ಶಬರಿಮಲೆ ಮಂಡಲಂ-ಮಕರವಿಳಕ್ಕು ತೀರ್ಥಯಾತ್ರೆಗೆ ಮುನ್ನ ಕೇರಳ ಸರ್ಕಾರವು ಈ ಬಾರಿ ಆನ್‌ಲೈನ್ ಬುಕಿಂಗ್ ಮೂಲಕ ಯಾತ್ರಾರ್ಥಿಗಳಿಗೆ ಅವಕಾಶ ನೀಡಲು ನಿರ್ಧರಿಸಿದೆ. ದಿನಕ್ಕೆ ಗರಿಷ್ಠ 80,000 ಭಕ್ತರಿಗೆ ಅವಕಾಶ ಕಲ್ಪಿಸುವ ಸೌಲಭ್ಯ ಕಲ್ಪಿಸಲಾಗುವುದು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಬಾರಿ ಶಬರಿಮಲೆಯಲ್ಲಿ ಸ್ಪಾಟ್ ಬುಕ್ಕಿಂಗ್ ಇರುವುದಿಲ್ಲ. ಯಾತ್ರಿಗಳು ಬುಕ್ ಮಾಡದೆ ಬಂದರೆ ನಾವು ಪರಿಶೀಲಿಸುತ್ತೇವೆ.
ನಿಲಕ್ಕಲ್ ಮತ್ತು ಎರುಮೇಲಿಯಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ವಂ ಸಚಿವ ವಿಎನ್ ವಾಸವನ್ ಹೇಳಿದ್ದಾರೆ. ಯಾತ್ರಿಕರಿಗೆ ಬುಕಿಂಗ್ ಸಮಯದಲ್ಲಿ ಪ್ರಯಾಣದ ಮಾರ್ಗವನ್ನು ಆಯ್ಕೆ ಮಾಡುವ ಅವಕಾಶವನ್ನು ಒದಗಿಸಲಾಗುತ್ತದೆ. ಹೀಗಾಗಿ, ಯಾತ್ರಿಕರು ಕಡಿಮೆ ದಟ್ಟಣೆ ಇರುವ ಮಾರ್ಗವನ್ನು ಆಯ್ಕೆ ಮಾಡಬಹುದು.
ಮತ್ತಷ್ಟು ಓದಿ: ಶಬರಿಮಲೆ ದೇಗುಲದಲ್ಲಿ ಸಂಚಲನ: ಇತಿಹಾಸದಲ್ಲಿ ಮೊದಲ ಬಾರಿಗೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಮಂಗಳಮುಖಿ ನಿಶಾ
ಸಾಂಪ್ರದಾಯಿಕ ಅರಣ್ಯ ಮಾರ್ಗದಲ್ಲಿ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಜನದಟ್ಟಣೆ ಇರುವ ಸಮಯದಲ್ಲಿ ವಾಹನಗಳನ್ನು ನಿಯಂತ್ರಿಸಬೇಕಾದರೆ ಕೇಂದ್ರಗಳನ್ನು ಗುರುತಿಸಿ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು.
ಕಳೆದ ವರ್ಷ ಲಕ್ಷಾಂತರ ಭಕ್ತರು ದರ್ಶನಕ್ಕೆ ಆಗಮಿಸಿದ್ದರು. ಆದ್ದರಿಂದ ನಿರ್ವಹಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳದ ಕಾರಣ ಭಾರಿ ಅವ್ಯವಸ್ಥೆ ಉಂಟಾಗಿತ್ತು. ಭಕ್ತರು ದಿನಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು, ಸರ್ಕಾರದ ವಿರುದ್ಧ ಆಕ್ರೋಶಗಳು ಭುಗಿಲೆದ್ದಿದ್ದವು. ಈ ಹಿನ್ನೆಲೆ ಭಕ್ತರ ನಿರ್ವಹಣೆ ಸಮರ್ಪಕ ಆಗಿಸುವ ಹಿನ್ನೆಲೆ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿದವರಿಗೆ ಮಾತ್ರ ಅವಕಾಶ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ.
ಶಬರಿಮಲೆಗೆ ಹೋಗುವ ರಸ್ತೆಗಳು ಮತ್ತು ಪಾರ್ಕಿಂಗ್ ಮೈದಾನಗಳ ದುರಸ್ತಿ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು. ಶಬರಿ ಅತಿಥಿ ಗೃಹ ನಿರ್ವಹಣೆ ಅಕ್ಟೋಬರ್ 31ಕ್ಕೆ ಪೂರ್ಣಗೊಳ್ಳಲಿದ್ದು, ಪ್ರಣವಂ ಅತಿಥಿ ಗೃಹದ ನವೀಕರಣ ಪೂರ್ಣಗೊಂಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ