AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನೇ ಆಗ್ಲಿ, ದೆಹಲಿ ತಲುಪೇ ತಲುಪುತ್ತೇವೆ -6 ತಿಂಗಳ ದಿನಸಿ ಹೊತ್ತು ದೆಹಲಿಯತ್ತ ಸಾಗಿದ ರೈತನ ಆಕ್ರೋಶ

ನಾನು ಮತ್ತು ನನ್ನ ಕುಟುಂಬ ಆರು ತಿಂಗಳಿಗೆ ಅಗತ್ಯವಿರುವ ದಿನಸಿಗಳನ್ನು ಹೊತ್ತು ಪ್ರತಿಭಟನೆಯಲ್ಲಿ ಸಾಗುತ್ತಿದ್ದೇವೆ. ಏನೇ ಆಗಲಿ, ನಾವು ದೆಹಲಿಯನ್ನು ತಲುಪೇ ತಲುಪುತ್ತೇವೆ ಎಂದು ಪಂಜಾಬ್​ನಿಂದ ಪ್ರತಿಭಟನೆಯಲ್ಲಿ ಹೊರಟ ರೈತರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ಏನೇ ಆಗ್ಲಿ, ದೆಹಲಿ ತಲುಪೇ ತಲುಪುತ್ತೇವೆ -6 ತಿಂಗಳ ದಿನಸಿ ಹೊತ್ತು ದೆಹಲಿಯತ್ತ ಸಾಗಿದ ರೈತನ ಆಕ್ರೋಶ
ಪಂಜಾಬ್ ರೈತರ ಪ್ರತಿಭಟನಾ ಮೆರವಣಿಗೆ ದೆಹಲಿ ಸಮೀಪಿಸುತ್ತಿದೆ
guruganesh bhat
| Updated By: ಸಾಧು ಶ್ರೀನಾಥ್​|

Updated on:Nov 27, 2020 | 3:00 PM

Share

ಚಂಡೀಗಢ: ನಾನು ಮತ್ತು ನನ್ನ ಕುಟುಂಬ ಆರು ತಿಂಗಳಿಗೆ ಅಗತ್ಯವಿರುವ ದಿನಸಿಗಳನ್ನು ಹೊತ್ತು ಪ್ರತಿಭಟನೆಯಲ್ಲಿ ಸಾಗುತ್ತಿದ್ದೇವೆ. ಏನೇ ಆಗಲಿ, ನಾವು ದೆಹಲಿಯನ್ನು ತಲುಪೇ ತಲುಪುತ್ತೇವೆ ಎಂದು ಪಂಜಾಬ್​ನಿಂದ ಪ್ರತಿಭಟನೆಯಲ್ಲಿ ಹೊರಟ ರೈತರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿ ಸಮೀಪಿಸಿದ ಮೆರವಣಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ 3 ಕೃಷಿ ಕಾನೂನು ಮತ್ತು ವಿದ್ಯುತ್ ಕಾಯ್ದೆಯ ವಿರುದ್ಧ ಪಂಜಾಬ್ ರೈತರ ದೆಹಲಿ ಚಲೋ ಪ್ರತಿಭಟನಾ ಱಲಿ ಬೆಳಗ್ಗೆ ಬಹದ್ದೂರ್​ಗಢ ತಲುಪಿದೆ. ಸುರಕ್ಷತೆಯ ದೃಷ್ಟಿಯಿಂದ ದೆಹಲಿ-ಗುರುಗ್ರಾಮದ ಗಡಿಯಲ್ಲಿ ಪ್ರತಿ ವಾಹನವನ್ನೂ ತಪಾಸಣೆ ಮಾಡಲಾಗುತ್ತಿದ್ದು, ಇದರಿಂದ ಸಂಚಾರ ದಟ್ಟಣೆ ಉಂಟಾಗಿದೆ. ದೆಹಲಿ ಚಲೋ ಱಲಿಯನ್ನು ತಡೆಗಟ್ಟಲು ಹರಿಯಾಣದ ಗಡಿಯಲ್ಲಿ ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್​ಗಳನ್ನು ಮುರಿದ ರೈತರು ಇದೀಗ ದೆಹಲಿಯತ್ತ ಸಾಗುತ್ತಿದ್ದಾರೆ.

ಇದನ್ನೂ ಓದಿ: ‘ದೆಹಲಿ ಚಲೋ’ ಪ್ರತಿಭಟನಾಕಾರರ ರೌದ್ರಾವತಾರ; ಪೊಲೀಸರತ್ತ ಇಟ್ಟಿಗೆ ಎಸೆದ ರೈತರು

ಅಪಘಾತಕ್ಕೆ ಓರ್ವ ರೈತ ಬಲಿ ಈ ನಡುವೆ, ಪ್ರತಿಭಟನಾ ಱಲಿಯಲ್ಲಿ ಸಾಗುತ್ತಿದ್ದ 45 ವರ್ಷದ ರೈತರೊಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದಲ್ಲದೆ, ರೈತರು ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ಮತ್ತು ಲಾರಿಯೊಂದರ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ರೈತ ಸಾವನ್ನಪ್ಪಿದ್ದಾರೆ. ಜೊತೆಗೆ,  ಅಪಘಾತದಲ್ಲಿ ಇಬ್ಬರು ರೈತರು ಗಾಯಗೊಂಡಿದ್ದಾರೆ.

ಘಟನೆಯ ಕುರಿತು ಭಾರತೀಯ ಕಿಸಾನ್ ಯೂನಿಯನ್ ಹರಿಯಾಣ ಸರ್ಕಾರವನ್ನು ದೂರಿದೆ. ಹರಿಯಾಣದಿಂದ ಬರುವ ಪ್ರತಿಭಟನಾಕಾರರನ್ನು ತಡೆಯಲು ಸಿಂಘುವಿನ ಸಮೀಪ ರೈತರ ಮೇಲೆ ಪೊಲೀಸರು ಜಲಫಿರಂಗಿ ಹಾಗೂ ಅಶ್ರುವಾಯು ಸಿಡಿಸಿದರು. ಆದರೂ, ಇದಕ್ಕೆ ಜಗ್ಗದ ರೈತರ ಗುಂಪು ದೆಹಲಿಯತ್ತ ತನ್ನ ಪಯಣ ಸಾಗಿಸಿದೆ.

ತಾತ್ಕಾಲಿಕ ಜೈಲುಗಳಾಗಲಿದೆ ದೆಹಲಿ ಕ್ರೀಡಾಂಗಣಗಳು! ಈ ಮಧ್ಯೆ, ಸಾವಿರಾರು ಸಂಖ್ಯೆಯಲ್ಲಿರುವ ರೈತರು ದೆಹಲಿ ಪ್ರವೇಶಿಸಲು ಸಫಲರಾದರೆ ಕ್ರೀಡಾಂಗಣಗಳೇ ಜೈಲುಗಳಾಗಲಿವೆ. ಹೌದು, ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​​ಗೆ ಪೊಲೀಸರು ವಶಕ್ಕೆ ಪಡೆದ ರೈತರನ್ನು ಇರಿಸಲು 9 ಕ್ರೀಡಾಂಗಣಗಳನ್ನು ತಾತ್ಕಾಲಿಕ ಜೈಲುಗಳಾಗಿ ಪರಿವರ್ತಿಸಲು ಅನುಮತಿ ನೀಡುವಂತೆ ಕೋರಿದ್ದಾರೆ.

ಇತ್ತ, ಅಖಿಲ ಭಾರತ ರೈತ ಸಂಘರ್ಷ ಸಹಕಾರ ಸಮಿತಿ, ರಾಷ್ಟ್ರೀಯ ಕಿಸಾನ್ ಮಹಾಸಂಘ ಮತ್ತು ಭಾರತೀಯ ಕಿಸಾನ್ ಯೂನಿಯನ್ ಆಯೋಜಿಸಿರುವ ಪ್ರತಿಭಟನೆ ತಮ್ಮ ರಾಜ್ಯ ಪ್ರವೇಶಿಸಲು ಬಿಡುವುದಿಲ್ಲ ಎಂದು ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಹೇಳಿದ್ದರು. ಹಾಗಾಗಿ, ಈಗಾಗಲೇ ಮುಂಜಾಗ್ರತಾ ಕ್ರಮವಾಗಿ, ಹರಿಯಾಣದ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಾತುಕತೆಗೆ ಕೇಂದ್ರದಿಂದ ಆಹ್ವಾನ ಇತ್ತ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಡಿಸೆಂಬರ್ 3 ರಂದು ರೈತ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಇತ್ತ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ತಾವೂ ಕೃಷಿ ಕುಟುಂಬದ ಹಿನ್ನೆಲೆಯವರಾಗಿದ್ದು, ಕೃಷಿಕರಿಗೆ ತೊಂದರೆಯಾಗಲು ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  ಶಾಂತಿಯುತ ಪ್ರತಿಭಟನೆ ನಡೆಸಲು ರೈತರಿಗೆ ಅವಕಾಶ ಕೊಡಿ: ಕೇಂದ್ರಕ್ಕೆ ಅರವಿಂದ ಕ್ರೇಜಿವಾಲ್ ತಾಕೀತು

Published On - 12:19 pm, Fri, 27 November 20