ನಾನು 5 ಲಕ್ಷ ರೂ.ಸಂಬಳದಲ್ಲಿ ಪ್ರತಿ ತಿಂಗಳು 2.75 ಲಕ್ಷ ರೂ. ತೆರಿಗೆ ಕಟ್ಟುತ್ತೇನೆ; ದೇಶದ ಅಭಿವೃದ್ಧಿಗಾಗಿ ತೆರಿಗೆ ಕಟ್ಟಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್
ಎಷ್ಟೇ ಆದಾಯವಿದ್ದರೂ ಅದಕ್ಕೆ ತಕ್ಕನಾಗಿ ತೆರಿಗೆ ಕಟ್ಟಬೇಕು ಎಂದು ತಿಳಿಸುವುದಕ್ಕಾಗಿ ಈ ಮಾತು ಹೇಳುತ್ತಿದ್ದೇನೆ ಎಂದ ಅವರು, ನಾನು ತೆರಿಗೆಯನ್ನೆಲ್ಲಾ ಕಟ್ಟಿದ ನಂತರ ಉಳಿಸಬಹುದಾದ ಮೊತ್ತಕ್ಕಿಂತಲೂ ಹೆಚ್ಚು ಹಣವನ್ನು ಬೇರೆಯವರು ಗಳಿಸುತ್ತಾರೆ ಗೊತ್ತಾ ಎನ್ನುವ ಮೂಲಕ ಚಟಾಕಿಯನ್ನೂ ಹಾರಿಸಿದರು.
ದೆಹಲಿ: ಭಾರತದ ಪ್ರಥಮ ಪ್ರಜೆ ಎಂದು ಗೌರವಿಸಲ್ಪಡುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶದ ನಾಗರೀಕರಿಗೆ ತೆರಿಗೆ ಪಾವತಿಸಿ ಎಂದು ತವರು ರಾಜ್ಯ ಉತ್ತರ ಪ್ರದೇಶದ ಭೇಟಿ ವೇಳೆ ಕರೆ ನೀಡಿದ್ದಾರೆ. ನಾನೂ ತೆರಿಗೆ ಕಟ್ಟುತ್ತೇನೆ, ಅಭಿವೃದ್ಧಿಯ ದೃಷ್ಟಿಯಿಂದ ಸಕಾಲಕ್ಕೆ ಸರಿಯಾಗಿ ಸರ್ಕಾರಕ್ಕೆ ತೆರಿಗೆ ಕಟ್ಟುವುದು ಮುಖ್ಯ ಎಂದು ಹೇಳಿರುವ ಅವರು, ತಾನು ತೆರಿಗೆ ಕಟ್ಟಿದ ನಂತರ ಉಳಿಸುವ ಹಣಕ್ಕಿಂತಲೂ ಹೆಚ್ಚು ಆದಾಯ ಕೆಲವರಿಗೆ ಸಿಗುತ್ತದೆ ಎಂದು ಹೇಳಿದ್ದಾರೆ.
ನನಗೆ ಮಾಸಿಕ ₹5ಲಕ್ಷ ಸಂಬಳ ಸಿಗುತ್ತದೆ ಅದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಅಂದರೆ ₹2.75ಲಕ್ಷ ತೆರಿಗೆಗೆ ಹೋಗುತ್ತದೆ. ನಾನು ಉಳಿಸಬಹುದಾಗಿದ್ದಕ್ಕಿಂತಲೂ ಹೆಚ್ಚು ಮೊತ್ತವನ್ನು ಬೇರೆ ಅಧಿಕಾರಿಗಳು, ಶಿಕ್ಷಕರು ಉಳಿಸುತ್ತಾರೆ ಎಂದು ತಮಾಷೆ ಮಾಡುತ್ತಲೇ ತೆರಿಗೆಯ ಮಹತ್ವವನ್ನು ವಿವರಿಸಿದರು. ಉತ್ತರ ಪ್ರದೇಶಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದ ಅವರು, ಜಿಂಜಾಕ್ ರೈಲ್ವೇ ನಿಲ್ದಾಣದಲ್ಲಿ ಶುಕ್ರವಾರದಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಲವೊಮ್ಮೆ ಜನರು ಸಿಟ್ಟಿನಲ್ಲಿ ರೈಲಿಗೆ ಕಲ್ಲು ಹೊಡೆಯುವುದು ಅಥವಾ ಬೆಂಕಿ ಹಚ್ಚುವುದು ಮಾಡುತ್ತಾರೆ. ಹಾಗೆ ಮಾಡಿದರೆ ಯಾರಿಗೆ ನಷ್ಟ? ಸರ್ಕಾರದ ಆಸ್ತಿ ಅದು ಎಂದು ಹೇಳಬಹುದು. ಆದರೆ, ಅದು ತೆರಿಗೆದಾರರ ಹಣ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು ಎಂದು ತಿಳಿಸಿದರು. ಇದನ್ನೆಲ್ಲಾ ನಾನು ಯಾಕೆ ವಿವರಿಸುತ್ತಿದ್ದೇನೆಂದರೆ ರಾಷ್ಟ್ರಪತಿ ಹುದ್ದೆಯಲ್ಲಿರುವವರಿಗೆ ಅತಿ ಹೆಚ್ಚು ಸಂಬಳ ಬರುತ್ತದೆ ಎಂದು ಎಲ್ಲರಿಗೂ ಗೊತ್ತು. ನನಗೀಗ ಮಾಸಿಕ ₹5ಲಕ್ಷ ಸಂಬಳ ಬರುತ್ತದೆ. ಆದರೆ, ಅದರಲ್ಲಿ ₹2.75ಲಕ್ಷ ಪ್ರತಿ ತಿಂಗಳು ತೆರಿಗೆಗೆ ಹೋಗುತ್ತದೆ. ನಾನು ₹5ಲಕ್ಷ ಪಡೆಯುತ್ತೇನೆ ಎನ್ನುವುದನ್ನು ಮಾತ್ರ ಎಲ್ಲರೂ ಗಮನಿಸುತ್ತಾರೆ. ನೆನಪಿರಲಿ, ನಾನು ಅದರಲ್ಲಿ ತೆರಿಗೆಯನ್ನೂ ಕಟ್ಟುತ್ತೇನೆ ಎಂದು ಹೇಳಿದರು. ರಾಷ್ಟ್ರಪತಿಯವರ ಈ ಮಾತನ್ನು ಕೇಳುತ್ತಲೇ ಅಲ್ಲಿದ್ದ ಜನ ಆಶ್ಚರ್ಯ ವ್ಯಕ್ತಪಡಿಸುತ್ತಲೇ, ಚಪ್ಪಾಳೆ ಹೊಡೆದರು.
ತೆರಿಗೆ ಪಾವತಿ ಮಾಡುವುದರಿಂದ ಅಭಿವೃದ್ಧಿಗೆ ನೆರವಾಗುತ್ತದೆ. ಎಷ್ಟೇ ಆದಾಯವಿದ್ದರೂ ಅದಕ್ಕೆ ತಕ್ಕನಾಗಿ ತೆರಿಗೆ ಕಟ್ಟಬೇಕು ಎಂದು ತಿಳಿಸುವುದಕ್ಕಾಗಿ ಈ ಮಾತು ಹೇಳುತ್ತಿದ್ದೇನೆ ಎಂದ ಅವರು, ನಾನು ತೆರಿಗೆಯನ್ನೆಲ್ಲಾ ಕಟ್ಟಿದ ನಂತರ ಉಳಿಸಬಹುದಾದ ಮೊತ್ತಕ್ಕಿಂತಲೂ ಹೆಚ್ಚು ಹಣವನ್ನು ಬೇರೆಯವರು ಗಳಿಸುತ್ತಾರೆ ಗೊತ್ತಾ ಎನ್ನುವ ಮೂಲಕ ಚಟಾಕಿಯನ್ನೂ ಹಾರಿಸಿದರು.
ಉತ್ತರ ಪ್ರದೇಶ ರಾಜ್ಯದ ಭೇಟಿ ವೇಳೆ ತಮ್ಮ ಹಳ್ಳಿಯಲ್ಲಿ ನಡೆಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ್ದ ಅವರು, ಇಷ್ಟು ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಸಾಮಾನಗಯ ಹುಡುಗನೊಬ್ಬನಿಗೆ ದೇಶದ ಅತ್ಯುನ್ನತ ಹುದ್ದೆಯೊಂದು ಲಭಿಸುತ್ತದೆ ಎನ್ನುವುದನ್ನು ಊಹಿಸಿಯೂ ಇರಲಿಲ್ಲ. ಇದು ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಸಾಧ್ಯವಾಗಿದೆ ಎಂದು ಹೇಳುವ ಮೂಲಕ ಎಲ್ಲರ ಮನಗೆದ್ದರು. ಹೆಲಿಪ್ಯಾಡ್ನಲ್ಲಿಯೂ ರಾಮನಾಥ್ ಕೋವಿಂದ್ ಬಗ್ಗಿ ನೆಲಕ್ಕೆ ನಮಸ್ಕರಿಸುವ ಮೂಲಕ ಜನ್ಮಭೂಮಿಗೆ ಗೌರವ ಸಮರ್ಪಿಸಿದ್ದು ಭಾರತೀಯರ ಹೃದಯ ಗೆದ್ದಿದೆ.
ಇದನ್ನೂ ಓದಿ: ಹುಟ್ಟೂರಿನ ಮಣ್ಣಿಗೆ ತಲೆಬಾಗಿ, ನೆಲ ಮುಟ್ಟಿ ನಮಸ್ಕರಿಸಿದ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್
ರಾಷ್ಟ್ರಪತಿ ರಾಮನಾಥ ಕೋವಿಂದ್ಗೆ ಬೈಪಾಸ್ ಸರ್ಜರಿ; ಆರೋಗ್ಯ ಸ್ಥಿರವಾಗಿದೆ ಎಂದ ಏಮ್ಸ್ ವೈದ್ಯರು