ನಿಮಗೆ ನೈತಿಕತೆಯೇ ಇಲ್ಲ; ರಾಮಮಂದಿರ ಧ್ವಜಾರೋಹಣದ ಕುರಿತ ಪಾಕಿಸ್ತಾನದ ಟೀಕೆಗೆ ಭಾರತ ತಿರುಗೇಟು

ಅಯೋಧ್ಯೆಯ ರಾಮಮಂದಿರದಲ್ಲಿ ನಡೆದ ಧರ್ಮ ಧ್ವಜಾರೋಹಣದ ಕುರಿತಾದ ಪಾಕಿಸ್ತಾನದ ಹೇಳಿಕೆಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ರಾಮ ಮಂದಿರದಲ್ಲಿ ನಡೆದ ಸಮಾರಂಭದ ನಂತರ ಭಾರತದಲ್ಲಿ ಹೆಚ್ಚುತ್ತಿರುವ ಇಸ್ಲಾಮೋಫೋಬಿಯಾ, ದ್ವೇಷ ಭಾಷಣ ಮತ್ತು ದ್ವೇಷ ಪ್ರೇರಿತ ದಾಳಿಗಳ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯವು ಗಮನಹರಿಸಬೇಕೆಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಕರೆ ನೀಡಿತ್ತು.

ನಿಮಗೆ ನೈತಿಕತೆಯೇ ಇಲ್ಲ; ರಾಮಮಂದಿರ ಧ್ವಜಾರೋಹಣದ ಕುರಿತ ಪಾಕಿಸ್ತಾನದ ಟೀಕೆಗೆ ಭಾರತ ತಿರುಗೇಟು
Pm Modi In Ayodhya

Updated on: Nov 26, 2025 | 8:07 PM

ಅಯೋಧ್ಯೆ, ನವೆಂಬರ್ 26: ಅಯೋಧ್ಯೆಯ ರಾಮ ಮಂದಿರದ (Ram Temple) ಮೇಲೆ ಪವಿತ್ರ ಧ್ವಜಾರೋಹಣ ನಡೆಸಿದ್ದನ್ನು ಟೀಕಿಸಿದ ಪಾಕಿಸ್ತಾನದ ಹೇಳಿಕೆಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಪಾಕಿಸ್ತಾನಕ್ಕೆ ನಮ್ಮ ದೇಶಕ್ಕೆ ಉಪದೇಶ ನೀಡುವ ನೈತಿಕತೆಯೇ ಇಲ್ಲ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪೂರ್ಣಗೊಂಡ ಸಂಕೇತವಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಔಪಚಾರಿಕವಾಗಿ ಕೇಸರಿ ಧ್ವಜವನ್ನು ಹಾರಿಸಿದ್ದಕ್ಕೆ ಪಾಕ್ ಟೀಕಿಸಿತ್ತು. “ಭಾರತವು ಅಲ್ಪಸಂಖ್ಯಾತರ ಬಗ್ಗೆ ತಾರತಮ್ಯ ತೋರುತ್ತಿದೆ, ಮುಸ್ಲಿಂ ಸಂಸ್ಕೃತಿ ಮತ್ತು ಪರಂಪರೆಯನ್ನು ನಿರ್ಮೂಲನೆ ಮಾಡುತ್ತಿದೆ” ಎಂದು ಪಾಕ್ ಆರೋಪಿಸಿತ್ತು.

ಈ ಹೇಳಿಕೆಗೆ ತಿರುಗೇಟು ನೀಡಿರುವ ಭಾರತ, “ಪಾಕಿಸ್ತಾನ ತನ್ನ ದೇಶದಲ್ಲಿ ಪದೇಪದೆ ಮಾನವಹಕ್ಕುಗಳ ಮೇಲೆ ದಾಳಿ ನಡೆಸುತ್ತಲೇ ಇರುತ್ತದೆ. ತನ್ನ ಅಲ್ಪಸಂಖ್ಯಾತರ ಮೇಲಿನ ಧರ್ಮಾಂಧತೆ, ದಮನ ಮತ್ತು ವ್ಯವಸ್ಥಿತ ದುರುಪಯೋಗದ ಆಳವಾದ ಕಳಂಕಿತ ದಾಖಲೆಯನ್ನು ಹೊಂದಿರುವ ದೇಶವಾಗಿರುವ ಪಾಕಿಸ್ತಾನ ಇತರರಿಗೆ ಉಪದೇಶ ನೀಡುವ ಯಾವುದೇ ನೈತಿಕ ಸ್ಥಾನವನ್ನು ಉಳಿಸಿಕೊಂಡಿಲ್ಲ” ಎಂದು ಭಾರತದ ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಟೀಕಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದ ಜೈಲಿನೊಳಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹತ್ಯೆಯಾದರಾ?

ಪಾಕಿಸ್ತಾನವು ಭಾರತದ ವಿರುದ್ಧ ತನ್ನ ಆಧಾರರಹಿತ ಆಕ್ರೋಶವನ್ನು ಹೊರಹಾಕಿತ್ತು. ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿದ ಭಾರತ ಸರ್ಕಾರ, ನ್ಯಾಯಾಂಗದ ಮೇಲೆ ಟೀಕಾಪ್ರಹಾರ ನಡೆಸಿತ್ತು. ಇದನ್ನು ಅಲ್ಪಸಂಖ್ಯಾತರ ಬಗ್ಗೆ ಭಾರತದ ತಾರತಮ್ಯದ ವಿಧಾನ ಎಂದು ಕರೆದಿತ್ತು.


“ಬೂಟಾಟಿಕೆಯ ಧರ್ಮೋಪದೇಶಗಳನ್ನು ನೀಡುವ ಬದಲು, ಪಾಕಿಸ್ತಾನವು ತನ್ನ ದೃಷ್ಟಿಯನ್ನು ಬದಲಿಸಿಕೊಂಡು, ತನ್ನದೇ ಆದ ಮಾನವ ಹಕ್ಕುಗಳ ರಕ್ಷಣೆಯ ಮೇಲೆ ಕೇಂದ್ರೀಕರಿಸುವುದು ಉತ್ತಮ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ರೋಡ್ ಶೋ; ರಾಮಜನ್ಮಭೂಮಿಯ ಜನರಿಂದ ಅದ್ದೂರಿ ಸ್ವಾಗತ

ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ರಾಮ ಮಂದಿರದ ಮೇಲೆ ನಡೆದ ಭವ್ಯವಾದ ಧ್ವಜಾರೋಹಣ ಸಮಾರಂಭದಲ್ಲಿ ಪವಿತ್ರ ಕೇಸರಿ ಧ್ವಜವನ್ನು ಹಾರಿಸಿದರು. ಇದು ಶ್ರೀ ರಾಮ ಜನ್ಮಭೂಮಿ ದೇವಾಲಯ ಔಪಚಾರಿಕವಾಗಿ ಪೂರ್ಣಗೊಂಡಿದೆ ಎಂಬುದರ ಸಂಕೇತವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ