ದೆಹಲಿ: ಭಾರತದಲ್ಲಿ 12ರಿಂದ 17 ವರ್ಷದ ವಯೋಮಾನದ ಮಕ್ಕಳ ತುರ್ತು ಬಳಕೆಗೆ ಕೊವಾವ್ಯಾಕ್ಸ್ ಲಸಿಕೆ ನೀಡಲು ಭಾರತ ಔಷಧ ಮಹಾನಿಯಂತ್ರಕರು (Drugs Controller General of India – DGCI) ಅನುಮತಿ ನೀಡಿದ್ದಾರೆ. ಚೀನಾದಲ್ಲಿ ಮತ್ತೆ ಕೊರೊನಾ ಹರಡಿ, ಹಲವು ನಗರಗಳಿಗೆ ಲಾಕ್ಡೌನ್ ನಿರ್ಬಂಧಗಳನ್ನು ವಿಧಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವ ಪಡೆದುಕೊಂಡಿದೆ. ನೊವಾವ್ಯಾಕ್ಸ್ ಕಂಪನಿಯ ಈ ಲಸಿಕೆಯನ್ನು ಭಾರತದಲ್ಲಿ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೊವಾವ್ಯಾಕ್ಸ್ ಹೆಸರಿನಲ್ಲಿ ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
ಕೊವಿಡ್-19 ಸೋಂಕಿನ ವಿರುದ್ಧ ತನ್ನ ಲಸಿಕೆ ಶೇ 80ರಷ್ಟು ಪರಿಣಾಮಕಾರಿ ಎಂದು ಕಳೆದ ವಾರ ನೊವಾವ್ಯಾಕ್ಸ್ ಹೇಳಿತ್ತು. ಭಾರತದ 2,247 ಹದಿಹರೆಯದ ಮಕ್ಕಳ ಮೇಲೆ ಕೊವಾವ್ಯಾಕ್ಸ್ ಲಸಿಕೆಯ ಪರೀಕ್ಷೆಗಳು ನಡೆದಿತ್ತು. ಈ ಮಕ್ಕಳೆಲ್ಲರೂ 12ರಿಂದ 17 ವರ್ಷ ವಯೋಮಾನದವರು. ಕ್ಲಿನಿಕಲ್ಸ್ ಟ್ರಯಲ್ಸ್ ವೇಳೆಯಲ್ಲಿ ಈ ಲಸಿಕೆ ಪಡೆದ ಮಕ್ಕಳ ದೇಹದಲ್ಲಿಯೂ ನಿರೀಕ್ಷಿತ ರೀತಿಯಲ್ಲಿ ಪ್ರತಿಕಾಯಗಳನ್ನು ಬಿಡುಗಡೆ ಮಾಡಿದೆ ಎಂದು ಕಂಪನಿ ಹೇಳಿದೆ.
ಮಕ್ಕಳಿಗೆ ನೀಡುವ ಉದ್ದೇಶದೊಂದಿಗೆ ಅಭಿವೃದ್ಧಿ ಪಡಿಸಿದ ಲಸಿಕೆಗಳ ಪೈಕಿ ಕೊವಾವ್ಯಾಕ್ಸ್ ಸೇರಿ 4 ಲಸಿಕೆಗಳಿಗೆ ಅನುಮತಿ ಸಿಕ್ಕಿದೆ. 12 ವರ್ಷಕ್ಕೂ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಲು ಭಾರತ ಸರ್ಕಾರ ಅನುಮತಿ ನೀಡಿದೆ. ಬಯಲಾಜಿಕಲ್ ಇ ಕಂಪನಿಯ ಕೊರ್ಬಾವ್ಯಾಕ್ಸ್, ಝೈಡಸ್ ಕೆಡಿಲಿಯಾ ಕಂಪನಿಯ ಝೈಕೊವ್-ಡಿ ಮತ್ತು ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆಗಳಿಗೆ ಈಗಾಗಲೇ ಅನುಮತಿ ಸಿಕ್ಕಿದೆ.
ಭಾರತದಲ್ಲಿ ಈವರೆಗೆ 15 ವರ್ಷ ದಾಟಿದ ಮಕ್ಕಳಿಗೆ ಮಾತ್ರ ಲಸಿಕೆ ನೀಡಲಾಗುತ್ತಿತ್ತು. ಕಳೆದ ವಾರವಷ್ಟೇ ಭಾರತದಲ್ಲಿ 12ರಿಂದ 14 ವರ್ಷದ ಮಕ್ಕಳಿಗೆ ಬಯಾಲಾಜಿಕಲ್ ಇ ಕಂಪನಿಯ ಕೊರ್ಬಾವ್ಯಾಕ್ಸ್ ಲಸಿಕೆ ನೀಡಲು ಅನುಮತಿ ನೀಡಲಾಗಿತ್ತು. ನೊವಾವ್ಯಾಕ್ಸ್ನ ಕೊರೊನಾ ನಿರೋಧಕ ಲಸಿಕೆಯನ್ನು 18 ವರ್ಷ ದಾಟಿದ ಎಲ್ಲರಿಗೂ ನೀಡಬಹುದು ಎಂದು ಕಳೆದ ಡಿಸೆಂಬರ್ನಲ್ಲಿ ಡಿಜಿಸಿಐ ಅನುಮತಿ ನೀಡಿತ್ತು.
ಇದನ್ನೂ ಓದಿ: ಚೀನಾದಲ್ಲಿ ಮತ್ತೆ ಹೆಚ್ಚಾಗಿದೆ ಕೊರೊನಾ ವೈರಸ್; ಒಂದು ವರ್ಷದ ಬಳಿಕ ಒಂದೇ ದಿನ ಇಬ್ಬರು ಸೋಂಕಿನಿಂದ ಸಾವು
ಇದನ್ನೂ ಓದಿ: ಜಾಗತಿಕವಾಗಿ ಕೊರೊನಾ ಏರಿಕೆ; ಈ 5 ಅಂಶಗಳನ್ನು ಅನುಸರಿಸುವಂತೆ ಎಲ್ಲಾ ರಾಜ್ಯಗಳಿಗೆ ರಾಜೇಶ್ ಭೂಷಣ್ ಪತ್ರ