ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅಧಿಕಾರ ಅವಧಿಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಿದ ಕೇಂದ್ರ ಸರ್ಕಾರ..
2ಜಿ ಸ್ಪೆಕ್ಟ್ರಮ್ ಹೈಪ್ರೊಫೈಲ್ ಪ್ರಕರಣದ ವಿಚಾರಣೆ ವೇಳೆ, ಸುಪ್ರೀಂಕೋರ್ಟ್ಗೆ ನೆರವಾಗಲು ಇವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಲಾಗಿತ್ತು. ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ವೇಳೆ ಇವರು ಎಲ್.ಕೆ.ಆಡ್ವಾಣಿ ಪರ ವಾದಿಸಿದ್ದರು.
ದೆಹಲಿ: ದೇಶದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರ ಅಧಿಕಾರ ಅವಧಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಿ ಕೇಂದ್ರ ಸರ್ಕಾರ ಇಂದು ಆದೇಶ ಹೊರಡಿಸಿದೆ. ಕೆ.ಕೆ.ವೇಣುಗೋಪಾಲ್ ಅಧಿಕಾರ ಅವಧಿ ಇದು ಎರಡನೇ ಬಾರಿಗೆ ವಿಸ್ತರಣೆಯಾಗುತ್ತಿದ್ದು, ಅವರು 2022ರ ಜೂನ್ 30ರವರೆಗೆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಕೆ.ಕೆ.ವೇಣುಗೋಪಾಲ್ ಅವರು 2017ರಲ್ಲಿ, ಮೂರು ವರ್ಷಗಳ ಅವಧಿಗೆ ಅಟಾರ್ನಿ ಜನರಲ್ ಆಗಿ ನೇಮಕಗೊಂಡಿದ್ದರು. 2020ರಲ್ಲೇ ಅವರ ಅಧಿಕಾರ ಅವಧಿ ಮುಗಿಯಬೇಕಿತ್ತು. ಆದರೆ ಕೇಂದ್ರ ಸರ್ಕಾರ ಅದನ್ನು 2021ರ ಜೂ.30ರವರೆಗೆ ವಿಸ್ತರಿಸಿತ್ತು. ಇದೀಗ ಅವರ ನಿವೃತ್ತಿಗೆ ಇನ್ನೆರಡು ದಿನ ಇರಬೇಕಾದರೆ ಮತ್ತೊಂದು ವರ್ಷಗಳ ಕಾಲ ವಿಸ್ತರಣೆಯಾಗಿದೆ.
ಮುಕುಲ್ ರೋಹಟಗಿ ನಂತರ ಅಟಾರ್ನಿ ಜನರಲ್ ಹುದ್ದೆಗೆ ಏರಿದ್ದ ಕೆ.ಕೆ.ವೇಣುಗೋಪಾಲ್ ಆಧಾರ್, ರಫೇಲ್ ಜೆಟ್ನಂತಹ ಮಹತ್ವದ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದ ಪರ ವಾದಿಸಿ ಗೆದ್ದಿದ್ದಾರೆ. ಭಾರತದ ಅಟಾರ್ನಿ ಜನರಲ್ರನ್ನು ಸಂವಿಧಾನದ ಆರ್ಟಿಕಲ್ 76ರ ಅಡಿಯಲ್ಲಿ, ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ನೇಮಕವಾಗಲು ಇರಬೇಕಾದ ಅರ್ಹತೆಗಳೇ ಈ ಹುದ್ದೆಗೂ ಅನ್ವಯ ಆಗುತ್ತವೆ. ಕೆ.ಕೆ.ವೇಣುಗೋಪಾಲ್ಗೆ ಸದ್ಯ 89 ವರ್ಷ. ಮೂಲತಃ ಕಾಸರಗೋಡಿನವರಾಗಿರುವ ಇವರು, ಖ್ಯಾತ ಸಾಂವಿಧಾನಿಕ ತಜ್ಞರಾಗಿದ್ದು, ಪದ್ಮ ವಿಭೂಷಣ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು. ಎಪ್ಪತ್ತರ ದಶಕದಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರದ ಅವಧಿಯಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಕೆಲಸ ಮಾಡಿದ್ದಾರೆ.
2ಜಿ ಸ್ಪೆಕ್ಟ್ರಮ್ ಹೈಪ್ರೊಫೈಲ್ ಪ್ರಕರಣದ ವಿಚಾರಣೆ ವೇಳೆ, ಸುಪ್ರೀಂಕೋರ್ಟ್ಗೆ ನೆರವಾಗಲು ಇವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಲಾಗಿತ್ತು. ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ವೇಳೆ ಇವರು ಎಲ್.ಕೆ.ಆಡ್ವಾಣಿ ಪರ ವಾದಿಸಿದ್ದರು. ಭಾರತೀಯ ನ್ಯಾಯಾಲಯಗಳಲ್ಲಿ ಮಹಿಳೆಯರ ಪ್ರಮಾಣ ಹೆಚ್ಚಬೇಕು ಎಂಬುದು ಇವರ ಬಲವಾದ ಅಭಿಪ್ರಾಯ. ಭಾರತೀಯ ಕೋರ್ಟ್ಗಳಲ್ಲಿ ಮಹಿಳಾ ಜಡ್ಜ್ಗಳ ಸಂಖ್ಯೆ ಹೆಚ್ಚಬೇಕು. ಇದರಿಂದಾಗಿ ಲೈಂಗಿಕ ದೌರ್ಜನ್ಯದ ಪ್ರಕರಣಗಳ ವಿಚಾರಣೆ ಹೆಚ್ಚು ಸಂವೇದನಾ ಶೀಲವಾಗಿ ಮತ್ತು ಸಹಾನುಭೂತಿಯಿಂದ ನಡೆಯುತ್ತದೆ ಎಂದು ವೇಣುಗೋಪಾಲ್ ಕಳೆದ ವರ್ಷ ಹೇಳಿದ್ದರು.
ಇದನ್ನೂ ಓದಿ: ಜೂನ್ 30, ಜುಲೈ 1ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ನೀರು ಸರಬರಾಜು ಸ್ಥಗಿತ (Centre extends tenure of Attorney General KK Venugopal)