ಇಂದು ಬೆಂಗಳೂರಿನಲ್ಲಿ ಮಹಾಮೈತ್ರಿಕೂಟದ ಮಹತ್ವದ ಸಭೆ, ಮಹಾಘಟಬಂಧನ್ ನೇತೃತ್ವ ವಹಿಸಿಕೊಳ್ಳಲು ಕಾಂಗ್ರೆಸ್ ಉತ್ಸುಕ
ಇಂದು ಬೆಂಗಳೂರಿನಲ್ಲಿ ಮಹಾಮೈತ್ರಿಕೂಟದ ಮಹತ್ವದ ಸಭೆ ನಡೆಯಲಿದ್ದು, ಸಭೆಯಲ್ಲಿ ಬಿಜೆಪಿಯನ್ನು ಕಟ್ಟಿ ಹಾಕುವ ತಂತ್ರೋಪಾಯಗಳ ಬಗ್ಗೆ ಚರ್ಚಿಸಲಾಗುತ್ತದೆ. ದಿನವಿಡೀ ಸಭೆ ಬಳಿಕ ಮಹತ್ವದ ಘೋಷಣೆ ಸಾಧ್ಯತೆ ಇದೆ.
ಬೆಂಗಳೂರು, (ಜುಲೈ 18): ಇಂದು (ಜುಲೈ 18) ಸಂಜೆಯವರೆಗೂ ನಡೆಯಲಿರುವ ಮಹಾಘಟಬಂಧನ್ ಬೈಠಕ್‌ನಲ್ಲಿ(Opposition Party Meeting) ಬಿಜೆಪಿಯನ್ನು ಕಟ್ಟಿ ಹಾಕುವ ತಂತ್ರೋಪಾಯಗಳ ಬಗ್ಗೆ ಚರ್ಚಿಸಲಾಗುತ್ತದೆ. ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಲಿರುವ ಮಿತ್ರಪಕ್ಷಗಳ ನಾಯಕರು ಮಹತ್ವದ ಘೋಷಣೆ ಹೊರಡಿಸಲಿದ್ದಾರೆ. ವಿಪಕ್ಷಗಳ ಮಹಾಮೈತ್ರಿಕೂಟದ ಸಭೆಯಲ್ಲಿ 2024ರ ಲೋಕಸಭೆ ಚುನಾವಣೆಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ನಿರ್ಧರಿಸುವ ಹೊರತಾಗಿ ವಿವಿಧ ವಿಷಯಗಳ ಬಗ್ಗೆ ನಿರ್ಧರಿಸಲು ಸಂಚಾಲಕರನ್ನು ನೇಮಿಸಿ, ವಿವಿಧ ತಂಡಗಳನ್ನು ರಚಿಸುವ ಸಾಧ್ಯತೆಯಿದೆ. ಪ್ರತಿಪಕ್ಷಗಳಲ್ಲಿಯೇ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿರುವುದರಿಂದ, ತಾನೇ ಹೊಸ ಮೈತ್ರಿಕೂಟದ ನೇತೃತ್ವದ ವಹಿಸಿಕೊಳ್ಳಲು ಕಾಂಗ್ರೆಸ್ ಉತ್ಸುಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬಿಹಾರದ ಲೋಕ ಜನಶಕ್ತಿ ಪಕ್ಷದಲ್ಲಿ ಪಾರಸ್ vs ಚಿರಾಗ್; ಬಣ ವಿಲೀನಕ್ಕೆ ಬಿಜೆಪಿ ಪ್ರಯತ್ನ
ವಿಪಕ್ಷಗಳ ಮಹಾ ಮೈತ್ರಿಕೂಟದ ಸಭೆ ವಿವರ
ಇಂದು (ಜುಲೈ 18) ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆಯುವ ವಿಪಕ್ಷಗಳ ಸಭೆಯಲ್ಲಿ ಬೆಳಗ್ಗೆ 11 ಗಂಟೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಬಳಿಕ ಬೆಳಗ್ಗೆ 11.10ರಿಂದ 6 ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಉಪಸಮಿತಿಗಳ ರಚನೆ ಮಾಡುವುದು. ಸಭೆಯಲ್ಲಿ ಮೈತ್ರಿಕೂಟದ ಕಾರ್ಯದರ್ಶಿ ಆಯ್ಕೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಮಹಾ ಮೈತ್ರಿಕೂಟದ ಸಭೆ ಅಂತ್ಯವಾಗಲಿದೆ. ನಂತರ ನಾಯಕರು ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಮೈತ್ರಿಕೂಟ ಸಭೆಯ ನಿರ್ಣಯ ಬಗ್ಗೆ ಘೋಷಣೆ ಮಾಡಲಿದ್ದಾರೆ.
ಯಾರೆಲ್ಲ ಸಭೆಯಲ್ಲಿ ಇರಲಿದ್ದಾರೆ?
- ಟಿಎಂಸಿ ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ, ಡೆರಿಕ್ ಓಬ್ರಿಯಾನ್
- ಸಿಪಿಐ: ಡಿ.ರಾಜಾ
- ಸಿಪಿಐಎಂ ಸೀತಾರಾಂ ಯೆಚೂರಿ
- ಎನ್‌ಸಿಪಿ ಶರದ್ ಪವಾರ್, ಜಿತೇಂದ್ರ ಅಹ್ವಾಡ್, ಸುಪ್ರಿಯಾ ಸುಳೆ
- ಜೆಡಿಯು ನಿತೀಶ್ ಕುಮಾರ್, ಸಂಜಯ್ ಕುಮಾರ್ ಝಾ
- ಡಿಎಂಕೆ ಎಂ.ಕೆ. ಸ್ಟಾಲಿನ್, ಟಿ.ಆರ್. ಬಾಲು
- ಆಪ್ ಅರವಿಂದ ಕೇಜ್ರಿವಾಲ್
- ಜೆಎಂಎಂ ಹೇಮಂತ್ ಸುರೇನ್
- ಶಿವಸೇನಾ(ಉದ್ಧವ್ ಠಾಕ್ರೆ ಬಣ) ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ, ಸಂಜಯ್ ರಾವತ್
- ಆರ್‌ಜೆಡಿ ಲಾಲು ಪ್ರಸಾದ್ ಯಾದವ್, ತೇಜಸ್ವಿ ಯಾದವ್, ಮನೋಜ್ ಝಾ, ಸಂಜಯ್ ಯಾದವ್
- ಸಮಾಜವಾದಿ ಅಖಿಲೇಶ್ ಯಾದವ್, ರಾಮಗೋಪಾಲ್, ಜಾವೇದ್ ಅಲಿ ಖಾನ್, ಆಶಿಶ್ ಯಾದವ್
- ನ್ಯಾಷನಲ್ ಕಾನ್ಫರೆನ್ಸ್- ಓಮರ್ ಅಬ್ದುಲ್ಲಾ
- ಪಿಡಿಪಿ: ಮೆಹಬೂಬಾ ಮುಫ್ತಿ
- ಸಿಪಿಐ(ಎಂಎಲ್) ದೀಪಂಕರ್ ಭಟ್ಟಾಚಾರ್ಯ
- ಆರ್‌ಎಲ್‌ಡಿ: ಜಯಂತ್ ಸಿಂಗ್ ಚೌದರಿ
- ಐಯುಎಂಎಲ್: ಪಿ. ಕುನಲಿಕುಟ್ಟಿ
- ಕೇರಳ ಕಾಂಗ್ರೆಸ್(ಎಂ): ಜೋಶ್ ಕೆ. ಮಣಿ
- ಎಂಡಿಎಂಕೆ: ವೈಕೋ
- ವಿಸಿಕೆ: ರವಿಕುಮಾರ್
- ಆರ್‌ಎಸ್‌ಪಿ: ಎನ್.ಕೆ. ಪ್ರೇಮಚಂದ್ರನ್
- ಕೇರಳ ಕಾಂಗ್ರೆಸ್: ಪಿ.ಸಿ. ಜೋಸೆಫ್
- ಕೆಎಂಡಿಕೆ: ಈಶ್ವರನ್
- ಎಐಎಫ್‌ಬಿ: ಜಿ. ದೇವರಾಜನ್
2024 ರ ಲೋಕಸಭೆ ಚುನಾವಣೆಯನ್ನು ಯಾವುದೇ ಒಬ್ಬ ‘ನಾಯಕ ವರ್ಸಸ್ ಮೋದಿ’ ನಡುವಿನ ಯುದ್ಧವನ್ನಾಗಿ ಮಾಡದೆ, ಸಮಸ್ಯೆಗಳ ಮೇಲೆ ಕೇಂದ್ರೀಕರಿಸಲು ಮತ್ತು ಅದನ್ನು ‘ಮೋದಿ ವರ್ಸಸ್ ಜನರ’ ಯುದ್ಧವನ್ನಾಗಿ ಮಾಡಲು ವಿರೋಧ ಪಕ್ಷಗಳು ಉತ್ಸುಕವಾಗಿವೆ ಎಂದು ಮೂಲಗಳು ತಿಳಿಸಿವೆ.
ಇಂದು ಸಭೆಯ ಸಾಧ್ಯತೆಗಳು
- ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲು ಉಪಸಮಿತಿ ರಚನೆ
- ಮೈತ್ರಿಕೂಟದ ಬೆಳವಣಿಗೆಗಳ ಬಗ್ಗೆ ಪರಸ್ಪರ ಸಂವಹನದ ಕೆಲಸ
- ಮೈತ್ರಿಕೂಟದ ಜಂಟಿ ಕಾರ್ಯಕ್ರಮಗಳ ಆಯೋಜನೆಗೆ ಉಪಸಮಿತಿ
- ದೇಶಾದ್ಯಂತ ಎಲ್ಲಿ ಬೃಹತ್ ಱಲಿಗಳ ಆಯೋಜನೆ ಮಾಡಬೇಕು
- ಸಮಾವೇಶಗಳನ್ನು ಎಲ್ಲಿ ಮಾಡಬೇಕು ಎಂಬ ಬಗ್ಗೆ ಚರ್ಚೆ
- ಕೇಂದ್ರದ ವಿರುದ್ಧ ಯಾವ ರೀತಿ ಜನಾಂದೋಲನ ಮಾಡಬೇಕು
- ಈ ಎಲ್ಲಾ ಕಾರ್ಯಕ್ರಮಗಳ ನಿರ್ವಹಣೆಯನ್ನು ಸಮಿತಿ ಮಾಡಲಿದೆ
- ವಿಪಕ್ಷಗಳ ನಡುವೆ ಸೀಟು ಹಂಚಿಕೆ ಬಗ್ಗೆ ಗಂಭೀರ ಮಾತುಕತೆ
ಒಟ್ಟಿನಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲೇಬೇಕೆಂದು ಪ್ರತಿಪಕ್ಷಗಳು ಶಪಥ ಮಾಡಿದ್ದು, ಇದಕ್ಕೆ ಕೌಂಟರ್ ಎಂಬಂತೆ ನಡೆಯುತ್ತಿರೋ ಎನ್‌ಡಿಎ ಸಭೆ ಕುತೂಹಲ ಕೆರಳಿಸಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ