120 ಅಡಿ ಆಳಕ್ಕೆ ಬಿದ್ದ ನಾಯಿ ರಕ್ಷಣೆ; ಶಿವಮೊಗ್ಗ ಜಿಲ್ಲೆಯ ಅಗ್ನಿಶಾಮಕ ದಳದ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ
ಅಗ್ನಿಶಾಮಕ ಸಿಬ್ಬಂದಿಗಳು ಮೊದಲು ಗಿಡಗಳು ಬೆಳೆದು ನಿಂತಿದ್ದ ಆಳಕ್ಕೆ ಇಳಿದು, ಹಗ್ಗದಲ್ಲಿ ನಾಯಿಯನ್ನು ಕಟ್ಟಿ ನಂತರ ಅದನ್ನು ಸುರಕ್ಷಿತವಾಗಿ ಮೇಲೆ ಎತ್ತಿದ್ದಾರೆ. ಸುಮಾರು 30 ನಿಮಿಷಗಳ ಈ ಕಾರ್ಯಾಚರಣೆಯಲ್ಲಿ ನಾಯಿ ಬಚಾಚ್ ಆಗಿದೆ.
ಶಿವಮೊಗ್ಗ: 120 ಅಡಿ ಕಾಲುವೆಗೆ ಬಿದ್ದ ನಾಯಿಯನ್ನು ರಕ್ಷಣೆ ಮಾಡಿದ ಅಪರೂಪದ ಘಟನೆಯೊಂದು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಮುಂಗಾರು ಮಳೆ ಚೆನ್ನಾಗಿ ಬರುತ್ತಿದೆ. ಈಗಾಗಲೇ ತುಂಗಾ ಡ್ಯಾಂ ಭರ್ತಿಯಾಗಿ ನದಿಗೆ ಮತ್ತು ಕಾಲುವೆಗಳಿಗೆ ನೀರು ಬೀಡಲಾಗುತ್ತಿದೆ. ಹೀಗಿರುವಾಗಲೇ ನಿನ್ನೆ ( ಜೂನ್ 27) ಶಿವಮೊಗ್ಗದ ಅಲ್ಕೋಳ ಕೆರೆ ಬಳಿಯ ತುಂಗಾ ಡ್ಯಾಂನಲ್ಲಿ ಹೆಣ್ಣು ನಾಯಿಯೊಂದು ಕಾಲು ಜಾರಿ ನೀರಿಗೆ ಬಿದ್ದಿದೆ. ಸಾಮಾನ್ಯವಾಗಿ ನಾಯಿ ನೀರಿಗೆ ಬಿದ್ದರೆ, ಅದರಲ್ಲೂ ಬೀದಿ ನಾಯಿ ಬಿದ್ದರೆ ಯಾರು ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಆದರೆ ಇಲ್ಲಿನ ಸ್ಥಳೀಯರು ನಾಯಿ ರಕ್ಷಣೆಗೆ ಮುಂದಾಗಿದ್ದು, ಸಾಧ್ಯವಾಗದೇ ಇದ್ದಾಗ ಶಿವಮೊಗ್ಗ ಅಗ್ನಿಶಾಮಕ ಕಚೇರಿಗೆ ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿಯು ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸಾಮಾನ್ಯವಾಗಿ ಇಂತಹ ಕೇಸ್ಗಳಲ್ಲಿ ನಿರ್ಲಕ್ಷವೇ ಹೆಚ್ಚು ಇರುತ್ತದೆ. ಆದರೆ ತುಂಗಾ ಕಾಲುವೆಯಲ್ಲಿ ಒದ್ದಾಡುತ್ತಿದ್ದ ನಾಯಿಯನ್ನು ನೋಡಿದ ಅಗ್ನಿಶಾಮಕ ಸಿಬ್ಬಂದಿಯು ಕೂಡಲೇ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ದೇವೇಂದ್ರ ನಾಯ್ಕ್ ಮತ್ತು ವೆಂಕಟೇಶ ಎಂಬ ಇಬ್ಬರೂ ಸಿಬ್ಬಂದಿಗಳು 120 ಅಡಿ ಕೆಳಗೆ ಇಳಿದು ನಾಯಿಯ ರಕ್ಷಣೆ ಮಾಡಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿಗಳು ಮೊದಲು ಗಿಡಗಳು ಬೆಳೆದು ನಿಂತಿದ್ದ ಆಳಕ್ಕೆ ಇಳಿದು, ಹಗ್ಗದಲ್ಲಿ ನಾಯಿಯನ್ನು ಕಟ್ಟಿ ನಂತರ ಅದನ್ನು ಸುರಕ್ಷಿತವಾಗಿ ಮೇಲೆ ಎತ್ತಿದ್ದಾರೆ. ಸುಮಾರು 30 ನಿಮಿಷಗಳ ಈ ಕಾರ್ಯಾಚರಣೆಯಲ್ಲಿ ನಾಯಿ ಬಚಾಚ್ ಆಗಿದೆ. ಸ್ಥಳೀಯರೆಲ್ಲರೂ ಅಗ್ನಿಶಾಮಕ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಮಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಪಾಯದಿಂದ ಪಾರಾದ ನಾಯಿಯನ್ನು ಮೇಲೆ ಎತ್ತಿದ ಬಳಿಕ ಸ್ಥಳೀಯರೆಲ್ಲರೂ ಆ ನಾಯಿಯ ಆರೈಕೆ ಮಾಡಿದರು. ಅದಕ್ಕೆ ಬಿಸ್ಕೇಟ್, ಬ್ರೇಡ್ ನೀಡಿದರು. ಅದರ ಆರೋಗ್ಯ ಪರೀಕ್ಷೆ ಕೂಡಾ ಮಾಡಿದರು. ನಾಯಿಯು ಆರೋಗ್ಯವಾಗಿರುವುದನ್ನು ಕಂಡು ಸ್ಥಳೀಯರು ಖುಷಿಪಟ್ಟರು. ಸುಮಾರು ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ತಮ್ಮ ಎಲ್ಲ ಕೆಲಸ ಬಿಟ್ಟು ಬೀದಿ ನಾಯಿಯ ರಕ್ಷಣೆಗೆ ಸ್ಥಳೀಯರು ಮುಂದಾಗುವ ಮೂಲಕ ಪ್ರಾಣಿಗಳ ಮೇಲೆ ಇರುವ ಪ್ರೀತಿ ಮತ್ತು ಮಾನವೀಯತೆ ಮೆರೆದಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿ ಪ್ರವೀಣ ತಿಳಿಸಿದ್ದಾರೆ.
ಒಟ್ಟಾರೆ ಒಂದು ಬೀದಿ ನಾಯಿ ಬಿದ್ದರೆ ಅದನ್ನು ಹೀಗೂ ರಕ್ಷಣೆ ಮಾಡಬಹುದು ಎನ್ನುವುದು ಇಂದು ಕಾರ್ಯಾಚರಣೆಯಿಂದ ಜನರಿಗೆ ಮನವರಿಕೆಯಾಗಿದೆ. ಸ್ಥಳೀಯರು ತೋರಿದ ಸಮಯಪ್ರಜ್ಞೆ ಮತ್ತು ಕಾಳಜಿಯಿಂದ ಪ್ರಪಾತಕ್ಕೆ ಬಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ನಾಯಿಗೆ ಮರುಜೀವ ಸಿಕ್ಕಿದೆ.
ಇದನ್ನೂ ಓದಿ:
ಬೀದಿ ಪ್ರಾಣಿಗಳಿಗೆ ಆಸರೆಯಾದ ಕೋಲಾರದ ವ್ಯಕ್ತಿ; ನಾಯಿ, ಕೋತಿಗಳಿಗೆ ನಿತ್ಯ ಆಹಾರ ನೀಡಿ ಪೋಷಣೆ
ಬದುಕಿತು ಬಡಜೀವ: ನಾಯಿಗಳ ದಾಳಿಯಿಂದ ಜಿಂಕೆಯನ್ನು ರಕ್ಷಿಸಿದ ಧಾರವಾಡ ಅರಣ್ಯ ಇಲಾಖೆ ಅಧಿಕಾರಿಗಳು