ಬಿಜೆಪಿಯವರೇ ಹಾಗೆ ಹೇಳಿದ್ದಾರೆ: ಸಿಎಂ ಬದಲಾವಣೆ ಟ್ವೀಟ್ ಸಮರ್ಥಿಸಿಕೊಂಡ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ
ಸಿಎಂ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್ ಟ್ವೀಟ್ ಮಾಡಿದ್ದು ಸುರೇಶ್ ಗೌಡ ಹೇಳಿಕೆ ಆಧಾರದ ಮೇಲೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಬೆಂಗಳೂರು: ಬಿಜೆಪಿ ಪಕ್ಷದಲ್ಲಿಯೇ ಮೂರನೇ ಮುಖ್ಯಮಂತ್ರಿಯ ಕೂಗು ಕೇಳಿಬಂದಿದೆ. ಈ ಹಿಂದೆಯೂ ಬಿಜೆಪಿಯವರು ಕರ್ನಾಟಕದಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕೊಟ್ಟಿದ್ದರು ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದರು. ಮುಖ್ಯಮಂತ್ರಿ ಬದಲಾವಣೆ ಕುರಿತು ಕಾಂಗ್ರೆಸ್ ಪಕ್ಷದ ಟ್ವೀಟ್ ವಿವಾದಕ್ಕೀಡಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, 3ನೇ ಸಿಎಂ ಕೂಗು ಬಿಜೆಪಿ ವಲಯದಲ್ಲೇ ಕೇಳಿಬಂದಿದೆ; ಕಾಂಗ್ರೆಸ್ ಪಾಳಯದಲ್ಲಿ ಅಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿ ಆಡಳಿತದಲ್ಲಿ ಕರ್ನಾಟಕ ಅಭಿವೃದ್ಧಿ ಆಗಬಹುದು ಎಂಬ ನಿರೀಕ್ಷೆಯು ಹುಸಿಯಾಗಿದೆ. 1999ರ ಬಳಿಕ ರಾಜ್ಯದಲ್ಲಿ 3 ಬಾರಿ ಕಾಂಗ್ರೆಸ್ ಸರ್ಕಾರ ಬರಲಿದೆ. ಕಾಂಗ್ರೆಸ್ನಿಂದ ಮಾತ್ರ ಸ್ಥಿರ ಸರ್ಕಾರ ನೀಡಲು ಸಾಧ್ಯ ಎಂದು ಹೇಳಿದರು.
ಈ ಸರ್ಕಾರದಲ್ಲಿ ಯಾವುದೇ ಸಚಿವರು ಸಿಎಂ ನಿಯಂತ್ರಣದಲ್ಲಿದ್ದಾರೆ ಎಂದು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಜನ ಸಂಕಷ್ಟದಲ್ಲಿದ್ದಾರೆ. ಜಿಲ್ಲೆಗಳಿಗೆ ಹೋಗುವಂತೆ ಸಚಿವರಿಗೆ ಸಿಎಂ ಸೂಚಿಸಿದ್ದಾರೆ. ಆದರೆ ಯಾವ ಸಚಿವರು ತಾನೆ ಜಿಲ್ಲೆಗಳಿಗೆ ಹೋಗಿ ಮೀಟಿಂಗ್ ನಡೆಸಿದ್ದಾರೆ? ಎಷ್ಟು ಸಂತ್ರಸ್ತರಿಗೆ ಪರಿಹಾರ ನೀಡಿದ್ದಾರೆ ಅಂತಾ ಹೇಳಲಿ? ಮುಖ್ಯಮಂತ್ರಿಗಳೇ ಎಲ್ಲ ಕಡೆ ಓಡಾಡಿ ವರದಿ ನೀಡುವಂತಾಗಿದೆ ಎಂದು ವ್ಯಂಗ್ಯವಾಡಿದರು.
ಕರ್ನಾಟಕಕ್ಕೆ ಅಮಿತ್ ಶಾ ಬಂದಾಗ ಯಾವ ಸಚಿವರು ಅನುದಾನ ಕೇಳಿದ್ದಾರೆ? ಯಾವೆಲ್ಲಾ ಸಚಿವರು ಎನ್ಡಿಆರ್ಎಫ್ ಅನುದಾನ ಕೇಳಿದ್ದಾರೆ ಹೇಳಲಿ ಎಂದು ಸಚಿವರಿಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನೆ ಹಾಕಿದರು.
ಸಿಎಂ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್ ಟ್ವೀಟ್ ಮಾಡಿದ್ದು ಸುರೇಶ್ ಗೌಡ ಹೇಳಿಕೆ ಆಧಾರದ ಮೇಲೆ. ಆರೇ ತಿಂಗಳಲ್ಲೂ ಚೇಂಜ್ ಮಾಡಿದ್ದೀವಿ ಅಂತ ಸುರೇಶ್ ಗೌಡ ಹೇಳಿದ್ದರು. ಯತ್ನಾಳ್ ಅವರು ₹ 2,500 ಕೋಟಿ ತಂದರೆ ಸಿಎಂ ಮಾಡುತ್ತೇವೆ ಎಂದಿದ್ದರು. ಯೋಗೇಶ್ವರ್ ಅವರು ಎಕ್ಸಾಂ ಬರೆದಿದ್ದೇವೆ ರಿಸಲ್ಟ್ಗೆ ಕಾಯುತ್ತಿದ್ದೇವೆ ಎಂದಿದ್ದರು. ಕಾರ್ಯಕರ್ತರು ಈ ಸರ್ಕಾರದಲ್ಲಿ ಸಂತೋಷವಾಗಿಲ್ಲ ಅಂತ ವಿಶ್ವನಾಥ್ ಹೇಳಿದ್ದರು. ಕಾರ್ಯಕರ್ತರು ನಿರಾಸೆಯಾಗಿದ್ದಾರೆ ಎಂದು ಸುನಿಲ್ ಕುಮಾರ್ ಹೇಳಿದ್ದರು. ಸರ್ಕಾರದಲ್ಲಿ ಕಾರ್ಯಕರ್ತರ ರಕ್ಷಣೆ ಇಲ್ಲ ಎಂದು ಸಿ.ಟಿ.ರವಿ ಹೇಳಿದ್ದರು. ಎಬಿವಿಪಿ ಕಾರ್ಯಕರ್ತರು ಸ್ವಂತ ಪಕ್ಷದ ಗೃಹ ಸಚಿವರ ಮನೆಯ ಮೇಲೆ ದಾಳಿ ಮಾಡಿದ್ದರು. ಇವೆಲ್ಲವೂ ಏನನ್ನು ಸೂಚಿಸುತ್ತವೆ ಎಂದು ಪ್ರಶ್ನಿಸಿದರು.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ವಲ್ಪ ಯೋಚಿಸಿ ಮಾತನಾಡಬೇಕು. ನಿಮ್ಮ ಪಕ್ಷದ (ಬಿಜೆಪಿ) ವರಿಷ್ಠರೇ ಇದೆಲ್ಲವನ್ನೂ (ಸಿಎಂ ಬದಲಾವಣೆ) ಮಾತನಾಡುತ್ತಿದ್ದಾರೆ. ಸುಧಾಕರ್ ಅವರೇ ನಿಮಗಂತೂ ಮಾತನಾಡುವ ನೈತಿಕತೆ ಇಲ್ಲ. ಎರಡೂವರೆ ವರ್ಷಗಳ ಹಿಂದೆ ಇದೇ ಗಾಂಧಿ ಪರಿವಾರದ ಬಗ್ಗೆ ಗುಣಗಾನ ಮಾಡುತ್ತಿದ್ದಿರಿ. ಈಗ ನಾಗಪುರ ನೌಕರ ಸೇನೆ ಸೇರಿದ ತಕ್ಷಣ ಅವರ ಪರವಾಗಿ ಆಗಿದ್ದೀರಿ. ಸುಧಾಕರ್ ನಮಗೆ ಹೇಳುವ ಮೊದಲು ನಿಮ್ಮ ಎಂಎಲ್ಎಗಳನ್ನು ಕಂಟ್ರೋಲ್ ಮಾಡುವುದು ಕಲಿಯಿರಿ ಎಂದು ಹೇಳಿದರು. ಭಿನ್ನ ಮತದ ಹೊಗೆ ನಿಮ್ಮಲ್ಲಿ ಬರುತ್ತಿರುವುದೇ ಹೊರತು ನಮ್ಮಲ್ಲಿ ಅಲ್ಲ ಎಂದು ವಾಗ್ದಾಳಿ ನಡೆಸಿದರು.
ಎಲ್ಲೆಡೆ ಸಿಎಂ ಬದಲಾವಣೆ ಚರ್ಚೆ: ಡಿಕೆಶಿ
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಬಿಜೆಪಿಯವರೇ ಮಾತನಾಡುತ್ತಿದ್ದಾರೆ. ಅವರು ಹೇಳಿದ್ದನ್ನೇ ನಾವು ಪಿಕ್ ಮಾಡಿದ್ದೇವೆ. ನಮ್ಮ ಪಾರ್ಟಿಯಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಟ್ವೀಟ್ ಮಾಡಿರುವುದನ್ನು ಸಮರ್ಥಿಸಿಕೊಂಡರು.