ಬಡವರು, ಮಧ್ಯಮ ವರ್ಗದವರಿಗೆ ನ್ಯಾಯ ಸಿಗುವುದು ಕಷ್ಟ: ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್
ಒಬ್ಬ ವ್ಯಕ್ತಿ ತನ್ನ 60ನೇ ವರ್ಷದಲ್ಲಿ ನ್ಯಾಯಾಲಯದ ಮೊರೆ ಹೋದರೆ ಅವನಿಗೆ ಸಾಯುವ ಮುನ್ನ ನ್ಯಾಯ ಸಿಗುವ ಸಾಧ್ಯತೆಯೇ ಕಡಿಮೆ. ಬಡ, ಮಧ್ಯಮ ವರ್ಗದವರು ನ್ಯಾಯಕ್ಕಾಗಿ ಅಲೆದು ಹತಾಶರಾಗುತ್ತಿದ್ದಾರೆ.
ದೆಹಲಿ: ಭಾರತದ ನ್ಯಾಯಾಲಯಗಳಲ್ಲಿ ನ್ಯಾಯ ಪಡೆಯಲು ಜನರು ಜೀವನ ಪೂರ್ತಿ ಕಾಯಬೇಕಾದ ಪರಿಸ್ಥಿತಿ ಇರುವುದು ಅತ್ಯಂತ ವಿಷಾದನೀಯ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಂವಿಧಾನದ ದಿನದ ಅಂಗವಾಗಿ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಶನ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಕೊರೊನಾ ಕಾರಣದಿಂದ ಸುಪ್ರೀಂ ಕೋರ್ಟ್ ಹೆಚ್ಚು ದೂರುಗಳನ್ನು ಸ್ವೀಕರಿಸುತ್ತಿಲ್ಲ. ಒಂದು ವೇಳೆ ಕೊರೊನಾ ತಕ್ಷಣವೇ ಮುಗಿದು ಹೋದರೆ ದಾಖಲಾಗುವ ದೂರುಗಳ ಸಂಖ್ಯೆ ಅಧಿಕವಾಗಲಿದೆ ಮತ್ತು ಅವು ಬಾಕಿ ಉಳಿಯುವುದರ ಕುರಿತು ನನಗೆ ಆತಂಕವಿದೆ ಎಂದು ಹೇಳಿದ್ದಾರೆ.
ದಾಖಲೆಗಳ ಪ್ರಕಾರ ಭಾರತದಲ್ಲಿ ಸುಮಾರು 3.61 ಕೋಟಿ ದೂರುಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ. ಇತ್ತೀಚೆಗೆ ಬಗೆಹರಿಸಲಾದ ಕೆಲವು ಪ್ರಕರಣಗಳು 30-40 ವರ್ಷಕ್ಕೂ ಹಿಂದಿನವು. ಒಬ್ಬ ವ್ಯಕ್ತಿ ತನ್ನ 60ನೇ ವರ್ಷದಲ್ಲಿ ನ್ಯಾಯಾಲಯದ ಮೊರೆ ಹೋದರೆ ಅವನಿಗೆ ಸಾಯುವ ಮುನ್ನ ನ್ಯಾಯ ಸಿಗುವ ಸಾಧ್ಯತೆಯೇ ಕಡಿಮೆ ಎಂದು ಬೇಸರ ಹೊರಹಾಕಿದ್ದಾರೆ.
ತಡವಾಗಿ ಸಿಗುವ ನ್ಯಾಯದಿಂದ Judicial Delay ಶ್ರೀಮಂತರಿಗೆ ತೊಂದರೆಯಾಗುತ್ತಿರುವುದು ಕಡಿಮೆ. ಆದರೆ ಬಡ ಮತ್ತು ಮಧ್ಯಮ ವರ್ಗದ ಜನರು ನ್ಯಾಯಕ್ಕಾಗಿ ಅಲೆದು, ಹಣ ಸುರಿದು ಹತಾಶರಾಗುತ್ತಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಅವಲೋಕಿಸಿ ನ್ಯಾಯ ಪ್ರಕ್ರಿಯೆಗೆ ವೇಗ ನೀಡಬೇಕಿದೆ. ಆ ಮೂಲಕ ದೇಶದ ಪ್ರತಿ ಪ್ರಜೆಗೂ ಸೂಕ್ತ ನ್ಯಾಯ ದೊರಕುವಂತಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಸಮಸ್ಯೆ ಸರಿಹೋಗಬೇಕೆಂದರೆ ನ್ಯಾಯಾಧೀಶರ ಸಂಖ್ಯೆ ಹೆಚ್ಚಾಗಬೇಕು. 2018ರಲ್ಲಿ ಪ್ರತಿ 10 ಲಕ್ಷ ಜನರಿಗೆ 10 ನ್ಯಾಯಾಧೀಶರು ಇದ್ದರು, ಈಗ ಇದು 19ಕ್ಕೆ ಏರಿದೆ. ಕಾನೂನು ಆಯೋಗದ ವರದಿಯ ಪ್ರಕಾರ ನಮ್ಮ ದೇಶದಲ್ಲಿ ಒಟ್ಟು 1.36 ಲಕ್ಷ ನ್ಯಾಯಾಧೀಶರು ಇರಬೇಕಿತ್ತು. ಆದರೆ ಕೇವಲ 20,558 ನ್ಯಾಯಾಧೀಶರು ಇದ್ದಾರೆ. ಇದೇ ಕಾರಣಕ್ಕೆ ನಮ್ಮ ನ್ಯಾಯಾಧೀಶರು ಹೆಚ್ಚಿನ ಅವಧಿ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದ್ದಾರೆ.