
ನವದೆಹಲಿ, ಮೇ 16: ಜಗತ್ತಿನ ಎದುರು ಪಾಕಿಸ್ತಾನ(Pakistan)ದ ಬಣ್ಣ ಬಯಲು ಮಾಡಲು ಭಾರತ(India)ದ ಸಂಸದರು ಟೊಂಕ ಕಟ್ಟಿ ನಿಂತಿದ್ದಾರೆ. ಆಪರೇಷನ್ ಸಿಂಧೂರ್‌ನ ಎರಡನೇ ಭಾಗವಾಗಿ ಬಹು-ಪಕ್ಷ ನಿಯೋಗವು ಡಜನ್ಗಟ್ಟಲೆ ಸ್ನೇಹಪರ ರಾಷ್ಟ್ರಗಳಿಗೆ ಭೇಟಿ ನೀಡಿ ಪಾಕಿಸ್ತಾನದ ಸತ್ಯವನ್ನು ಬಯಲಿಗೆಳೆಯಲಿದ್ದಾರೆ. ಕೇವಲ ಎನ್ಡಿಎ ಸಂಸದರು ಮಾತ್ರವಲ್ಲ ಎಐಎಂಐಎಂನ ಅಸಾದುದ್ದೀನ್ ಓವೈಸಿ, ಕಾಂಗ್ರೆಸ್ ಶಶಿತರೂರ್ ಹೆಸರುಗಳು ಕೂಡ ಮುನ್ನಲೆಯಲ್ಲಿವೆ.
ಸಂಸದರ ಈ ಪ್ರವಾಸವು ಮೇ 22 ರ ನಂತರ ಪ್ರಾರಂಭವಾಗಲಿದ್ದು, ಪಹಲ್ಗಾಮ್ ದಾಳಿಯ ನಂತರ ಭಾರತವು ಮಾಹಿತಿಯನ್ನು ಒದಗಿಸುತ್ತಿರುವ ಎಲ್ಲಾ ಸ್ನೇಹಪರ ರಾಷ್ಟ್ರಗಳನ್ನು ಇದು ಒಳಗೊಳ್ಳಲಿದೆ. ಇವುಗಳಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಆಸ್ಟ್ರೇಲಿಯಾ ಹಾಗೂ ಮಧ್ಯಪ್ರಾಚ್ಯದ ಮುಸ್ಲಿಂ ರಾಷ್ಟ್ರಗಳು ಸೇರಿವೆ.
ವಾಸ್ತವವಾಗಿ, ಪಾಕಿಸ್ತಾನವು ಪಹಲ್ಗಾಮ್‌ನಿಂದ ಆಪರೇಷನ್ ಸಿಂಧೂರ್ ವರೆಗೆ ನಿರಂತರವಾಗಿ ಸುಳ್ಳು ಹೇಳುತ್ತಲೇ ಬಂದಿದೆ. ಸತ್ಯಗಳಿಂದ ವಿಮುಖವಾಗುತ್ತಿರುವ ಪಾಕ್ ಏನಾದರೂ ಒಂದು ಹೇಳಬೇಕೆಂದು ಕಟ್ಟು ಕಥೆಗಳನ್ನು ಹೆಣೆಯುತ್ತಿದೆ. ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಪ್ರಮುಖ ಬೆಂಬಲ ಸಿಕ್ಕಿಲ್ಲ, ಆದರೆ ಚೀನಾ ಮತ್ತು ಟರ್ಕಿಯಂತಹ ದೇಶಗಳಿಂದ ಅದಕ್ಕೆ ಬೆಂಬಲ ಸಿಕ್ಕಿದೆ. ಪಾಕಿಸ್ತಾನದ ಈ ಪ್ರಯತ್ನವನ್ನು ಭಾರತ ಬಯಲು ಮಾಡಲು ಬಯಸುತ್ತದೆ.
ಪಹಲ್ಗಾಮ್ ದಾಳಿಯ ನಂತರ ಕೇಂದ್ರ ಸರ್ಕಾರ ಸಿಂಧೂ ನದಿ ನೀರು ಒಪ್ಪಂದವನ್ನು ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಭಯೋತ್ಪಾದನೆಯನ್ನು ನಿಗ್ರಹಿಸಲು ಪಾಕಿಸ್ತಾನ ದೃಢ ಕ್ರಮ ಕೈಗೊಳ್ಳದಿದ್ದರೆ ಸಿಂಧೂ ನದಿ ನೀರು ಒಪ್ಪಂದದ ರದ್ದು ಹೀಗೆಯೇ ಮುಂದುವರೆಯಲಿದೆ.
ಮತ್ತಷ್ಟು ಓದಿ: ಪಾಕಿಸ್ತಾನವನ್ನು ಸರ್ವನಾಶ ಮಾಡುತ್ತೇವೆ: ಬಲೂಚ್ ಬಂಡುಕೋರರ ಶಪಥ
ಪಾಕಿಸ್ತಾನವು ಸಿಂಧೂ ನದಿ ನೀರಿನ ವಿವಾದವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸಬಹುದು ಎಂದು ಕೇಂದ್ರ ಸರ್ಕಾರ ಭಯಪಡುತ್ತಿದೆ. ಪಾಕಿಸ್ತಾನದ ಬಗ್ಗೆ ಚೀನಾದ ಹೆಚ್ಚುತ್ತಿರುವ ಪ್ರೀತಿಯೂ ಇದಕ್ಕೆ ಸಹಾಯ ಮಾಡಬಹುದು. ಸಿಂಧೂ ನದಿ ನೀರಿನ ವಿವಾದವು ಎರಡೂ ದೇಶಗಳ ನಡುವಿನ ಆಂತರಿಕ ವಿಷಯವಾಗಿದ್ದರೂ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ವಿಷಯವನ್ನು ಎತ್ತುವುದು ಪಾಕಿಸ್ತಾನಕ್ಕೆ ನೈತಿಕ ಬಲವನ್ನು ನೀಡುತ್ತದೆ. ಪಾಕಿಸ್ತಾನದ ಈ ಪ್ರಯತ್ನವನ್ನು ವಿಫಲಗೊಳಿಸಲು ಸಂಸದರು ಸಹ ಪ್ರಯತ್ನಿಸಲಿದ್ದಾರೆ.
ಪಾಕಿಸ್ತಾನಿ ನೆಲದಿಂದ ಹುಟ್ಟಿಕೊಂಡಿರುವ ಭಯೋತ್ಪಾದನೆಯನ್ನು ತೊಡೆದುಹಾಕಲು ಆಪರೇಷನ್ ಸಿಂಧೂರ್‌ನ ಅಗತ್ಯತೆ ಮತ್ತು ಪರಿಣಾಮಗಳ ಕುರಿತು ಭಾರತದ ದೃಷ್ಟಿಕೋನವನ್ನು ಒದಗಿಸಲು ಸಂಭಾವ್ಯ ನಿಯೋಗವು ವಿದೇಶಿ ಸರ್ಕಾರಗಳು, ಚಿಂತಕರ ಚಾವಡಿಗಳು ಮತ್ತು ಮಾಧ್ಯಮಗಳೊಂದಿಗೆ ಚರ್ಚಿಸುವ ಸಾಧ್ಯ ಇದೆ.
ಐದು ಅಂಶಗಳು
ಭಾರತದ ನಿಲುವನ್ನು ಸ್ಪಷ್ಟಪಡಿಸಲು ವಿದೇಶಕ್ಕೆ ತೆರಳುತ್ತಿರುವ ಬಹುಪಕ್ಷೀಯ ನಿಯೋಗವು ಐದು ಅಂಶಗಳ ಕಾರ್ಯಸೂಚಿಯ ಮೇಲೆ ತನ್ನ ಚರ್ಚೆಗಳನ್ನು ಕೇಂದ್ರೀಕರಿಸಲಿದೆ. ಮೊದಲನೆಯದಾಗಿ, ಕಾರ್ಯಾಚರಣೆಯ ಅಗತ್ಯಕ್ಕೆ ಕಾರಣವಾದ ಪಾಕಿಸ್ತಾನದ ಪ್ರಚೋದನೆಗಳನ್ನು ವಿವರಿಸುವುದು; ಎರಡನೆಯದಾಗಿ, ಈ ಬೆದರಿಕೆಗಳಿಗೆ ಆಪರೇಷನ್ ಸಿಂಧೂರ್ ಏಕೆ ನಿರ್ಣಾಯಕ ಪ್ರತಿಕ್ರಿಯೆಯಾಗಿತ್ತು ಎಂಬುದನ್ನು ಒತ್ತಿಹೇಳುವುದು; ಮೂರನೆಯದಾಗಿ, ಭವಿಷ್ಯದಲ್ಲಿ ಮತ್ತಷ್ಟು ಭಯೋತ್ಪಾದಕ ಕೃತ್ಯಗಳು ಸಂಭವಿಸಿದಲ್ಲಿ ಇದೇ ರೀತಿಯ ಕ್ರಮಗಳ ಸಾಧ್ಯತೆಯನ್ನು ತಿಳಿಸುವುದು; ನಾಲ್ಕನೆಯದಾಗಿ, ಕಾರ್ಯಾಚರಣೆಯ ಸಮಯದಲ್ಲಿ ಭಯೋತ್ಪಾದಕ ಅಡಗುತಾಣಗಳನ್ನು ಮಾತ್ರ ನಿಖರವಾಗಿ ಗುರಿಯಾಗಿಸುವುದನ್ನು ಒತ್ತಿಹೇಳುವುದು; ಮತ್ತು ಐದನೆಯದಾಗಿ, ಭಯೋತ್ಪಾದನೆಯನ್ನು ಪೋಷಿಸುವಲ್ಲಿ ಪಾಕಿಸ್ತಾನದ ಪಾತ್ರ ಮತ್ತು ಅದರ ಜಾಗತಿಕ ಪರಿಣಾಮಗಳನ್ನು ಎತ್ತಿ ತೋರಿಸುವುದಾಗಿದೆ.