ಮಧ್ಯಪ್ರದೇಶ: ಶವ ಸಾಗಿಸಲು ವಾಹನ ಸಿಗಲಿಲ್ಲ, ಅಮ್ಮನ ಮೃತದೇಹವನ್ನು ಬೈಕ್ನಲ್ಲಿರಿಸಿ ಕೊಂಡೊಯ್ದ ಮಗ
ಅಮ್ಮನಿಗೆ ಚಿಕಿತ್ಸೆ ಕೊಡಿಸುವುದಕ್ಕಾಗಿ ಅನುಪ್ಪುರ್ ಜಿಲ್ಲೆಯಿಂದ ಇಬ್ಬರು ವ್ಯಕ್ತಿಗಳು ಶಹದೋಲ್ ಮೆಡಿಕಲ್ ಕಾಲೇಜಿಗೆ ಬಂದಿದ್ದರು. ಸರಿಯಾದ ಚಿಕಿತ್ಸೆ ಸಿಗದ ಕಾರಣ ಅಮ್ಮ ಮೃತಪಟ್ಟಿದ್ದಾರೆ. ಮೃತದೇಹ ಸಾಗಿಸಲು ಆಸತ್ರೆಯವರು ವಾಹನವನ್ನೂ ಒದಗಿಸಿಲ್ಲ
ಭೋಪಾಲ್ : ಮಧ್ಯಪ್ರದೇಶದ (Madhya Pradesh) ಸಾಗರ್ ಎಂಬಲ್ಲಿ ಆರೋಗ್ಯ ಕಾರ್ಯಕರ್ತರೊಬ್ಬರು ಒಂದೇ ಸಿರಿಂಜ್ ಬಳಸಿ 30 ವಿದ್ಯಾರ್ಥಿಗಳಿಗೆ ಚುಚ್ಚು ಮದ್ದು ನೀಡಿದ ಬಳಿಕ ವೈದ್ಯಕೀಯ ಬೇಜವಾಬ್ದಾರಿತನದ ಮತ್ತೊಂದು ಘಟನೆ ಇದೇ ರಾಜ್ಯದಲ್ಲಿ ವರದಿ ಆಗಿದೆ. ಇಲ್ಲಿನ ಶಹದೋಲ್ (Shahdol) ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಅಮ್ಮನ ಮೃತದೇಹವನ್ನು ಕೊಂಡೊಯ್ಯಲು ಶವ ಸಾಗಿಸುವ ವಾಹನ ಸಿಗದ ಕಾರಣ ತಮ್ಮ ಬೈಕ್ನಲ್ಲಿಯೇ ಮೃತದೇಹವನ್ನು ಸಾಗಿಸಿದ ಘಟನೆ ವರದಿ ಆಗಿದೆ. 80 ಕಿಮೀ ದೂರವಿರುವ ತನ್ನ ಹಳ್ಳಿಗೆ ಮೃತದೇಹ ಕೊಂಡೊಯ್ಯಬೇಕಾದರೆ ಖಾಸಗಿ ವಾಹನಗಳು ₹5000 ಕೇಳಿದ್ದವು. ಆದರೆ ಅಷ್ಟೊಂದು ಹಣ ಕೊಡಲು ಸಾಧ್ಯವಾಗದ ಕಾರಣ ಬೈಕ್ಗೆ ಮೃತದೇಹವನ್ನು ಕಟ್ಟಿ ಕೊಂಡೊಯ್ದಿದ್ದಾರೆ. ಅಮ್ಮನಿಗೆ ಚಿಕಿತ್ಸೆ ಕೊಡಿಸುವುದಕ್ಕಾಗಿ ಅನುಪ್ಪುರ್ ಜಿಲ್ಲೆಯಿಂದ ಇಬ್ಬರು ವ್ಯಕ್ತಿಗಳು ಶಹದೋಲ್ ಮೆಡಿಕಲ್ ಕಾಲೇಜಿಗೆ ಬಂದಿದ್ದರು. ಸರಿಯಾದ ಚಿಕಿತ್ಸೆ ಸಿಗದ ಕಾರಣ ಅಮ್ಮ ಮೃತಪಟ್ಟಿದ್ದಾರೆ. ಮೃತದೇಹ ಸಾಗಿಸಲು ಆಸತ್ರೆಯವರು ವಾಹನವನ್ನೂ ಒದಗಿಸಿಲ್ಲ ಎಂದು ಅವರು ಹೇಳಿದ್ದಾರೆ. ಮೃತದೇಹ ಸಾಗಿಸಲು ವಾಹನ ಸಿಗದೇ ಇದ್ದಾಗ ₹100 ಕೊಟ್ಟು ಒಂದು ಮರದ ಹಲಗೆ ಖರೀದಿಸಿದ್ದಾರೆ. ಆ ಹಲಗೆಯಲ್ಲಿ ಮೃತದೇಹವನ್ನಿಟ್ಟು ಅವರು ಅನುಪ್ಪುರ್ ಜಿಲ್ಲೆಯಲ್ಲಿರುವ ಗುಡಾರು ಗ್ರಾಮಕ್ಕೆ ಬೈಕ್ನಲ್ಲಿ ಪಯಣಿಸಿದ್ದಾರೆ.
ಅನುಪ್ಪುರ್ ನಲ್ಲಿರುನ ಗೊದಾರು ಗ್ರಾಮದ ನಿವಾಸಿ ಜೈಮಂತ್ರಿ ಯಾದವ್ ಎಂಬಾಕೆಗೆ ಎದೆ ನೋವು ಕಾಣಿಸಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಕೆಯ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಾಗ ಆಕೆಯನ್ನು ವೈದ್ಯಕೀಯ ಕಾಲೇಜಿಗೆ ಕರೆದೊಯ್ದಿದ್ದು, ರಾತ್ರಿ ಆಕೆ ಮೃತಪಟ್ಟಿದ್ದಾರೆ. ಜಿಲ್ಲಾ ಆಸ್ಪತ್ರೆಯ ದಾದಿಯರ ನಿರ್ಲಕ್ಷ್ಯ ಮತ್ತು ಮೆಡಿಕಲ್ ಕಾಲೇಜು ಆಡಳಿತದವರೇ ನನ್ನ ಅಮ್ಮನ ಸಾವಿಗೆ ಕಾರಣ ಎಂದು ಜೈಮಂತ್ರಿ ಯಾದವ್ ಅವರ ಮಗ ಸುಂದರ್ ಯಾದವ್ ಆರೋಪಿಸಿದ್ದಾರೆ.
ನಾವು ನಮ್ಮ ಹಳ್ಳಿಗೆ ಅಮ್ಮನ ಮೃತದೇಹವನ್ನು ಸಾಗಿಸಲು ಆಸ್ಪತ್ರೆಯವರಲ್ಲಿ ವಾಹನ ಕೇಳಿದಾಗ ಅವರು ನಿರಾಕರಿಸಿದರು. ಖಾಸಗಿ ವಾಹನಕ್ಕೆ ಕೊಡುವಷ್ಟು ದುಡ್ಡು ನಮ್ಮಲ್ಲಿರಲಿಲ್ಲ ಎಂದು ಮಗ ಹೇಳಿದ್ದಾರೆ. ಶಹದೋಲ್ ನಲ್ಲಿ ಸುಸಜ್ಜಿತ ವೈದ್ಯಕೀಯ ಕಾಲೇಜು ಇದ್ದರೂ ಜನರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ಜನರು ಆರೋಪಿಸಿದ್ದಾರೆ.
Published On - 12:37 pm, Mon, 1 August 22