
ಶ್ರೀನಗರ, ಜುಲೈ 28: ಭಾರತದ ಮೇಲೆ ನಡೆದ ಅತಿದೊಡ್ಡ ಭಯೋತ್ಪಾದನಾ ದಾಳಿಗಳಲ್ಲಿ ಒಂದಾದ ಕಾಶ್ಮೀರದ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಹಾಶಿಮ್ ಮೂಸಾ (Hasim Musa) ಅಲಿಯಾಸ್ ಸುಲೇಮಾನ್ ಮೂಸಾನನ್ನು ಭಾರತೀಯ ಸೇನೆಯ ವಿಶೇಷ ಪಡೆಗಳು ಇಂದು ಎನ್ಕೌಂಟರ್ ಮಾಡಿವೆ. ಪಹಲ್ಗಾಮ್‌ನಲ್ಲಿ (Pahalgam Attack) ಪ್ರವಾಸಿಗರ ಮೇಲೆ ನಡೆಸಿದ ದಾಳಿಯ ವೇಳೆ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಪತ್ನಿಗೆ ‘ಹೋಗಿ ಮೋದಿಗೆ ಹೇಳು’ ಎಂದು ಸವಾಲು ಹಾಕಿದ್ದ ಮೂಸಾ ಇದೀಗ ಎನ್ಕೌಂಟರ್ನಲ್ಲಿ (Terrorist Encounter) ಜೀವ ಕಳೆದುಕೊಂಡಿದ್ದಾನೆ.
ಪಾಕಿಸ್ತಾನದ ಸೇನಾ ವಿಶೇಷ ಪಡೆಗಳ ಮಾಜಿ ಕಾರ್ಯಕರ್ತ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಾಶಿಮ್ ಮೂಸಾ ಇಂದು ಶ್ರೀನಗರದ ಬಳಿಯ ಡಚಿಗಾಮ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗಿನ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದಾನೆ. ಹರ್ವಾನ್‌ನ ಮುಲ್ನಾರ್ ಪ್ರದೇಶದಲ್ಲಿ ಆತ ಅಡಗಿದ್ದಾನೆ ಎಂಬ ಗುಪ್ತಚರ ಮಾಹಿತಿಯ ನಂತರ ಭಾರತೀಯ ಸೇನೆ, ಸಿಆರ್‌ಪಿಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿಯಾಗಿ ಆಪರೇಷನ್ ಮಹಾದೇವ್ ಅನ್ನು ನಡೆಸಿದರು.
ಲಿಡ್ವಾಸ್ ಪ್ರದೇಶದಲ್ಲಿ ಉಗ್ರಗಾಮಿಗಳು ಇದ್ದಾರೆ ಎಂಬ ಗುಪ್ತಚರ ಮಾಹಿತಿಯ ನಂತರ ಆಪರೇಷನ್ ಮಹಾದೇವ್ ಎಂಬ ಹೆಸರಿನ ಈ ಹೈ-ರಿಸ್ಕ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಭಾರತೀಯ ಸೇನಾ ವಿಶೇಷ ಪಡೆಗಳು ಈ ದಾಳಿಯನ್ನು ಮುನ್ನಡೆಸಿದವು. ತೀವ್ರವಾದ ಗುಂಡಿನ ಚಕಮಕಿಯ ಸಮಯದಲ್ಲಿ ಮೂಸಾ ಅವರನ್ನು ಹತ್ಯೆ ಮಾಡಲಾಯಿತು.
ಇದನ್ನೂ ಓದಿ: ಪಹಲ್ಗಾಮ್ ದಾಳಿಗೆ ಒಂದು ತಿಂಗಳು, ಆಪರೇಷನ್ ಸಿಂಧೂರ್ನಿಂದ ಸರ್ವಪಕ್ಷ ಸಂಸದರ ನಿಯೋಗ ರಚನೆವರೆಗೆ ಇಲ್ಲಿದೆ ಮಾಹಿತಿ
ಸುಲೇಮಾನ್ ಎಂದೂ ಕರೆಯಲ್ಪಡುವ ಹಾಶಿಮ್ ಮೂಸಾ, ಪಾಕಿಸ್ತಾನಿ ಸೇನಾ ವಿಶೇಷ ಪಡೆಗಳ ಮಾಜಿ ಕಾರ್ಯಕರ್ತನಾಗಿದ್ದು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಎಂದು ಗುರುತಿಸಲ್ಪಟ್ಟಿದ್ದಾನೆ. ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು, ಅವರಲ್ಲಿ ಹೆಚ್ಚಿನವರು ಪ್ರವಾಸಿಗರು.
ಹಾಶಿಮ್ ಮೂಸಾ ಜೊತೆ ಮೃತರಾದ ಇನ್ನೊಬ್ಬರು ಉಗ್ರರು ಕೂಡ ಪಾಕಿಸ್ತಾನಿ ಪ್ರಜೆಗಳು ಎಂದು ಹೇಳಲಾಗಿದೆ. ಭದ್ರತಾ ಪಡೆಗಳು ಅವರ ದೇಹಗಳನ್ನು ಮತ್ತು ಅಮೆರಿಕ ನಿರ್ಮಿತ ಕಾರ್ಬೈನ್, ಎಕೆ -47 ರೈಫಲ್, 17 ರೈಫಲ್ ಗ್ರೆನೇಡ್‌ಗಳು ಮತ್ತು ಇತರ ಮಿಲಿಟರಿ ದರ್ಜೆಯ ಉಪಕರಣಗಳು ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ವಶಪಡಿಸಿಕೊಂಡಿವೆ.
ಕಳೆದ ವರ್ಷ ಶ್ರೀನಗರ-ಸೋನ್ಮಾರ್ಗ್ ಹೆದ್ದಾರಿಯಲ್ಲಿ ಝಡ್-ಮೋರ್ಹ್ ಸುರಂಗ ನಿರ್ಮಾಣದಲ್ಲಿ ಭಾಗಿಯಾಗಿದ್ದ 7 ಜನರ ಹತ್ಯೆಯಲ್ಲಿ ಮೂಸಾ ಕೂಡ ಭಾಗಿಯಾಗಿದ್ದ.
ಪಹಲ್ಗಾಮ್ ದಾಳಿ ಮತ್ತು ಹತ್ಯಾಕಾಂಡಕ್ಕೆ ಭಾರತದ ಪ್ರತಿಕ್ರಿಯೆಯಾದ ಆಪರೇಷನ್ ಸಿಂಧೂರ್ ಬಗ್ಗೆ ಸಂಸತ್ತು ಚರ್ಚಿಸಲಿರುವ ದಿನವಾದ ಇಂದೇ ಈ ಬೆಳವಣಿಗೆ ಸಂಭವಿಸಿದೆ. ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರದಲ್ಲಿ ನಡೆದ ಅತ್ಯಂತ ಮಾರಕ ಭಯೋತ್ಪಾದಕ ದಾಳಿಗಳಲ್ಲಿ ಒಂದಾದ ಬೈಸರನ್ ಕಣಿವೆಯಲ್ಲಿ ನಡೆದ ಹತ್ಯಾಕಾಂಡವನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಒಂದು ಭಾಗವಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಹೇಳಿಕೊಂಡಿದೆ.
ಆಪರೇಷನ್ ಮಹಾದೇವ್:
ಮೂವರು ವಿದೇಶಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಸಶಸ್ತ್ರ ಪಡೆಗಳಿಗೆ ಮಾಹಿತಿ ಬಂದ ನಂತರ ಶ್ರೀನಗರದ ಡಚಿಗಮ್ ಪ್ರದೇಶದಲ್ಲಿ ಮೌಂಟ್ ಮಹಾದೇವ್ ಬಳಿಯ ಎನ್ಕೌಂಟರ್ ನಡೆಯಿತು. ಜಬರ್ವಾನ್ ಮತ್ತು ಮಹಾದೇವ್ ರೇಖೆಗಳ ನಡುವೆ ಕಾರ್ಯಾಚರಣೆ ನಡೆದ ಕಾರಣ ಆಪರೇಷನ್ ಮಹಾದೇವ್ ಎಂಬ ಹೆಸರನ್ನು ನೀಡಿರಬಹುದು ಎಂದು ಮೂಲಗಳು ತಿಳಿಸಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:52 pm, Mon, 28 July 25