Afghanistan Crisis: ಅಫ್ಘಾನಿಸ್ತಾನದಲ್ಲಿ ಇಂದು ಅಥವಾ ನಾಳೆ ತಾಲಿಬಾನ್ ಸರ್ಕಾರ ರಚನೆ ಸಾಧ್ಯತೆ
Taliban 2.0 Government | ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ನೇತೃತ್ವದಲ್ಲಿ 2.0 ಸರ್ಕಾರ ರಚನೆಯ ಮಾತುಕತೆ ಅಂತಿಮ ಹಂತದಲ್ಲಿದ್ದು, ಇಂದು ಸಂಜೆ ಅಥವಾ ನಾಳೆ ಹೊಸ ಸಚಿವ ಸಂಪುಟ ಘೋಷಣೆಯಾಗುವ ಸಾಧ್ಯತೆಯಿದೆ.
ಕಾಬೂಲ್: ಅಫ್ಘಾನಿಸ್ತಾನವನ್ನು (Afghanistan) ತಾಲಿಬಾನ್ ವಶಪಡಿಸಿಕೊಂಡ ಬಳಿಕ ಅಲ್ಲಿನ ಸರ್ಕಾರ ಪತನವಾಗಿತ್ತು. ಇದೀಗ ಅಫ್ಘಾನಿಸ್ತಾನದಲ್ಲಿ ನೂತನ ಸರ್ಕಾರ ರಚಿಸಲು ಎಲ್ಲ ಸಿದ್ಧತೆಗಳೂ ನಡೆದಿದ್ದು, ಇಂದು ಅಥವಾ ನಾಳೆಯೊಳಗೆ ಹೊಸ ಸಚಿವ ಸಂಪುಟ ಘೋಷಣೆಯಾಗುವ ಸಾಧ್ಯತೆಯಿದೆ. ಕಂದಹಾರ್ನಲ್ಲಿರುವ ತಾಲಿಬಾನ್ (Taliban Government) ಮುಖ್ಯಸ್ಥ ಹಿಬಾತುಲ್ಲಾ ಅಖುಂಡ್ಜಡಾ ನೂತನ ಸಚಿವರ ಪಟ್ಟಿಯೊಂದಿಗೆ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಕಾಬೂಲ್ಗೆ (Kabul) ಪ್ರಯಾಣ ಬೆಳೆಸುವ ಸಾಧ್ಯತೆಯಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ನೇತೃತ್ವದಲ್ಲಿ 2.0 ಸರ್ಕಾರ ರಚನೆಯ ಮಾತುಕತೆ ಅಂತಿಮ ಹಂತದಲ್ಲಿದ್ದು, ಇಂದು ಸಂಜೆ ಅಥವಾ ನಾಳೆ ಹೊಸ ಸಚಿವ ಸಂಪುಟ ಘೋಷಣೆಯಾಗುವ ನಿರೀಕ್ಷೆಯಿದೆ. ತಾಲಿಬಾನ್ ನಾಯಕ ಅನಸ್ ಹಖಾನಿ ಕೂಡ ಅಫ್ಘಾನ್ನಲ್ಲಿ ಸದ್ಯದಲ್ಲೇ ತಾಲಿಬಾನ್ ನೂತನ ಸರ್ಕಾರ ರಚನೆಯಾಗುವ ಬಗ್ಗೆ ಸುಳಿವು ನೀಡಿದ್ದಾರೆ.
ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಅಧಿಕಾರದಿಂದ ಕೆಳಗಿಳಿದ ನಂತರ ಅಫ್ಘಾನಿಸ್ತಾನದ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದ ಅಮ್ರುಲ್ಲಾ ಸಲೇಹ್ ತಾವೇ ಅಫ್ಘಾನಿಸ್ತಾನದ ಉಸ್ತುವಾರಿ ಅಧ್ಯಕ್ಷ. ತಾವು ತಾಲಿಬಾನ್ ಮುಂದೆ ತಲೆ ಬಾಗುವುದಿಲ್ಲ ಎಂದು ಘೋಷಿಸಿಕೊಂಡಿದ್ದರು. ಈ ನಡುವೆ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಲು ತಾಲಿಬಾನ್ ಮುಂದಾಗಿದೆ.
ತಾಲಿಬಾನ್ ಸಂಘಟನೆಯ ಸಹ-ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಅಫ್ಘಾನಿಸ್ತಾನದ ಮುಂದಿನ ಅಧ್ಯಕ್ಷರಾಗುವ ಸಾಧ್ಯತೆಯಿದೆ. ಹಾಗೇ, ತಾಲಿಬಾನ್ ಅಫ್ಘಾನಿಸ್ತಾನದ ಪ್ರಮುಖ ಖಾತೆಗಳಿಗೆ ತಾಲಿಬಾನ್ ಸಂಘಟನೆಗಳ ಹಿರಿಯ ನಾಯಕರು ಸಚಿವರಾಗಲಿದ್ದಾರೆ. ಆದರೆ, ಸಚಿವರ ಪಟ್ಟಿಯನ್ನು ತಾಲಿಬಾನ್ ಇನ್ನೂ ಬಿಡುಗಡೆ ಮಾಡಿಲ್ಲ. ಸದ್ಯದಲ್ಲೇ ತಾಲಿಬಾನ್ ಸಂಘಟನೆ ಅಫ್ಘಾನಿಸ್ತಾನದ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಸದ್ಯಕ್ಕೆ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಹಿಂದೊಮ್ಮೆ ಅಮೆರಿಕ ಸೇನೆ ವಶಕ್ಕೆ ಪಡೆದು ಕ್ಯೂಬಾದ ಗ್ವಾಂಟನಮೋ ಸಮುದ್ರ ತೀರದಲ್ಲಿ ಬಂಧಿಸಿಟ್ಟಿದ್ದ ತಾಲಿಬಾನ್ ಉಗ್ರ ಮುಲ್ಲಾ ಅಬ್ದುಲ್ ಖಾಯುಂ ಜಾಕೀರ್ ಅಫ್ಘಾನಿಸ್ತಾನದ ಮುಂದಿನ ರಕ್ಷಣಾ ಸಚಿವರಾಗಲಿದ್ದಾರೆ.
2001ರಲ್ಲಿ ಅಮೆರಿಕ ಸೇನೆಯಿಂದ ಬಂಧಿಸಲ್ಪಟ್ಟಿದ್ದ ಮುಲ್ಲಾ ಅಬ್ದುಲ್ ಖಾಯುಂ ಜಾಕೀರ್ ಅವರನ್ನು 2007ರವರೆಗೂ ಗ್ವಾಂಟನಮೋ ಸಮುದ್ರ ತೀರದಲ್ಲಿ ಇರಿಸಲಾಗಿತ್ತು. ಬಳಿಕ ಆತನನ್ನು ಅಫ್ಘಾನಿಸ್ತಾನದ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗಿತ್ತು. ಆತ ಇದೀಗ ಅಫ್ಘಾನಿಸ್ತಾನದ ರಕ್ಷಣಾ ಸಚಿವರಾಗಲಿದ್ದಾರೆ.
ಅಫ್ಘಾನಿಸ್ತಾನದ ಹಣಕಾಸು ಸಚಿವರಾಗಿ ತಾಲಿಬಾನ್ಗೆ ಹಣಕಾಸಿನ ಸಹಾಯ ಮಾಡುತ್ತಿದ್ದ ಗುಲ್ ಅಘಾ ನೇಮಕಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಸಾದರ್ ಇಬ್ರಾಹಿಂಗೆ ಕೂಡ ಕೇಂದ್ರ ಸಚಿವ ಸ್ಥಾನ ಸಿಗಲಿದೆ. ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರ ವಕ್ತಾರನನ್ನು ತಾಲಿಬಾನ್ ಉಗ್ರರು ಹತ್ಯೆ ಮಾಡಿದ್ದರು. ಆ ಜಾಗಕ್ಕೆ ತಾಲಿಬಾನ್ ಉಗ್ರ ಸಂಘಟನೆಯ ವಕ್ತಾರ ಜಬೀಹುಲ್ಲಾ ಮುಜಾಹೀದ್ ನೇಮಕಗೊಂಡಿದ್ದಾರೆ.
ಕಳೆದ ವಾರ ಅಫ್ಘಾನಿಸ್ತಾನದ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರನ್ನಾಗಿ ತಾಲಿಬಾನ್ ಹಾಜಿ ಮೊಹಮ್ಮದ್ ಇದ್ರೀಸ್ ಎಂಬುವವರನ್ನು ನೇಮಕ ಮಾಡಿತ್ತು. ಇಡೀ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನ್ ಅಫ್ಘಾನ್ ನೆಲದಲ್ಲಿ ನೆತ್ತರು ಹರಿಸುತ್ತಿದೆ. ಹಾಗೇ, ತಾಲಿಬಾನ್ ಸಂಘಟನೆಯಲ್ಲಿ ಸಕ್ರಿಯರಾಗಿರುವ ನಾಯಕರನ್ನು ಅಫ್ಘಾನ್ನಲ್ಲಿ ರಾಜ್ಯಪಾಲರನ್ನಾಗಿ ನೇಮಕ ಮಾಡುವುದಾಗಿ ತಾಲಿಬಾನ್ ಮೂಲಗಳು ತಿಳಿಸಿವೆ.
2001ರಲ್ಲಿ ಅಮೆರಿಕದ ಅವಳಿ ಕಟ್ಟಡದ ಮೇಲೆ ಅಲ್ಖೈದಾ ಉಗ್ರರು ದಾಳಿ ನಡೆಸಿದಾಗ ಒಸಾಮಾ ಬಿನ್ ಲಾಡೆನ್ ಹಾಗೂ ಉಗ್ರ ಸಂಘಟನೆಗಳ ಮೇಲೆ ತಿರುಗಿ ಬಿದ್ದಿದ್ದ ಅಮೆರಿಕ ಅಫ್ಘಾನಿಸ್ತಾನದಲ್ಲಿ ತನ್ನ ಅಧಿಪತ್ಯ ಸ್ಥಾಪಿಸಿತ್ತು. ಅಲ್ಲದೆ, ತಾಲಿಬಾನ್ ಉಗ್ರರ ವಿರುದ್ಧ ಸಮರ ಸಾರಿತ್ತು. ತಾಲಿಬಾನ್ ಉಗ್ರರನ್ನು ಅಫ್ಘಾನಿಸ್ತಾನದಿಂದ ಹೊಡೆದೋಡಿಸಿ, ಅವರು ಮತ್ತೆ ಅಫ್ಘಾನ್ ಪ್ರವೇಶ ಮಾಡದಂತೆ 2 ದಶಕಗಳ ಕಾಲ ಕಾವಲು ಕಾದಿತ್ತು. ಆದರೆ, ಇಂಚಿಂಚಾಗಿ ಅಫ್ಘಾನಿಸ್ತಾನವನ್ನು ಆವರಿಸಿಕೊಳ್ಳತೊಡಗಿದ ತಾಲಿಬಾನ್ ಉಗ್ರರು ಅಫ್ಘಾನ್ ರಾಜಧಾನಿ ಕಾಬೂಲ್ ಅನ್ನು ವಶಕ್ಕೆ ಪಡೆದ ಬಳಿಕ ಅಫ್ಘಾನ್ ಸರ್ಕಾರ ತಾಲಿಬಾನ್ಗೆ ಶರಣಾಗಿತ್ತು. ಬಳಿಕ, ಅಮೆರಿಕ ಸೇನೆಗೆ ವಾಪಾಸ್ ಹೋಗಲು ಆ. 31ರವರೆಗೆ ತಾಲಿಬಾನ್ ಗಡುವು ನೀಡಿತ್ತು. ಕೊನೆಗೂ ಗಡುವಿಗೂ ಮೊದಲೇ ಅಮೆರಿಕ ಸೇನೆ ಅಫ್ಘಾನಿಸ್ತಾನದಿಂದ ಹೊರ ನಡೆದಿತ್ತು.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆ ಸೇರಿದಂತೆ ಭದ್ರತೆ, ರಾಜಕೀಯ, ಸಾಮಾಜಿಕ ವಿಷಯಗಳ ಬಗ್ಗೆ ತಾಲಿಬಾನ್ ಚರ್ಚೆ
ಅಗತ್ಯವಿದ್ದಾಗ ಅಫ್ಘಾನಿಸ್ತಾನದಲ್ಲಿ ನಾವು ಡ್ರೋನ್ ದಾಳಿ ಮುಂದುವರೆಸುತ್ತೇವೆ; ಅಮೆರಿಕ ಎಚ್ಚರಿಕೆ
(Taliban likely to announce Afghanistan’s new cabinet today or tomorrow Afghanistan Government 2.0)
Published On - 5:21 pm, Wed, 1 September 21