ದೆಹಲಿ: ಕೊರೊನಾ ಸೋಂಕು ಪ್ರಕರಣಗಳು ದೇಶದಲ್ಲಿ ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದ ಎಲ್ಲ ರಾಜ್ಯಗಳ ಮುಖ್ಯಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರ ಸಭೆ ನಡೆಸಿದ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಈ ಸ್ಪಷ್ಟನೆ ನೀಡಿದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿ ರೂಪಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆರ್ಟಿಪಿಸಿಆರ್ ಟೆಸ್ಟಿಂಗ್ ಪ್ರಮಾಣ ಹೆಚ್ಚಿಸಬೇಕು. ಪ್ರಯೋಗಾಲಯಗಳು ವರದಿ ನೀಡುವ ವೇಗವೂ ಹೆಚ್ಚಾಗಬೇಕು ಎಂದು ಅವರು ಸೂಚಿಸಿದರು.
ಕ್ಲಸ್ಟರ್ ಏರಿಯಾಗಳಲ್ಲಿ ಕೊರೊನಾ ಪರೀಕ್ಷೆ ಹೆಚ್ಚಿಸಬೇಕು. ಕ್ವಾರಂಟೈನ್ನಲ್ಲಿ ಇರುವವರ ಮೇಲೆ ನಿಗಾ ಇಡಬೇಕು. ಸೋಂಕಿತರ ಸಂಪರ್ಕಕ್ಕೆ ಬಂದ ಸುಮಾರು 30 ಜನರನ್ನು ಪತ್ತೆಹಚ್ಚಿ, ಐಸೋಲೇಟ್ ಮಾಡಬೇಕು. ಕಂಟೇನ್ಮೆಂಟ್, ಮೈಕ್ರೋ ಕಂಟೇನ್ಮೆಂಟ್ ವಲಯಗಳನ್ನು ಗುರುತಿಸಿ ಅಗತ್ಯವಿರುವೆಡೆ ಸಂಚಾರ ನಿರ್ಬಂಧ ಮಾಡಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖ್ಯ ಕಾರ್ಯದರ್ಶಿಗಳಿಗೆ ಗೌಬಾ ಸೂಚನೆ ನೀಡಿದರು.
ಕೊರೊನಾದಿಂದ ಆಗುತ್ತಿರುವ ಸಾವುಗಳ ಪ್ರಮಾಣ ತಗ್ಗಿಸಲು ಕ್ರಮ ಕೈಗೊಳ್ಳಬೇಕು. ಅವಶ್ಯಕತೆಗೆ ತಕ್ಕಂತೆ ವ್ಯವಸ್ಥೆ ರೂಪಿಸಿಕೊಳ್ಳಿ. ಬೆಡ್ಗಳು, ಐಸಿಯು, ಆಕ್ಸಿಜನ್, ಐಸೋಲೇಟ್ ಬೆಡ್ಗಳನ್ನು ವ್ಯವಸ್ಥೆ ಮಾಡಿಕೊಳ್ಳಿ. ಆಸ್ಪತ್ರೆಗಳಲ್ಲಿ ದಾಸ್ತಾನು ಇರುವ ಆಮ್ಲಜನಕದ ಪ್ರಮಾಣದ ಮೇಲೆಯೂ ನಿಗಾ ಇರಲಿ. ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ಕೊರೊನಾ 2ನೇ ಅಲೆಯನ್ನು ನಿರ್ಲಕ್ಷಿಸಬೇಡಿ. ಮಾರುಕಟ್ಟೆ ಹಾಗೂ ಜಾತ್ರೆಗಳ ಮೇಲೆ ನಿಗಾ ಇರಲಿ. ಆಂಬುಲೆನ್ಸ್ಗಳನ್ನು ಸನ್ನದ್ಧಸ್ಥಿತಿಯಲ್ಲಿ ಇರಿಸಿಕೊಳ್ಳಿ, ಅಗತ್ಯ ಪ್ರಮಾಣದ ಸಿಬ್ಬಂದಿ ನೇಮಿಸಿಕೊಳ್ಳಿ. ಅವಶ್ಯವಿದ್ದಲ್ಲಿ ದೆಹಲಿಯ ಅಖಿಲ ಭಾರತ ವೈದ್ಯಕೀಯ ಸಂಶೋಧನಾ ಸಂಸ್ಥೆಯ (ಏಮ್ಸ್) ತಜ್ಞರನ್ನು ಸಂಪರ್ಕಿಸಿ, ಸಲಹೆ ಪಡೆಯಿರಿ. ಮಾಸ್ಕ್ ಮತ್ತು ದೈಹಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಎಲ್ಲರ ಕರ್ತವ್ಯ. ಇದನ್ನು ಜಾರಿಗೆ ತರಲು ಕಾನೂನಿನ ಬಲ ಬಳಸಿಕೊಳ್ಳಿ ಎಂದು ಸೂಚಿಸಿದರು.
ದೇಶದಲ್ಲಿ 11 ರಾಜ್ಯದಲ್ಲಿ ಪರಿಸ್ಥಿತಿ ಕಳವಳಕಾರಿಯಾಗಿದೆ. ಮಹಾರಾಷ್ಟ್ರ, ಪಂಜಾಬ್, ಛತ್ತೀಸಗಡ ರಾಜ್ಯಗಳಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ. 11 ರಾಜ್ಯಗಳಲ್ಲಿ ಕೊರೊನಾದ ಶೇ 90ರಷ್ಟು ಹೊಸ ಕೇಸ್ ಪತ್ತೆಯಾಗುತ್ತಿದೆ. ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದ ವರ್ಷದ ಉತ್ತುಂಗ ಸ್ಥಿತಿಯಲ್ಲಿದ್ದ ಅವಧಿಯಲ್ಲಿ ವರದಿಯಾಗುತ್ತಿದ್ದ ಸಂಖ್ಯೆಗಳಷ್ಟೇ ಪ್ರಕರಣಗಳು ಈಗಲೂ ಈ ರಾಜ್ಯಗಳಿಂದ ಬರಲು ಶುರುವಾಗಿದೆ. ವಿಶೇಷವಾಗಿ ಮಹಾರಾಷ್ಟ್ರದ ಸ್ಥಿತಿ ಚಿಂತಾಜನಕವಾಗಿದೆ. ಮಹಾರಾಷ್ಟ್ರದಲ್ಲಿ ಕಂಟೇನ್ಮೆಂಟ್ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ತಾಕೀತು ಮಾಡಿದರು.
ಸೋಂಕಿತರ ಸಾವಿನ ಸಂಖ್ಯೆಗೆ ಕಡಿವಾಣ ಹಾಕಲು ಸ್ಟಾಂಡರ್ಡ್ ಕ್ಲಿನಿಕಲ್ ಮ್ಯಾನೇಜ್ಮೆಂಟ್ ಪ್ರೋಟೋಕಾಲ್ ಅನುಸರಿಸಬೇಕು. ಸಣ್ಣ ಮತ್ತು ಮಧ್ಯಮ ನಗರಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಿದೆ. ಅರ್ಹರಿಗೆ ಲಸಿಕೆ ನೀಡುವ ವೇಗವನ್ನು ಹೆಚ್ಚಿಸಬೇಕು ಎಂದು ಸೂಚಿಸಿದರು.
(No Lockdown in India Again says Central Cabinet Secretary Rajiv Gauba)
ಇದನ್ನೂ ಓದಿ: Corona New Guidelines: ರಾಜ್ಯದಲ್ಲಿ ಲಾಕ್ಡೌನ್, ನೈಟ್ ಕರ್ಫ್ಯೂ ಇಲ್ಲ; ನೂತನ ಕೊರೊನಾ ತಡೆ ಮಾರ್ಗದರ್ಶಿ ಸೂತ್ರ ಬಿಡುಗಡೆ
ಇದನ್ನೂ ಓದಿ: Karnataka Covid-19 Update: ಕರ್ನಾಟಕದಲ್ಲಿ ಇಂದು ಹೊಸದಾಗಿ 4,991 ಜನರಿಗೆ ಕೊರೊನಾ ದೃಢ