ತಾಲಿಬಾನಿಗಳು ಉಗ್ರರು ಅಂತಾದಮೇಲೆ ಯಾಕೆ ಮಾತಾಡಬೇಕು?- ರಾಜತಾಂತ್ರಿಕ ಸಭೆಯನ್ನು ಟೀಕಿಸಿದ ಒಮರ್ ಅಬ್ದುಲ್ಲಾ

ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಒಮರ್​ ಅಬ್ದುಲ್ಲಾ, ತಾಲಿಬಾನ್​ ಉಗ್ರಸಂಘಟನೆ ಹೌದೋ..ಅಲ್ಲವೋ ಎಂಬುದನ್ನು ಮೊದಲು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.

ತಾಲಿಬಾನಿಗಳು ಉಗ್ರರು ಅಂತಾದಮೇಲೆ ಯಾಕೆ ಮಾತಾಡಬೇಕು?- ರಾಜತಾಂತ್ರಿಕ ಸಭೆಯನ್ನು ಟೀಕಿಸಿದ ಒಮರ್ ಅಬ್ದುಲ್ಲಾ
ಒಮರ್ ಅಬ್ದುಲ್ಲಾ
Updated By: Lakshmi Hegde

Updated on: Sep 01, 2021 | 5:30 PM

ಅಫ್ಘಾನಿಸ್ತಾನದ ಆಡಳಿತವನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳ ಉನ್ನತ ನಾಯಕ ಶೇರ್​ ಮೊಹಮ್ಮದ್​ ಅಬ್ಬಾಸ್​ ಸ್ಟಾನೆಕ್​ಝೈರೊಂದಿಗೆ, ಕತಾರ್​​ನಲ್ಲಿರುವ ಭಾರತ ರಾಯಭಾರಿ ದೀಪಕ್​ ಮಿತ್ತಲ್​ ನಿನ್ನೆ ದೋಹಾದಲ್ಲಿ ಸಭೆ ನಡೆಸಿದ್ದರು. ಶೇರ್​ ಮೊಹಮ್ಮದ್​ ಅಬ್ಬಾಸ್​, ದೋಹಾದಲ್ಲಿರುವ ತಾಲಿಬಾನಿ ರಾಜಕೀಯ ಕಚೇರಿ ಮುಖ್ಯಸ್ಥರೂ ಹೌದು. ಆದರೆ ನಿನ್ನೆ ತಾಲಿಬಾನಿಗಳೊಂದಿಗೆ ಭಾರತದ ರಾಯಭಾರಿ ನಡೆಸಿದ ಸಭೆಯ ಬಗ್ಗೆ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ಪ್ರಶ್ನೆ ಎತ್ತಿದ್ದಾರೆ. ತಾಲಿಬಾನ್​ ಒಂದು ಭಯೋತ್ಪಾದಕ ಸಂಘಟನೆ ಎಂದಾದ ಮೇಲೆ, ಅವರ ಬಳಿ ಯಾಕೆ ಮಾತನಾಡಬೇಕು? ಮಾತನಾಡುವುದು ಏನಿರುತ್ತದೆ ಎಂದು ಕೇಳಿದ್ದಾರೆ.

ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾಲಿಬಾನ್​ ಉಗ್ರಸಂಘಟನೆ ಹೌದೋ..ಅಲ್ಲವೋ ಎಂಬುದನ್ನು ಮೊದಲು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು. ಅವರು ಭಯೋತ್ಪಾದಕರು ಹೌದು ಎಂದಾದ ಮೇಲೆ ಅವರ ಬಳಿ ಮಾತನಾಡುವುದು ಏನಿರುತ್ತದೆ? ಹಾಗೊಮ್ಮೆ ತಾಲಿಬಾನಿಗಳು ಭಯೋತ್ಪಾದಕರಲ್ಲ ಎಂದರೆ ನೀವು ವಿಶ್ವಸಂಸ್ಥೆಗೆ ಹೋಗಿ, ಅಲ್ಲಿ ಉಗ್ರಸಂಘಟನೆ ಪಟ್ಟಿಯಿಂದ ತಾಲಿಬಾನ್​ನ್ನು ರದ್ದುಗೊಳಿಸುತ್ತೀರಾ? ನಿಮ್ಮ ಮನಸಿಗೆ ಮೊದಲು ಸ್ಪಷ್ಟನೆ ಕೊಟ್ಟುಕೊಳ್ಳಿ ಎಂದು ಒಮರ್ ಅಬ್ದುಲ್ಲಾ ಕೇಂದ್ರಕ್ಕೆ ಹೇಳಿದ್ದಾರೆ.

ನಿನ್ನೆ ಕತಾರ್​​ನ ದೋಹಾದಲ್ಲಿ ನಡೆದ ಭಾರತ ರಾಯಭಾರಿ ಮತ್ತು ತಾಲಿಬಾನ್​ ಮುಖಂಡ ನಡುವಿನ ಸಭೆಯಲ್ಲಿ ಸುರಕ್ಷತೆ, ಭದ್ರತೆ ಮತ್ತು ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂಥರ ಪ್ರಕ್ರಿಯೆ ಬಗ್ಗೆ ಸಮಗ್ರವಾಗಿ ಚರ್ಚಿಸಲಾಗಿದೆ. ಅದರೊಂದಿಗೆ ಭಾರತಕ್ಕೆ ಬರಲು ಇಚ್ಛಿಸುತ್ತಿರುವ ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ಸಮುದಾಯದ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ. ಇದೇ ವೇಳೆ ದೀಪಕ್​ ಮಿತ್ತಲ್​, ಅಫ್ಘಾನ್​ ನೆಲದಲ್ಲಿ ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಯಬಹುದೇ ಎಂಬ ಆತಂಕ ಕಾಡುತ್ತಿದೆ ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಯಾಗಿ ಉತ್ತರಿಸಿದ ತಾಲಿಬಾನ್​ ಮುಖಂಡ, ಅಂಥ ಬೆದರಿಕೆ ಒಡ್ಡುವುದಿಲ್ಲ. ಎಲ್ಲ ಸಮಸ್ಯೆಗಳನ್ನೂ ಧನಾತ್ಮಕವಾಗಿಯೇ ಪರಿಹರಿಸಿಕೊಳ್ಳೋಣ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Afghanistan Crisis: ಅಫ್ಘಾನಿಸ್ತಾನದಲ್ಲಿ ಇಂದು ಅಥವಾ ನಾಳೆ ತಾಲಿಬಾನ್ ನೂತನ ಸರ್ಕಾರ ರಚನೆ ಸಾಧ್ಯತೆ

Vedanta Limited: ವೇದಾಂತ ಕಂಪೆನಿಯಿಂದ ಪ್ರತಿ ಷೇರಿಗೆ 18 ರೂಪಾಯಿ ಮಧ್ಯಂತರ ಡಿವಿಡೆಂಡ್ ಘೋಷಣೆ

Published On - 5:27 pm, Wed, 1 September 21