Aam Admi Party: ದಿನವಿಡೀ ಕರೆಂಟ್, 300 ಯುನಿಟ್ ವಿದ್ಯುತ್ ಉಚಿತ; ಉತ್ತರಾಖಂಡದಲ್ಲಿ ಆಮ್ ಆದ್ಮಿಯನ್ನು ಗೆಲ್ಲಿಸಲು ಬಿಗ್ ಆಫರ್

|

Updated on: Jul 11, 2021 | 4:14 PM

Uttarakhand Elections: ಮುಂದಿನ ಚುನಾವಣೆಯಲ್ಲಿ ಉತ್ತರಾಖಂಡದಲ್ಲಿ ಆಮ್ ಆದ್ಮಿ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ ಯಾವುದೇ ವಿದ್ಯುತ್ ಕಡಿತವಿಲ್ಲದೆ ಎಲ್ಲ ಮನೆಗಳಿಗೂ ಉಚಿತವಾಗಿ 300 ಯುನಿಟ್ ವಿದ್ಯುತ್ ನೀಡುವುದಾಗಿ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

Aam Admi Party: ದಿನವಿಡೀ ಕರೆಂಟ್, 300 ಯುನಿಟ್ ವಿದ್ಯುತ್ ಉಚಿತ; ಉತ್ತರಾಖಂಡದಲ್ಲಿ ಆಮ್ ಆದ್ಮಿಯನ್ನು ಗೆಲ್ಲಿಸಲು ಬಿಗ್ ಆಫರ್
ಅರವಿಂದ್ ಕೇಜ್ರಿವಾಲ್
Follow us on

ಡೆಹ್ರಾಡೂನ್: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮೊದಲ ಪ್ರಯತ್ನದಲ್ಲೇ ಜಯಭೇರಿ ಬಾರಿಸಿ, ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷ (AAP) ಇದೀಗ ಉತ್ತರಾಖಂಡದಲ್ಲೂ ಅಧಿಕಾರಕ್ಕೆ ಬರಲು ಸಿದ್ಧತೆ ನಡೆಸಿದೆ. ಈಗಾಗಲೇ ಉತ್ತರಾಖಂಡದಲ್ಲಿ ಚುನಾವಣಾ ಅಖಾಡ ಸಿದ್ಧವಾಗಿದೆ. ‘ದೇವಭೂಮಿ’ (the Land of Gods) ಎಂದು ಕರೆಯಲ್ಪಡುವ ಉತ್ತರಾಖಂಡದಲ್ಲಿ ತಮ್ಮ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಕಾಂಗ್ರೆಸ್, ಬಿಜೆಪಿ ಈಗಾಗಲೇ ಸಿದ್ಧತೆ ನಡೆಸಿವೆ. ಈ ಎರಡು ಪಕ್ಷಗಳಿಗೆ ಸೆಡ್ಡು ಹೊಡೆಯಲು ಮುಂದಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಉತ್ತರಾಖಂಡದಲ್ಲಿ ತಮ್ಮ ಆಮ್ ಆದ್ಮಿ ಪಕ್ಷವನ್ನು (Aam Admi Party) ಅಧಿಕಾರಕ್ಕೆ ತರಲೇಬೇಕೆಂದು ಪಣ ತೊಟ್ಟಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಇಂದು ಉತ್ತರಾಖಂಡಕ್ಕೆ ಭೇಟಿ ನೀಡಿದ್ದ ಅರವಿಂದ್ ಕೇಜ್ರಿವಾಲ್ ಉತ್ತರಾಖಂಡದ ಜನರಿಗೆ ಬಂಪರ್ ಆಫರ್ ನೀಡಿದ್ದಾರೆ. ಮುಂದಿನ ವರ್ಷ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಪಂಜಾಬ್ ರಾಜ್ಯದಲ್ಲಿ ಆಮ್ ಆದ್ಮಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಾಗಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಅದರ ಬೆನ್ನಲ್ಲೇ ಉತ್ತರಾಖಂಡ ರಾಜ್ಯದಲ್ಲಿ ತಮ್ಮ ಆಮ್ ಆದ್ಮಿ ಪಕ್ಷವನ್ನು ಅಧಿಕಾರಕ್ಕೆ ತರಲು ಅರವಿಂದ್ ಕೇಜ್ರಿವಾಲ್ ತಯಾರಿ ನಡೆಸಿದ್ದಾರೆ.

ಇಂದು ಉತ್ತರಾಖಂಡದ ಪ್ರವಾಸ ಕೈಗೊಂಡಿದ್ದ ಅರವಿಂದ್ ಕೇಜ್ರಿವಾಲ್, ಉತ್ತರಾಖಂಡದ ಜನರಿಗಾಗಿ ವಿಶೇಷ ಯೋಜನೆಯನ್ನು ಘೋಷಿಸಿದ್ದಾರೆ. ಒಂದುವೇಳೆ ಮುಂದಿನ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ ಉತ್ತರಾಖಂಡದ ಜನರಿಗೆ ಯಾವುದೇ ವಿದ್ಯುತ್ ಕಡಿತವಿಲ್ಲದೆ ಎಲ್ಲ ಮನೆಗಳಿಗೂ ಉಚಿತವಾಗಿ 300 ಯುನಿಟ್ ವಿದ್ಯುತ್ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.

ಉತ್ತರಾಖಂಡದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಈಗಾಗಲೇ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಹೀಗಾಗಿ, ಉತ್ತರಾಖಂಡದ ಈ ಬಾರಿಯ ಚುನಾವಣಾ ಕಣ ತೀವ್ರ ಕುತೂಹಲ ಮೂಡಿಸಿದೆ. ಈ ಹಿಂದೆ ದೆಹಲಿಯಲ್ಲಿ ಘೋಷಿಸಿದಂತೆ ಉತ್ತರಾಖಂಡದಲ್ಲೂ ಉಚಿತ ವಿದ್ಯುತ್‌ ಯೋಜನೆಯನ್ನು ಘೋಷಿಸುವ ಮೂಲಕ ಉತ್ತರಾಖಂಡವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಆಮ್ ಆದ್ಮಿ ಪಕ್ಷ ಮುಂದಾಗಿದೆ. ಆಪ್ (AAP) ಪಕ್ಷವನ್ನು ಅಧಿಕಾರಕ್ಕೆ ತಂದರೆ ಉತ್ತರಾಖಂಡದಲ್ಲಿ ಯಾವುದೇ ಪವರ್ ಕಟ್ ಇರುವುದಿಲ್ಲ ಹಾಗೂ ಪ್ರತಿ ಮನೆಗಳಿಗೂ 300 ಯುನಿಟ್ ಉಚಿತ ವಿದ್ಯುತ್ ಪೂರೈಕೆ ಮಾಡುವುದಾಗಿ ಅರವಿಂದ್ ಕೇಜ್ರಿವಾಲ್ ಇಂದು ಘೋಷಿಸಿದ್ದಾರೆ.

ಉತ್ತರಾಖಂಡ ರಾಜ್ಯದಲ್ಲಿ ವಿದ್ಯುತ್ ಉತ್ಪಾದಿಸಿ, ಬೇರೆ ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿದೆ. ಹಾಗಿದ್ದರೂ ಆ ರಾಜ್ಯದಲ್ಲಿ ವಿದ್ಯುತ್‌ ಬಿಲ್ ಬಹಳ ದುಬಾರಿಯಾಗಿದೆ. ದೆಹಲಿಗೆ ಬೇಕಾದ ವಿದ್ಯುತ್, ದೆಹಲಿಯಲ್ಲಿ ಉತ್ಪಾದನೆಯಾಗುವುದಿಲ್ಲ. ನಾವು ಬೇರೆ ರಾಜ್ಯದಿಂದ ವಿದ್ಯುತ್ ಖರೀದಿಸುತ್ತಿದ್ದೇವೆ. ಹಾಗಿದ್ದರೂ ದೆಹಲಿಯಲ್ಲಿ ಉಚಿತ ವಿದ್ಯುತ್‌ ನೀಡಲಾಗುತ್ತಿದೆ. ಅದೇ ರೀತಿ ಉತ್ತರಾಖಂಡದ ಜನರಿಗೂ ಉಚಿತ ವಿದ್ಯುತ್ ಸಿಗಬೇಕಲ್ಲವೇ? ಎಂದು ಟ್ವೀಟ್‌ ಮಾಡುವ ಮೂಲಕ ಈ ಮೊದಲೇ ಸಿಎಂ ಅರವಿಂದ್ ಕೇಜ್ರಿವಾಲ್ ಉತ್ತರಾಖಂಡ ಸರ್ಕಾರವನ್ನು ಟೀಕಿಸಿದ್ದರು. ಇದೀಗ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 300 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸುವ ಮೂಲಕ ಚುನಾವಣಾ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ.

ಪಂಜಾಬ್​ನಲ್ಲೂ ಇದೇ ತಂತ್ರಗಾರಿಕೆಯನ್ನು ಉಪಯೋಗಿಸಿದ್ದ ಅರವಿಂದ್ ಕೇಜ್ರಿವಾಲ್ ಪಂಜಾಬ್​ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಅಲ್ಲಿನ ಜನರು 300 ಯುನಿಟ್​ವರೆಗಿನ ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗಿಲ್ಲ. ಆ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುವುದು ಎಂದು ಘೋಷಿಸಿದ್ದರು. ಅದೇ ಯೋಜನೆಯನ್ನು ಇದೀಗ ಉತ್ತರಾಖಂಡದಲ್ಲೂ ಘೋಷಿಸಿದ್ದಾರೆ.

ಉತ್ತರಾಖಂಡದ ಮುಖ್ಯಮಂತ್ರಿ ಸ್ಥಾನಕ್ಕೆ ಕಳೆದ ವಾರ ತೀರತ್ ಸಿಂಗ್ ರಾವತ್ ರಾಜೀನಾಮೆ ನೀಡಿದ್ದರು. ಉತ್ತರಾಖಂಡದಲ್ಲಿ ನಡೆದ ರಾಜಕೀಯ ಬಿಕ್ಕಟ್ಟಿನಿಂದಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಾಲ್ಕೇ ತಿಂಗಳಿಗೆ ತೀರತ್ ಸಿಂಗ್ ರಾವತ್ ರಾಜೀನಾಮೆ ನೀಡುವ ಪರಿಸ್ಥಿತಿ ಎದುರಾಗಿತ್ತು. ಉತ್ತರಾಖಂಡದಲ್ಲಿ ಸದ್ಯಕ್ಕೆ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಮುಂದಿನ ಚುನಾವಣೆಯಲ್ಲಿ ಮತ್ತೆ ಜಯ ಗಳಿಸಲು ಸಿದ್ಧತೆ ನಡೆಸಿದೆ.

ಉತ್ತರಾಖಂಡದ ಮುಖ್ಯಮಂತ್ರಿಯಾಗಿದ್ದ ತ್ರಿವೇಂದ್ರ ರಾವತ್ ಅವರ ವಿರುದ್ಧ ಬಿಜೆಪಿ ಪಕ್ಷದಲ್ಲಿ ಭಾರೀ ಅಸಮಾಧಾನ ಉಂಟಾಗಿತ್ತು. ಹೀಗಾಗಿ, ನಾಯಕತ್ವ ಬದಲಾವಣೆಗೆ ಮುಂದಾಗಿದ್ದ ಬಿಜೆಪಿ ಕಳೆದ ಮಾರ್ಚ್​ ತಿಂಗಳಲ್ಲಿ ತೀರತ್ ಸಿಂಗ್ ರಾವತ್ ಅವರನ್ನು ಉತ್ತರಾಖಂಡದ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿತ್ತು. ಆದರೆ, ತೀರತ್ ಸಿಂಗ್ ಬಗ್ಗೆ ಕೂಡ ಅವರದೇ ಸರ್ಕಾರದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗಿದ್ದವು. ಸಿಎಂ ಆಗಿದ್ದಾಗ ಅನೇಕ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಭಾರೀ ಟೀಕೆಗೆ ಗುರಿಯಾಗಿದ್ದ ತೀರತ್ ಸಿಂಗ್ ಕೊರೋನಾ ಪರಿಸ್ಥಿತಿಯ ನಿರ್ವಹಣೆಯಲ್ಲೂ ಸೋತಿದ್ದರು. ಅಲ್ಲದೆ, ಕೊರೋನಾದಿಂದಾಗಿ ಚುನಾವಣೆ ನಡೆಯದೆ ನಿಯಮಾನುಸಾರ ಅವರು ರಾಜ್ಯ ವಿಧಾನಸಭೆಗೆ ಆಯ್ಕೆಯಾಗದ ಹಿನ್ನೆಲೆಯಲ್ಲಿ ಜುಲೈ 2ರಂದು ರಾತ್ರಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೀರತ್ ಸಿಂಗ್ ರಾವತ್ ರಾಜೀನಾಮೆ ನೀಡಿದ ಎರಡೇ ದಿನಕ್ಕೆ ಅಂದರೆ ಜುಲೈ 4ರಂದು ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಅಧಿಕಾರ ಸ್ವೀಕರಿಸಿದ್ದರು.

ಇದನ್ನೂ ಓದಿ: ಪಂಜಾಬ್​​ನಲ್ಲಿ ಉಚಿತ ವಿದ್ಯುತ್ ಭರವಸೆ, ಎಎಪಿಯಿಂದಲೇ ಮ್ಯಾಜಿಕ್ ಸಾಧ್ಯ: ಅರವಿಂದ್ ಕೇಜ್ರಿವಾಲ್

ಇದನ್ನೂ ಓದಿ: Pushkar Singh Dhami ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಪ್ರಮಾಣ ವಚನ; ಮೋದಿ ಅಭಿನಂದನೆ

Published On - 4:06 pm, Sun, 11 July 21