ಭುವನೇಶ್ವರ: ಭಾರತದಲ್ಲಿ ಕೊರೊನಾ ಎರಡನೇ ಅಲೆ ಅತ್ಯಂತ ಕಳವಳಕಾರಿಯಾಗಿ ಹಬ್ಬುತ್ತಿರುವ ಹೊತ್ತಿನಲ್ಲೇ ಮ್ಯೂಕೋಮೈಕೋಸಿಸ್ ಅಥವಾ ಬ್ಲಾಕ್ ಫಂಗಸ್ ಸೋಂಕು ಮತ್ತೊಂದು ಆತಂಕ ಸೃಷ್ಟಿಸಿದೆ. ಕೊರೊನಾದಿಂದ ಗುಣಮುಖರಾದವರಲ್ಲಿ ಕಂಡುಬರುತ್ತಿರುವ ಈ ಸೋಂಕು ಪ್ರಾಣಾಪಾಯ ಸೃಷ್ಟಿಸುವ ಸಾಧ್ಯತೆಯೂ ಇರುವುದರಿಂದ ಇದನ್ನು ನಿರ್ಲಕ್ಷಿಸದಂತೆ ವೈದ್ಯರು ಮನವಿ ಮಾಡುತ್ತಿದ್ದಾರೆ. ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದೇಶದ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವ ಬ್ಲಾಕ್ ಫಂಗಸ್ ಸೋಂಕು ಇದೀಗ ಒಡಿಶಾ ರಾಜ್ಯಕ್ಕೂ ಕಾಲಿಟ್ಟಿದೆ. ಅನಿಯಂತ್ರಿತ ಮಧುಮೇಹ ಸಮಸ್ಯೆಯನ್ನೂ ಹೊಂದಿದ್ದ 71 ವರ್ಷದ ಕೊರೊನಾ ಸೋಂಕಿತ ವೃದ್ಧರೊಬ್ಬರಲ್ಲಿ ಮೇ 10ರಂದು ಸೋಂಕು ಕಾಣಿಸಿಕೊಂಡಿದ್ದು, ಒಡಿಶಾದ ಮೊದಲ ಪ್ರಕರಣ ವರದಿಯಾದಂತಾಗಿದೆ.
ಸೋಂಕಿತ ವೃದ್ಧ ಜೈಪುರ ಜಿಲ್ಲೆಯ ನಿವಾಸಿಯಾಗಿದ್ದು, ಬ್ಲಾಕ್ ಫಂಗಸ್ ಸೋಂಕು ಕಾಣಿಸಿಕೊಂಡ ತಕ್ಷಣ ಭುವನೇಶ್ವರದ ಪ್ರಸಿದ್ಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ಮಧುಮೇಹ ನಿಯಂತ್ರಕ ಹಾಗೂ ಆ್ಯಂಟಿ ಫಂಗಲ್ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ನಿರ್ದೇಶಕ ಡಾ. ಸಿಬಿಕೆ ಮೊಹಾಂತಿ ತಿಳಿಸಿದ್ದಾರೆ. ಸೋಂಕಿತ ವ್ಯಕ್ತಿ ಅನಿಯಂತ್ರಿತ ಮಧುಮೇಹ ಸಮಸ್ಯೆ ಹೊಂದಿದ್ದು, ಏಪ್ರಿಲ್ 20ರಂದು ಅವರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಹೋಂ ಐಸೋಲೇಶನ್ನಲ್ಲಿ ಇದ್ದು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗೆ ಮೇ 8ರಂದು ಕಣ್ಣು ಊದಿಕೊಳ್ಳಲಾರಂಭಿಸಿದ್ದು, ಮೂಗಿನಿಂದ ಕಪ್ಪು ಬಣ್ಣದ ದ್ರವ ಸ್ರವಿಸಲಾರಂಭಿಸಿದೆ. ನಂತರ ಪರೀಕ್ಷೆ ನಡೆಸಿದಾಗ ಅವರಿಗೆ ಬ್ಲಾಕ್ ಫಂಗಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ರಾಜ್ಯದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ರೋಗಿಗೆ ಸಮರ್ಪಕವಾದ ಚಿಕಿತ್ಸೆ ಒದಗಿಸಲಾಗುತ್ತಿದೆ. ರಾಜ್ಯದಲ್ಲಿ ಮ್ಯೂಕೋಮೈಕೋಸಿಸ್ ಸೋಂಕು ನಿವಾರಿಸಲು ಬೇಕಾದ ಸೌಲಭ್ಯಗಳೂ ಇವೆ ಎಂದು ತಿಳಿಸಿದ್ದಾರೆ.
ಈ ಮೊದಲು ವರ್ಷಕ್ಕೆ ಒಂದೆರೆಡು ಬ್ಲಾಕ್ ಫಂಗಸ್ ಪ್ರಕರಣ ಮಾತ್ರ ಪತ್ತೆಯಾಗುತ್ತಿತ್ತಾದರೂ ಇದೀಗ ಕೊರೊನಾದ ಎರಡನೇ ಅಲೆಯಲ್ಲಿ ಈ ಸಮಸ್ಯೆ ಹೆಚ್ಚಾಗಲಾರಂಭಿಸಿದೆ. ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗಿದ್ದು, ಗುಜರಾತ್ನಲ್ಲಿ ನೂರಕ್ಕೂ ಹೆಚ್ಚು ಮಂದಿಯನ್ನು ಕಾಡಿದ ಈ ಸಮಸ್ಯೆ ಎಂಟು ಜನರ ದೃಷ್ಟಿಯನ್ನು ಕಿತ್ತುಕೊಂಡಿದೆ. ಹೀಗಾಗಿ ಬ್ಲಾಕ್ ಫಂಗಸ್ ರೋಗಿಗಳ ಚಿಕಿತ್ಸೆಗೆ ಗುಜರಾತ್ ಸರ್ಕಾರದಿಂದ ಆಸ್ಪತ್ರೆಯಲ್ಲಿ ಪ್ರತೇಕ ವಾರ್ಡ್ ಮಾಡಲಾಗಿದ್ದು, 5000 ಅಪಟೋರೇಸಿನ್ ಬಿ ಇಂಜೆಕ್ಷನ್ ಖರೀದಿಗೆ 3.12 ಕೋಟಿ ರೂಪಾಯಿ ಹಣ ಖರ್ಚು ಮಾಡಿದೆ. ಸದ್ಯ ಸೂರತ್ನಲ್ಲಿಯೇ 40ಕ್ಕೂ ಹೆಚ್ಚು ಬ್ಲಾಕ್ ಫಂಗಸ್ ಪ್ರಕರಣ ಪತ್ತೆಯಾಗಿದ್ದು, ಕರ್ನಾಟಕದಲ್ಲೂ ಸುಮಾರು 35 ಪ್ರಕರಣಗಳು ಕಂಡುಬಂದಿವೆ.
ಇದನ್ನೂ ಓದಿ:
ಕರ್ನಾಟಕಕ್ಕೆ ಕಾಲಿಟ್ಟ ಮ್ಯೂಕೋಮೈಕೋಸಿಸ್! ಸೋಂಕಿನ ಲಕ್ಷಣಗಳೇನು, ಚಿಕಿತ್ಸೆಯೇನು? ಎಂಬ ಸಂಪೂರ್ಣ ವಿವರ ಇಲ್ಲಿದೆ