ಕೊವಿಡ್ 19 ಮಾತ್ರೆಯೆಂದು ವಿಷದ ಮಾತ್ರೆ ಕೊಟ್ಟು ಮೂವರ ಹತ್ಯೆ; ಆರೋಗ್ಯ ಕಾರ್ಯಕರ್ತೆಯೂ ಕೊಲೆ ಸಂಚಿನಲ್ಲಿ ಭಾಗಿ
Tamil Nadu: ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು, ಈ ಹತ್ಯೆ ಯಾಕಾಯಿತು? ಹೇಗೆ ಪ್ಲ್ಯಾನ್ ಮಾಡಲಾಗಿತ್ತು ಎಂಬಿತ್ಯಾದಿ ವಿಷಯಗಳನ್ನು ವಿವರಿಸಿದ್ದಾರೆ.
ಕೊವಿಡ್ 19 ನಿವಾರಣೆಯ ಮಾತ್ರೆ ಎಂದು ಹೇಳಿ ವಿಷದ ಮಾತ್ರೆ ಕೊಟ್ಟು ಒಂದೇ ಕುಟುಂಬ ಮೂವರನ್ನು ಹತ್ಯೆಗೈಯಲಾಗಿದೆ. ಈ ಮೂವರನ್ನು ಹತ್ಯೆ ಮಾಡಲು ಆರೋಪಿ, ಆರೋಗ್ಯ ಕಾರ್ಯಕರ್ತೆಯೊಬ್ಬರ ಸಹಾಯವನ್ನೂ ಪಡೆದಿದ್ದಾರೆ. ಇಂಥದ್ದೊಂದು ಶಾಕಿಂಗ್ ಘಟನೆ ನಡೆದಿದ್ದು ತಮಿಳುನಾಡಿನ ಎರೋಡ್ ಎಂಬಲ್ಲಿ. ಸದ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು, ಈ ಹತ್ಯೆ ಯಾಕಾಯಿತು? ಹೇಗೆ ಪ್ಲ್ಯಾನ್ ಮಾಡಲಾಗಿತ್ತು ಎಂಬಿತ್ಯಾದಿ ವಿಷಯಗಳನ್ನು ವಿವರಿಸಿದ್ದಾರೆ.
ಇದರಲ್ಲಿ ಪ್ರಮುಖ ಆರೋಪಿ ಆರ್. ಕಲ್ಯಾಣಸುಂದರಂ (43) ಎಂಬಾತ. ಈತ ಕರುಂಗೌಂಡನ್ವಲಸು ಗ್ರಾಮದ ಕರುಪ್ಪನಕೌಂದರ್ (72) ಎಂಬುವರಿಂದ ಕೆಲವು ತಿಂಗಳುಗಳ ಹಿಂದೆ 15 ಲಕ್ಷ ರೂಪಾಯಿ ಸಾಲ ಪಡೆದಿದ್ದ. ಆದರೆ ಹಿಂದಿರುಗಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಮಧ್ಯ ಹಣ ವಾಪಸ್ ಕೊಡುವಂತೆ ಕರುಪ್ಪನಕೌಂದರ್ ಒತ್ತಡ ಹಾಕುತ್ತಲೇ ಇದ್ದರು. ಈ ಒತ್ತಡವನ್ನು ತಾಳಿಕೊಳ್ಳಲು ಸಾಧ್ಯವಾಗದೆ ಕೆ.ಕಲ್ಯಾಣಸುಂದರಂ ಹೀಗೊಂದು ಕೃತ್ಯಕ್ಕೆ ಯೋಜನೆ ರೂಪಿಸಿದ್ದ. ಆರೋಗ್ಯ ಇಲಾಖೆ ಕಾರ್ಯಕರ್ತೆಯಾಗಿದ್ದ ಸಬರಿ (25)ಎಂಬಾಕೆಯ ಸಹಾಯದಿಂದ ಕರುಪ್ಪನಕೌಂದರ್ ಕುಟುಂಬಕ್ಕೆ ಮಾತ್ರೆ ರೂಪದಲ್ಲಿ ವಿಷವುಣಿಸಿದ.
ಈ ಸಬರಿ ತನ್ನ ಹುದ್ದೆಯನ್ನು ಸರಿಯಾಗಿ ಉಪಯೋಗಿಸಿಕೊಂಡಳು. ನಾನೊಬ್ಬಳು ಆರೋಗ್ಯ ಕಾರ್ಯಕರ್ತೆ. ಮನೆಮನೆಗೆ ತೆರಳಿ ಕೊರೊನಾ ಸೋಂಕಿನ ಬಗ್ಗೆ ಅರಿವು ಮೂಡಿಸುತ್ತಿದ್ದೇನೆ ಎಂದು ಹೇಳುತ್ತ ಜೂ. 26ರಂದು ಕುರುಪ್ಪನಕೌಂದರ್ ಮನೆಗೂ ಹೋದಳು. ಆಕೆಯ ಬಳಿ ಪಲ್ಸ್ ಆಕ್ಸಿಮೀಟರ್, ಟೆಂಪರೇಚರ್ ನೋಡುವ ಸಾಧನ ಇತ್ಯಾದಿಗಳೂ ಇದ್ದವು. ಅಲ್ಲಿ ಹೋಗಿ ಕುರುಪ್ಪನಕೌಂದರ್ ಮತ್ತು ಅವರ ಕುಟುಂಬದವರ ಬಳಿ, ನಿಮಗೆ ಜ್ವರ, ಕೆಮ್ಮು ಏನಾದರೂ ಇದೆಯಾ ಎಂದು ಪ್ರಶ್ನಿಸಿದಳು. ನಂತರ ಒಂದಷ್ಟು ಮಾತ್ರೆಗಳನ್ನು ಕೊಟ್ಟು, ಇದು ಕೊವಿಡ್ 19 ನಿವಾರಣೆ ಮಾತ್ರೆಯಾಗಿದೆ. ನೀವು ತೆಗೆದುಕೊಳ್ಳಲು ಪ್ರಾರಂಭಿಸಿ, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದೂ ಹೇಳಿದಳು. ಆದರೆ ಆ ಮಾತ್ರೆ ಸೇವಿಸುತ್ತಿದ್ದಂತೆ ಕರುಪ್ಪನಕೌಂದರ್, ಅವರ ಪತ್ನಿ ಮಲ್ಲಿಕಾ, ಮಗಳು ದೀಪಾ ಮತ್ತು ಮನೆಕೆಲಸದಾಕೆ ಕುಪ್ಪಲ್ ತೀವ್ರ ಅಸ್ವಸ್ಥರಾದರು. ಎಚ್ಚರವಿಲ್ಲದೆ ಬಿದ್ದಿದ್ದ ಅವರನ್ನೆಲ್ಲ ನೆರೆಮನೆಯವರು ಆಸ್ಪತ್ರೆಗೆ ದಾಖಲಿಸಿದರು.
ಮಲ್ಲಿಕಾ ಆಸ್ಪತ್ರೆಗೆ ಹೋಗುವ ಮಾರ್ಗದಲ್ಲೇ ಮೃತಪಟ್ಟಿದ್ದಾರೆ. ಅದಾದ ಮರುದಿನ ದೀಪಾ ಮತ್ತು ಕುಪ್ಪಲ್ ಸಾವನ್ನಪ್ಪಿದ್ದಾರೆ. ಸದ್ಯ ಕರುಪ್ಪನ್ಕೌಂದರ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಭಾನುವಾರ ಕಲ್ಯಾಣಸುಂದರಂ ಮತ್ತು ಸಬರಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನೂ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಹಾಗೇ. ಆರೋಪಿಗಳಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಇದನ್ನೂ ಓದಿ: 120 ಅಡಿ ಆಳಕ್ಕೆ ಬಿದ್ದ ನಾಯಿ ರಕ್ಷಣೆ; ಶಿವಮೊಗ್ಗ ಜಿಲ್ಲೆಯ ಅಗ್ನಿಶಾಮಕ ದಳದ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ
(Three dead after being given poison in the name of Covid 19 cure pills in Tamil Nadu)