ನಿವಾರ್​ ಚಂಡಮಾರುತದ ಪ್ರಭಾವ: ಬೆಂಗಳೂರಿನಲ್ಲಿ ಚಳಿ, ತಮಿಳುನಾಡಿನಲ್ಲಿ 3 ಸಾವು, ಆಂಧ್ರದಲ್ಲಿ ಭಾರಿ ಮಳೆ

| Updated By: ಸಾಧು ಶ್ರೀನಾಥ್​

Updated on: Nov 27, 2020 | 11:33 AM

ಬೆಂಗಳೂರಿನ ಆಗಸದಲ್ಲಿ ಬಿಳಿಮೋಡಗಳು ತೇಲುತ್ತಿವೆಯಾದರೂ ಸೂರ್ಯನೂ ಆಗಾಗ ಇಣುಕುತ್ತಿದ್ದಾನೆ. ಚಳಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.

ನಿವಾರ್​ ಚಂಡಮಾರುತದ ಪ್ರಭಾವ: ಬೆಂಗಳೂರಿನಲ್ಲಿ ಚಳಿ, ತಮಿಳುನಾಡಿನಲ್ಲಿ 3 ಸಾವು, ಆಂಧ್ರದಲ್ಲಿ ಭಾರಿ ಮಳೆ
ತಮಿಳುನಾಡು ಕಡಲ ತೀರದಲ್ಲಿ ದೋಣಿಗಳನ್ನು ದಡದಲ್ಲಿ ನಿಲ್ಲಿಸಲಾಗಿತ್ತು (ಪಿಟಿಐ ಚಿತ್ರ)
Follow us on

ಬೆಂಗಳೂರು: ತಮಿಳುನಾಡು ಮತ್ತು ಪುದುಚೇರಿ ಕಡಲತೀರಗಳಿಗೆ ಗುರುವಾರ ನಸುಕಿನಲ್ಲಿ ಅಪ್ಪಳಿಸಿದ ನಿವಾರ್ ಚಂಡಮಾರುತದ ಪ್ರಭಾವದಿಂದ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಗುರುವಾರ ಜಿಟಿಜಿಟಿ ಮಳೆ ಸುರಿದಿದೆ.

ಮೋಡ ಮುಸುಕಿದ ವಾತಾವರಣ ಮತ್ತು ಪ್ರಬಲ ಶೀತಗಾಳಿ ಇದ್ದ ಕಾರಣ ಉಷ್ಣಾಂಶದಲ್ಲಿ ತೀವ್ರ ಕುಸಿತ ಕಂಡು ಬಂತು. ಕೊಡೆಗಳ ಆಸರೆ ಪಡೆದಿದ್ದ ಜನರು ಸ್ವೆಟರ್, ಮಫ್ಲರ್, ಟೋಪಿಗಳನ್ನು ಧರಿಸಿ ಓಡಾಡುತ್ತಿದ್ದುದು ಕಂಡು ಬಂತು.

ಶುಕ್ರವಾರ ಮುಂಜಾನೆ ವೇಳೆಗೆ ಚಂಡಮಾರುತದ ಪ್ರಭಾವ ಕ್ಷೀಣಸಿತ್ತು. ಬೆಂಗಳೂರಿನ ಆಗಸದಲ್ಲಿ ಬಿಳಿಮೋಡಗಳು ತೇಲುತ್ತಿದ್ದವಾದರೂ ಸೂರ್ಯನೂ ಆಗಾಗ ಇಣುಕುತ್ತಿದ್ದ. ನಿನ್ನೆಗೆ (ನ.26) ಹೋಲಿಸಿದರೆ ಚಳಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು.

ತಮಿಳುನಾಡಿನಲ್ಲಿ ಮೂರು ಸಾವು
ನಿವಾರ್ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡಿನ ವಿವಿಧೆಡೆ ಗೋಡೆ ಕುಸಿತದಿಂದಾಗಿ ಮೂವರು ಮೃತಪಟ್ಟಿದ್ದಾರೆ. ಸುಮಾರು 1000 ಮರಗಳು ಉರುಳಿದ್ದು, ದೊಡ್ಡಮಟ್ಟದಲ್ಲಿ ಬೆಳೆಹಾನಿ ಸಂಭವಿಸಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಕಡಲೂರು ಜಿಲ್ಲೆಯ ವಿವಿಧೆಡೆ ಸಂಚರಿಸಿ ಪರಿಹಾರ ಕಾಮಗಾರಿಗಳನ್ನು ಪರಿಶೀಲಿಸಿದರು. ರಾಜ್ಯ ಸರ್ಕಾರ ಸಾಕಷ್ಟು ಮುಂಜಾಗರೂಕತೆ ವಹಿಸಿದ ಕಾರಣ ಹೆಚ್ಚು ಜೀವಹಾನಿ ಸಂಭವಿಸಿಲ್ಲ ಎಂದು ತಿಳಿಸಿದರು.

ಆಂಧ್ರದಲ್ಲಿ ಜನಜೀವನ ಅಸ್ತವ್ಯಸ್ತ
ಆಂಧ್ರದ ನೆಲ್ಲೂರು ಮತ್ತು ಚಿತ್ತೂರು ಜಿಲ್ಲೆಗಳಲ್ಲಿ ನಿವಾರ್​ ತನ್ನ ಪರಾಕ್ರಮ ತೋರಿದೆ. ನೆಲ್ಲೂರು ಜಿಲ್ಲೆಯಲ್ಲಿ 800 ವಿದ್ಯುತ್ ಕಂಬಗಳು ಮತ್ತು 100ಕ್ಕೂ ಹೆಚ್ಚು ಮರಗಳು ಬುಡಮೇಲಾಗಿವೆ.

ಚೆನ್ನೈ-ಕೊಲ್ಕತ್ತಾ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 16ರಲ್ಲಿ ಗುಡೂರು ಸಮೀಪ ನೀರು ಹರಿಯುತ್ತಿದ್ದ ಕಾರಣ ರಸ್ತೆಯಲ್ಲಿ ಸುಮಾರು 8 ಕಿ.ಮೀ.ಗಳಷ್ಟು ಉದ್ದನೆಯ ವಾಹನ ಸಾಲು ನಿಂತಿತ್ತು. ರಾಷ್ಟ್ರೀಯ ಹೆದ್ದಾರಿ 565ರಲ್ಲಿ ಸೇತುವೆ ಕೊಚ್ಚಿ ಹೋದ ಕಾರಣ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಪೆನ್ನಾ ನದಿಯಲ್ಲಿ 80,000 ಕ್ಯೂಸೆಕ್ ನೀರು ಹರಿದು ಬಂದ ಕಾರಣ ಸೊಮಸಿಲ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಯಿತು.

ಚಂಡಮಾರುತ ಪ್ರಭಾವದಿಂದ ಪ್ರಸಿದ್ಧ ಯಾತ್ರಾಕ್ಷೇತ್ರ ತಿರುಪತಿಯಲ್ಲಿಯೂ ವ್ಯಾಪಕ ಮಳೆ ಸುರಿಯಿತು. ಬೆಟ್ಟ ಹತ್ತುವ ಮೆಟ್ಟಿಲುಗಳ ಮೇಲೆ ಕಲ್ಲುಗಳು ಬಿದ್ದ ಕಾರಣ ಮೆಟ್ಟಿಲು ಹತ್ತಿ ದೇಗುಲಕ್ಕೆ ಬರುವ ಮಾರ್ಗವನ್ನು ಟಿಟಿಡಿ ನಿರ್ಬಂಧಿಸಿತ್ತು.

ತೆಲಂಗಾಣದಲ್ಲಿ ಸಾಧಾರಣ ಮಳೆ
ನಿವಾರ್ ಚಂಡಮಾರುತದಿಂದಾಗಿ ಹೈದರಾಬಾದ್​ ನಗರದಲ್ಲಿ ಚಳಿ ಹೆಚ್ಚಾಗಿದೆ. ರಾಜ್ಯದಲ್ಲಿ ಯಾವುದೇ ಅನಾಹುತವಾಗಿಲ್ಲ. ಹೈದರಾಬಾದ್‌, ಮೆಹಬೂಬ್‌ನಗರ, ನಾರಾಯಣಪೇಟ ಖಮ್ಮಂ, ಜೋಗಳಾಂಬ ಗದ್ವಾಲ್ ಸೇರಿದಂತೆ ಕೆಲವೆಡೆ ಸಾಧಾರಣ ಮಳೆಯಾಗಿದೆ.