ನೀಟ್ ವಿವಾದದ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ನಿಲುವಳಿ ಸೂಚನೆ ಮಂಡಿಸಲು ವಿಪಕ್ಷ ನಿರ್ಧಾರ

|

Updated on: Jun 27, 2024 | 7:53 PM

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಇಂದು ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ರಾಷ್ಟ್ರಪತಿಗಳ ಭಾಷಣವಾಗಲಿ ಅಥವಾ ಸ್ಪೀಕರ್ ಆಯ್ಕೆಯಾಗಲಿ ಸಂಸತ್ತಿನಲ್ಲಿ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಸಭೆಯ ನಂತರ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ನೀಟ್ ವಿವಾದದ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ನಿಲುವಳಿ ಸೂಚನೆ ಮಂಡಿಸಲು ವಿಪಕ್ಷ ನಿರ್ಧಾರ
ಇಂಡಿಯಾ ಬಣದ ಸಭೆ
Follow us on

ದೆಹಲಿ ಜೂನ್ 27: ಶುಕ್ರವಾರ ಸಂಸತ್ತಿನ ಉಭಯ ಸದನಗಳಲ್ಲಿ ನೀಟ್ ವಿವಾದದ ಕುರಿತು ನಿಲುವಳಿ ಸೂಚನೆ ತರುವುದಾಗಿ ವಿರೋಧ ಪಕ್ಷವಾದ ಇಂಡಿಯಾ ಮೈತ್ರಿಕೂಟ ಗುರುವಾರ ಹೇಳಿದೆ. ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಇಂಡಿಯಾ ಮೈತ್ರಿ ಪಕ್ಷಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಮೇಲಿನ ಚರ್ಚೆಯಲ್ಲಿ ಪ್ರತಿಪಕ್ಷಗಳು ನೀಟ್, ಹಣದುಬ್ಬರ, ನಿರುದ್ಯೋಗ, ಸಿಬಿಐ, ಇಡಿ ಮತ್ತು ರಾಜ್ಯಪಾಲರ ಕಚೇರಿಯ ದುರುಪಯೋಗದ ಕುರಿತು ವಿಷಯಗಳನ್ನು ಪ್ರಸ್ತಾಪಿಸುತ್ತವೆ. ಶುಕ್ರವಾರ ಸಂಸತ್ತಿನ ಸಂಕೀರ್ಣದ ಗಾಂಧಿ ಪ್ರತಿಮೆ ಬಳಿ ವಿರೋಧ ಪಕ್ಷದ ಸದಸ್ಯರು ಸಭೆ ಸೇರಲಿದ್ದಾರೆ.

ಸಭೆಯಲ್ಲಿ ಇಂದು ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ರಾಷ್ಟ್ರಪತಿಗಳ ಭಾಷಣವಾಗಲಿ ಅಥವಾ ಸ್ಪೀಕರ್ ಆಯ್ಕೆಯಾಗಲಿ ಸಂಸತ್ತಿನಲ್ಲಿ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಸಭೆಯ ನಂತರ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. “ನಾವು ನಾಳೆ ನೀಟ್ ವಿಷಯದ ಬಗ್ಗೆ (ಸಂಸತ್ತಿನಲ್ಲಿ) ನೋಟಿಸ್ ನೀಡುತ್ತೇವೆ” ಎಂದು ಎಎನ್ಐ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಡಿಎಂಕೆ ಸಂಸದ ಟಿ ಶಿವ ಹೇಳಿದ್ದಾರೆ.

ಖರ್ಗೆ ನಿವಾಸದಲ್ಲಿ ಸಭೆ

ವೈದ್ಯಕೀಯ ಪರೀಕ್ಷೆ NEET ಮತ್ತು UGC-NET, CSIR UGC-NET ಮತ್ತು NEET-PG ಪರೀಕ್ಷೆಗಳ ಅಕ್ರಮ ನಡೆದು,  ರದ್ದು ಮಾಡಿದ್ದಕ್ಕೆ  ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸರ್ಕಾರವನ್ನು ಪ್ರತಿಪಕ್ಷಗಳು ಟೀಕಿಸುತ್ತಿವೆ.

ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಯುತ ತನಿಖೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

“ಸ್ಪರ್ಧಾತ್ಮಕ ಪರೀಕ್ಷೆಗಳಾಗಲಿ ಅಥವಾ ಸರ್ಕಾರಿ ನೇಮಕಾತಿಯಾಗಲಿ ಯಾವುದೇ ಅಡೆತಡೆಗಳಿಗೆ ಕಾರಣವಾಗಬಾರದು. ಈ ಪ್ರಕ್ರಿಯೆಗೆ ಸಂಪೂರ್ಣ ಪಾರದರ್ಶಕತೆ  ಅಗತ್ಯವಿರುತ್ತದೆ. ಇತ್ತೀಚಿನ ಕೆಲವು ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಪ್ರಕರಣಗಳಿಗೆ ಸಂಬಂಧಿಸಿದಂತೆ, ನನ್ನ ಸರ್ಕಾರವು ನ್ಯಾಯಯುತ ತನಿಖೆಗೆ ಬದ್ಧವಾಗಿದೆ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಂಸತ್​​​​ನಲ್ಲಿ ‘ಜೈ ಸಂವಿಧಾನ್’ ಘೋಷಣೆಯನ್ನೂ ಕೂಗಬಾರದೇ?: ಪ್ರಿಯಾಂಕಾ ಗಾಂಧಿ

ರಾಷ್ಟ್ರಪತಿ ಭಾಷಣಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ‘ಪಕ್ಷಪಾತ ರಾಜಕಾರಣ ಬದಿಗಿಡಬೇಕು’ ಎಂದು ಸುಮ್ಮನೆ ಹೇಳುವ ಮೂಲಕ ಮೋದಿ ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.ಯುವಕರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ, ಕೇಂದ್ರ ಶಿಕ್ಷಣ ಸಚಿವರು ಇದರ ಹೊಣೆ ಹೊರಬೇಕು. ದೇಶದ ಪ್ರತಿ ಎರಡನೇ ಯುವಕರು ನಿರುದ್ಯೋಗಿಯಾಗಿದ್ದಾರೆ. ನಿರುದ್ಯೋಗವನ್ನು ತೊಡೆದುಹಾಕಲು ಯಾವುದೇ ಗಟ್ಟಿಯಾದ ನೀತಿ ಈ ಭಾಷಣದಿಂದ ಹೊರಹೊಮ್ಮಿಲ್ಲ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:24 pm, Thu, 27 June 24