ಶ್ರೀನಗರ: ಈ ವರ್ಷ ಕೊವಿಡ್ 19 ಕಾರಣದಿಂದಾಗಿ ಅಮರನಾಥ ಯಾತ್ರೆ ರದ್ದುಗೊಂಡಿದ್ದು, ಆನ್ಲೈನ್ನಲ್ಲಿ ದೇವರ ದರ್ಶನ ಪಡೆದು, ಆರತಿ ನೆರವೇರಿಸಲು ಅವಕಾಶ ಮಾಡಿಕೊಡಲಾಗಿದೆ. ಅಮರನಾಥ ಯಾತ್ರೆ ಹಿಂದುಗಳ ಪವಿತ್ರ ಯಾತ್ರೆಯಲ್ಲೊಂದಾಗಿದೆ. ಕೊವಿಡ್ 19 ಸೋಂಕಿನ ಕಾರಣದಿಂದ ಕಳೆದ ವರ್ಷವೂ ಅಮರನಾಥ ಯಾತ್ರೆ ರದ್ದಾಗುತ್ತಿದೆ. ಆದರೆ ಭಕ್ತರಿಗೆ ನಿರಾಸೆ ಆಗದಿರಲೆಂದು ಇಂದಿನಿಂದಲೇ ವರ್ಚ್ಯುವಲ್ ಆರತಿ ಮತ್ತು ದರ್ಶನ ವ್ಯವಸ್ಥೆ ಮಾಡಲಾಗಿದೆ.
ಈ ವರ್ಷ ಅಮರನಾಥ ಯಾತ್ರೆ ಸಾಂಕೇತಿಕವಾಗಿ ನಡೆಯಲಿದೆ. ಇಲ್ಲಿನ ಗುಹೆಗೆ ಸಂಬಂಧಪಟ್ಟ ಎಲ್ಲ ಧಾರ್ಮಿಕ ಕಾರ್ಯಕ್ರಮಗಳೂ ವರ್ಚ್ಯುವಲ್ ಆಗಿಯೇ ನೆರವೇರಲಿದೆ ಎಂದು ಜೂನ್ 21ರಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದರು.
ಆನ್ಲೈನ್ ಆರತಿ ಜೂ.28ರಿಂದ ಆಗಸ್ಟ್ 22ರವರೆಗೆ ದಿನದಲ್ಲಿ ಒಂದು ತಾಸು ನಡೆಯಲಿದೆ. ಮುಂಜಾನೆ 6ರಿಂದ 6.30ರವರೆಗೆ ಮತ್ತು ಸಂಜೆ 5.30ರವರೆಗೆ ಕಾಲಾವಕಾಶ ಕೊಡಲಾಗಿದೆ. ಇದು ಶ್ರೀ ಅಮರನಾಥ್ ಜಿ ವೆಬ್ಸೈಟ್, ಆ್ಯಪ್ ಮತ್ತು ಎಂಎಚ್ 1 ಪ್ರೈಮ್ನಲ್ಲಿ ನೇರಪ್ರಸಾರ ಆಗಲಿದೆ.
ಪ್ರಸಕ್ತ ವರ್ಷ ಮೊದಲು ಒಂದು ಬಾರಿ ಅಮರನಾಥ ಯಾತ್ರೆ ಮುಂದೂಡಲ್ಪಟ್ಟಿತ್ತು. ಆದರೆ ಬಳಿಕ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಅಮರನಾಥ ದೇವಸ್ಥಾನದ ಮಂಡಳಿಯೊಂದಿಗೆ ಚರ್ಚೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮನೋಜ್ ಸಿನ್ಹಾ ಟ್ವೀಟ್ ಮಾಡಿದ್ದರು. ಹಿಮಾಲಯದ ಮೇಲಿರುವ ಅಮರನಾಥ ದೇಗುಲಕ್ಕೆ ಯಾತ್ರೆ ಈ ಬಾರಿ ಜೂನ್ 28ರಿಂದ ಪಹಲ್ಗಾಮ್ ಮತ್ತು ಬಲ್ಟಾಲ್ ಮಾರ್ಗದಲ್ಲಿ ಪ್ರಾರಂಭವಾಗಲಿತ್ತು. ಹಾಗೇ ಆಗಸ್ಟ್22ರಂದು ಮುಕ್ತಾಯಗೊಳ್ಳಬೇಕಿತ್ತು.
ಇದನ್ನೂ ಓದಿ:ಲಾಕ್‌ಡೌನ್ ತೆರವಾದರೂ ಸುಧಾರಿಸಿಲ್ಲ ನೇಕಾರರ ಬದುಕು; ಬಾಗಲಕೋಟೆಯಲ್ಲಿ ನೇಯ್ದ ಬಟ್ಟೆ ಮನೆಯಲ್ಲೇ ರಾಶಿ