಎಲ್ಲಾ ಶಾಸಕರು ನಿತೀಶ್ ಕುಮಾರ್‌ಗೆ ಬೆಂಬಲ ಪತ್ರಕ್ಕೆ ಸಹಿ ಹಾಕಿದರು.
ಇದನ್ನೂ ಓದಿ: Nitish Kumar: ಶಮನವಾಗದ ಭಿನ್ನಮತ; ಬಿಹಾರ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ, ಇಂದು ನಿತೀಶ್ಕುಮಾರ್ ಮಹತ್ವದ ಸಭೆ
ಬಿಜೆಪಿಗೆ ಕೈಕೊಟ್ಟು ನಿತೀಶ್ ಕುಮಾರ್ ಸರ್ಕಾರ ಉರುಳಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2015ರಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಬಿಜೆಪಿಯಿಂದ ಬೇರ್ಪಟ್ಟಿತ್ತು. ಬಳಿಕ ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆ ಕೈ ಜೋಡಿಸಿತ್ತು. ಜೆಡಿ(ಯು)-ಆರ್‌ಜೆಡಿ-ಕಾಂಗ್ರೆಸ್ ‘ಮಹಾಘಟಬಂಧನ್’ 2015ರಲ್ಲಿ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿತ್ತು. ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮತ್ತು ಆರ್‌ಜೆಡಿಯ ತೇಜಸ್ವಿ ಯಾದವ್ ಅವರ ಉಪಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದರು.
Nitish Kumar resigns as Chief Minister of Bihar, breaks alliance with BJP#BiharPoliticalCrisis pic.twitter.com/GwtSlL2KG8
— ANI (@ANI) August 9, 2022
ಆದರೆ, ನಿತೀಶ್ ಕುಮಾರ್ ಅವರು 2017ರಲ್ಲಿ ಮಹಾಘಟಬಂಧನ್ ಸರ್ಕಾರವನ್ನು ಉರುಳಿಸಿ ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸಿದ್ದರು. ಆ ಮೈತ್ರಿ ಕೂಡ ಹೆಚ್ಚು ದಿನ ಉಳಿಯಲಿಲ್ಲ. ಮೊದಲು ಬಿಹಾರದಲ್ಲಿ ಬಿಜೆಪಿಯೊಂದಿಗೆ ಆಡಳಿತ ನಡೆಸುತ್ತಿದ್ದಾಗ ಅವರು ಎನ್‌ಡಿಎ ತೊರೆದು ಆರ್‌ಜೆಡಿಯೊಂದಿಗೆ ಮೈತ್ರಿ ಮಾಡಿಕೊಂಡರು. ನಂತರ ಅವರು ಆರ್‌ಜೆಡಿ ತೊರೆದು ಬಿಜೆಪಿ ನೇತೃತ್ವದ ಒಕ್ಕೂಟಕ್ಕೆ ಮರಳಿದರು.
ಇದನ್ನೂ ಓದಿ: Bihar Political Crisis: ಬಿಹಾರದಲ್ಲಿ ಜೆಡಿಯು-ಬಿಜೆಪಿ ಮೈತ್ರಿ ಅಂತ್ಯ; ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ನಿತೀಶ್ ಕುಮಾರ್
ನಿತೀಶ್ ಕುಮಾರ್ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡರೆ ಅವರಿಗೆ ನಮ್ಮ ಬೆಂಬಲವಿದೆ ಎಂದು ಬಿಹಾರದ ಏಕೈಕ ದೊಡ್ಡ ಪಕ್ಷವಾಗಿರುವ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ತೇಜಸ್ವಿ ಯಾದವ್ ಹೇಳಿದ್ದರು. ಹೀಗಾಗಿ, ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಂಡಿರುವ ನಿತೀಶ್ ಕುಮಾರ್ ಆರ್‌ಜೆಡಿ ಜೊತೆ ಕೈಜೋಡಿಸಿ ಮಹಾಘಟಬಂಧನ್ ಸರ್ಕಾರ ರಚಿಸುವ ಸಾಧ್ಯತೆಯಿದೆ.
ಇನ್ನಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:59 pm, Tue, 9 August 22